ಜಜ್ಜಿದ ಮೂಲಂಗಿ ಪಲ್ಯ

– ಮಾರಿಸನ್ ಮನೋಹರ್.

moolangi palya, ಮೂಲಂಗಿ ಪಲ್ಯ, radish

ಹಸಿ ಮೂಲಂಗಿ ಗಡ್ಡೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೊಪ್ಪಿನಲ್ಲಿ ನಾರಿನಂಶ ಇರುತ್ತದೆ. ಇದರ ಪಲ್ಯ ತುಂಬಾ ಚೆನ್ನಾಗಿರುತ್ತದೆ. ಕರ‍್ನಾಟಕದ ಎಲ್ಲ ಕಡೆ ಬೇರೆ ಬೇರೆ ತರಹ ಮಾಡುತ್ತಾರೆ. ಇದು ಜಜ್ಜಿದ ಮೂಲಂಗಿ ಗಡ್ಡೆ ಪಲ್ಯ ಮಾಡುವ ಬಗೆ. ಪಲ್ಯ ಮಾಡುವಾಗ ಕೆಲವರು ಮೂಲಂಗಿ ಮೇಲಿನ ಸೊಪ್ಪನ್ನು ಹಾಕುವುದಿಲ್ಲ, ಕೆಲವರು ಹಾಕುತ್ತಾರೆ. ಈ ರೆಸಿಪಿಯಲ್ಲಿ ಸೊಪ್ಪನ್ನು ಹಾಕಿ ಮಾಡುವ ಬಗೆಯನ್ನು ತಿಳಿಸಲಾಗಿದೆ. (ತಮಾಶೆಯಾಗಿ ಹೇಳುವುದಾದರೆ ಮೂಲಂಗಿ ಹೊಲದಿಂದ ತಂದರೆ ಸೊಪ್ಪು ಹಾಕುವುದಿಲ್ಲ; ಅಂಗಡಿಯಿಂದ ತಂದರೆ ಸೊಪ್ಪು ಹಾಕುತ್ತಾರೆ. ಹಣ ಕೊಟ್ಟು ತಂದಿರುತ್ತಾರಲ್ಲಾ!).

ಬೇಕಾಗುವ ಸಾಮಾನುಗಳು

  • ಮೂಲಂಗಿ ಗಡ್ಡೆ(ಸೊಪ್ಪಿನ ಜೊತೆಗೆ) – 1/2 ಕೆ.ಜಿ.
  • ಹಸಿಮೆಣಸಿನಕಾಯಿ – 4
  • ಬೆಳ್ಳುಳ್ಳಿ – 2 ಎಸಳು
  • ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 3/4 ಟೀಸ್ಪೂನ್
  • ಅರಿಶಿಣ – 3/4 ಟೀಸ್ಪೂನ್
  • ಈರುಳ್ಳಿ – 1/2
  • ಎಣ್ಣೆ – ಸಾಸಿವೆ – ಜೀರಿಗೆ – ಒಗ್ಗರಣೆಗೆ

ಮಾಡುವ ಬಗೆ

ಮೂಲಂಗಿಯನ್ನು ಚೆನ್ನಾಗಿ ತೊಳೆದುಕೊಂಡು, ಮೇಲಿನ ಸೊಪ್ಪನ್ನು ಮಾತ್ರ ಕಡಿದುಕೊಳ್ಳಬೇಕು. ಎಳೆಯದಾಗಿದ್ದರೆ ಅದರ ಕೆಳಗಿನ ದಂಟನ್ನು ಬಳಸಬಹುದು, ತುಂಬಾ ಬಲಿತಿರಬಾರದು. ಒರಳಿನಲ್ಲಿ ಮೂಲಂಗಿ ಗಡ್ಡೆಗಳನ್ನು ಪೂರ‍್ತಿ ಪೇಸ್ಟ್ ಆಗದಂತೆ ಜಜ್ಜಬೇಕು. ಕಟ್ಟಿಗೆಯ ಸಣ್ಣ ಒನಕೆಯನ್ನು ಜಜ್ಜಲು ಬಳಸಬಹುದು. ಮೂಲಂಗಿ ಸೊಪ್ಪನ್ನು ಹಾಗೆಯೇ ತೊಳೆದು ಹೆಚ್ಚಿ ಇಟ್ಟುಕೊಳ್ಳಬೇಕು. ಸೊಪ್ಪನ್ನು ಜಜ್ಜಬಾರದು.

ಹಸಿಮೆಣಸಿನಕಾಯಿ ಒರಳಲ್ಲಿ ಹಾಕಿ ,ಅದರ ಜೊತೆಗೆ ಸ್ವಲ್ಪ ಹರಳುಪ್ಪು, ಬೆಳ್ಳುಳ್ಳಿ ಎಸಳು ಹಾಕಿ ಕುಟ್ಟಿಕೊಳ್ಳಬೇಕು. ಹಸಿಮೆಣಸಿನಕಾಯಿ ಇರಲಿ ಕೆಂಪು ಒಣಮೆಣಸಿನಕಾಯಿ ಇರಲಿ ಕಾರ ಅವುಗಳ ಬೀಜದಲ್ಲಿ ಇರುವುದರಿಂದ ಹೆಚ್ಚಿಗೆ ರುಬ್ಬಿದರೆ ಕಾರ ತುಂಬಾ ಜಾಸ್ತಿಯಾಗುತ್ತದೆ. ಈ ಜಜ್ಜಿದ ಮೂಲಂಗಿ ಪಲ್ಯಕ್ಕೆ ಹಸಿಮೆಣಸಿನಕಾಯಿ ಸೂಕ್ತ. ಹೀಗೆ ಕುಟ್ಟಿದ ಹಸಿ ಮೆಣಸಿನಕಾಯಿಯನ್ನು ತೆಗೆದಿಟ್ಟುಕೊಳ್ಳಿ.

ಒಗ್ಗರಣೆಗೆ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಹಾಕಿ ಸಿಡಿಸಿ. ಅರ‍್ದ ಈರುಳ್ಳಿ ಹಾಕಿ ಬಂಗಾರ ಕಂದು ಬಣ್ಣ ಬರುವವರೆಗೆ ಕರಿದು, ಕುಟ್ಟಿದ ಹಸಿಮೆಣಸಿನಕಾಯಿ ಕಾರ ಹಾಕಿ. ಈಗ ಒಂದು ನಿಮಿಶ ಇದನ್ನು ತಾಳಿಸಬೇಕು. ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ‍್ದ ನಿಮಿಶ ಕರಿಯಬೇಕು. ಇದಕ್ಕೆ ಅರಿಶಿಣ ಸೇರಿಸಿ, ಜಜ್ಜಿದ ಮೂಲಂಗಿ ಗಡ್ಡೆ ಹಾಗೂ ಅದರ ಹೆಚ್ಚಿದ ಸೊಪ್ಪು ಹಾಕಿ ಚೆನ್ನಾಗಿ ತಿರುವಿ ಸಣ್ಣ ಉರಿಯಲ್ಲಿ ಬಾಡಿಸಬೇಕು. ಹತ್ತು ಹದಿನೈದು ನಿಮಿಶ ಚೆನ್ನಾಗಿ ತಾಳಿಸಿದರೆ, ಜಜ್ಜಿದ ಮೂಲಂಗಿ ಪಲ್ಯ ರೆಡಿಯಾಗುತ್ತದೆ. ಇದಕ್ಕೆ ಕರಿಬೇವು ಕೊತ್ತಂಬರಿ ಹಾಕುವುದೇನೂ ಬೇಕಾಗಿಲ್ಲ. ಈ ಪಲ್ಯಕ್ಕೆ ಕರಿಬೇವು ಕೊತ್ತಂಬರಿ ಹಾಕಿದರೆ ಅವುಗಳ ಗಮ ಮೂಲಂಗಿಯ ಗಮದ ಮೇಲೆ ಹರಡಿ ಬಿಡುತ್ತದೆ. ಈ ಪಲ್ಯ ರೊಟ್ಟಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.