ಕವಿತೆ: ಮತ್ತದೇ ಮಹಾ ಮಳೆಯ ಸುರಿಸದಿರು

–  ಶಶಾಂಕ್.ಹೆಚ್.ಎಸ್.

ಕೊಡಗು ಮಳೆ ಹಾನಿ, kodagu floods

(ಬರಹಗಾರರ ಮಾತು: ಕಳೆದ ವರುಶ ಕೊಡಗು ಜಿಲ್ಲೆಯಲ್ಲಿ ಸುರಿದು ಅಪಾರ ಹಾನಿಯುಂಟು ಮಾಡಿದಂತ ಮಹಾಮಳೆಯು ಈ ಬಾರಿ ಸುರಿಯದಿರಲಿ ಎಂದು ಪ್ರಾರ‍್ತಿಸುತ್ತ ಈ ಕವಿತೆ )

ವರುಶದ ಹಿಂದಿನ ಮಳೆಯ
ರೌದ್ರ ನರ‍್ತನವು
ಸ್ರುಶ್ಟಿಯ ಮುನಿಸೋ
ವಿದಿಯ ದುರಾಸೆಯೋ
ಕಲ್ಲುದೇವರ ಮರ‍್ಮವೋ
ಅದರೆ ಇಂದು ನರಳುವ ಸ್ತಿತಿಯ
ತಲುಪಿದೆ ಬೂದೇವಿಯ ರಮ್ಯ ತಾಣವು

ಎತ್ತೆತ್ತ ನೋಡಿದರು
ಗುಡ್ಡ ಕುಸಿತದ ಬೋರ‍್ಗರೆತ
ಕಣ್ಣಾಯಿಸಿದಶ್ಟು ದೂರ
ಅವಶೇಶಗಳ ಮಿಡಿತ
ಸಸ್ಯ ವನರಾಶಿಗಳ
ಒಡಲಾಳದ ಆಕ್ರಂದನದ ತುಡಿತ

ಓ ವಿದಿಯೇ,
ಮತ್ತದೇ ಮಹಾಮಳೆಯ ಸುರಿಸದಿರು
ಜನ ಸಾಮಾನ್ಯರ
ಬದುಕ ಸಂಕಶ್ಟಕ್ಕೆ ಸಿಲುಕಿಸದಿರು
ವನರಾಶಿಯ ಸೊಬಗ
ಅಳಿಸಿ ಹಾಕದಿರು

ಮನೆ ಮಟ
ಕಳೆದುಕೊಂಡವರ ಪರಿಸ್ತಿತಿ
ಕುಟುಂಬದ ಸದಸ್ಯರ
ಕಳೆದುಕೊಂಡವರ ಮನಸ್ತಿತಿ
ವನರಾಶಿಯ ಕಳೆದುಕೊಂಡ
ಬೂಮಾತೆಯ ಸ್ತಿತಿ
ಎಲ್ಲವೂ ಕೈ ಮುಗಿದು ಬೇಡುತ್ತಿವೆ
ಮತ್ತದೇ ಮಹಾಮಳೆಯ ಸುರಿಸದಿರು ಎಂದು

ವರುಣನೇ ಮಳೆಯ ಸುರಿಸು
ನೆಲವ ತಣಿಸು
ಆದರೆ ಮಹಾಮಳೆಯ ಸುರಿಸಿ
ಎಲ್ಲವ ಹಾಳುಗೆಡವದಿರು
ಓ ಮಳೆಯೇ ಈ ಬಾರಿಯೂ
ನಿನ್ನ ರೌದ್ರನರ‍್ತನವ ತೋರಿಸದಿರು

(ಚಿತ್ರ ಸೆಲೆ: thenewsminute.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: