ಮಕ್ಕಳ ಕವಿತೆ: ಊಹೆಗೆ ನಿಲುಕದ ಲೋಕ
ಶಾಲೆ ಕಲಿವ ತುಂಟ ಮಕ್ಕಳು
ಅಗಿಬಿಟ್ರಂದ್ರೆ ಮಂಗ
ಊಹೆಗೂ ನಿಲುಕದ ಹೊಸತು ಲೋಕವು
ತೆರೆಯಬಹುದು ಹಿಂಗ
ಕಾಡು-ಮೇಡನು ಸುತ್ತಬಹುದು
ಅಡುತ ಆಡುತ ಆಟ
ಇಲ್ಲವೆ ಇಲ್ಲ ಗಣಿತ ಪಾಟ
ಶಾಲೆಯ ಟೀಚರ್ ಕಾಟ
ತರತರ ಹಣ್ಣನು ತಿನ್ನಲುಬಹುದು
ಗಿಡದ ನೆತ್ತಿಗೆ ಏರಿ
ಸರ‍್ಕಸ್ ಗಿರ‍್ಕಸ್ ಮಾಡಲುಬಹುದು
ಟೊಂಗೆ ಟೊಂಗೆಗೆ ಹಾರಿ
ಗಿಡ-ಗಿಡ ಹತ್ತುತ ನೋಡಲುಬಹುದು
ಕಾಡಿನ ಹಕ್ಕಿ ಗೂಡು
ಬೇಜಾರಾದರೆ ಕೇಳಲುಬಹುದು
ಮರಿಗಳ ಚಿಲಿಪಿಲಿ ಹಾಡು
ಹಲ್ಲನು ಕಿಸಿದು ಅಂಜಿಸಬಹುದು
ದೊಡ್ಡ ದೊಡ್ಡವರನೆಲ್ಲ
ಎಶ್ಟು ಕರೆದರು ಒಲ್ಲೆನಬಹುದು
ಅಲ್ಲಾಡಿಸುತ ಬಾಲ
ಮಗುವಿನ ಮನಸು ತೇಲುತಲಿಹುದು
ಬಿಚ್ಚುತ ನೂರು ರೆಕ್ಕೆ
ಮತ್ತಾರಿಂದಲು ಸಾದ್ಯವೆ ಇಲ್ಲ
ಹೀಗೆ ಕಲ್ಪಿಸಲಿಕ್ಕೆ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು