ಅಂತರ : ಒಂದು ಕಿರುಬರಹ
ಸವೆದ ಹಾದಿಯ ಪ್ರತಿ ಗುರುತುಗಳು ಒಂದರ ಮೇಲೊಂದು ಬಿದ್ದು ಮೋಡಗಳನ್ನು ಮುಟ್ಟುವ ಹವಣಿಕೆಯಲ್ಲಿರುತ್ತವೆ, ಕಾಲ ಕಳೆದಂತೆಲ್ಲ. ಸಂಬಂದದ ಸೋಂಕು ತಗುಲಿರುವವರೆಗೂ ಹಿರಿ ಹಿರಿ ಹಿಗ್ಗಿದೆ ಮನಸ್ಸು. ನೆಲದ ಮೇಲೆ ಕಾಲಿಟ್ಟರೆ ಕೇಳಿ, ಗುರುತ್ವದ ನಿಯಮಗಳೂ ಇದರ ಸ್ವಾತಂತ್ರದ ಹಾರಾಟದ ಮುಂದೆ ಅಡಿಯಾಳು. ಒಳ್ಳೆಯದೇ ಎಲ್ಲ ಒಳ್ಳೆಯದರಂತೆ ಕಾಣುವವರೆಗೂ, ಸನಿಹ ಬೆಳೆಯುತ್ತಿದ್ದಂತೆ ಕಾಣುವುದೆಲ್ಲ ಬಣ್ಣ ಬಣ್ಣದ್ದೇ…
ಕಿರಿಕಿರಿಯೊಂದು ಬೇಕು ಆಗೀಗ, ಅವಶ್ಯಕವೇ ಅನಿಸುವಶ್ಟು ಅರಿವಿಲ್ಲದೆ ನುಸುಳಿ ಬರುವುದು. ಅದರ ಮೂಲ ಹುಡುಕುವ ವ್ಯವದಾನವಿದ್ದರೆ ಬಿನ್ನತೆಯ ಹುಟ್ಟು ಕೇವಲ ಕನಸಿನಲ್ಲಾಗಬಹುದು. ಪ್ರಕ್ರುತಿಯ ಸಹಜತೆಯೇ ಬಿನ್ನತೆ. ಅದನ್ನು ಒಪ್ಪದೇ ಬೇರೆ ದಾರಿಯಿಲ್ಲ. ಬೇರೆ ಬೇರೆಯದನ್ನು ಅಪ್ಪಿ ಒಂದನ್ನಾಗಿ ಅರಗಿಸಿಕೊಳ್ಳುವ ಗುಣಬೇಕು.
ಮುಕ ಎತ್ತಿ ನೋಡಿದರೂ ಕೊನೆ ಕಾಣದ್ದು, ಅಶ್ಟು ಎತ್ತರದ್ದು ನೆನಪುಗಳ ಮೂಟೆ. ಪರ್‍ವತದಾಕಾರದಲ್ಲಿ ನಿಂತಿದೆ ಅದಕ್ಕೆ ಹಿಮದ ಕಿರೀಟ ಬೇರೆ ಮೆರುಗಿಗೆ. ಸಂಬಂದದ ಸಿಹಿ ಕಹಿಗಳ ಅಣುವಿನಿಂದ ಬೆಳೆಯುತ್ತಲೇ ಹೋದದ್ದು ಅನಂತವಾಗಿ. ಒಂದು ಕಲ್ಲು ಅತ್ತಿತ್ತ ಅಲ್ಲಾಡಿದರೂ ಅದರ ಹಿಂದಿನ ಕತೆಯ ಪ್ರತಿ ಪದಗಳು ಬಾಯಿಯ ತುದಿಯಲ್ಲೇ. ಎಲ್ಲಿಂದ ಬಂದೀತು ಇಂತಹ ಅಗಾದವಾದ ನಿಕಟತೆ, ನಮ್ಮ ಯೋಗ್ಯತೆಯ ಪ್ರಶ್ನೆಯ ಸವಾಲು. ಹಿರಿದಾಗುತ್ತ ಅಹಂಕಾರವು ಅದರೊಡನೆ ನಾವಿಬ್ಬರೇ ಸಾಕು ಜಗತ್ತೇಕೆ ಬೇಕು ಎಂಬ ಹುಚ್ಚು ಪ್ರಶ್ನೆಯ ಅರ್‍ತದಂತೆ. ಮನಸ್ಸುಗಳೆರಡೂ ಬೆಸೆಯುವಾಗ ಸೌಂದರ್‍ಯಕ್ಕೂ ನಾಚಿಕೆ ಬಂದು ಸರಿದು ಹೋಗುತ್ತದೆ ಬದಿಗೆ. ವ್ಯಾಮೋಹವೇ ಅಂತಹದ್ದು, ಜೋಡಿ ಜೊತೆಯಾದಾಗ ಅರಿವಿಗೂ ಅರಿವು ಇರದಂತಹ ಸ್ತಿತಿ.
ಉಸಿರು ತಾಕುವ ಸಾನಿದ್ಯ ದೇಹದ ಹಂಚಿಕೆಯ ಮಾತಲ್ಲ, ಬಾವನೆಗಳು ಹುಟ್ಟು ಪಡೆವುದೇ ಸಂಗಾತಿಯ ಬಾವನೆಗೆ ಜೊತೆ ನೀಡಲು ಎಂಬಂತೆ. ಅದೇ ನಿನಾದದಲ್ಲಿ ಇಟ್ಟ ಪ್ರತಿ ಹೆಜ್ಜೆಯ ಸದ್ದು. ವರ್‍ಣಿಸಿದಷ್ಟು ಕಡಿಮೆಯೇ ಅದರ ಶ್ರುಂಗಾರ.
ಕಿಡಿಯೊಂದು ಗಾಳಿಯಲ್ಲಿ ತೇಲಿ ಬಂದು ಬೆಂಕಿಯಿಡಲು, ಬಿನ್ನಾಬಿಪ್ರಾಯಗಳು ಬಾರವು ಅಳುಕದೆ ನಿಂತ ವ್ಯವಸ್ತೆಯ ಗಟ್ಟಿತನವನ್ನು ಪ್ರಶ್ನಿಸುತ್ತ ಬುಡವನ್ನು ಅತ್ತಿತ್ತ ಸಡಿಲಿಸುವ ಯತ್ನದಲ್ಲಿ. ಒಂದೇ ಏಟಿಗೆ ಅಶ್ಟು ಕಟಿಣತೆ ಸೀಳಲು ಸಾದ್ಯವಾದೀತೇನು? ಕಟ್ಟುವಾಗ ಪ್ರತಿ ಹೆಜ್ಜೆ ಇಟ್ಟು ಮೇಲೇರಿದ ಏದುಸಿರು ನಿನ್ನೆಯ ನೆನಪಂತೆ ಮಾಸದೆ ಬದುಕುತ್ತಿದೆ. ಆದರೂ ಅದಕ್ಕೊಂದು ಮುಹೂರ್‍ತ, ಸಂಬಂದ ಪೋಣಿಸಿಕೊಂಡು ಸರಮಾಲೆಯಾಗುವಾಗ ಇಲ್ಲದ್ದು ಅದನ್ನು ಕೆಡವಲು ನಿಂತಾಗ. ಪ್ರಚೋದನೆ ಏನಾದರೂ ಇರಲಿ ಕೆಲವು ಬಾರಿ ಅಸ್ತಿತ್ವವಾದರೆ ಇನ್ನಶ್ಟು ಸಲ ಇನ್ನೊಂದರ ಆಸರೆ ಹೊರಟು. ಹೊಸದು ಕಂಡೀತು ಹಸನಾಗೆ ಒಂದಿಶ್ಟು ದಿನ, ಈಗಿರುವುದು ಆರಂಬದ ದುಡುಕಿನಲ್ಲಿದ್ದಾಗ ಹೊಸದೇ ಅಲ್ಲವೇ. ಕಂಡು ಇಶ್ಟ ಪಟ್ಟಿದ್ದಕ್ಕೂ ಇರುವುದಕ್ಕಿಂತ ಬೇರೆಯದು ಎಂಬ ಕಾರಣಕ್ಕೆ ಇಶ್ಟವಾಗಿದ್ದೇ ಎಂದು ಹೇಳುವುದು ಕಶ್ಟವೇ.
ನೋಡ ನೋಡುತ್ತಾ ಕರಗುತ್ತಿದೆ ಕಣ್ಣ ಮುಂದೆ. ಆಕಾಶದೆತ್ತರ ಬೆಳೆದು ಸಂಗ್ರಹಿಸಿಟ್ಟ ಕಲೆಯಿಲ್ಲದ ಹಿಮ ಕೂಡ. ಕೋಪದ ತಾಪದಲ್ಲಿ ಹರಿಯುತ್ತ ಕಣ್ಣೀರಿಡುತ್ತ ನದಿಯಾಗಿ ದಿಕ್ಕು ತೋಚಿದಂತೆಲ್ಲ ಹರಿದು ಬರಿದಾಗುತ್ತಿದೆ. ಬೆತ್ತಲೆಯ ಬಂಡೆಗಳು ನಾಚಿಕೆಗೆ ಸಿಡಿದು ಚೂರಾಗಿ ಅತ್ತಿತ್ತ ಸಿಡಿಯುತ್ತಲಿವೆ. ನೋಡುತ್ತಿರುವವನಿಗೆ ಕೇವಲ ಕಣ್ಣುಗಳ ಅಸ್ತಿತ್ವವಶ್ಟೇ.. ಈ ಬೀಕರತೆಯಲ್ಲಿ ದೇಹಕ್ಕೆ ದಾಹವು ಇಲ್ಲ, ಜಡದ ಅರಿವು ಎಲ್ಲ. ಉಳಿದಿರುವುದು ಸೂಕ್ಶ್ಮ ಗ್ರಹಿಕೆ ಮಾತ್ರ. ಅದರಲ್ಲೂ ಒಂದಿಶ್ಟು ಬಾವನೆಗಳು ಉಳಿದುಕೊಂಡಿವೆ ಮರುಗಲು. ಬ್ರುಹತ್ತಾದ ದೊಣ್ಣೆ ಬೀಸಿ ಮಡಕೆ ಚೂರು ಚೂರಾಗಿ ಕಣ್ಣಲ್ಲಿ ಹೊಕ್ಕು ರಕ್ತವನ್ನೆಲ್ಲ ಹೊರಗೆಳೆವ ದಾರುಣ. ರೋದನೆಗೆ ಮೊದಲ ಪ್ರಾಶಸ್ತ್ಯ – ಅಂತ್ಯದ ಸೊಬಗನ್ನು ನೋಡಲು ಆಗದೆ ಬೆಳಕೂ ಅತ್ತ ಕಡೆಗೆ ಮುಕ ತಿರುಗಿಸಲು, ಕಣ್ಣಿಂದ ಹರಿಯುತ್ತಿದ್ದ ಕೆಂಪು ರಕ್ತ ಕತ್ತಲಲ್ಲಿ ಕರಗಿ ಮಾಯವಾಗತೊಡಗಿತು. ನೋಡ ನೋಡುತ್ತಿದ್ದಂತೆ ಒಂದೊಂದೇ ನೆನಪುಗಳು ಇದೊಂದೇ ಕರಾಳ ನೆನಪಲ್ಲಿ ಬಾಗಿಯಾಗುತ್ತ ತಮ್ಮನ್ನೇ ಕಳೆದು ಕೊಂಡವು. ಇನ್ನೇನು ಉಳಿಯದಂತೆ ಸಂಬಂದ ಕರಗಿ ಪ್ರಕ್ರುತಿಯೊಡನೆ ಲೀನವಾಯಿತು. ಅದೇ ಜಾಗಕ್ಕೆ ಮತ್ತೊಂದು ಹುಚ್ಚು ಪ್ರಯತ್ನ. ಇನ್ನೊಂದಿಶ್ಟು ಕಲ್ಲುಗಳು ಒಂದರ ಮೇಲೊಂದು ಹಿರಿದಾಗುವ ಆಸೆಯಲ್ಲಿ ಹಿಮ ಕೈಗೆಟಕುವ ಹುಚ್ಚಿನಲ್ಲಿ.
ಹಿಂದೆ ನಡೆದದ್ದು ಗೊತ್ತಿಲ್ಲದೇ ಹೊಸ ಮನಕ್ಕೆ ಹುಮ್ಮಸ್ಸು. ಎಲ್ಲ ಕಂಡಿದ್ದೂ ಕಳೆದುಕೊಂಡ ಪಶ್ಚತ್ತಾಪದ ಮನಸ್ಸಿಗೆ ಬಿಟ್ಟು ಹೋದ ಮನಸ್ಸಿನದೇ ಅಳಲು. ಹುಚ್ಚು ರಬಸದಲ್ಲಿನ ನಿರ್‍ದಾರ ಅಳೆಯಲಾಗದ ಎತ್ತರವನ್ನು ಕರಗಿಸಿತ್ತು ಪುಟ್ಟ ಬೆಟ್ಟವೊಂದನ್ನು ಕಟ್ಟಿ ದಣಿದ ಹೊಸ ಮನಸ್ಸಿನ ಸಮಾದಾನಕ್ಕೆ ಚಪ್ಪಾಳೆಗಾಗಿ ಎರಡು ಕೈ ಸೇರಿಸಲು ಹೊರಟಿತ್ತು. ಆಗಲಿಲ್ಲ, ತನಗೆ ತಾ ಸುಳ್ಳು ಬಗೆಯುವುದೇ? ಬಿಕ್ಕಿ ಅಳತೊಡಗಿತು ನೆನಪುಗಳ ಬಂದನದಲ್ಲಿ ಹಳೆಯದನ್ನೆಲ್ಲ ಮತ್ತೆ ಮತ್ತೆ ಕಣ್ಣ ಮುಂದೆ ತಂದುಕೊಂಡು, ಸಮಯ ಒಂಚಿತ್ತು ಕರುಣೆ ತೋರದೆ ಕರ್‍ಮದ ಪಲದ ರುಚಿಯನ್ನು ಬಡಿಸಲು ಕಾದು ನಿಂತಿತ್ತು.
(ಚಿತ್ರ ಸೆಲೆ: wiki )
ಇತ್ತೀಚಿನ ಅನಿಸಿಕೆಗಳು