ಸಮಯ ಎಂಬ ಮಾಣಿಕ್ಯ

– ಮಹೇಶ ಸಿ. ಸಿ.

ಪ್ರಕ್ರುತಿಯು ಮಾನವನಿಗೆ ನೀಡಿರುವ ಬೆಲೆಕಟ್ಟಲಾಗದ, ನಿಶ್ಪಕ್ಶಪಾತ, ಸಂಗತಿಗಳಲ್ಲಿ ಸಮಯವು ಕೂಡ ಒಂದು. ಸಮಯವು ಎಲ್ಲಾ ಜೀವ ಸಂಕುಲಗಳಿಗೂ ಕೂಡ ಒಂದೇ ತೆರನಾಗಿ ಇರುತ್ತದೆ. ಪ್ರಕ್ರುತಿಯು ಯಾವುದೇ ಕಾರಣಕ್ಕೂ ಸಮಯದ ವಿಶಯದಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ.

ಸಮಯವು ಯಾರಿಗಾಗಿ ಕಾಯುವುದಿಲ್ಲ, ಬದಲಾಗಿ ನಾವು ಸಮಯಕ್ಕಾಗಿ ಕಾಯಬೇಕಾಗುತ್ತದೆ. ಜೀವಿತದ ಪ್ರತಿಯೊಂದು ಸಮಯವೂ ಕೂಡ ಮಹತ್ವದ್ದೇ ಆದರೆ, ಅದರ ಸದ್ಬಳಕೆ ಮಾಡಿಕೊಳ್ಳುವುದು, ಬಿಡುವುದು ನಮ್ಮಲ್ಲೇ ಇದೆ.

ಜೀವನದಲ್ಲಿ ಸಮಯಕ್ಕೆ ದೊಡ್ಡ ಪ್ರಾಮುಕ್ಯತೆ ಇದೆ, ಸಮಯದ ಮಹತ್ವವನ್ನು ಯಾರು ತಿಳಿದಿರುತ್ತಾರೋ ಅವರು ಜೀವನದಲ್ಲಿ ದೊಡ್ಡ ಮಟ್ಟದ ಸಾದನೆ ಮಾಡಲು ಸಾದ್ಯವಾಗುತ್ತದೆ. ನಿರ‍್ಲಕ್ಶಿಸುತ್ತಿರುವ ಜೀವನದಲ್ಲಿ ಯಶಸ್ಸು ಗಳಿಸಲು ಸಾದ್ಯವಿಲ್ಲ.

ನಾವು ತೆಗೆದುಕೊಳ್ಳುವ ಕೆಲವು ಕೆಟ್ಟ ನಿರ‍್ದಾರಗಳಿಗೆ ಕೆಲವೊಮ್ಮೆ ಸಮಯವನ್ನ ಹೊಣೆಯಾಗಿಸುತ್ತೇವೆ, ಆದರೆ ನೆನಪಿರಲಿ ಆ ಕೆಟ್ಟ ನಿರ‍್ದಾರಕ್ಕೆ ನಮ್ಮ ಸಮಯದ ನಿರ‍್ಲಕ್ಶ್ಯವೂ ಕೂಡ ಒಂದು ಕಾರಣವಾಗಿರುತ್ತದೆ. ಹಾಗಾಗಿ ಮೊದಲು ನಾವು ಸಮಯದ ನಿರ‍್ವಹಣೆ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳಬೇಕು. ಯಾವ ಸಮಯದಲ್ಲಿ ಯಾವ ನಿರ‍್ದಾರ ತೆಗೆದುಕೊಳ್ಳಬೇಕು ಎಂದು ತಿಳಿದಿರಬೇಕು. ಆ ಸಮಯಕ್ಕೆ ನಮ್ಮ ನಿರ‍್ದಾರ ಸರಿ ಇದ್ದರೆ ಉನ್ನತಿ, ಹಾಗೂ ತಪ್ಪಾಗಿದ್ದರೆ ಅವನತಿ ಕಟ್ಟಿಟ್ಟ ಬುತ್ತಿ.

ಕಳೆದುಹೋದ ಸಮಯದ ಬಗ್ಗೆ ಚಿಂತಿಸಿ ಕೂತರೆ ಇರುವ ಸಮಯವು ಕಳೆದು ಹೋಗುತ್ತದೆ. ನಾವು ಕಳೆದ ಹಾಗೂ ಮುಂದಿನ ಸಮಯದ ಬಗ್ಗೆ ಚಿಂತೆ ಮಾಡುವುದನ್ನು ಬಿಡಬೇಕು. ಅದರ ಬದಲು ಸಮಯವನ್ನು ಕಳೆದುಕೊಂಡಿದ್ದಕ್ಕೆ ಕಾರಣ ಹಾಗೂ ಮುಂದಿನ ಸಮಯದ ಬಗ್ಗೆ ಯೋಜನೆಯು ನಿಮ್ಮ ಮನಸ್ಸಿನಲ್ಲಿ ಇರಲಿ.

ಮಾನವರ ಕಾಲಗಟ್ಟಗಳನ್ನು ಬಾಲ್ಯ, ಯವ್ವನ ,ಮುಪ್ಪು ಎಂದು ವಿಂಗಡಣೆ ಮಾಡಿದರೆ, ಮನುಶ್ಯನು ಬಾಲ್ಯದಲ್ಲಿ ಕಳೆದ ಸಮಯ ನಿಜಕ್ಕೂ ಮತ್ತೆ ಬರಲು ಸಾದ್ಯವಿಲ್ಲ. ಈ ಕಾಲಗಟ್ಟದಲ್ಲಿನ ಸಮಯವು ನಮ್ಮ ಜೀವನದ ಚಿನ್ನದ ಕಾಲ ಎಂದರೆ ತಪ್ಪಾಗಲಾರದು. ಬಾಲ್ಯವಸ್ತೆಯಲ್ಲಿ ನಾವು ಸಾಕಶ್ಟು ಸಮಯವನ್ನು ತಂದೆ ತಾಯಿಯರ, ಸಹೋದರ ಸಹೋದರಿಯರ, ಬಂದುಗಳ,ಸ್ನೇಹಿತರ ಜೊತೆ ಕಳೆದಿರುತ್ತೇವೆ. ಈ ಹೊತ್ತಿನಲ್ಲಿ ನಮಗೆ ಸಮಯದ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ತಿಳುವಳಿಕೆ ಕಡಿಮೆಯೇ. ಮುಂದಿನ ಜೀವನದ ಬಗ್ಗೆ ಗೊತ್ತಿಲ್ಲದ ಮುಗ್ದ ಮನಸ್ಸಿನ ಸಮಯವಿದು. ವಿದ್ಯಾರ‍್ತಿಗಳಾಗಿದ್ದಾಗ ನಮಗೆ ಸಮಯದ ಮಹತ್ವ ತಿಳಿಯುವುದು ಪರೀಕ್ಶಾ ಸಮಯದಲ್ಲೇ. ಅಯ್ಯೋ ನಾನು ಇನ್ನು ಬರೆಯುವುದು ತುಂಬಾ ಇದೆ ಆದರೆ ಸಮಯವೇ ಇಲ್ಲವಲ್ಲ ಎಂದು ಅನಿಸಿರುವುದು ಇದೆ.

ಯವ್ವನದ ಗಟ್ಟ ನಮ್ಮ ಜೀವನದ ತಿರುವುಗಳು ಶುರುವಾಗುವ ಕಾಲ. ಇಲ್ಲಿ ನಮಗೆ ಸಮಯದ ಅಬಾವ ಕಾಣುವುದು ಇಲ್ಲಿಂದಲೇ. ಬೆಳಗಾಗಿ ಎದ್ದು ಮನೆ, ಕೆಲಸ, ಮಡದಿ, ಸಂಸಾರ ಎಂದು ನಾವು ಸಮಯದ ಗೊಂಬೆಯ ಹಾಗೆ ಇರುತ್ತೇವೆ. ನಮ್ಮ ದಿನಗಳು ಉರುಳುವುದು ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ಸಮಯ ವೇಗವನ್ನು ಪಡೆದುಕೊಂಡಿರುತ್ತವೆ. ನಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡಗಳಿಂದಾಗಿ ನಾವು ಸಮಯವನ್ನು ಬಹುಪಾಲು ಮರೆತೇ ಇರುತ್ತೇವೆ.

ಇನ್ನು ಕೊನೆಯ ಹಾಗೂ ಮುಪ್ಪಿನ ಕಾಲದಲ್ಲಿ ನಮಗೆ ಸಾಕಶ್ಟು ಸಮಯವಿರುತ್ತದೆ. ಆದರೆ ಅದರ ಉಪಯೋಗ ಎಶ್ಟರ ಮಟ್ಟಿಗೆ ಆಗುತ್ತದೆ ಎಂಬುದು ಆಯಾ ವ್ಯಕ್ತಿಗಳ ಮೇಲೆ ಅವಲಂಬಿಸಿರುತ್ತದೆ. ಕಾರಣ ಇಶ್ಟೇ, ಇಲ್ಲಿ ಮನುಶ್ಯ ತನ್ನ ಅಂತಿಮ ದಿನಗಳನ್ನು ಎಣಿಸುವಾಗ ಆತ ನಾನಾ ಕಶ್ಟಗಳನ್ನು ಅನುಬವಿಸುತ್ತಿರಬಹುದು, ಮಕ್ಕಳಿಂದ ದೂರವಿರಬಹುದು, ತನ್ನ ಆಪ್ತರನ್ನು ಕಳೆದುಕೊಂಡಿರಬಹುದು, ಇಲ್ಲವೇ ತಾನೇ ಅನಾರೋಗ್ಯ ಪೀಡಿತನಾಗಿರಲೂಬಹುದು. ಇಶ್ಟೆಲ್ಲಾ ಕಶ್ಟಗಳನ್ನು ಅನುಬವಿಸುವ ಈ ಸಮಯ ಆತನಿಗೆ ನಿಜಕ್ಕೂ ಕುಶಿಯ ಸಮಯ ಆಗುವುದು ಕಶ್ಟವೇ. ಎಲ್ಲರಿಗೂ ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇಂತಹ ಗಟ್ಟದಲ್ಲಿ ಸುಕಿಯಾಗಿರುವ ಮನುಶ್ಯನು ನಿಜಕ್ಕೂ ಅದ್ರುಶ್ಟವಂತನೇ.

ಇಶ್ಟೆಲ್ಲಾ ಗಮನಿಸಿರುವ ನಮಗೆ ನಮ್ಮ ಜೀವನ ಎಶ್ಟೊಂದು ಚಿಕ್ಕದಾಗಿ ಕಾಣುತ್ತದೆ ಅಲ್ಲವೇ. ಆದರೆ ಸಾದಕರಿಗೂ ಕೂಡ ಇರುವುದು ಇಶ್ಟೇ ಸಮಯ. ಅವರಿಂದ ಸಾದ್ಯವಾಗಿರುವ ಸಾದನೆ ನಮಗೆ ಏಕೆ ಮಾಡಲಾಗಿಲ್ಲ ಎಂದರೆ ನಾವು ಸಮಯಕ್ಕೆ ಮಹತ್ವ ಕೊಟ್ಟಿಲ್ಲ ಎಂದೇ ಅರ‍್ತ. ನಮ್ಮ ಜೀವಿತಾವದಿಯಲ್ಲಿ ನಮಗೆ ಸಿಗುವ ಸಮಯನ್ನು ನಾವು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅದಕ್ಕೂ ಮಹತ್ವ ಕೊಟ್ಟಿದ್ದೇ ಆದರೆ ನಾವು ಜೀವನವಡೀ ಆನಂದದ ಜೀವನ ನಡೆಸಬಹುದು. ನಿಮ್ಮ ಯೋಜನೆ ಹಾಗೂ ಸಮಯಕ್ಕೆ ನೀವು ಕೊಡುವ ಗೌರವ ಜೀವನವಿಡೀ ಉಪಕಾರಿಯಾಗಿರುತ್ತದೆ.

(ಚಿತ್ರ ಸೆಲೆ: byrslf.co)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks