ಹುರಿಗಡಲೆ (ಪುಟಾಣಿ) ಚಕಳಿ
– ಸವಿತಾ.
ಬೇಕಾಗುವ ಸಾಮಾನುಗಳು
- ಪುಟಾಣಿ (ಹುರಿಗಡಲೆ) – 1 ಲೋಟ
- ಬೆಲ್ಲದ ಪುಡಿ – 1 ಲೋಟ
- ಒಣ ಕೊಬ್ಬರಿ ತುರಿ – 1/2 ಲೋಟ
- ತುಪ್ಪ – 1 ಚಮಚ
- ಏಲಕ್ಕಿ – 2
- ಲವಂಗ – 2
- ಗೋಡಂಬಿ ಮತ್ತು ಒಣ ದ್ರಾಕ್ಶಿ – ಸ್ವಲ್ಪ
ಮಾಡುವ ಬಗೆ
ಪುಟಾಣಿಯನ್ನು (ಹುರಿಗಡಲೆ) ಸ್ವಲ್ಪ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಒಂದು ಚಮಚ ತುಪ್ಪ ಬಿಸಿ ಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಶಿಯನ್ನು ಸ್ವಲ್ಪ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಬೆಲ್ಲದ ಪುಡಿ ಸೇರಿಸಿ ಬೆಲ್ಲ ತೊಯ್ಯುವಶ್ಟು ನೀರು(ಸುಮಾರು 3 ಚಮಚ) ಸೇರಿಸಿ ಎಳೆ ಬರುವಂತೆ ಪಾಕ ಮಾಡಿ. ಸಣ್ಣ ಉರಿಯಲ್ಲಿ ಇಟ್ಟು ಹುರಿಗಡಲೆ ಹಿಟ್ಟು ಮತ್ತು ಒಣ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕಲಸಿ, ಒಲೆ ಆರಿಸಿ. ಬಿಸಿ ಇರುವಾಗಲೇ ಇದಕ್ಕೆ ಏಲಕ್ಕಿ ಲವಂಗ ಪುಡಿ ಮಾಡಿ ಸೇರಿಸಿ. ಹುರಿದ ಗೋಡಂಬಿ ದ್ರಾಕ್ಶಿ ಸೇರಿಸಿ.
ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಕುದಿಸಿದ ಮಿಶ್ರಣ ಸುರಿದು ಆರಲು ಬಿಡಿ. ಸ್ವಲ್ಪ ಆರಿದ ನಂತರ ಚೌಕಾಕಾರದಲ್ಲಿ ಇಲ್ಲವೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಹುರಿಗಡಲೆ ಚಕಳಿ ಸವಿಯಲು ಸಿದ್ದ 🙂
ಇತ್ತೀಚಿನ ಅನಿಸಿಕೆಗಳು