ಕವಿತೆ: ರಾತ್ರಿ ಶಾಲೆಯ ಮಾಸ್ತರ
ಚುಕ್ಕೆ ಮಕ್ಕಳ ರಾತ್ರಿ ಶಾಲೆಯ
ಒಬ್ಬನೆ ಒಬ್ಬ ಮಾಸ್ತರ
ಮುತ್ತು ರತ್ನದ ಓಲೆಯ ಮಾಡಿ
ತೋರಣ ಕಟ್ಟುವ ಪತ್ತಾರ
ಕುಳ ಕುಡಗೋಲಿನ ಆಯುದ ಮಾಡಲು
ಕುಲುಮೆ ಹೂಡುವ ಕಮ್ಮಾರ
ಮಿರಿಮಿರಿ ಮಿಂಚುವ ಮಡಿಕೆಯ ಸುಡಲು
ಆವಿಗೆ ಒಟ್ಟುವ ಕುಂಬಾರ
ಆಗಸ ಲೋಕವ ಇರುಳಲಿ ಕಾಯುವ
ಸೇವಾನಿಶ್ಟೆಯ ತಳವಾರ
ಪರಿಮಳ ಬೀರುವ ಹೂಗಳ ಆಯ್ದು
ಮಾಲೆಯ ಕಟ್ಟುವ ಹೂಗಾರ
ಬೆಳಕಿನ ಬೀಜವ ಬಿತ್ತುತ ದಾನ್ಯವ
ರಾಸಿ ಮಾಡುವ ಒಕ್ಕಲಿಗ
ಚುಕ್ಕೆ ಪಯಣಿಗರೆಲ್ಲರ ಕೂಡ್ರಿಸಿ
ಹೊಳೆದಾಟಿಸುವ ಅಂಬಿಗ
ಸಾವಿರ ತುಂಟ ಚುಕ್ಕೆ ಕುದುರೆಗೆ
ಲಗಾಮು ಹಾಕುವ ಸರದಾರ
ತಳತಳ ಹೊಳೆವ ಪಾದರಕ್ಶೆಯ
ಅಂಗಡಿ ತೆರೆದ ಚಮ್ಮಾರ
(ಚಿತ್ರ ಸೆಲೆ: freegreatpicture.com)
ಇತ್ತೀಚಿನ ಅನಿಸಿಕೆಗಳು