ಕವಿತೆ: ಬಾವುಟದ ಅಳಲು
ಜಲಪ್ರಳಯದಿ ಮುಳುಗಿಹೋಗಿವೆ
ಮಗುವಿನ ಕಲ್ಪನೆ ಕನಸು
ವರುಶದಂತೆ ಹಾರಿ ನಲಿಯಲು
ಗೋಳಾಡ್ತಿರುವುದು ಮನಸು
ಎಲ್ಲಿ ತೇಲಿ ಹೋಗಿದೆ ಏನೋ
ಶಾಲೆಯ ಪಾಟಿ ಚೀಲ
ಜೋಲುಮೋರೆ ಹಾಕಿಕೊಂಡು
ಸಾಲಲಿ ನಿಂತಿದೆ ಬಾಲ
ಲೆಪ್ಟ ರೈಟಂತ ಓಡಾಡ್ತಿತ್ತು
ಕಾಲಲಿ ದರಿಸಿ ಬೂಟು
ಕೈಗಳನೆತ್ತಿ ಹೊಡೆಯುತ್ತಿತ್ತು
ಜೈ ಹಿಂದ್ ಸಲೂಟು
ದ್ವಜದ ಕಟ್ಟಿ ಸಿಂಗರಿಸುತಿತ್ತು
ಬಣ್ಣದ ಹೂಗಳ ಹಾಸಿ
ರಾಶ್ಟ್ರಗೀತೆ ಹಾಡುತ್ತಿತ್ತು
ನನಗೆ ಮೊದಲಿಗೆ ನಮಿಸಿ
ಅರಳ ಹುರಿದಂಗ ಮಾತಾಡ್ತಿತ್ತು
ದೇಶ ಬಕ್ತರ ನೆನಸಿ
ಸಿಹಿಯನು ಹಂಚಿ ಕುಶಿ ಪಡುತಿತ್ತು
ನುಡಿವಂದನೆಯ ಸಲಿಸಿ
ಮಂತ್ರಿಮಾನ್ಯರು ದೊಡ್ಡವರಿಗಿಂತ
ಮಕ್ಕಳೆ ನನಗೆ ಸ್ಪೂರ‍್ತಿ
ತುಂಬಿಕೊಡುವರು ಯಾರು ಈಗ
ಸಡಗರವಿಲ್ಲದ ಕೊರತಿ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು