“ಒಲೆ ಮೇಲೆ ಮಾಡಿದ ಅಡುಗೆ, ಗಡಿಗೆಯಲ್ಲಿ ಮಾಡಿದ ಚಟ್ನಿ”

– ಮಾರಿಸನ್ ಮನೋಹರ್.

ಅಮ್ಮ ಟೊಮೆಟೋ ಹಣ್ಣುಗಳನ್ನು ಕೊಯ್ದು ಪ್ಲೇಟಿನಲ್ಲಿ ಇಡುತ್ತಿದ್ದಳು. ಅವತ್ತು ಟೊಮೆಟೋ ಚಟ್ನಿ ಮಾಡುವುದಿತ್ತು. ಮನೆಯ ಹಿಂದುಗಡೆ ಇದ್ದ ಸ್ವಲ್ಪ ಜಾಗದಲ್ಲಿ ಮೂರು ಕಲ್ಲುಗಳಿಂದ ಒಲೆ ತಯಾರಾಗಿತ್ತು. ಅದರ ಸುತ್ತಲೂ ಕೆಮ್ಮಣ್ಣಿನಿಂದ ‘ಸೀಗಿ’ ಕೊಡಲಾಗಿತ್ತು. ಒಲೆ ಸುತ್ತಮುತ್ತ ಕೆಮ್ಮಣ್ಣಿನ ಬಣ್ಣದಿಂದ ಅಲಂಕರಿಸುವುದನ್ನು ‘ಸೀಗಿ’ ಅನ್ನುತ್ತಾರೆ ಅಂತ ಅಮ್ಮ ಹೇಳಿದಳು. ಮೊದಲ ಬಾರಿಗೆ ಸಿಟಿ ಮನೆಯಲ್ಲಿ ಒಲೆ ಮೇಲೆ ಅಡುಗೆ ಮಾಡುವವರಿದ್ದೆವು. ಇದೆಲ್ಲಾ ಒಲೆ ಮೇಲೆ ಮಾಡಿದ ಅಡಿಗೆ ಊಟ ಮಾಡಬೇಕು ಅನ್ನೋ ಜಿದ್ದು ನಮಗೆ ಬಂದಿದ್ದು ನೆಂಟರೊಬ್ಬರ ಮನೆಯಲ್ಲಿ ಹುಟ್ಟದಬ್ಬದ ಪ್ರೋಗ್ರಾಮಿಗೆ ಹೋಗಿದ್ದಾಗ. ಅಲ್ಲಿ ಅಡುಗೆ ಮಾಡುವವರು ಕಟ್ಟಿಗೆ ಒಲೆ ಮೇಲೆ ಮಾಡಿದ್ದ ಅನ್ನ-ಸಾರು, ಸಿಹಿ ತಿಂಡಿ ನಮಗೆಲ್ಲ ತುಂಬ ಹಿಡಿಸಿ ಮೂರು ದಿನಗಳವರೆಗೆ ಆ ಅಡುಗೆಯ ಹೇಳುವಿಕೆ(Narration) ನಡೆದಿತ್ತು. ಆಯ್ತು, ಒಲೆ ಮೇಲೆ ಅಡುಗೆ ಮಾಡಿ ಉಣ್ಣಲೇಬೇಕು ಅಂತ ಪ್ರತಿಗ್ನೆ ಮಾಡಿಕೊಂಡ ನಾವು ಅದಕ್ಕೆ ಸಿದ್ದರಾದೆವು.

ಮನೆಯಲ್ಲಿ ಗ್ಯಾಸ್ ಒಲೆಯ ಮೇಲೆ ಸೀದು ಹೋದ ಹಾಲಿನ ಪಾತ್ರೆಯನ್ನು ನಮ್ಮ ಮನೆಗೆಲಸದವಳು ಉಜ್ಜಿ ಬೆಳಗುವುದಿಲ್ಲ. ಒಲೆ ಮೇಲೆ ಹೊಗೆ ಬಡಿದು ಮಸಿ ಹಚ್ಚಿಸಿಕೊಂಡ ಪಾತ್ರೆಯನ್ನು ಶಾಂತಮ್ಮನಿಗೆ ಬೆಳಗಲು ಕೊಟ್ಟರೆ ಅವಳು ಸುಪ್ರೀಂಕೋರ‍್ಟ್ ನಲ್ಲಿ ನಮ್ಮ ಮೇಲೆ ಕೇಸು ಹಾಕ್ತಾಳೆ ಅಂತ ಅಮ್ಮನಿಗೆ ಗೊತ್ತಾಗಿತ್ತು. ಒಲೆ ಮೇಲೆ ಅಡುಗೆ ಮಾಡುತ್ತಿದ್ದೇವೆ ಅಂದರೆ ಗಡಿಗೆಯನ್ನು ಯಾಕೆ ತರಬಾರದು ಅಂತ ಹೊಳೆಯಿತು. ಬಸ್ ನಿಲ್ದಾಣದ ಬಳಿಯೇ ಗಡಿಗೆ ಮಾರುವವನಿದ್ದು ಅಲ್ಲಿಗೆ ಹೋದೆವು. ಸಣ್ಣದೂ ಅಂದರೆ ನೂರು ರೂಪಾಯಿ ದೊಡ್ಡದು ಅಂದರೆ ಮುನ್ನೂರು ರೂಪಾಯಿ ಅಂತ ಹೇಳಿದ. ಅಮ್ಮ ಮುಂದಕ್ಕೆ ಬಂದು “ಐವತ್ತು ರೂಪಾಯಿಗೆ ಈ ದೊಡ್ಡ ಗಡಿಗೆ ಕೊಡುವ ಹಾಗಿದ್ದರೆ ಕೊಡು. ಇಲ್ಲ ಅಂದರೆ ಮುಂದೆ ಹೋಗುವೆವು” ಅಂದಳು. ಗಡಿಗೆ ಮಾರುವವನು ತನ್ನ ಮುಕವನ್ನೂ ಗಡಿಗೆಯಶ್ಟೇ ದೊಡ್ಡದು ಮಾಡಿ ನಮಗೆ ಕೊಟ್ಟ.

ನಾವು ಸಂತಸದಿಂದ ಮುನ್ನೂರು ರೂಪಾಯಿ ಗಡಿಗೆಯನ್ನು ಐವತ್ತು ರೂಪಾಯಿಗೆ ತಂದೆವು ಅಂತ ಬೀಗಿದೆವು. ಗಡಿಗೆ ಮನೆಗೆ ಬಂತು , ಅದನ್ನು ತರುವುದು ನೋಡಿದ ಪಕ್ಕದ ಮನೆ ಆಂಟಿ “ಗಡಿಗೆಯನ್ನು ಗ್ಯಾಸಿನ ಮೇಲೆ ಇಡಬಾರದು ಸೀಳಿ ಬಿಡುತ್ತೆ, ಹೊಸ ಗಡಿಗೆಯಲ್ಲಿ ಮೊದಲು ಹಾಲು ಇಲ್ಲವೇ ನೀರು ಕುದಿಸಬೇಕು” ಅಂತ ತಮ್ಮ ಬಿಟ್ಟಿ ಸಲಹೆಗಳನ್ನು ಹೊರಹಾಕಿದರು. ಅದಕ್ಕೆ ಅಮ್ಮ ಇವರು ಸಲಹೆ ಕೊಟ್ಟ ಮೇಲೆ ಇನ್ನೇನು ಗಂಡಾಂತರ ಕಾದಿದೆಯೋ ಅಂತ ಹೆದರಿದಳು. ನಾವು ಚಿಕ್ಕವರಿದ್ದಾಗ ಅಡುಗೆ ಮನೆ, ಗ್ಯಾಸಿನ ಬಳಿ ಹೋಗಲೂ ಬಿಡುತ್ತಿರಲಿಲ್ಲ. ಅದಕ್ಕೆ ಕಾರಣ ದಾರಾವಾಹಿಗಳಲ್ಲಿ ಇರುತ್ತಿದ್ದ, ಅತ್ತೆ ಸಿಲಿಂಡರ್ ಗ್ಯಾಸ್ ಲೀಕ್ ಮಾಡಿ, ಸೊಸೆ ಅಡುಗೆ ಮನೆಗೆ ಕಾಲಿಟ್ಟು ಕಡ್ಡಿ ಗೀರಿದ ತಕ್ಶಣ ಅಡಿಗೆ ಮನೆ ಉಡಾಯಿಸುವ ಸೀನ್‌ಗಳು! ಅವುಗಳಿಂದ ಪ್ರಬಾವಿತಳಾಗಿದ್ದ ಅಮ್ಮ ಗ್ಯಾಸ್ ರೆಗ್ಯುಲೇಟರ್ ಅನ್ನು ಹೊಸ ಸಿಲಿಂಡರ್ ಗೆ ಜೋಡಿಸಲು ಇಬ್ಬರು ಪಕ್ಕದ ಮನೆಯ ಎಕ್ಸಪರ‍್ಟ್‌ಗಳನ್ನು ಕರೆಸಿ, ಅವರ ಹಿಂದೆಯೇ ನಿಂತು ಜೋಡಿಸುತ್ತಿದ್ದಳು.

ಹೇಗೂ ನಾವು ಒಲೆಯ ಮೇಲೆ ಅಡುಗೆ ಮಾಡುವವರಿದ್ದೆವು. ಗಡಿಗೆಯನ್ನು ಚೆನ್ನಾಗಿ ತೊಳೆದು ಅದರಲ್ಲಿ ನೀರು ತುಂಬಿಸಿ ಕುದಿಸಿದಳು. ಬೇಕಾದ ಎಲ್ಲ ಅಡುಗೆ ಸಾಮಾನುಗಳು ಈಗ ಮನೆಯ ಹೊರಗಡೆ ಬಂದವು. ನಾವೆಲ್ಲ ಒಲೆಯ ಸುತ್ತ ಮುತ್ತ ಕುಳಿತುಕೊಂಡವು. ಅಮ್ಮ ಮೊದಲು ಟೊಮೆಟೋ ಚಟ್ನಿ ಮಾಡಿದಳು. ಅದು ಕುದಿಯುತ್ತಿರುವಾಗ ಒಂತರಾ ವಾಸನೆ ಬಂತು. “ಗಡಿಗೆಯಲ್ಲಿ ಮಾಡುವಾಗ ಹೀಗೆಯೆ ವಾಸನೆ ಬರುತ್ತದೆ” ಅಂತ ಅಂದಳು. ಅದೇ ಗಡಿಗೆಯಿಂದ ಚಟ್ನಿ ತೆಗೆದು ಅದನ್ನು ತೊಳೆದು ಅದರಲ್ಲಿಯೇ ಮಸಾಲೆ ಒಗ್ಗರಣೆ ಅನ್ನ ಮಾಡಿದಳು, ಅದೂ ಕುದಿಯುತ್ತಿರುವಾಗ ಒಂತರಾ ಬೇರೆಯದೇ ವಾಸನೆ ಬಂತು. “ಗಡಿಗೆಯಲ್ಲಿ ಮಾಡುವಾಗ ಹೀಗೆಯೇ ಅನ್ನಿಸುತ್ತದೆ” ಅಂತ ಮತ್ತೆ ಹೇಳಿದಳು. ಹಳ್ಳಿಗಳಲ್ಲಿ ಒಲೆ ಮೇಲೆ ಅಡುಗೆ ಮಾಡುವುದನ್ನು ನೋಡಿದ್ದೆವು. ನಮಗೆ ಇದು ಒಂತರಾ ಹೊಸ ಅನುಬವ! ಮನೆಯಲ್ಲಿ ಬೇರೆ ಅಡುಗೆ ಏನೂ ಇರಲಿಲ್ಲ, ಆದ್ದರಿಂದ ಎಲ್ಲರೂ ಇದನ್ನೇ ಊಟ ಮಾಡಿದೆವು.

ಊಟ ಮಾಡುವಾಗ “ಹೊಸ ರುಚಿ ಬರ‍್ತಾ ಇದೆ ಹೊಸ ರುಚಿ ಬರ‍್ತಾ ಇದೆ” ಅಂತ ಒಬ್ಬರಿಗೊಬ್ಬರು ಹೇಳಿಕೊಂಡು ಊಟ ಮಾಡಿದೆವು. ಇದನ್ನೇ ಊಟ ಮಾಡಿ ನಾನೂ ಅಣ್ಣ ಸ್ಕೂಲಿಗೆ ಹೋದೆವು. ಊಟ ಮಾಡಿದ ಅರ‍್ದ ಗಂಟೆಯಲ್ಲಿಯೇ ನನಗೆ ಸಣ್ಣದಾಗಿ ಹೊಟ್ಟೆ ನೋವು, ತಲೆ ನೋವು ಶುರು ಆಯಿತು. ನಾನು ಅಶ್ಟು ಗಮನ ಕೊಟ್ಟಿರಲಿಲ್ಲ. ನಮಗೆ ಸ್ಕೂಲಿಗೆ ಹೋಗುವಾಗ ದಿನಾಲೂ ಹೊಟ್ಟೆ ನೋಯ್ದ ಹಾಗೆಯೇ ಆಗುತ್ತಿತ್ತು‌. ಸ್ಕೂಲಿನಲ್ಲಿ ಎರಡು ಕ್ಲಾಸುಗಳು ಆದ ಆಮೇಲೆ ನನಗೆ ತಲೆನೋವು ಜಾಸ್ತಿಯಾಯ್ತು. ಮನೆಗೆ ಹೋಗಲು ಚಡಪಡಿಸುತ್ತಿದ್ದೆ. ಆದರೆ ಕೇವಲ ತಲೆನೋವು ಅಂದರೆ ನಮ್ಮ ಸ್ಕೂಲಿನ ಹೆಡ್ ಮಾಸ್ಟರ್ ಎಂದಿಗೂ ಯಾರನ್ನೂ ಮನೆಗೆ ಕಳುಹಿಸುತ್ತಿರಲಿಲ್ಲ. ಈ ರೀತಿ ಸ್ಕೂಲಿನ ನಡುವೆ ಮನೆಗೆ ಹೋಗಲು ಕ್ವಾಲಿಪೈ ಆಗಬೇಕೆಂದರೆ ಆ ಹುಡುಗ ತಲೆ ಸುತ್ತಿ ಬಂದು ಬಿದ್ದಿರಬೇಕು, ಇಲ್ಲವೇ ಮೂಗಿನಿಂದ ರಕ್ತ ಸುರಿದಿರಬೇಕು, ಇಲ್ಲವೇ ವಾಂತಿ ಮಾಡಿಕೊಂಡಿರಬೇಕು. ಅಶ್ಟೇ ಅಲ್ಲದೇ ಇಬ್ಬರು ಮೂವರು ಹುಡುಗರು “ಹಾಗೆ ಆಗಿದೆ ನಾವು ನಮ್ಮ ಕಣ್ಣಾರೆ ಕಂಡಿದ್ದೇವೆ. ನಾವು ಹೇಳುತ್ತಿರುವುದೆಲ್ಲ ನಿಜ ಅಂತ ಆ ಬಗವಂತನ ಮೇಲೆ ಆಣೆ ಮಾಡುತ್ತೇವೆ” ಎಂದು ಹೇಳಿದಾಗ ಅವರ ಮನ ಕರಗಿ ಮನೆಗೆ ಹೋಗಲು ಬಿಡುತ್ತಿದ್ದರು.

ನಾನು ಹಾಗೂ ಹೀಗೂ ದೈರ‍್ಯ ತಂದುಕೊಂಡು ಹೆದರುತ್ತಲೇ ಹೆಡ್ ಮಾಸ್ಟರ್ ಕ್ಯಾಬಿನ್‌ಗೆ ಹೋದೆ. ಹುಡುಗರು ಹೆಡ್ ಮಾಸ್ಟರ್ ಕ್ಯಾಬಿನ್ ಗೆ ಹೋದರೆ ಅವರು ತಮ್ಮ ಮುಕವನ್ನು ಜೇನುಹುಳದ ಮುಕಕ್ಕೆ ಹೋಲುವ ಹಾಗೆ ಮಾಡಿಕೊಳ್ಳುತ್ತಿದ್ದರು. ಅವರ ಮುಕ ನೋಡಿಯೇ ನಾನು ಯಾಕಾದರೂ ಇವರ ಬಳಿಗೆ ಬಂದೆನೆನೋ ಅನ್ನಿಸಬೇಕು! ನಾನು ಹೋಗಿ ಅವರ ಮುಂದೆ ನನ್ನ ಹೊಟ್ಟೆ ಹಿಡಿದುಕೊಂಡು ಮುಕ ಕಿವಿಚಿಕೊಂಡು ನಿಂತೆ. ಅವರೂ ನನ್ನನ್ನು ಕುಟುಕಲು ಸಿದ್ದವಾದರು. ನಾನು “ಸರ್ ನನಗೆ ಹೊಟ್ಟೆ ನೋಯುತ್ತಿದೆ ತಲೆಯೂ ನೋಯುತ್ತಿದೆ , ನಾನು ಮನೆಗೆ ಹೋಗುತ್ತೇನೆ ” ಅಂದೆ ಅಲ್ಲಿಗೆ ನನ್ನ ದೈರ‍್ಯದ ಟಾಕ್‌ಟೈಂ ಮುಗಿದುಹೋಯಿತು. ಹೆಡ್ ಮಾಸ್ಟರ್ ಅವರು ‘ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಹೋಗಲು ಬಿಡೆನು’ ಅನ್ನೋ ಹಾಗೆ ನೋಡಿದರು. “ಶಾಲೆ ಬಿಡುವವರೆಗೆ ಹಾಗೇ ಸ್ಕೂಲಿನಲ್ಲಿಯೇ ಕೂತಿರು, ಎಲ್ಲ ನೋವು ತಾನಾಗೇ ಕಡಿಮೆಯಾಗುತ್ತದೆ” ಅಂತ ಸ್ವಾಂತನ ಹೇಳಿದರು. ನಾನು “ಆಯ್ತು ಸರ‍್” ಅಂತ ಅವರ ಕ್ಯಾಬಿನ್‌ನಿಂದ ಹೊರಗೆ ಬಂದೆ.

ಹೊರಗೆ ನಿಂತಿದ್ದ ಕೆಲವು ಸಹಪಾಟಿಗಳು ನನ್ನ ರಜೆ ರದ್ದಾಗಿದ್ದು ಕೇಳಿಸಿಕೊಂಡು ತುಂಬ ಸಂತಸದಿಂದ ಇದ್ದರು. ಯಾರನ್ನಾದರೂ ಮನೆಗೆ ಹೋಗಲು ಹೆಡ್ ಮಾಸ್ಟರ್ ಬಿಡದಿದ್ದರೆ ನಮಗೆ ಕುಶಿಯೋ ಕುಶಿ. ಯಾಕೆಂದರೆ ನಮಗೆ ಗೊತ್ತಿರುತ್ತಿತ್ತು. ಹಾಗೆ ಹೋದವನು ಮನೆಗೆ ಹೋಗಿ ಟಿವಿ ನೋಡುತ್ತಾನೆ ಇಲ್ಲವೇ ಕ್ರಿಕೆಟ್ ಆಡಲು ಎಲ್ಲಿಗಾದರೂ ಹೋಗುತ್ತಾನೆ ಅಂತ. ಮತ್ತೆ ನಾಳೆ ಬಂದು “ನನಗೆ ನಿನ್ನೆ ಹುಶಾರಿರಲಿಲ್ಲ ಸರ್. ಅದಕ್ಕೆ ಹೋಂವರ‍್ಕ್ ಮಾಡಲಿಲ್ಲ, ಹೆಡ್ ಮಾಸ್ಟರ್ ಅವರಿಗೆ ಕೇಳಿಯೇ ಹೋಗಿದ್ದೆ, ಬೇಕಾದರೆ ನೀವು ಅವರನ್ನೇ ಕೇಳಿ” ಅಂತ ಡಬಲ್ ದಮಾಕಾ ಆಪರ್ ಗಿಟ್ಟಿಸಿಕೊಳ್ಳುತ್ತಿದ್ದ. ಇರಲಿ ಎಂದು, ನಾನು ಹಾಗೆಯೇ ಕ್ಲಾಸಿಗೆ ಬಂದು ಕೂತೆ. ಹೀಗೆ ನರಳುತ್ತಿರುವಾಗ ಒಂದೊಂದು ಕ್ಲಾಸೂ, ಒಂದೊಂದು ಗಂಟೆಯೂ ಒಂದೊಂದು ವರುಶದ ಹಾಗೆ ಸರಿದುಹೋದವು. ಸಂಜೆ ನಾಲ್ಕೂವರೆ ಗಂಟೆಗೆ ಸ್ಕೂಲು ಬಿಟ್ಟಾಗ ನನಗೆ ಕ್ರಿಸ್ತಪೂರ‍್ವದಿಂದ ಕ್ರಿಸ್ತಶಕಕ್ಕೆ ಬಂದಶ್ಟು ಟೈಂ ಆಗಿದೆ ಅಂತ ಅನ್ನಿಸಿತ್ತು!

ಮನೆಗೆ ಬಂದಾಗ ಗೊತ್ತಾಗಿತ್ತು ಜ್ವರ ಬಂದಿದೆ ಅಂತ. ಮನೆಯಲ್ಲಿ ಅಮ್ಮನಿಗೆ ಗಂಟಲು ಕಟ್ಟಿಕೊಂಡಿತ್ತು, ಹೈಸ್ಕೂಲಿನಿಂದ ಬಂದ ಅಣ್ಣನಿಗೂ ಜ್ವರ ಬಂದಿತ್ತು. ತಂಗಿಗೂ ಪಪ್ಪನಿಗೂ ಏನೂ ಆಗಿರಲಿಲ್ಲ. ಪಪ್ಪ ಮುಂಜಾನೆ ಬೇಗನೇ ಆಪೀಸಿಗೆ ಹೋಗಿ ಅಲ್ಲಿಯೇ ತಮ್ಮ ತಿಂಡಿ ತಿನ್ನುತ್ತಿದ್ದರು. ಅವತ್ತು ಅವರು ಮನೆಯಲ್ಲಿ ಊಟ ಮಾಡಿರಲಿಲ್ಲ. ಮುಂಜಾನೆ ಗಡಿಗೆಯಲ್ಲಿ ಮಾಡಿದ ಅಡುಗೆ ತಿಂದಿದ್ದ ನಮಗೆ ಹೀಗಾಗಿತ್ತು ಅಂತ ಅಂದುಕೊಂಡೆವು. ಸಂಜೆಗೆ ಮನೆಗೆ ಬಂದ ಪಪ್ಪನಿಗೆ ಎಲ್ಲ ಗೊತ್ತಾಯಿತು. ಸೀದಾ ಅಡುಗೆ ಮನೆಗೆ ಹೋಗಿ ಐದು ಲೀಟರಿನ ಎಣ್ಣೆ ಪ್ಲಾಸ್ಟಿಕ್ ಬಾಟಲ್ ಹೊರಗೆ ತಂದರು. ಆಗ ಅಮ್ಮನಿಗೆ ಹೊಳೆಯಿತು ಇದು ಗಡಿಗೆಯ ತಪ್ಪಲ್ಲ ಹೊಸ ಬ್ರಾಂಡಿನ ಎಣ್ಣೆಯ ಕರಾಮತ್ತು ಅಂತ. ಪಪ್ಪ ಯಾವಾಗಲೂ ತರುತ್ತಿದ್ದ ದಿನಸಿ ಅಂಗಡಿಯವ “ಇದನ್ನು ಬಳಸಿ ನೋಡಿ ಹೊಸ ಬ್ರಾಂಡ್ ಬಂದಿದೆ” ಅಂತ ಪುಸಲಾಯಿಸಿ ಕೊಟ್ಟಿದ್ದ ಕೆಟ್ಟ ಎಣ್ಣೆ ಅದು. ಅದನ್ನು ಹಾಗೆಯೇ ಎತ್ತಿಕೊಂಡ ಪಪ್ಪ ಅದೇ ದಿನಸಿ ಅಂಗಡಿಗೆ ಕೊಟ್ಟು ಹಣ ವಾಪಸ್ ತೆಗೆದುಕೊಂಡು ಬಂದರು. ಆಮೇಲೆ ನನ್ನನ್ನೂ ಅಣ್ಣನನ್ನೂ ಹಾಸ್ಪಿಟಲ್ ಗೆ ಕರೆದುಕೊಂಡು ಹೋದರು. ಅದಾದ ಮೇಲೆ ನಾವು ಎಂದೂ ಗಡಿಗೆಯಲ್ಲಿ ಯಾವ ಅಡುಗೆಯನ್ನು ಮಾಡಲಿಲ್ಲ, ಹೊಸ ಬ್ರಾಂಡಿನ ಎಣ್ಣೆಯನ್ನೂ ತರಲಿಲ್ಲ.

(ಚಿತ್ರ ಸೆಲೆ: tripadvisor.com.sg)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: