ಕವಿತೆ : ಬರವಸೆಯ ನಾಳೆಗಳಿದ್ದಾವು…

– ಸುನಿಲ್ ಮಲ್ಲೇನಹಳ್ಳಿ.

confidence, ಆತ್ಮವಿಶ್ವಾಸ

ಸುಡು ಬಿಸಿಲಿಗೆ ಮೈಯೊಡ್ಡಿ ದುಡಿವ ರೈತ
ಬೆಳೆ ಬಿತ್ಯಾನೇ ಹೊಲದಲಿ ಬೆಳೆ ಬಿತ್ಯಾನೆ
ಬಿತ್ತಿದರೆ ಜೋರು ಮಳೆಯೇ ಬರಬಹುದು
ರಣ ಬಿಸಿಲೆ ಇರಬಹುದು ನಾಳೆ ಎಂಬ
ಚಿಂತೆಲಿ, ಹೂಡಿದ ನೊಗವ ಬಿಚ್ಚಿ ಕುಳಿತರೆ
ಬೆಳೆ ಬಿತ್ಯಾನೇ ಹೊಲದಲಿ ಬೆಳೆ ಬಿತ್ಯಾನೆ?

ಇಟ್ಟಿಗೆ, ಕಾಂಕ್ರೀಟಿಗೆ ತನ್ನ ಹೆಗಲೊಡ್ಡಿ ದುಡಿವ
ಕೂಲಿ ಕಾರ‍್ಮಿಕ, ಸುಬದ್ರ ಕಟ್ಟಡ ಕಟ್ಯಾನೆ
ಅಲ್ಲೇ ಎದುರಲಿ ಇರೋ ಅಬದ್ರ ಗುಡಿಸಲಲಿ
ಕೂತು ಚಿಂತಿಸಿದರೆ, ತನ್ನಯ ನಾಳೆಗಳ ಬಗೆಗೆ
ಸುಬದ್ರ ಕಟ್ಟಡ ಕಟ್ಯಾನೇ?

ರಸ್ತೆ ಬದಿಯಲಿ ಕುಳಿತು, ವಾಹನಗಳ ಕರ‍್ಕಶ
ದ್ವನಿಯ ಆಲಿಸುತಾ, ಉಗುಳುವ ದೂಳನು ಸೇವಿಸುತಾ,
ತರಕಾರಿ, ಸೊಪ್ಪು‌, ಸದೆಯನು ಹಗಲಿಡಿ ಮಾರುವ
ಆ ಅಮ್ಮ ಮರುಗುವಳೇ ತನ್ನಯ ನಾಳೆಗಳ ನೆನೆದು

ನಾಳೆ ಯಾಕೆ? ಮರು ಗಳಿಗೆ ಆಗೋದು ಏನೋ
ತಿಳಿದಿರೋ ಯಾರು? ಎಲ್ಲ ತಿಳಿದಿರೋ ಯಾರು?
ಅಂದುಕೊಂಡ ಹಾಗೆ ಬದುಕಿನ ಬಂಡಿ ಸಾಗಲ್ಲ!
ಎಲ್ಲ ತಿಳಿದಿರೋರು ನಾವಲ್ಲ, ಹಾದಿಯಲಿ
ಬರವಸೆಯ ನಾಳೆಗಳಿದ್ದಾವು ಬಯದ ನಾಳೆಗಳಲ್ಲ
ಎಂಬ ನಂಬಿಕೆ ಮಾತ್ರ ನಮ್ಮದಾಗಿದ್ದರೆ ಅಶ್ಟೇ ಸಾಕಲ್ಲ

 

(ಚಿತ್ರ ಸೆಲೆ : inc.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Naveen Bevinal says:

    ಅದ್ಬುತ ಸಾಲುಗಳು

  2. Beera Gowda says:

    ತುಂಬಾ ಸೊಗಸಾಗಿದೆ

ಅನಿಸಿಕೆ ಬರೆಯಿರಿ: