ಅವಲಕ್ಕಿ ಸೂಸ್ಲಾ (ಅವಲಕ್ಕಿ ಒಗ್ರಾಣಿ)

– ಮಾರಿಸನ್ ಮನೋಹರ್.

ಅವಲಕ್ಕಿ

ಕರ‍್ನಾಟಕದಲ್ಲಿ ‘ಅವಲಕ್ಕಿ ಸುಸ್ಲಾ’ , ‘ಅವಲಕ್ಕಿ ಒಗ್ರಾಣಿ’ ಅಂತ ಅಂದರೆ ಮಹಾರಾಶ್ಟ್ರ , ಗುಜರಾತಿನ ಕಡೆ ‘ಪೋಹಾ’ ಅಂತ ಕರೆಯಲ್ಪಡುತ್ತದೆ. ಬೆಳಗಿನ ತಿಂಡಿ ಹಾಗೂ ಸಂಜೆಯ ಸ್ನ್ಯಾಕ್ ಆಗಿಯೂ ಇದನ್ನು ಮಾಡಿಕೊಳ್ಳಬಹುದು. ಬಹುತೇಕ ಬೆಳಗಿನ ತಿಂಡಿಯಾಗಿ ಹೆಸರುವಾಸಿ ಆಗಿದೆ. ಇದನ್ನು ಮಾಡುವುದು ಬಹಳ ಸುಲಬ ಹಾಗೂ ಬೇಗನೆ ಆಗುತ್ತದೆ. ಅವಲಕ್ಕಿ ಬಿಡಿಯಾಗಿಯೂ ಮತ್ತು ಪ್ಯಾಕೆಟ್ ಗಳಲ್ಲಿಯೂ ಎಲ್ಲ ಕಡೆ ದೊರಕುತ್ತದೆ. ಬಿಡಿಯಾಗಿ ತಂದ (ಬಡಗಣ ಕರ‍್ನಾಟಕದಲ್ಲಿ ‘ಕುಲ್ಲಾ’ ಅನ್ನುತ್ತಾರೆ) ಅವಲಕ್ಕಿಯಲ್ಲಿ ಕಳವೆ ಸಿಪ್ಪೆ (ಬತ್ತದ ಸಿಪ್ಪೆ), ಹೊಟ್ಟು, ಕಡ್ಡಿ, ತುಂಬಾ ಇರುತ್ತದೆ. ಅದನ್ನು ಚೆನ್ನಾಗಿ ತೊಳೆಯ ಬೇಕಾಗುತ್ತದೆ, ಅದಕ್ಕೆ ಪ್ಯಾಕೆಟ್ ಅವಲಕ್ಕಿ ತಂದರೆ ಸೂಕ್ತ.

ಬೇಕಾಗುವ ಸಾಮಾಗ್ರಿಗಳು:

1. ಅವಲಕ್ಕಿ – ಅರ‍್ದ ಪಾವು (125 ಗ್ರಾಂ)
2. ಈರುಳ್ಳಿ (ಉಳ್ಳಾಗಡ್ಡಿ) – ಒಂದು (ಮದ್ಯಮ ಗಾತ್ರದ್ದು)
3. ಹಸಿಶುಂಟಿ – ಬೆಳ್ಳುಳ್ಳಿ ಪೇಸ್ಟ್ – ಅರ‍್ದ ಟೀಸ್ಪೂನ್
4. ಹಸಿಮೆಣಸಿನಕಾಯಿ – 3
5. ಅರಿಶಿನ – ಮುಕ್ಕಾಲು ಟೀಸ್ಪೂನ್
6‌. ಕರಿಬೇವು – 1 ಎಸಳು
7. ಕೊತ್ತಂಬರಿ – ಅರ‍್ದ ಸಿವುಡು (ಕಟ್ಟು)
8. ಸಾಸಿವೆ – ಮುಕ್ಕಾಲು ಟೀಸ್ಪೂನ್
9. ಎಣ್ಣೆ – 1 ಚಟಾಕು (50 ಗ್ರಾಂ)

ನಿಮಗೆ ಬೇಕಾದರೆ ಈ ಕೆಳಗಿನ ಸಾಮಾಗ್ರಿಗಳನ್ನು ಬಳಸಬಹುದು,

10. ಆಲೂಗಡ್ಡೆ – 1 (ಮದ್ಯಮ ಗಾತ್ರದ್ದು)
11. ಹಸಿ ಬಟಾಣಿ – 2 ಟೀಸ್ಪೂನ್
12. ಶೇಂಗಾ – 1 ಟೀಸ್ಪೂನ್
13. ಈರುಳ್ಳಿ ಸೊಪ್ಪು – 2 ದಂಟು
14. ಗಜ್ಜರಿ (ಕ್ಯಾರೆಟ್) – ಒಂದು
15. ಪುಡಿಕಾರ – ಮುಕ್ಕಾಲು ಟೀಸ್ಪೂನ್
16. ಟೊಮ್ಯಾಟೊ – ಅರ‍್ದ
16. ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ:

ಅವಲಕ್ಕಿ ತೊಳೆದು ಇಟ್ಟುಕೊಳ್ಳುವುದಕ್ಕಿಂತ ಮೊದಲೇ ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಹೆಚ್ಚಿ ಇಟ್ಟು ಕೊಳ್ಳಬೇಕಾಗುತ್ತದೆ. ಏಕೆಂದರೆ ಅವಲಕ್ಕಿ ಮೊದಲೇ ತೊಳೆದು ಇಟ್ಟರೆ ಅದು ತುಂಬಾ ನೆನೆದು ಅವಲಕ್ಕಿ ಮುದ್ದೆಯಾಗುತ್ತದೆ.

ಎಲ್ಲ ತರಕಾರಿ ಕೊಯ್ದಿಟ್ಟು ಸಿದ್ದವಾಗಿ ಮುಂದೆ ಇಟ್ಟುಕೊಳ್ಳಬೇಕು. ಗ್ಯಾಸಿನ ಮೇಲೆ ಬೋಗುಣಿ ಪಾತ್ರೆ ಕಾಯಲು ಇಡಬೇಕು ಅದರಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ತಾಳಿಸಿ. ಇದು ತಾಳಿಸುವಾಗಲೇ ಅವಲಕ್ಕಿ ಎರಡು ಸಲ ತೊಳೆದು ಸೋಸಿ ಇಡಬೇಕು (ಇದಕ್ಕೆಂದು ಗ್ಯಾಸ್ ಉರಿಯನ್ನು ಕಡಿಮೆ ಮಾಡಿ). ಆಮೇಲೆ ಶುಂಟಿ – ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಅದರ ಹಸಿ ವಾಸನೆ ಹೋಗಿಸಬೇಕು, ಆಮೇಲೆ ಕೊತ್ತಂಬರಿ ಸೊಪ್ಪು ಕರಿಬೇವು ಹಾಕಿ, ಆಮೇಲೆ ಅರಿಶಿನ ಹಾಕಬೇಕು. ಅರಿಶಿನ ಹಾಕಿದ ಮೇಲೆ ತಡಮಾಡದೆ ಸೋಸಿಟ್ಟ ಅವಲಕ್ಕಿ ಹಾಕಿ ಚೆನ್ನಾಗಿ ಕೈಯಾಡಿಸಿ ಮೂರು ನಿಮಿಶ ಸಣ್ಣ ಉರಿಯಲ್ಲಿ ಮುಚ್ಚಿ ಇಡಬೇಕು. ಒಗ್ಗರಣೆ ಹಾಕುವಾಗ ಎಣ್ಣೆ ಕಡಿಮೆಯಾದರೆ ಅವಲಕ್ಕಿ ಸೀದು ಹೋಗುವ ಸಾದ್ಯತೆ ಇರುತ್ತದೆ. ಹಾಗಾಗಿ ಅವಲಕ್ಕಿ ಪ್ರಮಾಣಕ್ಕೆ ತಕ್ಕ ಹಾಗೆ ಎಣ್ಣೆ ಹಾಕಿ.

ವಿ.ಸೂ : ಮೇಲೆ ಹೇಳಿದ ಹೆಚ್ಚುವರಿ ತರಕಾರಿಗಳನ್ನು ಒಗ್ಗರಣೆಯಲ್ಲಿ ತಾಳಿಸಬೇಕು ಆಮೇಲೆ ಸೋಸಿಟ್ಟ ಅವಲಕ್ಕಿ ಹಾಕಬೇಕು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: