ಬೊಂಬೆಗಳ ಕತೆ – ಬಾರ‍್ಬಿ ಡಾಲ್
ಹೆಣ್ಣು ಮಗುವಿಗೆ ಬಾರ‍್ಬಿ ಹೆಸರು ಕೇಳಿದೊಡನೆ ನಲಿವು. ಮ್ಯಾಟೆಲ್ ಇನ್‌ಕಾರ‍್ಪೋರೇಶನ್(Mattel Inc.) ಎಂಬ ಬೊಂಬೆ ತಯಾರಿಕೆ ಕೂಟದ ಒಡತಿ ರುತ್ ಹ್ಯಾಂಡ್ಲರ‍್(Ruth Handler) ಎಂಬ ಅಮೇರಿಕಾದ ಹೆಂಗಸು, ತನ್ನ ಹೆಣ್ಮಗು ಬೊಂಬೆಗಳೊಡನೆ ಆಟ ಆಡುವಾಗ ವಿಶೇಶವಾದದೊಂದನ್ನು ಗಮನಿಸುತ್ತಾಳೆ. ಈ ಮಗು ಬೊಂಬೆಗಳನ್ನು ವಯಸ್ಕರ/ದೊಡ್ಡವರ ತರಹ ಸಿಂಗರಿಸಿ, ದೊಡ್ಡವರ ಪಾತ್ರದಂತೆ ನೋಡುವುದನ್ನು ಕಂಡ ರುತ್ ತಲೆಯಲ್ಲಿ ಚಕ್ಕನೆ ಹೊಳಹೊಂದು ಮೂಡುತ್ತದೆ. ದೊಡ್ಡವರಂತೆ ಹೋಲುವ ಬೊಂಬೆಗಳು ಮಾರುಕಟ್ಟೆಯಲ್ಲಿ ಯಾಕಿಲ್ಲ? ಇದು ರುತ್‌ಗೆ ಕೊರತೆಯಂತೆ ಕಾಣುತ್ತದೆ. ಬಿಲ್ಡ್ ಲಿಲಿ(Bild Lily) ಆ ಹೊತ್ತಿನಲ್ಲಿ ಜರ‍್ಮನಿಯ ನಗೆತಿಟ್ಟುಗ ಸರಣಿಯಾಗಿ(Comic Strip) ಹೆಸರು ಮಾಡಿರುತ್ತದೆ, ಹದಿಹರೆಯದವರ ಬೊಂಬೆಯಾಗಿಯೂ ಮಾರಾಟಗೊಳ್ಳುತ್ತ ಚಿಕ್ಕಮಕ್ಕಳಿಗೂ ಮೆಚ್ಚುಗೆಯಾಗಿರುತ್ತದೆ. 1956ರ ಹೊತ್ತಲ್ಲಿ ತನ್ನ ಪುಟ್ಟ ಮಗಳೊಂದಿಗೆ ಯುರೋಪ್ ಪ್ರವಾಸಕ್ಕೆ ತೆರಳಿದ್ದ ರುತ್ ಜರ‍್ಮನಿಯ ಈ ಹೆಸರುವಾಸಿ ಬಿಲ್ಡ್ ಲಿಲಿ ಬೊಂಬೆಗಳೊಡನೆ ಅಮೇರಿಕಾಕ್ಕೆ ಮರಳುತ್ತಾಳೆ. ಇದೇ ಮಾರುಕಟ್ಟೆಗೆ ಬೇಕಾದ ಸರಿಯಾದ ಮಾಡುಗೆ ಎಂದು ರುತ್ ಬಿಲ್ಡ್ ಲಿಲಿಯನ್ನು ಆದಾರವಾಗಿಸಿ, ಹದಿಹರೆಯದವರನ್ನು ಹೋಲುವ ಬೊಂಬೆಯೊಂದನ್ನು 1959ರ ಮಾರ‍್ಚ್ 9ಕ್ಕೆ ಬಿಡುಗಡೆಗೊಳಿಸುತ್ತಾಳೆ. ಮಗಳು ಬಾರ‍್ಬರಾ ಹೆಸರನ್ನೇ ಕಿರಿದಾಗಿಸಿ ಅದಕ್ಕೆ ಬಾರ‍್ಬಿ ಎಂದು ಹೆಸರಿಸುತ್ತಾಳೆ. ಅದೇ ಬಾರ‍್ಬಿ ಡಾಲ್.
ಬಿಡುಗಡೆಗೊಳಿಸಿದ ಹೊಸತರಲ್ಲಿ ಸಾಕಶ್ಟು ಕಶ್ಟಗಳು ಎದುರಾಗುತ್ತವೆ. ಗಂಡ ಎಲಿಯಟ್ ಹ್ಯಾಂಡ್ಲರ್ ಮತ್ತು ಮ್ಯಾಟೆಲ್ ಇಂಕ್ ಕೂಟದ ನಡೆಸುಗರು ಸಹ ಇದರ ಬಗ್ಗೆ ಆಸಕ್ತಿ ತೋರುವುದಿಲ್ಲ. ಜಪಾನ್ ದೇಶದಲ್ಲಿ ಮೊಟ್ಟ ಮೊದಲ ಬಾರಿ ಬಾರ‍್ಬಿಗಳ ದೊಡ್ಡ ಪ್ರಮಾಣದ ತಯಾರಿಕೆ ನಡೆಸುವ ರುತ್ ಸುಮಾರು 3,50,000 ಬಾರ‍್ಬಿಗಳನ್ನು ಮಾರಾಟ ಮಾಡಿ ದಾಕಲೆ ಬರೆಯುತ್ತಾಳೆ. 2 ವರುಶಗಳಲ್ಲಿ ಲೂಯಿಸ್ ಮಾರ‍್ಕ್ಸ್(Louis Marx) ಎಂಬ ಕಂಪನಿಯೊಂದು ರುತ್ ಹ್ಯಾಂಡ್ಲರ್ ಒಡೆತನದ ಮ್ಯಾಟೆಲ್ ಕಂಪನಿಯ ವಿರುದ್ದ ಮೋಸದ ದೂರು ಸಲ್ಲಿಸುತ್ತದೆ. ಬಿಲ್ಡ್ ಲಿಲಿ ಬೊಂಬೆಯನ್ನು ಕದ್ದು ಬಾರ‍್ಬಿ ಹೆಸರಲ್ಲಿ ಮಾರಲಾಗುತ್ತಿದೆಯೆಂದು ಆರೋಪ ಇದಾಗಿತ್ತು. ಆದರೆ ಈ ವಿಶಯವನ್ನು ನ್ಯಾಯಾಲಯದಾಚೆ ಬಗೆಹರಿಸಿ, ಬಾರ‍್ಬಿ ಹಮ್ಮುಗೆಗೆ ಸಂಬಂದಿಸಿದ ಎಲ್ಲ ಹಕ್ಕೋಲೆಗಳನ್ನು(Patent) ಕರೀದಿಸುತ್ತದೆ. ಮುಂದೆ ಬಾರ‍್ಬಿ ಡಾಲ್ ಬೊಂಬೆಗಳು ಲಕ್ಶಾಂತರ ಬೇಡಿಕೆ ಪಡೆಯುತ್ತ ಸಾಗಿತು. ಇದೀಗ ಜಗತ್ತಿನೆಲ್ಲೆಡೆ ಹತ್ತಾರು ಕೋಟಿ ಬಾರ‍್ಬಿಗಳು ಮಾರಾಟಗೊಂಡಿವೆ.
ಬಾರ‍್ಬಿ ಹೆಸರಿನ ಕಟ್ಟುಕತೆಯನ್ನು(fiction) ಕಟ್ಟಲಾಗಿದೆ. ಬಾರ‍್ಬಿಗೆ ತರಹೇವಾರಿ ಬಟ್ಟೆ, ಸಿಂಗಾರದ ವಸ್ತುಗಳು, ಒಡವೆಗಳು, ಬ್ಯಾಗು ಮುಂತಾದವುಗಳು ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಬಾರ‍್ಬಿಗೆ ಒಬ್ಬ ನಲ್ಲನನ್ನು ತಯಾರಿಸಿ ಅವನಿಗೆ ಕೆನ್ ಎಂಬ ಹೆಸರು ನೀಡಲಾಗಿದೆ. ಬಾರ‍್ಬಿ ಬಳಿ ನಾಯಿ, ಬೆಕ್ಕು, ಪಾಂಡಾ, ಕುದುರೆ, ಜೀಬ್ರಾ, ಸಿಂಹ ಹೀಗೆ ಹತ್ತು ಹಲವಾರು ಸಾಕು ಉಸಿರಿಗಳಿದ್ದವಂತೆ. ಅದರಂತೆ ಬಾರ‍್ಬಿ ಹಲವು ಕಾರುಗಳ ಒಡತಿ. ಬಾರ‍್ಬಿ ಹೆಸರಿನ ನಗೆತಿಟ್ಟು(Cartoon), ಓಡುತಿಟ್ಟದ (Movie) ಸರಣಿಗಳು ಬಂದು ಹೆಸರು ಮಾಡಿವೆ. ಮ್ಯಾಟೆಲ್ ಕೂಟ ಹಾಟ್ ವೀಲ್ಸ್(Hot Wheels) ಎಂಬ ಮಕ್ಕಳ ಕಾರುಗಳನ್ನು ತಯಾರಿಸಿ ಹೆಸರುವಾಸಿಯಾಗಿದೆ. ಬಾರ‍್ಬಿ ಬೊಂಬೆ ಇರದ ಹೆಣ್ಮಗು ಇಲ್ಲ, ಹಾಟ್ ವೀಲ್ಸ್ ಕಾರು ಹೊಂದಿರದ ಗಂಡ್ಮಗು ಇಲ್ಲ ಎನ್ನುವಶ್ಟು ಇವೆರಡು ಬೊಂಬೆಗಳ ಕಂಪನಿ ಬೆಳೆದು ನಿಂತಿದೆ.
ಇತರೆ ಪ್ರಮುಕ ಗೊಂಬೆ ಕಂಪನಿಗಳೆಂದರೆ, ರಶಿಯಾದ ಮಾತ್ರೋಶ್ಕಾ ಡಾಲ್ಸ್(Matryoshka Dolls), ಇಟಲಿಯ ಪಿನೊಶಿಯೊ ಟಾಯ್ಸ್(Pinocchio Toys), ಅಮೇರಿಕಾದ ಲಾರ‍್ಕ್ ಟಾಯ್ಸ್(Lark Toys) ಮತ್ತು ಜಪಾನಿನ ಕಿಡ್ಡಿ ಲ್ಯಾಂಡ್ ಹರಾಜುಕು(Kiddy Land Harajuku).
(ಮಾಹಿತಿ ಸೆಲೆ: wiki, steiff.com)
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು