ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಮೂಡಿಸುವುದು ಹೇಗೆ?

– ಕೆ.ವಿ. ಶಶಿದರ.

ಮಕ್ಕಳು, Children
ಇದರಂತಹ ಸಂಕೀರ‍್ಣ ವಿಶಯ ಮತ್ತೊಂದು ಇಲ್ಲ. ಏಕೆಂದರೆ ತಲತಲಾಂತರದಿಂದ, ಅಂದರೆ ಮಾನವನು ಕಲಿಕೆ ಪ್ರಾರಂಬಿಸಿದ ದಿನದಿಂದಲೂ ಇದುವರೆಗೂ ಇದರ ಬಗ್ಗೆ ಸಾಕಶ್ಟು ಚರ‍್ಚೆಗಳು, ಬರಹಗಳು, ಅದ್ಯಯನಗಳು, ಪ್ರಬಂದಗಳು, ತೀಸೀಸ್ಗಳು, ವಿಚಾರ ಸಂಕಿರ‍್ಣಗಳು ವಿಶ್ವಾದ್ಯಂತ ನಡೆದಿವೆ. ಇಶ್ಟರಲ್ಲೂ ಇಂತದೆ ಪದ್ದತಿಯನ್ನು ಅನುಸರಿಸಿದರೆ ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಬೆಳೆಸಬಹುದು ಎಂಬ ಸಿದ್ದ ಸೂತ್ರ ರಚಿಸಲು ಸಾದ್ಯವಾಗಿಲ್ಲ. ಬಹುಶಹ ಮುಂದೆಯೂ ಇದೇ ಪರಿಸ್ತಿತಿ ಮುಂದುವರೆಯುವುದು ಶತಸಿದ್ದ. ಕಲಿಕೆ ಕೆಲ ಮಕ್ಕಳಿಗೆ ಸುಲಿದ ಬಾಳೆಹಣ್ಣಾದರೆ ಮತ್ತೆ ಕೆಲವರಿಗೆ ಕಬ್ಬಿಣದ ಕಡಲೆ. ಹುಟ್ಟಿನಿಂದಲೇ ಕಲಿಕೆಯ ಬಗ್ಗೆ ಆಸಕ್ತಿ ಇದ್ದವರು, ತಾವೇ ದಾರಿ ಹುಡುಕಿಕೊಂಡು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಇನ್ನು ಕೆಲವರಿಗೆ ಕೊಂಚ  ಪ್ರೋತ್ಸಾಹ ದೊರೆತರೆ ತಾವೇ ಅದರ ಜಾಡು ಹಿಡಿಯುವ ಚಾತಿ ಹೊಂದಿರುತ್ತಾರೆ. ಉಳಿದವರಿಗೆ ಕಲಿಕೆಯ ಬಗ್ಗೆ ಒಲವು ಮೂಡಿಸಲು ಸಾಕಶ್ಟು ಪರಿಶ್ರಮ ಅಗತ್ಯ.

ಮಕ್ಕಳಿಗೆ ಕಲಿಕೆಯಲ್ಲಿ ಶ್ರದ್ದೆ ಮೂಡಿಸುವುದೇ ಶ್ರಮದಾಯಕ ಕೆಲಸ. ಇದಕ್ಕೆ ಯಾವುದೇ ಅಡ್ಡದಾರಿಯಾಗಲಿ, ತಕ್ಶಣದ ವಿದಾನವಾಗಲಿ ಇಲ್ಲ. ಯತ್ನಚ್ಯುತಿ (Trial and error) ವಿದಾನವೇ ಇಲ್ಲಿ ಪ್ರಾಮುಕ್ಯತೆ ಪಡೆಯುತ್ತದೆ. ಶಾಲಾ ವರ‍್ಶಗಳಲ್ಲಿ ಅದ್ಯಯನ ಮಾಡುವುದೇ ಒಂದು ತಂತ್ರಗಾರಿಕೆ. ಅದರಲ್ಲಿ ಯಾವ ತಂತ್ರ ಹೆಚ್ಚು ಅಪ್ಯಾಯಮಾನ? ಯಾವುದರಿಂದ ಏನು ಸಾದನೆ ಸಾದ್ಯ? ಯಾವ ಆಯ್ಕೆ ಏಕೆ ಮುಕ್ಯ? ಹೀಗೆ ಹಲವು ಹತ್ತು ಪ್ರಶ್ನೆಗಳು ಸದಾ ಕಾಡುತ್ತವೆ. ಮಕ್ಕಳಲ್ಲಿ ಕಲಿಕೆಯನ್ನು ಪ್ರೀತಿಸುವವರಿಗಿಂತಾ ಅಸಡ್ಡೆ ತೋರುವವರೆ ಹೆಚ್ಚು. ಅಸಡ್ಡೆ ತೋರುವವರಿಗೆ ಕಲಿಕೆಯಲ್ಲಿ ಶ್ರದ್ದೆ ಮೂಡಿಸಿದರೆ ಅವರು ಅದನ್ನು ಮುಂದುವರೆಸುತ್ತಾರೆಯೇ? ಇದು ನಂತರ ಕಾಡುವ ಬ್ರುಹತ್ ಪ್ರಶ್ನೆ. ಬೇರಾವುದೇ ವ್ಯಾಕುಲತೆಯಾಗಲಿ, ಚಿತ್ತಬ್ರಂಶವಾಗಲಿ ಇಲ್ಲದಿದ್ದಲ್ಲಿ ಸಾದ್ಯ ಎನ್ನುತ್ತದೆ ಹಲವಾರು ಅದ್ಯಯನಗಳು.

ಅದ್ಯಯನ/ಕಲಿಕೆ ಮಕ್ಕಳಿಗೆ ಇಶ್ಟವಾಗುವ ಅನುಬವವಾಗಬೇಕು. ಆಗ ಅವರಲ್ಲಿ ಕಲಿಕೆಯ ಬಗ್ಗೆ ಶ್ರದ್ದೆ ತಾನೇ ತಾನಾಗಿ ಮೂಡುತ್ತದೆ ಎಂಬುದು ಒಂದು ವಾದ. ಓದು ಅತವ ಕಲಿಕೆ ವಿದ್ಯಾರ‍್ತಿಗಳಿಗೆ ಇಶ್ಟವಾಗಬೇಕು ಮತ್ತು ಅದರಿಂದ ಕುಶಿ ಸಿಗಬೇಕು, ಅಂತಹ ಓದು/ಕಲಿಕೆ ಬಹಳ ಮುಕ್ಯ. ಕಲಿಕೆ, ನೈಜ ಪ್ರಪಂಚಕ್ಕೆ ಹತ್ತಿರವಾಗಿರಬೇಕು. ಶಾಲೆಯಲ್ಲಿ ಕಲಿಯುವುದನ್ನು ನಿಜ ಜೀವನದಲ್ಲಿ ಪೂರ‍್ಣವಾಗಿ ಅಲ್ಲದಿದ್ದರೂ, ಬಹುಪಾಲು ಅಳವಡಿಸಲು ಸಾದ್ಯವಾಗುವಂತಿಬೇಕು. ಶಾಲೆಯ ನಂತರದ ದಿನಗಳಲ್ಲಿ ಅದರಿಂದ ಅವರಿಗೆ ನೇರವಾಗಿ ಪ್ರಯೋಜನವಾಗುವಂತಿರಬೇಕು. ಅಂತಹ ಕಲಿಕೆಯನ್ನು ಬಳಸುವವರು ಬಹಳಶ್ಟು ಇದ್ದಾರೆ. ಇದರ ಬಗ್ಗೆ ವಿದ್ಯಾರ‍್ತಿಗಳಿಗೆ ತಿಳಿಸಿದರೆ ಅವರು ಕಲಿಕೆಯಲ್ಲಿ ಶ್ರದ್ದೆಯನ್ನು ಹೆಚ್ಚು ತೋರಿಸುತ್ತಾರೆ. ಇದು ಏಕಾಏಕಿ ಸಾದ್ಯವಿಲ್ಲ. ಕಲಿಸಬೇಕಿರುವ ವಿಶಯವನ್ನು ನಿಜ ಜೀವನದ ಅನುಬವಗಳು ಮತ್ತು ಸನ್ನಿವೇಶಗಳೊಂದಿಗೆ ಹೊಂದಿಸುವ ಮಾರ‍್ಗವನ್ನು ಮೊದಲು ಹುಡುಕಬೇಕು. ನಂತರ ಅದಕ್ಕೆ ತಕ್ಕ ಯೋಜನೆಗಳನ್ನು ರೂಪಿಸಬೇಕು. ಅದನ್ನು ತರಗತಿಯಲ್ಲಿ ಅಳವಡಿಸುವ ರೀತಿಯಲ್ಲಿ ಅಬಿವ್ರುದ್ದಿಪಡಿಸಬೇಕು.

ವಿದ್ಯಾರ‍್ತಿಗಳಲ್ಲಿ ಕಲಿಕೆಯ ಬಗ್ಗೆ ಶ್ರದ್ದೆ ಮೂಡಿಸಲು ಇದು ಮೊದಲನೇ ಹೆಜ್ಜೆಯಾದರೆ, ನಂತರದ್ದು ಸಮೂಹ/ಗುಂಪು ಸಂವಹನ. ಇಲ್ಲಿ ವಿದ್ಯಾರ‍್ತಿಗಳು ತಮ್ಮ ಕಲಿಕೆಯಲ್ಲಿ ಏನು ಸಾದನೆ ಮಾಡಲು ಬಯಸುತ್ತಾರೆ, ಆ ಗುರಿ ಮುಟ್ಟಲು ಯಾವ ರೀತಿಯಲ್ಲಿ ಯೋಜಿಸಿದ್ದಾರೆ ಎಂಬುದನ್ನು ಅವರಿಂದಲೇ ತಿಳಿಯುವುದು ಉತ್ತಮ. ಅದರಲ್ಲಿ ಅವರು ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರ ಸೂಚಿಸುವುದರೊಂದಿಗೆ, ಪೂರ‍್ಣಗೊಳಿಸುವ ಸಲುವಾಗಿ ಮುಕ್ತ ವಾತಾವರಣ ಸ್ರುಶ್ಟಿಸಲು ಶ್ರಮ ಅಗತ್ಯ. ಒಬ್ಬೊಬ್ಬರು ಒಂದೊಂದು ರೀತಿಯ ಅದ್ಯಯನ ತಂತ್ರವನ್ನು ಅಳವಡಿಸಿಕೊಂಡಿರುತ್ತಾರೆ, ಹಾಗೂ ಅದರಲ್ಲಿ ಕೆಲವರು ಸಾಕಶ್ಟು ಯಶಸ್ವಿ ಸಹ ಆಗಿರುತ್ತಾರೆ. ಅದೇ ತಂತ್ರಗಾರಿಕೆ ಎಲ್ಲರಿಗೂ ಅನ್ವಯಿಸುತ್ತದಾ? ಎಂದರೆ ಉತ್ತರ ಇಲ್ಲ. ಅದರಲ್ಲಿ ಬದಲಾವಣೆ ಅತ್ಯಗತ್ಯ. ಆ ವಿದ್ಯಾರ‍್ತಿಯ ಬುದ್ದಿಮತ್ತೆಗೆ ಸರಿ ಹೊಂದುವ ತಂತ್ರ ಹೆಣೆಯಬೇಕು.

ಶಿಕ್ಶಕರು ಬೋದಿಸುವ ವಿಶಯಗಳನ್ನು ವಿದ್ಯಾರ‍್ತಿಗಳು ಯಾವ ರೀತಿಯಲ್ಲಿ ಮನನ ಮಾಡಿಕೊಳ್ಳುತ್ತಾರೆ ಎಂಬುದನ್ನು ವಿದ್ಯಾರ‍್ತಿಗಳಿಂದಲೇ ಕೇಳಿ ಪಡೆಯಬೇಕು. ಅದ್ಯಯನ ಸಮಯವನ್ನು ಪೂರ‍್ಣವಾಗಿ ಸದುಪಯೋಗ ಪಡೆಯಲು ಯಾವ ಮಾರ‍್ಗ ಅನುಸರಿಸುತ್ತಿದ್ದಾರೆಂದು ಕಂಡುಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಉತ್ತಮ ಪ್ತತಿಕ್ರಿಯೆ(feedback) ದೊರೆಯುತ್ತದೆ. ಇದನ್ನೇ ತಳಹದಿಯಾಗಿ ಇಟ್ಟುಕೊಂಡು ಹೊಸ ಹೊಸ ವಿದಾನವನ್ನು ಅಬಿವ್ರುದ್ದಿ ಪಡಿಸಲು ಸಾದ್ಯವಿರುತ್ತೆ. ಅವರುಗಳ ಅದ್ಯಯನದ ರೀತಿಯ ಜೊತೆ, ಹೊಸ ಅವಿಶ್ಕಾರವನ್ನು ಬಳಸಿಕೊಳ್ಳಲು ಹೇಳುವುದರಿಂದ ಉತ್ತಮ ಪಲಿತಾಂಶ ನಿರೀಕ್ಶಿಸಬಹುದು.

ವಿದ್ಯಾರ‍್ತಿಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅನನ್ಯ ಮತ್ತು ವಿಶೇಶ. ಅವರವರ ರೀತಿಯಲ್ಲಿ ಅವರವರು ಅದ್ಯಯನ ಮಾಡುವಾಗ ಪೂರ‍್ಣವಾಗಿ ಗಮನಿಸಿ, ಹಾಗೂ ಅದಕ್ಕೆ ಪೂರಕವಾದ ಬದಲಾವಣೆಗಳನ್ನು ಮಾಡಿದಲ್ಲಿ ಕಲಿಕೆ ಅವರಿಗೆ ಸುಲಬ ತುತ್ತಾಗಬಹುದು. ಹಲವು ಸಮಯಗಳಲ್ಲಿ ವಿದ್ಯಾರ‍್ತಿಗಳಲ್ಲಿ ತಂಡದ ವಾತಾವರಣ ಬೆಳೆಸುವುದು, ಅದ್ಯಯನ ಮತ್ತು ಕಲಿಕೆಯ ದ್ರುಶ್ಟಿಯಿಂದ ಒಳ್ಳೆಯದು. ಇದರಿಂದ ಅವರಲ್ಲಿ ಉದ್ಬವಿಸುವ ಹಲವು ಸಮಸ್ಯೆಗಳು, ತೊಂದರೆಗಳು ಪರಸ್ಪರ ವಿಚಾರ ವಿನಿಮಯದಿಂದ ಹೆಚ್ಚಿನ ಮಟ್ಟಿಗೆ ನಿವಾರಣೆಯಾಗುವ ಸಾದ್ಯತೆಯಿರುತ್ತದೆ. ಮಕ್ಕಳಲ್ಲಿ ಬುದ್ದಿಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ಆಟಗಳು ಸೂಕ್ತ. ಅದನ್ನು ಬಳಸುವುದರಿಂದ ಮಕ್ಕಳಲ್ಲಿ ಯೋಚನಾ ಶಕ್ತಿ ಹೆಚ್ಚಿ ಮಿದುಳಿಗೆ ವ್ಯಾಯಾಮವಾಗುವುದರ ಜೊತೆಗೆ ಜ್ನಾನ ದಾರಣೆ ಸಹ ವ್ರುದ್ದಿಸುತ್ತದೆ.

ಏನಿದು ಪೊಮೊಡೊರೊ ತಂತ್ರಗಾರಿಕೆ? ಇದರಿಂದ ಕಲಿಕೆ ಹೇಗೆ ಸುಲಬವಾಗುತ್ತದೆ? ಇದನ್ನು ಯಾರು ಬಳಸಬಹುದು? ಎಲ್ಲಾ ತರಗತಿಯ ಮಕ್ಕಳಿಗೆ ಇದು ಅನ್ವಯವಾಗುತ್ತದೆಯೇ?

ಹೌದು, ಒಂದೇ ಸಮನೆ ಮಿದುಳಿಗೆ ಕಸರತ್ತು ನೀಡುವುದು ಸರಿಯಲ್ಲ. ಆಗಾಗ ಅದಕ್ಕೆ ವಿರಾಮ ಅಗತ್ಯ. ಮಿದುಳು ಸ್ನಾಯುವಿನಿಂದ ಮಾಡಲ್ಪಟ್ಟಿರುವುದು. ಹಾಗಾಗಿ ಓದುತ್ತಿರುವ ವಿದ್ಯಾರ‍್ತಿಗಳು ಕೊಂಚ ಸಮಯದ ನಂತರ ಎದ್ದು, ಮೈಕೈ ಮುರಿದು, ಬೇಕಾದಲ್ಲಿ ನೀರು ಅತವಾ ಯಾವುದಾದರೂ ತಮ್ಮಿಶ್ಟದ ಪಾನೀಯ ಸ್ವೀಕರಿಸಿ, ಸ್ನೇಹಿತರ ಜೊತೆ ನಗಾಡಿ, ಮತ್ತೆ ಅದ್ಯಯನಕ್ಕೆ ಕೂತಲ್ಲಿ ಕಲಿಕೆ ಸುಲಬವಾಗುತ್ತದೆ. ಓದಿದ್ದು ಮನನವಾಗುತ್ತದೆ. ಇಂತಹ ಕಲಿಕೆಯ ತಂತ್ರಗಾರಿಕೆಯನ್ನೇ ಪೊಮೊಡೊರೊ ತಂತ್ರಗಾರಿಕೆ ಎನ್ನುವುದು. ಏನಿದು ಪೊಮೊಡೊರೊ ತಂತ್ರಗಾರಿಕೆ? ಇದರಿಂದ ಕಲಿಕೆ ಹೇಗೆ ಸುಲಬವಾಗುತ್ತದೆ? ಇದನ್ನು ಯಾರು ಬಳಸಬಹುದು? ಎಲ್ಲಾ ತರಗತಿಯ ಮಕ್ಕಳಿಗೆ ಇದು ಅನ್ವಯವಾಗುತ್ತದೆಯೇ?

ಪೊಮೊಡೊರೊ ತಂತ್ರವು ಮೂಲವಾಗಿ ಸಮಯದ ನಿರ‍್ವಹಣಾ ವ್ಯವಸ್ತೆಯಾಗಿದೆ. ಇದನ್ನು 1980ರಲ್ಲಿ ಅಬಿವ್ರುದ್ದಿ ಪಡಿಸಿದವ ಪ್ರಾನ್ಸಿಸ್ಕೋ ಸಿರಿಲ್ಲೋ. ಇದರ ಮೂಲ ಮಂತ್ರ ವಿದ್ಯಾರ‍್ತಿಗಳು, ತಮಗಿರುವ ಸಮಯವನ್ನು ಪೂರ‍್ಣವಾಗಿ ಸದುಪಯೋಗ ಮಾಡಿಕೊಳ್ಳುವುದು. ತಮ್ಮ ಓದಿಗೆ ಮೀಸಲಿರುವ ಸಮಯವನ್ನು ಸಮ ಬಾಗಗಳಾಗಿ ವಿಂಗಡಿಸಿ, ಮದ್ಯೆ ವಿರಾಮಕ್ಕೆ ಸಮಯ ನೀಡುವುದೇ ಇದರ ಪ್ರಮುಕ ಅಂಶ. ಪೊಮೊಡೊರೊ ಎಂದರೇನು? ಈ ಹೆಸರು ಬರಲು ಕಾರಣವೇನು? ಇದನ್ನು ಅಬಿವ್ರುದ್ದಿಗೊಳಿಸಿದ ಪ್ರಾನ್ಸಿಸ್ಕೋ ಸಿರಿಲ್ಲೋ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಸಮಯವನ್ನು ನಿಗದಿಗೊಳಿಸಲು ಉಪಯೋಗಿಸುತ್ತಿದ್ದ ಗಡಿಯಾರ ‘ಟೊಮೊಟೊ’ ಮಾದರಿಯಲ್ಲಿ ಇತ್ತಂತೆ. ಇಟಾಲಿಯನ್ ಬಾಶೆಯಲ್ಲಿ ಪೊಮೊಡೊರೊ ಎಂದರೆ ‘ಟೊಮೆಟೊ’. ಹಾಗಾಗಿ ಸಮಯದ ನಿರ‍್ವಹಣೆಗೆ ಆತ ಇದೇ ಹೆಸರನ್ನು ಕೊಟ್ಟ. ಪೊಮೊಡೊರೊ ತಂತ್ರದಲ್ಲಿ 10 ಅತವಾ 15 ಅತವಾ 20 ಅತವಾ 25 ಹೀಗೆ ತಮಗೆ ಲಬ್ಯವಿರುವ ಸಮಯವನ್ನು ವಿಬಾಗಿಸಿಕೊಂಡು ಓದುವುದು. ನಿಗದಿತ ಸಮಯ ಓದಿದ ನಂತರ ಐದು ಅತವಾ ಹತ್ತು ನಿಮಿಶ ಪೂರ‍್ಣ ವಿರಾಮ ಪಡೆಯುವುದು. ಇದರಿಂದ ಮನಸ್ಸಿನ ಆಯಾಸ ಪರಿಹಾರವಾಗುತ್ತದೆ. ನಂತರ ಮತ್ತೆ ಓದನ್ನು ಮುಂದುವರೆಸುವುದು. ವಿದ್ಯಾರ‍್ತಿಗಳು ತಾವು ಓದುತ್ತಿರುವ ಇಯತ್ತೆಯ ಮೇಲೆ, ತಮಗಿರುವ ಓದಿನ ಹೊರೆಯ ಮೇಲೆ ಸಮಯದ ವಿಬಾಗವನ್ನು ನಿರ‍್ಣಯಿಸಿಕೊಳ್ಳಬಹುದು. ಹಾಗೆಯೇ ವಿಶಯದ ಕಟಿಣತೆಯ ಆದಾರದ ಮೇಲೆ ವಿರಾಮದ ಸಮಯದ ನಿಗದಿ ಸಹ ಮಾಡಿಕೊಳ್ಳಬಹದು.

ಇನ್ನೊಂದು ಅತಿ ಮುಕ್ಯವಾದುದು ಮಕ್ಕಳಿಗೆ ಚಿತ್ತಚಾಂಚಲ್ಯವಿಲ್ಲದ ಸ್ತಳದ ಆಯ್ಕೆ. ಓದಲು ಕುಳಿತಾಗ ಅವರು ಓದಿನ ಬಗ್ಗೆ ಸಂಪೂರ‍್ಣ ಏಕಾಗ್ರತೆ ಹೊಂದಿರಬೇಕು. ಅಂತಹ ವಾತಾವರಣದ ಸ್ರುಶ್ಟಿ ಬಹುಉಪಯೋಗಿ. ನಿಶ್ಯಬ್ದ ಹಾಗೂ ಕುಳಿತು ಓದುವ ಸ್ತಳ ಕಸದಿಂದ ಮುಕ್ತ ವಾತಾವರಣ ಓದಿಗೆ ಅತ್ಯಂತ ಸಹಕಾರಿ. ಟಿವಿಯಾಗಲಿ, ಶಬ್ದಮಾಲಿನ್ಯವಾಗಲಿ ಇದ್ದಲ್ಲಿ, ಏಕಾಗ್ರತೆ ಕಾಪಾಡಿಕೊಳ್ಳುವುದು ಕಶ್ಟ. ಅದರೂ ಸಹ ಅದ್ಯಯನಿಗಳು ವ್ಯಯುಕ್ತಿಕವಾಗಿ ಬೇರೆ ಬೇರೆಯದೇ ಆದ್ಯತೆಯನ್ನು ಹೊಂದಿರುತ್ತಾರೆ. ಕೆಲವರಿಗೆ ರೆಡಿಯೋ ಗುನುಗುಟ್ಟುತ್ತಲಿರಬೇಕು, ಮತ್ತೆ ಕೆಲವರು ಮದ್ಯೆ ಮದ್ಯೆ ಹಾಡನ್ನು ಹಾಡಿಕೊಳ್ಳುತ್ತಾ ಓದುತ್ತಾರೆ. ಓದಿಗೆ ಅವಶ್ಯವಿರುವ ವಸ್ತುಗಳನ್ನು ಮಾತ್ರ ವಿದ್ಯಾರ‍್ತಿಗಳು ಓದಿನ ಸ್ತಳದಲ್ಲಿ ಹೊಂದಿರುವುದು ಅವಶ್ಯಕ. ಇದನ್ನು ಪಾಲಿಸುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ಹೊರತಾದ ವಸ್ತುವಿದ್ದಲ್ಲಿ ಉದಾಹರಣೆಗೆ ಐಪಾಡ್, ಮೊಬೈಲ್, ಅವರ ಗಮನ ಅತ್ತ ಹೆಚ್ಚು ಸೆಳೆಯುತ್ತದೆ. ವಿದ್ಯಾರ‍್ಜನೆಯ ಕಡೆ ಗಮನ ಕಡಿಮೆಯಾಗುತ್ತದೆ. ಅದ್ಯಯನ ಯಾವಾಗಲೂ ಬಹಳ ಗಂಬೀರ ಸ್ವರೂಪದ್ದು. ಕಲಿಕೆಯಲ್ಲಿ ಮೋಜು ಬೆರೆತರೆ, ಮಕ್ಕಳ ಮನಸ್ಸಿನಲ್ಲಿ ಅದು ಬೇಗನೆ ಅಚ್ಚಾಗುತ್ತದೆ. ಅವರವರಲ್ಲೇ ಪ್ರಶ್ನೋತ್ತರಗಳನ್ನು ಮಾಡಿಕೊಳ್ಳುವಂತೆ ಪ್ರೇರೇಪಿಸಿದರೆ ಅವರಲ್ಲಿ ಹುದುಗಿರುವ ವಿಚಾರಗಳು ಹೊರಹೊಮ್ಮುತ್ತವೆ. ಅದರೊಂದಿಗೆ ಕಲಿಕೆಯೂ ಸುಲಬವಾಗುತ್ತದೆ. ಇದನ್ನೇ ವಿಚಾರ ವಿನಿಮಯ ಎನ್ನುವುದು. ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚುತ್ತದೆ. ಯೋಚಿಸುವ ಪರಿದಿಯೂ ಸಹ ವಿಶಾಲವಾಗುತ್ತಾ ಹೋಗುತ್ತದೆ. ಇದು ಸಕಾರಾತ್ಮಕ ಬೆಳವಣಿಗೆ.

ಗುಂಪು ಅದ್ಯಯನದಲ್ಲಿ ತೋರುಬಿಲ್ಲೆ (flashcard) ಬಳಸುವುದು ಬಹಳ ಪರಿಣಾಮಕಾರಿ. ಇವುಗಳನ್ನೂ ಸಹ ವಿದ್ಯಾರ‍್ತಿಗಳೇ ರಚಿಸುವಂತೆ/ತಯಾರಿಸುವಂತೆ ಪ್ರೋತ್ಸಾಹಿಸಬೇಕು. ತೊರುಬಿಲ್ಲೆ ರಚಿಸಲು ಆ ವಿಶಯದ ಬಗ್ಗೆ ಸಂಪೂರ‍್ಣ ಜ್ನಾನವಿದ್ದಲ್ಲಿ ಮಾತ್ರ ಸಾದ್ಯ. ಒಬ್ಬಬ್ಬೊಬ್ಬರು ಒಂದೊಂದು ವಿಶಯವನ್ನು ತೆಗೆದುಕೊಂಡು ತೋರುಬಿಲ್ಲೆಯನ್ನು ರಚಿಸಿ, ಅದನ್ನು ಮತ್ತೊಬ್ಬರಿಗೆ ವಿಶದಪಡಿಸಿದಲ್ಲಿ ಇನ್ನೂ ಹೆಚ್ಚು ಪರಿಣಾಮಾಕಾರಿಯಾಗಲಿದೆ. ಅಂತಿಮ ಗೋಲಿನ ನಿರ‍್ಣಯ ಹಾಗೂ ಅದರ ಸ್ಪಶ್ಟ ಕಲ್ಪನೆ ಯಶಸ್ಸಿನ ಕಲಿಕೆಯ ಪ್ರಮುಕ ಲಕ್ಶಣ. ಇದನ್ನು ಸಾಕಾರಗೊಳಿಸಲು ಅವಶ್ಯವಿರುವ ಹಾದಿಯ ಪಟ್ಟಿಯನ್ನು ತಯಾರಿಸಲು ಮಕ್ಕಳಿಗೆ ತಿಳಿಸಿ. ತಯಾರಾದ ಎಲ್ಲರ ಪಟ್ಟಿಯನ್ನು ಹಿಡಿದು ಕೂಲಂಕುಶವಾಗಿ ಪರಿಶೀಲಿಸಿ ಅದರಲ್ಲಿನ ಅತ್ಯುತ್ತಮ ಅಂಶಗಳನ್ನು ಕ್ರೋಡೀಕರಿಸಿ ನೀಡಿ, ಅದನ್ನು ಅನುಸರಿಸಲು ಉತ್ತೇಜಿಸಬೇಕು. ಇದರ ಪಲಿತಾಂಶ ನಿಜಕ್ಕೂ ಅಚ್ಚರಿಯಾಗುತ್ತದೆ. ಕೆಲವು ಮಕ್ಕಳು ಓದಿನ ಬಗ್ಗೆ ಅಸಡ್ಡೆ ತೋರುವುದು ಉಂಟು. ಅಂತಹ ಮಕ್ಕಳನ್ನು ‘ಯಾವುದೇ ಕಾರಣಕ್ಕೂ ದಿನಬೆಳೆಗಾಗುವುದರೊಳಗೆ ಬದಲಾವಣೆ ಸಾದ್ಯ’ ಎಂಬ ಅಂಶವನ್ನು ಇಟ್ಟುಕೊಳ್ಳಬೇಡಿ. ಇದು ಸಾದ್ಯವಿಲ್ಲದ್ದು. ಅವರಿಗೆ ತಾವು ಬೋದಿಸುತ್ತಿರುವ ವಿಶಯವನ್ನು ಅರಿಯಲು ಸಾಕಶ್ಟು ಸಮಯಾವಕಾಶ ನೀಡಿ. ಒಮ್ಮೆ ಅವರುಗಳು ಸರಿದಾರಿಗೆ ಬಂದರೆ, ನಂತರ ಅವರನ್ನು ತಿದ್ದಲು, ಮುಂದಕ್ಕೆ ಕೊಂಡೊಯ್ಯಲು ಬಲು ಸುಲಬ.

