ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 11ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ
ಮನದ ತಾಮಸ ಬಿಡದು
ಮನದ ಕಪಟ ಬಿಡದು. (282-32)

ಲೋಕ+ಉಪಚಾರಕ್ಕೆ; ಲೋಕ=ಜಗತ್ತು/ಪ್ರಪಂಚ; ಉಪಚಾರ=ಸೇವೆ/ಆದರಣೆ/ಇತರರಿಗೆ ಅನುಕೂಲವಾಗುವ ಕೆಲಸವನ್ನು ಮಾಡುವುದು; ಮಜ್ಜನಕ್ಕೆ+ಎರೆವೆನ್+ಅಯ್ಯಾ; ಮಜ್ಜನ=ಸ್ನಾನ/ಜಳಕ/ಮಯ್ಯನ್ನು ತೊಳೆಯುವುದು; ಎರೆ=ಸುರಿ/ಹಾಕು/ಹೊಯ್ಯು; ಎರೆವೆನ್=ಹಾಕುತ್ತೇನೆ; ಮಜ್ಜನಕ್ಕೆರೆವೆನಯ್ಯಾ=ದೇವರ ವಿಗ್ರಹವೆಂದು ನಂಬಿರುವ ಲಿಂಗದ ಮೇಲೆ ನೀರು/ಹಾಲು/ಜೇನುತುಪ್ಪ ಮುಂತಾದ ದ್ರವವನ್ನು ಸುರಿದು, ಲಿಂಗಕ್ಕೆ ಜಳಕವನ್ನು ಮಾಡಿಸುತ್ತೇನೆ;

‘ಲೋಕೋಪಚಾರ’ ಎಂಬುದು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ದೇವರಿಗೆ ಉಪಚಾರ ಮಾಡುವುದರ ಮೂಲಕ , ಆತನನ್ನು ಒಲಿಸಿಕೊಳ್ಳಲು/ಆತನ ಕರುಣೆಗೆ ಪಾತ್ರರಾಗಲು ಲೋಕದಲ್ಲಿ ಜನರು ದೇವರಿಗೆ ಮಜ್ಜನದ ಸೇವೆಯನ್ನು ಮಾಡುತ್ತಿರುವಂತೆ ನಾನು ಕೂಡ ದಿನನಿತ್ಯ ಲಿಂಗಕ್ಕೆ ಮಜ್ಜನವನ್ನು ಮಾಡಿಸುತ್ತಿದ್ದೇನೆ.

ಮನ=ಮನಸ್ಸು/ಚಿತ್ತ; ತಾಮಸ=ಕತ್ತಲೆ. ಈ ಪದವನ್ನು ಒಂದು ರೂಪಕವಾಗಿ ಬಳಸಿದಾಗ ‘ಅರಿವು ಇಲ್ಲದಿರುವುದು/ಜಡತನ/ಕೆಟ್ಟದ್ದು’ ಎಂಬ ತಿರುಳು ದೊರೆಯುತ್ತದೆ; ಮನದ ತಾಮಸ=ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳು. ಬಿಡು=ತೊರೆ/ತ್ಯಜಿಸು; ಬಿಡದು=ಬಿಟ್ಟುಹೋಗುವುದಿಲ್ಲ/ಬಿಡುತ್ತಿಲ್ಲ;

ಮನದ ತಾಮಸ ಬಿಡದು=ವ್ಯಕ್ತಿಯ ಮನದೊಳಗೆ ನೂರಾರು ಬಗೆಯ ಕೆಟ್ಟ ಆಲೋಚನೆಗಳು ತುಂಬಿಕೊಂಡಿವೆ. ಅವನ್ನು ಹತ್ತಿಕ್ಕಿಕೊಂಡು ಬಾಳಲು ಆಗುತ್ತಿಲ್ಲ;

ಕಪಟ=ವಂಚನೆ/ಮೋಸ; ಮನದ ಕಪಟ ಬಿಡದು=ಇತರರನ್ನು ವಂಚಿಸಿ, ತಾನು ಹೆಚ್ಚಿನದನ್ನು ಪಡೆಯಬೇಕೆಂಬ ಒಳಮಿಡಿತಗಳು ವ್ಯಕ್ತಿಯ ಮನಸ್ಸಿನಿಂದ ದೂರಸರಿಯುತ್ತಿಲ್ಲ/ಇತರರನ್ನು ವಂಚಿಸುವ ಆಲೋಚನೆಗಳೇ ಮನದಲ್ಲಿ ತುಂಬಿವೆ;

ಕೇವಲ ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ದೇವರನ್ನು ಪೂಜಿಸುವ ವ್ಯಕ್ತಿಯು ಒಳ್ಳೆಯ ನಡೆನುಡಿಗಳನ್ನು ಹೊಂದಿದವನಾಗಿರಬೇಕು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.

ವ್ಯಾಧನೊಂದು ಮೊಲವ ತಂದಡೆ
ಸಲುವ ಹಾಗಕ್ಕೆ ಬಿಲಿವರಯ್ಯಾ
ನೆಲನಾಳ್ವನ ಹೆಣನೆಂದಡೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ. (158-23)

ವ್ಯಾಧನ್+ಒಂದು; ವ್ಯಾಧ=ಬೇಡ/ಬೇಟೆಗಾರ; ಮೊಲ=ಒಂದು ಪ್ರಾಣಿ; ತಂದಡೆ=ತಂದರೆ; ವ್ಯಾಧನೊಂದು ಮೊಲವ ತಂದಡೆ=ಬೇಡನು ಮೊಲವೊಂದನ್ನು ಬೇಟೆಯಾಡಿ ಕೊಂದು, ಅದನ್ನು ಮಾರಲೆಂದು ಜನವಸತಿಯಿರುವ ಕಡೆಗೆ ಬಂದು ಕೂಗಿದಾಗ;

ಸಲ್=ತಕ್ಕುದಾಗಿರು/ಸರಿಹೊಂದು/ಯುಕ್ತವಾಗಿರು/ಯೋಗ್ಯವಾಗು; ಸಲುವ=ಒಪ್ಪುವ/ತಕ್ಕುದಾದ/ಯೋಗ್ಯವಾದ; ಹಾಗ=ಒಂದು ನಾಣ್ಯ/ಹನ್ನೆರಡನೆಯ ಶತಮಾನದಲ್ಲಿ ಬಳಕೆಯಲ್ಲಿದ್ದ ಒಂದು ನಾಣ್ಯದ ಹೆಸರು; ಬಿಲಿವರ್+ಅಯ್ಯಾ; ಬಿಲಿ=ಕೊಂಡುಕೊಳ್ಳುವುದು/ಬೆಲೆಕೊಟ್ಟು ಪಡೆಯುವುದು/ಕ್ರಯಕ್ಕೆ ತೆಗೆದುಕೊಳ್ಳುವುದು;

ಸಲುವ ಹಾಗಕ್ಕೆ ಬಿಲಿವರಯ್ಯಾ=ಮೊಲಕ್ಕೆ ತಗುಲುವ ಬೆಲೆಯನ್ನು ಕಟ್ಟಿ, ನಾಣ್ಯವನ್ನು ನೀಡಿ ಕೊಂಡುಕೊಳ್ಳುತ್ತಾರೆ;

ನೆಲನ್+ಆಳ್ವನ; ನೆಲ=ಬೂಮಿ/ನಾಡು/ರಾಜ್ಯ; ಆಳ್=ಆಡಳಿತವನ್ನು ಮಾಡು; ನೆಲನಾಳ್ವನ್=ರಾಜ/ದೊರೆ; ಹೆಣನ್+ಎಂದಡೆ; ಹೆಣ=ಜೀವವಿಲ್ಲದ ದೇಹ/ಶರೀರ; ಎಂದಡೆ=ಎಂದು ಹೇಳಿದರೆ/ಎಂದು ಕೂಗಿದರೆ; ನೆಲನಾಳ್ವನ ಹೆಣನೆಂದಡೆ=ಜನವಸತಿಯಿರುವ ಕಡೆಗೆ ಬಂದು ರಾಜ/ದೊರೆಯ ಹೆಣವನ್ನು ಮಾರಾಟಕ್ಕಿಟ್ಟು ಕೂಗಿ ಕರೆದರೆ;

ಒಂದು+ಅಡಕೆಗೆ; ಅಡಕೆ=ಒಂದು ಬಗೆಯ ಕಾಯಿ; ಕೊಂಬವರ್+ಇಲ್ಲ; ಕೊಳ್=ತೆಗೆದುಕೊ/ಕ್ರಯಕ್ಕೆ ಪಡೆ/ಸ್ವೀಕರಿಸು; ಕೊಂಬವರ್=ಕೊಂಡುಕೊಳ್ಳುವವರು/ಹಣ ಕೊಟ್ಟು ಪಡೆಯುವವರು; ಇಲ್ಲ=ಯಾರೊಬ್ಬರು ಮುಂದೆ ಬಾರರು; ಕೊಂಬವರಿಲ್ಲ=ಕೊಂಡುಕೊಳ್ಳುವವರು ಯಾರೂ ಇಲ್ಲ; ಅಡಕೆಗೆ ಕೊಂಬವರ್=ಒಂದು ವಸ್ತುವಿಗೆ ಪ್ರತಿಯಾಗಿ ಮತ್ತೊಂದು ವಸ್ತುವನ್ನು ಕೊಟ್ಟು, ಪರಸ್ಪರ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ರೀತಿಯು ಸಮಾಜದಲ್ಲಿ ಕೆಲವು ಕಾಲ ಚಾಲ್ತಿಯಲ್ಲಿತ್ತು. ತಮ್ಮಲ್ಲಿರುವ ಅಡಕೆಯನ್ನು ಕೊಟ್ಟು ತಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುವುದು;

ಸತ್ತಿರುವ ಮೊಲಕ್ಕೆ ಒಂದು ಬೆಲೆಯಿದೆ. ಕಾರಣ ಅದರ ಮಾಂಸವನ್ನು ತಿನ್ನುವವರು ಅದನ್ನು ಬೆಲೆಕೊಟ್ಟು ಕೊಂಡುಕೊಳ್ಳುತ್ತಾರೆ. ಆದರೆ ಸತ್ತಿರುವ ರಾಜನ ಹೆಣಕ್ಕೆ ಬೆಲೆಯಿಲ್ಲ. ಮಾನವ ಜೀವಿಯು ಬದುಕಿದ್ದಾಗ ಮಾತ್ರ ಬೆಲೆ. ಆದ್ದರಿಂದ ಸಾಯುವುದಕ್ಕೆ ಮೊದಲು ವ್ಯಕ್ತಿಯು ತನ್ನ ಬದುಕನ್ನು ಚೆನ್ನಾಗಿ ನಡೆಸುವುದರ ಜತೆಗೆ ಲೋಕಕ್ಕೂ ತನ್ನಿಂದ ಪ್ರಯೋಜನವಾಗುವಂತಹ ನಡೆನುಡಿಯನ್ನು ಹೊಂದಿರಬೇಕೆಂಬ ಸಂಗತಿಯನ್ನು ಈ ಪ್ರಸಂಗವು ಸೂಚಿಸುತ್ತಿದೆ.

ಸಕಲ ಜೀವಾತ್ಮರಿಗೆ
ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೇ
ಕುಲಜರು. (591-55)

ಸಕಲ=ಎಲ್ಲವನ್ನೂ ಒಳಗೊಂಡಿರುವುದು/ಸಮಗ್ರವಾದುದು; ಜೀವಾತ್ಮ=ವ್ಯಕ್ತಿ; ಲೇಸು=ಒಳ್ಳೆಯದು/ಹಿತಕರವಾದುದು/ಮಂಗಳಕರವಾದುದು; ಲೇಸನೆ=ಒಳ್ಳೆಯದನ್ನೇ/ಹಿತಕರವಾದುದನ್ನೇ; ಬಯಸು=ಕೋರು/ಹಾರಯಿಸು/ಇಚ್ಚಿಸು/ಹಂಬಲಿಸು;

ಸಕಲ ಜೀವಾತ್ಮರಿಗೆ ಲೇಸನೆ ಬಯಸುವವರು=ಜನಸಮುದಾಯದಲ್ಲಿರುವ ಎಲ್ಲಾ ವ್ಯಕ್ತಿಗಳಿಗೂ ಒಳ್ಳೆಯದನ್ನೇ ಬಯಸುವವರು. ಅಂದರೆ ವರ‍್ಣ/ಜಾತಿಗಳ ಹೆಸರಿನಲ್ಲಿ ಜನಸಮುದಾಯವನ್ನು ಮೇಲು/ಕೀಳು ಎಂದು ವಿಂಗಡಿಸದೆ, ಎಲ್ಲರನ್ನು ಸಮಾನವಾಗಿ ಕಾಣುತ್ತ, ಪ್ರತಿಯೊಬ್ಬರಿಗೂ ಅನ್ನ,ಬಟ್ಟೆ,ವಸತಿ,ವಿದ್ಯೆ,ಕೆಲಸ,ಆರೋಗ್ಯ ದೊರೆಯುವಂತಾಗಿ ಎಲ್ಲರೂ ಜತೆಗೂಡಿ ನೆಮ್ಮದಿಯಿಂದ ಬಾಳುವಂತಾಗಬೇಕು ಎಂಬ ನಿಲುವನ್ನು ಉಳ್ಳವರು; ಕೂಡಲಸಂಗ=ಈಶ್ವರ/ಶಿವ/ಬಸವಣ್ಣನ ಮೆಚ್ಚಿನ ದೇವರು;

ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಪೂಜಿಸುವವನು; ಕುಲ=ಜಾತಿ/ಮತ/ವಂಶ/ಮನೆತನ; ಕುಲಜ=ಕುಲದಲ್ಲಿ ಹುಟ್ಟಿದವರು/ಮಾನವ ಸಮುದಾಯಕ್ಕೆ ಸೇರಿದವರು;

ನಮ್ಮ ಕೂಡಲಸಂಗನ ಶರಣರೆ ಕುಲಜರು=ಕುಲದ ಹೆಸರಿನಲ್ಲಿ ಮೇಲು/ಕೀಳು ಎಂಬ ತಾರತಮ್ಯದಿಂದ ರಚನೆಗೊಂಡಿದ್ದ ಸಮಾಜದ ಕಟ್ಟಲೆಯನ್ನು ನಿರಾಕರಿಸಿ, ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗಳೆಲ್ಲರೂ ಮಾನವಸಮುದಾಯವೆಂಬ ಒಂದೇ ಕುಲಕ್ಕೆ ಸೇರಿದವರು ಎಂಬ ಶಿವಶರಣಶರಣೆಯರ ನಿಲುವನ್ನು ಈ ನುಡಿಗಳು ಸೂಚಿಸುತ್ತಿವೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: