ಮಕ್ಕಳ ಕತೆ : ಬಾಲ ಕಡಿದುಕೊಂಡ ಅಳಿಲಿನ ಕತೆ
ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ ಬೆಳೆಯುತ್ತಿದ್ದರು. ತುಡುಗು ದನ ಎಮ್ಮೆ ತಮ್ಮ ಹೊಲಗಳಿಗೆ ನುಗ್ಗಬಾರದು ಎಂದು ಹೊಲಗಳ ಸುತ್ತ ಮುತ್ತ ಮುಳ್ಳಿನ ಬೇಲಿಗಳನ್ನು ದಟ್ಟವಾಗಿ ಬೆಳೆಸಿದ್ದರು. ಒಂದು ದಿನ ಅಳಿಲು ಸೂರ‍್ಯಕಾಂತಿ ಬೀಜ ತಿನ್ನೋಣ ಅಂತ ಮನಸ್ಸಿನಲಿ ಅಂದುಕೊಂಡು ಹೊಲದ ಕಡೆ ನಡೆಯಿತು. ಮುಳ್ಳಿನ ಬೇಲಿ ಎದುರಿಗೆ ಬಂದಾಗ ಮೆಲ್ಲನೆ ತನ್ನ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು ಮುಳ್ಳಿನ ಬೇಲಿಯನ್ನು ಹೊಕ್ಕು ಹೋಗುತ್ತಿತ್ತು. ಆಯತಪ್ಪಿ ಅದರ ಕೈಯಿಂದ ಬಾಲ ಜಾರಿ ಒಂದು ಚೂಪಾದ ಮುಳ್ಳಿನ ಮೇಲೆ ಬಿತ್ತು. ಅಳಿಲಿನ ಬಾಲಕ್ಕೆ ಮುಳ್ಳು ಚುಚ್ಚಿ ಬಿಟ್ಟಿತು. ದಡದಡನೆ ಹೊರಗೆ ಓಡಿ ಬಂತು ಅಳಿಲು. ಹಿಂದಕ್ಕೆ ತಿರುಗಿ ನೋಡಿದಾಗ ಮುಳ್ಳು ಇನ್ನೂ ಅದರ ಬಾಲದಲ್ಲೇ ಚುಚ್ಚಿಕೊಂಡಿತ್ತು.
ಏನು ಮಾಡಬೇಕು ಎಂದು ತಿಳಿಯದೆ ಪೇಚಾಡಿತು. “ನಾನು ಬಡಿಗನ ಬಳಿಗೆ ಹೋಗುತ್ತೇನೆ, ಅವನು ನನ್ನ ಬಾಲದಲ್ಲಿನ ಮುಳ್ಳನ್ನು ತೆಗೆಯುತ್ತಾನೆ” ಅಂದುಕೊಂಡು ಅವನ ಮನೆಯ ಕಡೆಗೆ ನಡೆಯಿತು. ಅವನ ಮನೆ ಮುಟ್ಟಿದಾಗ ಬಡಿಗನು ಇರಲಿಲ್ಲ. ಅವನ ಮಗನು ಉಳಿಯಿಂದ ಯಾರಿಗೋ ಬಾಗಿಲು ಮಾಡುತ್ತಿದ್ದ. ಅವನು ತಲೆಗೆ ಕೆಂಪನೆಯ ರುಮಾಲು ಸುತ್ತಿಕೊಂಡಿದ್ದ. ಅಳಿಲು ಅವನ ಬಳಿ ಬಂದು “ಬಡಿಗನ ಮಗನೇ, ನನ್ನ ಬಾಲದಲ್ಲಿ ಮುಳ್ಳು ಚುಚ್ಚಿಕೊಂಡಿದೆ. ಅದನ್ನು ನಿನ್ನ ಉಳಿಯಿಂದ ತೆಗೆದು ಬಿಡು” ಅಂದಿತು. ಅದಕ್ಕೆ ಬಡಿಗನ ಮಗನು “ನನ್ನ ತಂದೆ ಕಟ್ಟಿಗೆಯ ಮೇಲೆ ಉಳಿ ಕೆಲಸ ಮಾಡುವುದು ಹೇಳಿಕೊಟ್ಟಿದ್ದಾನೆ, ಆದರೆ ಅಳಿಲಿನ ಬಾಲದಿಂದ ಮುಳ್ಳು ತೆಗೆಯುವುದು ಇನ್ನೂ ಹೇಳಿಕೊಟ್ಟಿಲ್ಲ” ಅಂದನು. ಅದಕ್ಕೆ ಅಳಿಲು “ಗಟ್ಟಿಯಾದ ಕಟ್ಟಿಗೆಯನ್ನು ಉಳಿಯಿಂದ ಕೆತ್ತುತ್ತಾ ಇದ್ದಿಯಲ್ಲಾ, ನನ್ನ ಮೆತ್ತನೆಯ ಬಾಲದಿಂದ ಮುಳ್ಳನ್ನು ತೆಗೆಯಲಾರೆಯಾ?” ಅಂತ ಕೇಳಿತು ಅಳಿಲು.
ಸ್ವಲ್ಪ ಯೋಚಿಸಿದ ಬಡಿಗನ ಮಗ “ಆಯ್ತು ತೆಗೆಯುತ್ತೇನೆ” ಅಂತ ತನ್ನ ಉಳಿಯನ್ನು ತೆಗೆದುಕೊಂಡು ಅದನ್ನು ಅಳಿಲಿನ ಬಾಲದ ಮೇಲೆ ಇಟ್ಟು ಅಬ್ಯಾಸ ಬಲದಿಂದ ಸುತ್ತಿಗೆಯಿಂದ ಬಡಿದ. ಒಂದೇ ಹೊಡೆತಕ್ಕೆ ಅಳಿಲಿನ ಬಾಲ ತುಂಡರಿಸಿ ಹೋಯಿತು. ಅಳಿಲು ಬಡಿಗನ ಮಗನ ಕಡೆಗೆ ತಿರುಗಿ “ಇದೇನು ನೀನು ಮಾಡಿದ್ದು?! ನನ್ನ ಬಾಲದಿಂದ ಮುಳ್ಳನ್ನು ತೆಗೆದುಬಿಡು ಅಂದಿದ್ದೆ. ನನ್ನ ಬಾಲವನ್ನೇ ಕಡಿದುಬಿಟ್ಟಿಯಲ್ಲಾ! ಇನ್ನು ಮುಂದೆ ನಾನು ಜನರ ನಡುವೆ ಹೇಗೆ ಓಡಾಡಲಿ? ನನ್ನ ಬಾಲವನ್ನು ಹೇಗೆ ಇತ್ತೋ ಹಾಗೆ ಅಂಟಿಸಿಬಿಡು. ಇಲ್ಲವಾದರೆ ನಿನ್ನ ಉಳಿ ನನಗೆ ಕೊಟ್ಟುಬಿಡು” ಅಂದಿತು. ಅದಕ್ಕೆ ಬಡಿಗನ ಮಗ “ನನಗೆ ನನ್ನ ತಂದೆ ಕಟ್ಟಿಗೆಯ ಮೇಲೆ ಉಳಿ ಹೊಡೆಯುವುದು ಕಲಿಸಿದ್ದಾನೆ. ಇನ್ನೂ ಅಳಿಲಿನ ಕಡಿದ ಬಾಲವನ್ನು ಅಂಟಿಸುವುದು ಹೇಳಿಕೊಟ್ಟಿಲ್ಲ” ಅಂದನು. “ಅಳಿಲುಗಳ ಬಾಲ ಕಡಿದು ಬಿಡುವುದು ಹೇಳಿ ಕೊಟ್ಟಿದ್ದಾನಲ್ಲಾ! ಬಾಲ ಅಂಟಿಸು ಇಲ್ಲವೇ ನಿನ್ನ ಉಳಿ ಕೊಡು. ಇಲ್ಲವೆಂದರೆ ನಾನು ಎಲ್ಲರಿಗೂ ನೀವು ಬಾಲ ಕಡಿಯುತ್ತೀರಿ ಅಂತ ಹೇಳಿ ಬಿಡುತ್ತೇನೆ” ಅಂತ ಅಳಿಲು ಹೆದರಿಸಿತು. ಬಡಿಗನ ಮಗ “ನನಗೆ ಬಾಲ ಹಿಂದಕ್ಕೆ ಅಂಟಿಸುವುದು ಬಾರದು. ಅದಕ್ಕೆ ನೀನು ಈ ಉಳಿಯನ್ನು ತೆಗೆದುಕೊಂಡು ಹೋಗು” ಅಂದನು. ಅಳಿಲು ಬಡಿಗನ ಉಳಿಯನ್ನು ತೆಗೆದುಕೊಂಡು ತಲೆಯ ಮೇಲೆ ಇಟ್ಟುಕೊಂಡು ಮುಂದಕ್ಕೆ ಹೊರಟಿತು.
ಅಳಿಲು ನಡೆದುಕೊಂಡು ಬರುತ್ತಿರುವಾಗ ಆಲೆಮನೆಯ ಆಳೊಬ್ಬನು ತಿಪ್ಪೆಯಲ್ಲಿ ಕೂತುಕೊಂಡು ಬೆಲ್ಲದ ಪೆಂಟಿಯನ್ನು (ಗಟ್ಟಿ) ಕಲ್ಲಿನಿಂದ ಒಡೆಯುತ್ತಿದ್ದನು. ಅವನ ಬಳಿ ಲಗುಬಗೆಯಿಂದ ಅಳಿಲು ಓಡಿಹೋಗಿ “ಇದೇನು ನೀನು ಮಾಡುತ್ತೀ?” ಅಂತ ಕೇಳಿತು. ಆಲೆಮನೆಯ ಆಳು “ಸಾವಿರ ಎಕರೆ ಕಬ್ಬಿನ ಹೊಲದ ನಡುವೆ ಒಂದು ದೊಡ್ಡದಾದ ಆಲೆಮನೆಯಿದೆ. ಆ ಆಲೆಮನೆಯಲ್ಲಿ ಕೆರೆಯ ಹಾಗೆ ದೊಡ್ಡದಾದ ಕಬ್ಬಿಣದ ಕಡಾಯಿಯಿದೆ. ಅದೇ ಆಲೆಮನೆಯಲ್ಲಿ ನಾನು ಬೆಲ್ಲ ಮಾಡುವ ಕೆಲಸಕ್ಕೆ ಇದ್ದೇನೆ. ಹೊಸದಾದ ಬೆಲ್ಲ ತಿನ್ನಬೇಕು ಅಂದರೆ ನನ್ನ ಹೆಂಡತಿ ಬೈಯುತ್ತಾಳೆ” ಅಂದ. ಅಳಿಲು “ಹೊಸ ಬೆಲ್ಲದೊಂದಿಗೆ ಸುಟ್ಟ ಕೊಬ್ಬರಿ ತಿನ್ನುತ್ತಾರೆ. ಹೊಸ ಬೆಲ್ಲದೊಂದಿಗೆ ಚೆನ್ನಾಗಿ ಹೆಂಚಿನ ಮೇಲೆ ಹುರಿದ ನೆಲಗಡಲೆ ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ. ಹೊಸ ಬೆಲ್ಲದೊಂದಿಗೆ ಪುಟಾಣಿ ಕಾಳು ತಿನ್ನಲು ರುಚಿಯಾಗಿ ಇರುತ್ತದೆ. ಆದರೆ ನಿನ್ನ ಹೆಂಡತಿ ನೀನು ಬೆಲ್ಲ ತಿನ್ನಲು ಯಾಕೆ ಬೇಡ ಅನ್ನುತ್ತಾಳೆ?” ಅಂತ ಕೇಳಿತು.
ಆಲೆಮನೆಯ ಆಳು “ನಾನು ತುಂಬಾ ಬೆಲ್ಲ ತಿನ್ನುವುದರಿಂದ ನನ್ನ ಮುಕದ ಮೇಲೆ ಮೊಡವೆಗಳಾಗಿವೆ. ಮೈಮೇಲೆ ಪೊಕ್ಕುಗಳು (ಬೊಕ್ಕೆಗಳು) ಎದ್ದಿವೆ. ಅದಕ್ಕೆ ನಾನು ಬೆಲ್ಲ ತಿನ್ನುವುದನ್ನು ನನ್ನ ಹೆಂಡತಿ ನೋಡಿದರೆ ಬೆಲ್ಲ ಕಸಿದುಕೊಂಡು ಬಿಡುತ್ತಾಳೆ. ನನಗೆ ಮೈಮೇಲೆ ಮೊಡವೆ ಆಗಿದ್ದರಿಂದ, ಬೇವಿನ ಎಲೆಗಳನ್ನು ನೀರಲ್ಲಿ ಕುದಿಸಿ, ತಣ್ಣೀರಿನೊಂದಿಗೆ ಬೆರಕೆ ಮಾಡಿ ನನಗೆ ಅದರಲ್ಲಿ ಮಿಂದುಕೋ ಅನ್ನುತ್ತಾಳೆ. ದಿನಾಲೂ ಬೇವಿನ ಎಲೆಗಳ ನೀರಿನಲ್ಲಿ ಮಿಂದುಕೊಳ್ಳಲು ನನಗೆ ಇಶ್ಟವಿಲ್ಲ. ಬೇಕಾದರೆ ಬೆಲ್ಲ ಕುದಿಸಿದ ಸಿಹಿಯಾದ ನೀರಿನಲ್ಲಿ ಮೈ ತೊಳೆದುಕೊಳ್ಳುತ್ತೇನೆ” ಅಂದ. ಅಳಿಲು “ಆದರೆ ನೀನು ಈ ಪೆಂಟಿಯನ್ನು ಈ ತಿಪ್ಪೆಗೆ ಯಾಕೆ ತಂದೆ?” ಅಂತ ಕೇಳಿತು. ಅದಕ್ಕೆ ಆಲೆಮನೆಯ ಆಳು “ನನ್ನ ಹೆಂಡತಿಗೆ ಹೆದರಿ ಈ ಬೆಲ್ಲದ ಪೆಂಟಿಯನ್ನು ಮನೆಯಿಂದ ಎತ್ತಿಕೊಂಡು ಬಂದೆ. ಆದರೆ ಗಡಿಬಿಡಿಯಲ್ಲಿ ಮನೆಯಿಂದ ಸುತ್ತಿಗೆ ತರುವುದು ನೆನಪು ಹೋಯಿತು ಅದಕ್ಕೆ ತಿಪ್ಪೆಯಲ್ಲಿ ಕೂತು ಕಲ್ಲಿನಿಂದ ಒಡೆಯುತ್ತಿದ್ದೇನೆ” ಅಂದನು.
ಅಳಿಲು ಅವನ ಮೇಲೆ ಮರುಕಪಟ್ಟು “ನೀನು ನನ್ನ ಉಳಿಯನ್ನು ಬಳಸಿ ನಿನ್ನ ಬೆಲ್ಲದ ಪೆಂಟಿಯನ್ನು ಒಡೆ” ಅಂದಿತು. ಆಲೆಮನೆಯವನು ಅಳಿಲಿನಿಂದ ಉಳಿಯನ್ನು ತೆಗೆದುಕೊಂಡ. ಅದನ್ನು ಬೆಲ್ಲದ ಪೆಂಟಿಯ ಮೇಲೆ ಇಟ್ಟು ಕಲ್ಲಿನಿಂದ ಉಳಿಯ ಮೇಲೆ ಹೊಡೆದ. ಅವನು ಹೊಡೆದ ಪೆಟ್ಟಿಗೆ ಉಳಿಯ ಹಿಡಿಕೆ ಮುರಿದು ಹೋಯಿತು. ಅಳಿಲು “ಇದೇನು ನೀನು ಮಾಡಿದ್ದು? ಬೆಲ್ಲದ ಪೆಂಟಿ ಒಡೆ ಅಂದರೆ ನನ್ನ ಉಳಿ ಮುರಿದು ಹಾಕಿದೆ.! ಈಗ ನನ್ನ ಉಳಿಯನ್ನು ಹಿಂದಕ್ಕೆ ಕೊಡು ಇಲ್ಲದಿದ್ದರೆ ಈ ಬೆಲ್ಲದ ಪೆಂಟಿಯನ್ನು ನನಗೆ ಕೊಡು” ಅಂದಿತು. ಆಲೆಮನೆಯವನು “ನಿನ್ನ ಉಳಿಯನ್ನು ಈಗ ಹಿಂದಕ್ಕೆ ಕೊಡುವುದಕ್ಕೆ ನನಗೆ ಆಗದು. ಅದಕ್ಕೆ ಈ ಬೆಲ್ಲದ ಪೆಂಟಿಯನ್ನು ಒಯ್ದುಬಿಡು” ಅಂದನು. ಅಳಿಲು ಅವನಿಂದ ಬೆಲ್ಲದ ಪೆಂಟಿಯನ್ನು ತೆಗೆದುಕೊಂಡು ತಲೆಯ ಮೇಲೆ ಇಟ್ಟುಕೊಂಡು ಮುಂದಕ್ಕೆ ನಡೆಯಿತು.
ಅವತ್ತು ಅಮಾವಸ್ಯೆ ಇದ್ದುದರಿಂದ ಒಂದು ಮನೆಯಲ್ಲಿ ಒಬ್ಬ ಮುದುಕಿ ಹೋಳಿಗೆ ಮಾಡುತ್ತಿದ್ದಳು. ಅಳಿಲು ಅಡುಗೆಮನೆ ಕಿಟಕಿಯಿಂದ ಅವಳು ಹೋಳಿಗೆ ಮಾಡುವುದನ್ನು ನೋಡುತ್ತಾ ಕುಳಿತಿತ್ತು. ಮುದುಕಿಯು ಹೂರಣಕ್ಕೆ ಬೆಲ್ಲ ಕೂಡಿಸುವಾಗ ಬೆಲ್ಲ ಕಡಿಮೆ ಬಿದ್ದಿತು. ಆಗ ಅವಳು ಹೂರಣಕ್ಕೆ ಬಿಳಿಮಣ್ಣು (ಸೇಡಿ, ತಿನ್ನುವ ಮಣ್ಣು) ಕೂಡಿಸುತ್ತಿದ್ದಳು. ಇದನ್ನು ನೋಡಿದ ಅಳಿಲು ಅವಳ ಬಳಿಗೆ ಹೋಗಿ “ಇದೇನು ನೀನು ಮಾಡುವುದು?! ಹೂರಣಕ್ಕೆ ಬೆಲ್ಲವನ್ನು ಕೂಡಿಸುತ್ತಾರೆ, ಕುಟ್ಟಿದ ಏಲಕ್ಕಿ ಪುಡಿ ಸೇರಿಸುತ್ತಾರೆ, ಒಣ ಸುಂಟಿ ಪುಡಿ ಸೇರಿಸುತ್ತಾರೆ, ಹಸನಾಗಿ ಕುಟ್ಟಿದ ಸೋಂಪು ಸೇರಿಸುತ್ತಾರೆ, ಕೆಲವರು ಜಾಜಿಕಾಯಿ ಪುಡಿ ಕೂಡ ಹಾಕುತ್ತಾರೆ. ನೀನು ಯಾಕೆ ಬಿಳಿಮಣ್ಣು ಸೇರಿಸುತ್ತಾ ಇದ್ದೀ?” ಅಂತ ಕೇಳಿತು.
ಅದಕ್ಕೆ ಆ ಮುದುಕಿ “ದೂರದ ಊರಿನಿಂದ ನನ್ನ ಮಗಳು ಅಳಿಯ ಇವತ್ತೇ ಬಂದಿದ್ದಾರೆ. ಅವರಿಗೆ ಮೂವರು ಮಕ್ಕಳು ಇವೆ. ಅವರಿಗಾಗಿ ಹೋಳಿಗೆ ಮಾಡುತ್ತಾ ಇದ್ದೆ. ಹೋಳಿಗೆ ಮಾಡುವಾಗ ಒಂದು ಸೇರು ಕಡಲೆ ಬೇಳೆ ಹಾಕಿದೆ ಅದಕ್ಕೆ ತಕ್ಕಂತೆ ಒಂದು ಸೇರು ಬೆಲ್ಲ ಕೂಡಿಸಬೇಕು. ಆದರೆ ನನ್ನ ಮಗಳ ಮಕ್ಕಳು ಅಂದರೆ ನನ್ನ ಮೊಮ್ಮಕ್ಕಳು ಅರ‍್ದ ಸೇರು ಬೆಲ್ಲ ತಿಂದುಬಿಟ್ಟಿವೆ. ಇದು ನನಗೆ ಗೊತ್ತಿರಲಿಲ್ಲ. ಬೇಳೆ ಹಾಕಿದ ಮೇಲೆ ಬೆಲ್ಲ ಕೂಡಿಸುವ ಹೊತ್ತಿಗೆ ಮೊಮ್ಮಕ್ಕಳು ಬೆಲ್ಲ ತಿಂದಿದ್ದು ನನಗೆ ಬಂದು ಹೇಳಿದವು. ಈಗ ಏನು ಮಾಡಲಿ ಎಂದು ಚಿಂತೆ ಮಾಡುತ್ತಾ ಹೂರಣಕ್ಕೆ ಬಿಳಿಮಣ್ಣು ಸೇರಿಸಿ ಹೋಳಿಗೆ ಮಾಡಲು ಮುಂದಾದೆ” ಅಂದಳು. ಅದಕ್ಕೆ ಅಳಿಲು “ಈಗ ನನ್ನ ಬಳಿ ಒಂದು ಬೆಲ್ಲದ ದೊಡ್ಡ ಪೆಂಟಿಯಿದೆ, ಅದರಿಂದ ಸ್ವಲ್ಪ ಬೆಲ್ಲವನ್ನು ತೆಗೆದುಕೊಂಡು ಹೋಳಿಗೆಗಳನ್ನು ಮಾಡು. ಬಿಳಿಮಣ್ಣು ಹಾಕಿದ ಹೋಳಿಗೆ ತಿಂದರೆ ಹೊಟ್ಟೆಯುಬ್ಬರ ಆಗುತ್ತೆ, ತಲೆಸುತ್ತು ಬರುತ್ತೆ. ಹಾವರಾಣಿ ಹುಳ ಕಚ್ಚಿದವರಿಗೇ ಬಿಳಿಮಣ್ಣು ತಿನ್ನಲು ಕೊಡುತ್ತಾರೆ” ಅಂದಿತು.
ಒಪ್ಪಿದ ಮುದುಕಿ ಅಳಿಲಿನಿಂದ ಬೆಲ್ಲವನ್ನು ತೆಗೆದುಕೊಂಡು ಹೋಳಿಗೆ ಮಾಡತೊಡಗಿದಳು. ಸ್ವಲ್ಪ ಹೊತ್ತಾದ ಮೇಲೆ ಎಲ್ಲಿಗೋ ಹೋಗಿ ಬಂದ ಅಳಿಲು “ಮುದುಕಿಯೇ ನನ್ನ ಬೆಲ್ಲದ ಪೆಂಟಿಯೆಲ್ಲಿ?” ಅಂತ ಕೇಳಿತು. ಮುದುಕಿಯು ಕೈಕೈ ಒರೆಸಿಕೊಳ್ಳುತ್ತಾ “ನನ್ನ ಅಳಿಯನಿಗೆ ಸಿಹಿ ಅಂದರೆ ತುಂಬಾ ಇಶ್ಟ. ಹೋಳಿಗೆಗಳಲ್ಲಿ ಸಿಹಿ ಕಡಿಮೆಯಾದರೆ ನಾನು ತಿನ್ನುವುದೇ ಇಲ್ಲ ಅಂದುಬಿಟ್ಟ. ಅವನು ಹೋಳಿಗೆ ತಿನ್ನಲು ಕುಳಿತರೆ ಹತ್ತು ಹದಿನೈದು ಹೋಳಿಗೆ ಬೇಕು, ಒಂದು ಸೇರು ಹಾಲು ಬೇಕು, ಒಂದು ಕೊಡದಶ್ಟು ಆಂಬೂರು (ಹೋಳಿಗೆ ಸಾರು) ಬೇಕು. ಅದಕ್ಕೆ ನಾನು ನೀನು ಕೊಟ್ಟ ಒಂದು ಪೆಂಟಿಯ ಬೆಲ್ಲವನ್ನೆಲ್ಲಾ ಹೂರಣದಲ್ಲಿ ಕಲಸಿ, ಹೋಳಿಗೆಗಳನ್ನು ಮಾಡಿಬಿಟ್ಟೆ” ಅಂದಳು. ಅಳಿಲು ತುಂಬಾ ನೊಂದುಕೊಳ್ಳುತ್ತಾ “ಈಗ ನನ್ನ ಬೆಲ್ಲದ ಪೆಂಟಿಯನ್ನು ಹಿಂದಕ್ಕೆ ಕೊಡು ಇಲ್ಲದಿದ್ದರೆ ಹೋಳಿಗೆಗಳನ್ನು ಕೊಡು!” ಅಂದಿತು. ಮುದುಕಿಯು “ಅಳಿಲೇ ಕೇಳು ಹೂರಣಕ್ಕೆ ಇನ್ನೂ ಬೆಲ್ಲ ಕೂಡಿಸಬಹುದು ಆದರೆ ಕೂಡಿಸಿದ ಮೇಲೆ ಅದನ್ನು ತೆಗೆಯಲಿಕ್ಕೆ ಬಾರದು. ನಿನ್ನ ಬೆಲ್ಲದ ಪೆಂಟಿಯನ್ನು ಹಿಂದಕ್ಕೆ ಕೊಡುವುದಕ್ಕೆ ಆಗದು. ನೀನು ಐವತ್ತು ಹೋಳಿಗೆಗಳನ್ನು ತೆಗೆದುಕೋ” ಅಂದಳು. ಅದಕ್ಕೆ ಒಪ್ಪಿದ ಅಳಿಲು ಅವಳು ಕೊಟ್ಟ ಹೋಳಿಗೆಗಳನ್ನು ರುಮಾಲಿನಲ್ಲಿ ಕಟ್ಟಿಕೊಂಡು ಮುಂದಕ್ಕೆ ನಡೆಯಿತು.
ದೂರದಿಂದ ನೋಡಿದಾಗ ಹುಲ್ಲುಗಾವಲಿನಲ್ಲಿ ದನ ಕಾಯುವ ಹುಡುಗರು ಕಾಣಿಸಿದರು. ಅವರು ನೆಲದ ಮೇಲೆ ಕೂತುಕೊಂಡು ಏನೋ ತಿನ್ನುತ್ತಿರುವ ಹಾಗೆ ಕಾಣಿಸಿದರು. ಅಳಿಲು ಅವರು ಏನು ಮಾಡುತ್ತಾ ಇದ್ದಾರೆಂದು ಅವರ ಬಳಿ ಹೋಗಿ ತಿಳಿದುಕೊಳ್ಳುವೆನು ಅಂದುಕೊಂಡು ಅವರ ಬಳಿಗೆ ಬಂದಿತು. ದನ ಕಾಯುವ ಹುಡುಗರು ಹಸಿವು ತಾಳಲಾಗದೆ ಗೊಬ್ಬರದಲ್ಲಿನ ಎರೆ ಹುಳಗಳನ್ನು ಆರಿಸಿಕೊಂಡು ತಿನ್ನುತ್ತಾ ಇದ್ದರು. ಅದನ್ನು ನೋಡಿ ಅಳಿಲು ದನ ಕಾಯುವ ಹುಡುಗರ ಮೇಲೆ ಕರುಳು ಮರುಗಿ “ಎಲವೋ ದನ ಕಾಯುವ ಹುಡುಗರೇ! ನೀವು ಗೊಬ್ಬರದಲ್ಲಿನ ಎರೆ ಹುಳುಗಳನ್ನು ಆರಿಸಿ ತಿನ್ನಬೇಡಿ. ನನ್ನ ಬಳಿ ಇರುವ ಕೆಲವು ಹೋಳಿಗೆಗಳನ್ನು ತೆಗೆದುಕೊಳ್ಳಿ, ಅವುಗಳನ್ನು ತಿನ್ನಿ. ನೀವು ಹಸಿವು ತಾಳಲಾಗದೆ ಎರೆ ಹುಳುಗಳನ್ನು ತಿನ್ನುವುದನ್ನು ನನ್ನಿಂದ ನೋಡಲಾಗದು” ಅಂದಿತು. ತನ್ನ ಬಳಿಯ ಹೋಳಿಗೆಗಳನ್ನು ದನಕಾಯುವ ಹುಡುಗರಿಗೆ ಕೊಟ್ಟು, ಅಳಿಲು ನೀರು ಕುಡಿಯಲು ಹೋಯಿತು. ತುಂಬಾ ಹಸಿದಿದ್ದ ದನ ಕಾಯುವ ಹುಡುಗರು ಅಳಿಲಿನ ರುಮಾಲಿನ ಪಾವುಡದಲ್ಲಿನ ಎಲ್ಲ ಐವತ್ತು ಹೋಳಿಗೆಗಳನ್ನು ಗಬಗಬನೆ ತಿಂದುಬಿಟ್ಟರು.
ನೀರು ಕುಡಿಯಲು ಕಬ್ಬಿನ ಮಾಳಕ್ಕೆ (ಹೊಲ) ಹೋಗಿ ಬಂದಿದ್ದ ಅಳಿಲು “ನನ್ನ ಹೋಳಿಗೆಗಳು ಎಲ್ಲಿ?” ಅಂತ ಕೇಳಿತು. ಅದಕ್ಕೆ ದನ ಕಾಯುವ ಹುಡುಗರು “ನಮಗೆ ತುಂಬಾ ಹಸಿವಾಗಿತ್ತು. ನೀನು ತಂದಿದ್ದ ಹೋಳಿಗೆಗಳು ತುಂಬಾ ರುಚಿಯಾಗಿದ್ದವು. ನಿನ್ನ ಐವತ್ತು ಹೋಳಿಗೆಗಳನ್ನೆಲ್ಲಾ ನಾವು ತಿಂದು ಮುಗಿಸಿದೆವು” ಅಂದರು. ಅಳಿಲು “ನಾನು ಆ ಐವತ್ತು ಹೋಳಿಗೆಗಳನ್ನು ಎಶ್ಟೋ ಕಶ್ಟಪಟ್ಟು ಮುದುಕಿಯೊಬ್ಬಳಿಂದ ಕಸಿದುಕೊಂಡು ಬಂದಿದ್ದೆ! ಈಗ ನನ್ನ ಹೋಳಿಗೆಗಳನ್ನು ಹಿಂದಕ್ಕೆ ಕೊಡಿರಿ ಇಲ್ಲವಾದಲ್ಲಿ ನಿಮ್ಮ ದನಗಳಲ್ಲಿ ಒಂದು ನನಗೆ ಕೊಡಿ” ಅಂದಿತು. ದನ ಕಾಯುವ ಹುಡುಗರು “ನಿನ್ನ ಹೋಳಿಗೆಗಳನ್ನು ನಾವು ಹಿಂದಕ್ಕೆ ಕೊಡುವುದು ಆಗದ ಮಾತು. ಅದಕ್ಕೆ ನೀನು ನಮ್ಮ ಒಂದು ಗೊಡ್ಡು ಹಸುವನ್ನು ತೆಗದುಕೊಂಡು ಹೋಗು” ಅಂದರು. ಅದಕ್ಕೆ ಅಳಿಲು “ರುಚಿಯಾಗಿದ್ದ ನನ್ನ ಹೋಳಿಗೆಗಳ ಬದಲಿಗೆ ಗೊಡ್ಡು ಹಸುವನ್ನು ನನಗೆ ಕೊಡುವಿರೋ? ನನಗೆ ಹತ್ತು ಸೇರು ಹಾಲು ಕರೆಯುವ ಚೆಂದದ ಕೊಬ್ಬಿದ ಹಸುವೇ ಬೇಕು. ಒಣಕಲು ಹಸು ಬೇಡ, ಗೊಡ್ಡು ಹಸುವಂತೂ ಬೇಡವೇ ಬೇಡ. ನೀವು ನನಗೆ ಹಾಲು ಕರೆಯುವ ಹಸು ಕೊಡದಿದ್ದರೆ, ನಾನು ನೀವು ದನಗಳನ್ನು ಹೊಡೆದುಕೊಂಡು ಬಂದ ಮನೆಗಳವರಿಗೆ ನೀವು ಹಾಲು ಕದಿಯುತ್ತೀರಿ ಅಂತ ಹೇಳಿ ಬರುತ್ತೇನೆ” ಅಂತ ಹೆದರಿಸಿತು. ಅದಕ್ಕೆ ಹೆದರಿದ ದನ ಕಾಯುವ ಹುಡುಗರು ಅಳಿಲಿಗೆ ಅವರ ಬಳಿಯಿದ್ದ ಒಂದು ಹಸುವನ್ನು ಕೊಟ್ಟರು. ಅಳಿಲು ಹಸುವನ್ನು ಮುಂದೆ ಹೊಡೆದುಕೊಂಡು ನಡೆಯಿತು.
ಅಳಿಲು ಮುಂದೆ ಹೋದಾಗ ಎಣ್ಣೆ ತೆಗೆಯುವ ಒಂದು ಗಾಣ ಕಾಣಿಸಿತು. ಅಳಿಲು ಗಾಣದ ಬಳಿಗೆ ಬಂದು ಹಸುವನ್ನು ಒಂದು ಕಡೆ ಕಟ್ಟಿಹಾಕಿ ಗಾಣದ ಸಮೀಪಕ್ಕೆ ಹೋಯಿತು. ಅಲ್ಲಿ ಎಣ್ಣೆ ತೆಗೆಯುವ ಗಾಣದವನು ಗಾಣಕ್ಕೆ ಒಂದು ಎತ್ತು ಕಡಿಮೆ ಬಿದ್ದದರಿಂದ ತನ್ನ ಹೆಂಡತಿಯನ್ನೇ ಗಾಣಕ್ಕೆ ಕಟ್ಟಿ ಗಾಣವನ್ನು ತಿರುಗಿಸುತ್ತಾ ಇದ್ದ. ಅಳಿಲು ಅದನ್ನು ನೋಡಿ “ನೀನು ಮಾಡುತ್ತಿರುವುದೇನು? ಯಾರಾದರೂ ಹೆಂಡತಿಯನ್ನು ಗಾಣಕ್ಕೆ ಕಟ್ಟಿ ತಿರುಗಿಸುತ್ತಾರೆಯೇ? ನಿನ್ನನ್ನು ಮನುಶ್ಯನಾಗಿ ಮಾಡಿದವರು ಯಾರು?” ಅಂತ ಬೈದು ಬಿಟ್ಟಿತು. ಅದಕ್ಕೆ ಗಾಣದವನು “ನಾನೇನು ಮಾಡಲಿ? ನನ್ನ ಗಾಣದ ಎತ್ತಿಗೆ ಜ್ವರ ಬಂದು ಮೂರು ದಿನದಿಂದ ಕುಸಿದು ಬಿದ್ದಿದೆ. ನಾನು ಎಣ್ಣೆ ತೆಗೆಯದಿದ್ದರೆ ಜನ ನನಗೆ ದುಡ್ಡು ಕೊಡುವುದು ಹೇಗೆ? ನನ್ನ ಮನೆ ನಡೆಯುವುದು ಹೇಗೆ? ನಾನೂ ನನ್ನ ಹೆಂಡತಿಯೂ ನನ್ನ ಮಕ್ಕಳು ಉಪವಾಸ ಸಾಯಬೇಕಾಗುವುದು. ಅದಕ್ಕೆ ಹೆಂಡತಿಯನ್ನು ಗಾಣಕ್ಕೆ ಕಟ್ಟಿ ಗಾಣವನ್ನು ತಿರುಗಿಸುತ್ತಾ ಇದ್ದೆ” ಅಂದನು. ಅಳಿಲು ಅವರ ಬಡತನಕ್ಕೆ ದುಕ್ಕಪಟ್ಟು, “ಇರಲಿ ಈಗ ನನ್ನ ಬಳಿ ಒಂದು ಹಸುವಿದೆ ಅದನ್ನು ನಿನ್ನ ಗಾಣಕ್ಕೆ ಕಟ್ಟಿ ಗಾಣವನ್ನು ತಿರುಗಿಸು. ನಿನ್ನ ಹೆಂಡತಿಯನ್ನು ಕಟ್ಟಬೇಡ” ಅಂದಿತು. ಅಳಿಲು ನೀರು ಕುಡಿಯಲು ಹೋಯಿತು. ಗಾಣದವನು ಅಳಿಲಿನ ಹಸುವನ್ನು ತಂದು ಗಾಣಕ್ಕೆ ಕಟ್ಟಿ ತುಂಬಾ ಹೊತ್ತು ತಿರುಗಿಸಿದ.
ನೀರು ಕುಡಿದ ಮೇಲೆ ಅಳಿಲು ತಿರುಗಿ ಬಂದಿತು. ಬಂದಾಗ ಅದರ ಹಸು ನಾಲಿಗೆ ಹೊರಗೆ ಚಾಚಿಕೊಂಡು ಸತ್ತು ಬಿದ್ದಿರುವುದು ನೋಡಿತು. ಅಳಿಲು ಲಬೋ ಲಬೋ ಅಂತ ಬೊಬ್ಬೆ ಹೊಡೆಯಲಿ ಶುರುಮಾಡಿತು. ಗಾಣದವನಿಗೆ “ಇದೇನು ನೀನು ಮಾಡಿದ್ದು?!” ಅಂತ ಕೂಗಿತು. ಗಾಣದವನು “ನಿನ್ನ ಹಾಲು ಕರೆಯುವ ಹಸುವಿಗೆ ಗಾಣ ಎಳೆದು ಗೊತ್ತಿರಲಿಲ್ಲ. ಗಾಣದ ನೊಗವನ್ನು ತಾಳಲಾರದೆ ಸತ್ತು ಹೋಯಿತು” ಅಂದ. ಅಳಿಲು “ನನ್ನ ಹಾಲು ಕರೆಯುವ ಹಸು ಸತ್ತು ಹೋಯಿತು. ಅದನ್ನು ಕಶ್ಟಪಟ್ಟು ದನ ಕಾಯುವ ಹುಡುಗರಿಂದ ತೆಗೆದುಕೊಂಡು ಬಂದಿದ್ದೆ! ಈಗ ನನಗೆ ನನ್ನ ಹಸುವನ್ನು ಜೀವಸಹಿತ ಹಿಂದಕ್ಕೆ ಕೊಡು ಇಲ್ಲದಿದ್ದರೆ ನಿನ್ನ ಹೆಂಡತಿಯನ್ನು ಕೊಡು” ಅಂದಿತು.
ಅದಕ್ಕೆ ಗಾಣದವನು “ನಿನ್ನ ಹಸುವಿಗೆ ಜೀವ ಬರಿಸುವುದಕ್ಕೆ ನನಗೆ ಆಗದು. ಬದಲಿ ಕೊಡುವುದಕ್ಕೆ ನನ್ನ ಬಳಿ ಬೇರೆ ಹಸುವೂ ಇಲ್ಲ. ನಾನು ನನ್ನ ಹೆಂಡತಿಯ ಮೇಲೆ ಪ್ರಾಣವನ್ನೇ ಇಟ್ಟು ಕೊಂಡಿದ್ದೇನೆ. ನಾನು ಅವಳನ್ನು ನಿನಗೆ ಕೊಡುವುದಿಲ್ಲ. ನಿನಗೆ ಬೇಕಾದರೆ ಜ್ವರ ಬಂದು ಕೂತಿರುವ ನನ್ನ ಎತ್ತನ್ನು ತೆಗೆದುಕೋ” ಅಂದ. ಅದಕ್ಕೆ ಒಪ್ಪದ ಅಳಿಲು “ನನ್ನ ಚಂದವಾಗಿದ್ದ ಹಾಲು ಕರೆಯುತ್ತಿದ್ದ ಹಸುವಿನ ಬದಲಿಗೆ ನಿನ್ನ ಜ್ವರ ಬಂದು ಕೂತಿರುವ ವಯಸ್ಸಾದ ಎತ್ತನ್ನು ನನಗೆ ಕೊಡುತ್ತಿಯಾ?! ನನಗೆ ನಿನ್ನ ಕಾಯಿಲೆ ಬಿದ್ದ ಎತ್ತು ಬೇಡ,ನಿನ್ನ ಹೆಂಡತಿಯೇ ಬೇಕು” ಅಂದಿತು. ಅದಕ್ಕೆ ಗಾಣದವನು “ನನ್ನ ಸುಂದರಿಯಾದ ಹೆಂಡತಿಯನ್ನು ನಾನು ಕೊಡುವುದಿಲ್ಲ. ಆದರೆ ನನ್ನ ಮಗಳನ್ನು ತೆಗೆದಕೋ ಅವಳನ್ನು ಮದುವೆ ಮಾಡಿಕೊಂಡು ಸುಕವಾಗಿರು” ಅಂದ. ತುಂಬಾ ಹೊತ್ತು ಯೋಚಿಸಿದ ಅಳಿಲು “ಆಯ್ತು ನಿನ್ನ ಮಗಳನ್ನೇ ನಾನು ಮದುವೆ ಯಾಗುತ್ತೇನೆ” ಅಂದಿತು. ಅವನ ಮಗಳ ಜೊತೆ ಮದುವೆ ಮಾಡಿಕೊಂಡು ಸುಕವಾಗಿ ಬಾಳತೊಡಗಿತು.
(ಚಿತ್ರ ಸೆಲೆ: publicdomainpictures.net)
ಇತ್ತೀಚಿನ ಅನಿಸಿಕೆಗಳು