ವಿದ್ಯಾರ‍್ತಿಗಳ ಸಾಮರ‍್ತ್ಯವನ್ನು ಅರಿತು ಅದರಂತೆ ನಡೆಯುವುದು ಉತ್ತಮ ಶಿಕ್ಶಕರ ಜವಾಬ್ದಾರಿ. ವಿದ್ಯಾರ‍್ತಿಗಳನ್ನು ಗಮನಿಸಿದರೆ ಅವರಲ್ಲಿ ಕೆಲವರು ಸೊಂಬೇರಿಗಳಂತೆ ಕಂಡು ಬಂದರೆ ಮತ್ತೆ ಕೆಲವರು ಕಲಿಯುತ್ತಿಲ್ಲ ಎನಿಸುತ್ತದೆ. ಮತ್ತೆ ಕೆಲವರು ತಿಳಿಸಿದ ವಿಶಯವನ್ನು ಸರಿಯಾದ ರೀತಿಯಲ್ಲಿ ಗ್ರಹಿಸುತ್ತಿಲ್ಲ ಅನಿಸಬಹುದು. ಅವರುಗಳು ನಡೆದು ಬಂದ ಹಾದಿಯನ್ನು ಗಮನಿಸಿ ಅದಕ್ಕೆ ತಕ್ಕಂತೆ, ಸರಿಯಾದ ಮಾರ‍್ಗವನ್ನು ಅವರುಗಳಿಗಾಗಿ ತಯಾರುಮಾಡಿ ತನ್ಮೂಲಕ ಅವರಿಗೆ ಕಲಿಕೆಯಲ್ಲಿ ಶ್ರದ್ದೆ ಬರುವಂತೆ ಮಾಡಬಹುದು. ಕೊನೆಯದಾಗಿ ಮಕ್ಕಳಲ್ಲಿ ಓದಿದ್ದು ತಲೆಯಲ್ಲಿ ಉಳಿಯಬೇಕಾದಲ್ಲಿ, ಮಕ್ಕಳೇ ಶಿಕ್ಶಕರಾಗುವುದು ಅತ್ಯುತ್ತಮ ಮಾರ‍್ಗ. ಮಕ್ಕಳು ತಾವು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸಲು ಸೂಚಿಸುವುದೇ ಈ ಕ್ರಮ. ಇದರಿಂದ ಕಲಿತಿರುವವನಿಗೆ, ಇನ್ನೂ ಹೆಚ್ಚು ಮನದಟ್ಟಾಗುವುದರ ಜೊತೆಗೆ ತಾನು ತಪ್ಪಿದ್ದಲ್ಲಿ, ಎಲ್ಲಿ ತಪ್ಪಿದ್ದೇನೆ? ಎಂಬ ಅರಿವು ಸಹ ಬರುತ್ತದೆ. ಅದನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ. ಒಬ್ಬೊಬ್ಬರು ಒಂದೊಂದು ವಿಶಯವನ್ನು ಮತ್ತೊಬ್ಬರಿಗೆ ಬೋದಿಸಿದ ನಂತರ ವಿಶಯವನ್ನು ಬದಲಾಯಿಸಬೇಕು. ಇದರಿಂದ ಎಲ್ಲರೂ ಎಲ್ಲಾ ವಿಶಯವನ್ನೂ ಕಲಿಯಲು ಶಕ್ತರಾಗುತ್ತಾರೆ.

ಮಕ್ಕಳ ಈ ಚಟುವಟಿಕೆಯನ್ನು ಅದ್ಯಯನ ಮಾಡಿದ ಒಂದು ವಿಶ್ವವಿದ್ಯಾಲಯ ಓದಿನಿಂದ ಕಲಿಯುವುದು ಶೇಕಡಾ ಹತ್ತಾದರೆ, ಕೇಳುವುದರಿಂದ ಕಲಿಯುವುದು ಶೇಕಡಾ 20, ಅದನ್ನೇ ನೋಡಿದಲ್ಲಿ ತಲೆಯಲ್ಲಿ ಉಳಿಯುವುದು ಶೇಕಡಾ 30, ನೋಡಿ ಹಾಗೂ ಕೇಳಿದಲ್ಲಿ ಶೇಕಡಾ 50, ಇತರರೊಂದಿಗೆ ಚರ‍್ಚಿಸಿದಲ್ಲಿ ಶೇಕಡಾ 70, ಅದನ್ನು ತಾನೇ ಅನುಬವಿಸಿದರೆ ಶೇಕಡಾ 80 ಹಾಗೂ ಇತರರಿಗೆ ಕಲಿಸಿದರೆ ಶೇಕಡಾ 95. ಇಶ್ಟೆಲ್ಲಾ ಗಮನಿಸಿದ ನಂತರ ಉತ್ತಮ ಪದ್ದತಿ ಅನಿಸುವುದು, ಒಬ್ಬರಿಗೊಬ್ಬರು ಕಲಿಸುವುದು. ವಿದ್ಯಾರ‍್ತಿಗಳಿಂದ ವಿದ್ಯಾರ‍್ತಿಗಳು ಕಲಿಯುವುದರಿಂದ, ತಿಳುವಳಿಕೆಯ ಜ್ನಾನವು ಮನದಲ್ಲಿ ಉಳಿಯುವ ಸಾದ್ಯತೆ ಅತಿ ಹೆಚ್ಚು. ಇದಕ್ಕೆ ಮೂಲ ಕಾರಣವೆಂದರೆ ಮಕ್ಕಳು ತಮ್ಮ ಪರಿದಿಯಲ್ಲೇ ಯೋಚಿಸಿ, ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಕಾರಣ, ಈ ರೀತಿಯ ಕಲಿಕೆ ಅವರುಗಳಿಗೆ ಸುಲಬ ತುತ್ತಾಗುತ್ತದೆ.

(ಚಿತ್ರ ಸೆಲೆ: wikimedia

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: