ಸುಂಕವಿಲ್ಲದ ಕನಸು
ದಿನವೂ ಕೆಲಸ ಮಾಡಿ ಮುಕ ಗಂಟಿಕ್ಕಿಕೊಂಡು ಮಲಗುವ ನನ್ನ ಸಹೋದ್ಯೋಗಿಯನ್ನು ಕಂಡು, ದಿನಾ ನಾನು ಮರುಕ ಪಡುತ್ತಿದ್ದೆ.ಇವತ್ತೂ ಕೂಡ “ನನ್ನ ಆ ಕೆಲಸ ಆಗಲಿಲ್ಲ ,ಅದು ಇದು..” ಎನ್ನುತ್ತಾ ಕಂಪನಿಯ ನ್ಯೂನ್ಯತೆಗಳನ್ನು ಅಲ್ಲಗೆಳೆಯುತ್ತಾ ತಲೆಬಿಸಿಯಲ್ಲಿದ್ದವನನ್ನು ನೋಡಿ ಮರುಕ ಹುಟ್ಟಿ ,ಅವನ ಮುಕದಲ್ಲಿ ನಗು ತರಿಸಬೇಕು ಅಂದುಕೊಂಡೆ. ತಕ್ಶಣ ನಾನು ಓದುತಿದ್ದ ಪುಸ್ತಕ ಬದಿಗಿಟ್ಟು ಅವನನ್ನು ನೋಡಿದೆ. ಅವನದೆ ದಾಟಿಯಲ್ಲಿ
“ನನಗೂ ಕೆಲಸ ಮಾಡಿ ಮಾಡಿ ಬೇಜಾರಾಗಿದೆ.ಏನದರೂ ಮಾಡ್ಬೇಕು” ಅಂದೆ
‘ಏನು?’ ಅನ್ನುವ ರೀತಿಯಲ್ಲಿ ನನ್ನ ಮುಕ ನೋಡಿದ.
ನಾನು ಹೇಳಿದೆ “ನಾನು ನೊಬೆಲ್ ಪ್ರಶಸ್ತಿ ಪಡಿಬೇಕು” ಅಂದೆ.
ತಕ್ಶಣ ಅವನ ಮುಕದಲ್ಲೊಂದು ತೇಜಸ್ಸು ಹುಟ್ಟಿ ಮಿಂಚು ಹೊಡೆದಂತೆ ವಾಸ್ತವಕ್ಕೆ ಬಂದಂತ ರೀತಿಯಲ್ಲಿ
“ಹುಚ್ಚು ಗಿಚ್ಚು ಹಿಡಿತ” ಅಂದ.
“ಯಾಕೆ?”ಅಂದೆ.
“ಮತ್ತೆ ಏನು ಮಾತಾಡ್ತ ಇದೀಯ ಅದು ಆಗುವಂತಹ ಕೆಲಸನಾ?” ಕೇಳಿದ
“ಯಾಕೆ ಆಗಲ್ಲ. ಬೇಕು ಅಂದ್ರೆ ಆಗುತ್ತೆ ಬಿಡು ಅದು ಕಶ್ಟ ಆದ್ರೆ ಲೋಕಲ್ ಬಾರತ ರತ್ನನಾದ್ರೂ ಟ್ರೈ ಮಾಡ್ತೀನಿ” ಅಂದೆ
ನಗೋಕೆ ಶುರು ಮಾಡಿದ …”ಕುಡ್ದು ಗಿಡ್ದು ಬಂದ್ಯೊ ಹೆಂಗೆ ಮಂಗ್ಯ ನನ್ಮಗನೆ” ಅಂದ. ಮನಸು ಬಿಚ್ಚಿ ನಕ್ಕ.
ನಾನು ಬಿಡ್ತೀನಾ…ನಾನು ಹೇಳಿದೆ “ಯಾವುದೇ ಪ್ರಶಸ್ತಿ ತೊಗೊತೀನೊ ಬಿಡ್ತೀನೊ..ಪ್ರಸಿದ್ದಿಯಾಗೋ ತರ ಏನಾದ್ರೂ ಮಾಡ್ಬೇಕು..ಎಶ್ಟು ಪ್ರಸಿದ್ದಿ ಗೊತ್ತಾ? ನಾನು ಆಟೊದಲ್ಲಿ ಏನಾದ್ರೂ ರೈಲ್ವೆ ಸ್ಟೇಶನ್ನಲ್ಲಿ ಬಂದಿಳಿದರೆ, ಜನ ನನ್ನ ಸುತ್ತ ಮುತ್ತಿಕೊಂಡು ನನ್ನ ಲಗೇಜಿನ ಜೊತೆಗೆ ನನ್ನನ್ನು ಹೊತ್ತುಕೊಂಡು ಹೋಗಿ ನಾನು ಪ್ರಯಾಣಿಸಬೇಕಾದ ರೈಲಿನ ಸೀಟಲ್ಲಿ ಕೂರಿಸಬೇಕು. ನಾನು ಕೂಲಿ ಅವನಿಗೆ ಕೊಡೋ 200 ರೂಪಾಯಿ ಉಳಿಸಬೇಕು” ಅಂದೆ.
ಈಗಂತೂ ಕಣ್ಣೀರು ಬರೋ ತನಕ ನಕ್ಕ, ನಾನೂ ನಕ್ಕೆ.ಮನಸ್ಸು ಹಗುರ ಅನಿಸಿತು. ತುಂಬಾ ಕುಶಿಯಾಗಿ ಮತ್ತೆ ನನ್ನ ನೋಡಿ ನಗ್ತಿದ್ದ.
“ಓದಿ ಓದಿ ಹುಚ್ಚ ಆಗಿದ್ದಿ..ಹೆಂಡ ಕುಡ್ಕೊಂಡ್ ಬಂದ್ಯ” ಅನ್ನುತ್ತಿದ್ದ.
ಕೆಲವರಿಗೆ ಕೆಲವೊಂದು ವಿಶ್ಯ ಕೈಗೆಟುಕದ ಗಗನ ಕುಸುಮ ಅಂದುಕೊಂಡಾಗ, ಅದನ್ನು ಪಡೆಯುವುದು ಹಾಸ್ಯಾಸ್ಪದ. ಪಡೆಯುವೆನೆಂದುಕೊಂಡವನಿಗೆ ಅದು ಅವನು ಹತ್ತಿರವಾಗುತ್ತಿರುವ ಗುರಿಯ ಕೊನೆಯ ಬಿಂದು. ನಾನು ನಗಿಸಲು ಅವನಿಗೆ ಹೇಳಿದ್ದರೂ ನನ್ನ ಮನದಲ್ಲೂ ಇರುವುದೂ ನಾನು ಏನಾದರೂ ಸಾದಿಸಬೇಕು ಎನ್ನುವುದು. ಸಾವು ಕಟ್ಟಿಟ್ಟ ಬುತ್ತಿ. ಆ ಬುತ್ತಿ ತೆರೆಯುವ ಮೊದಲು ನನ್ನ ಬದುಕು ನಾಕು ಜನರು ಬುತ್ತಿ ಕಟ್ಟಲೂ ನೆರವೂ ನೀಡುವಂತಿರಬೇಕು.
ಕೆಲವೊಂದು ವಿಶಯವನ್ನು ಯೋಚಿಸುವುದು, ಅದರ ಬಗ್ಗೆ ಕನಸು ಕಾಣುವುದು ತಪ್ಪಾ? ಕನಸಿಗೂ ಸುಂಕ ಕಟ್ಟಬೇಕಾ? ಕನಸು ಜಿ ಎಸ್ ಟಿ ವ್ಯಾಪ್ತಿಯೊಳಗೇನಾದರೂ ಬರುತ್ತದಾ?
ಎರಡೂ ದೋಣಿಯಲ್ಲಿ ಹೊರಟವನಿಗೆ ದಡ ಸೇರುವ ನಂಬಿಕೆ ತುಸು ಕಡಿಮೆಯೇ. ಆದರೂ ಅಂತಾ ಆತ್ಮವಿಶ್ವಾಸ ಗಳಿಸಿಕೊಳ್ಳಬೇಕು. ದೋಣಿ ಎರಡಾಗಿದ್ದರೂ ಸಮತೋಲನ ಕಾಯ್ದುಕೊಳ್ಳಬಹುದು, ಆದರೆ ಗುರಿ ಮಾತ್ರ ಒಂದೇ ಆಗಿರಬೇಕು. ಆ ಗುರಿ ಯಾವುದು? ದಡ ಸೇರುವುದೋ? ಪ್ರವಾಹದ ವಿರುದ್ದ ಸೆಣಸುವುದೋ? ಅತವಾ ಸುಲಬವಾಗಿ ಪ್ರವಾಹದೆಡೆಗೆ ಕೈಚೆಲ್ಲಿ ದಿಕ್ಕುಗೆಟ್ಟು ಕೊಚ್ಚಿ ಹೋಗುವುದೋ? – ನಾವೇ ನಿರ‍್ದರಿಸಬೇಕು.
( ಚಿತ್ರ ಸೆಲೆ : fromthegrapevine.com )
ಹೌದು , ಕನಸು ಕಾಣಲು ಸುಂಕ ಯಾಕೆ ? ಕನಸು ಕಾಣಿದರೆ ಆಯ್ತು !