ಮಗು ಮಾನವ ಕುಲದ ಕುಸುಮ

– ಅಮುಬಾವಜೀವಿ.

ಮಕ್ಕಳು, children

ಮಗು ಮಾನವ ಕುಲದ ಚಂದದ ಕುರುಹು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಬವಿಶ್ಯದ ಮನುಕುಲಕೆ ಮುನ್ನುಡಿ. ಮಗುವಿನ ಬಾಲ್ಯವನ್ನು ಅತ್ಯಂತ ಸಂಸ್ಕಾರಯುತವಾಗಿ, ಅಶ್ಟೇ ಜವಾಬ್ದಾರಿಯುತವಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿ ಪೋಶಕರು ಹಾಗೂ ಶಿಕ್ಶಕರದ್ದಾಗಿದೆ.

ಪ್ರತಿಯೊಂದು ಮಗುವೂ ಕೂಡ ಅಗಾದ ಪ್ರತಿಬೆಯನ್ನು ತನ್ನೊಳಗೆ ಇರಿಸಿಕೊಂಡೇ ಜನ್ಮ ಪಡೆದಿರುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ ಆ ಪ್ರತಿಬೆ ಅನಾವರಣಗೊಳ್ಳುತ್ತದೆ. ಇಲ್ಲವಾದಲ್ಲಿ ಅದು ಅಲ್ಲೇ ಕಮರಿಹೋಗುತ್ತದೆ. ಬವಿಶ್ಯದ ಮನುಕುಲದ ಬವಿಶ್ಯ ಏನಾಗಬೇಕು ಎಂಬುದರ ಪರಿಣಾಮ ಇಂದು ನಾವು ಮಕ್ಕಳನ್ನು ಬೆಳೆಸುವ ರೀತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಎಲ್ಲರೂ ಸೇರಿ ಮಕ್ಕಳ ಉತ್ತಮ ಬವಿಶ್ಯ ರೂಪಿಸುವಲ್ಲಿ ಮೌಲ್ಯಯುತ ಬದುಕನ್ನು ಕಟ್ಟಿಕೊಡಬೇಕಾದುದು ಇಂದಿನ ಅಗತ್ಯ ಮತ್ತು ಅನಿವಾರ‍್ಯ. ನಮ್ಮ ಜೀವನ ಮೌಲ್ಯಯುತವಾಗಿದ್ದಾಗ ಮಾತ್ರ ಮಕ್ಕಳು ಅದನ್ನು ಅನುಸರಿಸುವಂತೆ ನಾವು ಮಾರ‍್ಗದರ‍್ಶನ ಮಾಡಬಹುದು. ನಾವೇ ಹಾದಿ ತಪ್ಪಿದರೆ ಮಕ್ಕಳು ಬವಿಶ್ಯದ ಗತಿಯನ್ನೇ ಬದಲಿಸಿಕೊಂಡು ಬಿಡುವ ಅಪಾಯ ಇದೆ.

“ಮಕ್ಕಳಿಸ್ಕೂಲು ಮನೇಲಲ್ವೇ” ಎಂಬ ಮಾತಿನಂತೆ ಮಕ್ಕಳಿಗೆ ಮನೆಯೇ ಮೊದಲ ಪಾಟಶಾಲೆ. ಇಲ್ಲಿ ಕಲಿಯುವ ಬಾಲ್ಯದ ಅನುಬವಗಳೇ ಮೇರು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಇಲ್ಲಿನ ಕೊರತೆಗಳು ಒಮ್ಮೊಮ್ಮೆ ಮಗುವನ್ನು ಹಾದಿ ತಪ್ಪಿಸುವ ಅಪಾಯವಿದೆ. ಹಾಗಾಗಿ ಪ್ರತಿಯೊಬ್ಬರೂ ಆ ಕೊರತೆಯನ್ನು ನಿವಾರಿಸಲು, ಮಕ್ಕಳ ಗುರಿಯ ಗತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತವಾದ ಮಾರ‍್ಗದರ‍್ಶನ ಮಾಡಬೇಕು. ಹೆತ್ತವರು, ಪೋಶಕರು, ನೆರೆಹೊರೆ, ಸಮಾಜದ ಪ್ರತಿಯೊಂದು ಹಂತದಲ್ಲೂ ಅವರನ್ನು ತರಬೇತಿಗೊಳಿಸಿದಾಗ ಮಾತ್ರ ಮಕ್ಕಳ ಬವಿಶ್ಯ ಉಜ್ವಲವಾಗಿರುತ್ತದೆ.

ಶಾಲಾ ಪರಿಸರ ಸ್ನೇಹಮಯವಾದ, ಆಹ್ಲಾದಕರವಾದ, ಆಕರ‍್ಶಣೀಯವಾಗಿದ್ದಾಗ ಮಾತ್ರ ಮಗು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತದೆ. ಬಯದ ವಾತಾವರಣ, ಅಸುರಕ್ಶತೆ, ಅತಿಯಾದ ಶಿಸ್ತು ಅವರ ಮನಸನ್ನು ಗಾಸಿಗೊಳಿಸಿದರೆ ಆ ಮಗು ಕಂಡಿತ ಉತ್ತಮ ವ್ಯಕ್ತಿ ಆಗಲ್ಲ. ಮಕ್ಕಳು ತರಗತಿಯ ಚಟುವಟಿಕೆಗಳಲ್ಲಿ ಸ್ವಾಬಾವಿಕವಾಗಿ ಮತ್ತು ಸ್ವಚ್ಚಂದವಾಗಿ ಕಲಿಯುವಂತಹ ವಾತಾವರಣ ಕಲ್ಪಿಸಿ ಕೊಡಬೇಕಾದ ಹೊಣೆಗಾರಿಕೆ ಶಿಕ್ಶಕರು ಹಾಗೂ ಸಂಬಂದಿತ ವ್ಯವಸ್ತೆಯ ಮೇಲೆ ಇದೆ. ಆದ್ದರಿಂದ ಇಲ್ಲಿ ಯಾರೂ ಯಾವ ಕಾರಣಕ್ಕೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ತುಂಬಾ ಶ್ರದ್ದೆಯಿಂದ ನಿಬಾಯಿಸಬೇಕು. ಮಕ್ಕಳ ಬಾಲ್ಯ ಅರಳಬೇಕೇ ಹೊರತು ಕೆರಳಬಾರದು, ಕೊರಗಬಾರದು. ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ತೆಯ ಮೂಲಕ ಮಕ್ಕಳ ಬವಿಶ್ಯವನ್ನು ರೂಪಿಸಬೇಕು.

ಬಾಲ್ಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು. ಅದು ಹೆಣ್ಣಿರಲಿ, ಗಂಡಿರಲಿ  ಮಗುವಿನ ಬಾಲ್ಯವನ್ನು ಕಸಿದುಕೊಳ್ಳುವ, ಕಮರಿಸುವ, ಅವರ ಆಸೆ-ಆಕಾಂಕ್ಶೆಗಳಿಗೆ ತಣ್ಣೀರೆರಚುವ, ಆಸಕ್ತಿಯನ್ನು ಕುಂದಿಸುವ ಕೆಲಸ ಆಗಬಾರದು. ಎಳವೆಯಲ್ಲಿಯೇ ಮಗುವಿನ ಆಸಕ್ತಿ ಅಬಿರುಚಿಗಳನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಒದಗಿಸಿದ್ದೇ ಆದರೆ ಈ ಸಮಾಜಕ್ಕೆ ಒಬ್ಬ ಅದ್ಬುತ ವ್ಯಕ್ತಿಯನ್ನು ಕೊಡುಗೆಯಾಗಿ ನೀಡುವುದರಲ್ಲಿ ಅನುಮಾನವಿಲ್ಲ. ಮಕ್ಕಳಿಗೆ ಸೋಲುಗಳನ್ನು ಗೆಲುವಾಗಿಸಿಕೊಳ್ಳುವ, ಅವಮಾನಗಳನ್ನು ಅಬಿಮಾನವಾಗಿಸಿಕೊಳ್ಳುವ ಮನಸ್ತಿತಿಯನ್ನು ಬೆಳೆಸಬೇಕು. ಈ ಸಮಾಜಕ್ಕೆ ತನ್ನ ಅಗತ್ಯ ಏನು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ನೋವು, ದುಕ್ಕ, ಕಶ್ಟ, ಹಿಂಸೆ, ಸೋಲು, ಅವಮಾನ, ಅಸಮಾದಾನ, ಅಸಮಾನತೆ, ಅಮಾನವೀಯತೆ ಮುಂತಾದ ಸಂದರ‍್ಬಗಳಲ್ಲಿ ಹೇಗೆ ವರ‍್ತಿಸಬೇಕು, ಅವುಗಳನ್ನು ತನ್ನ ಬದುಕಿನಲ್ಲಿ ಹೇಗೆ ದಾಟಿ ಮುಂದೆ ಹೋಗಬೇಕೆಂಬುದನ್ನು ಕಲಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ.

ಮಕ್ಕಳು ಮಾನವ ತೋಟದ ಸುಂದರ ಕುಸುಮಗಳು. ಅಕ್ಕರೆಯಿಂದ ಅವನ್ನು ಸಂರಕ್ಶಿಸುವ,ಸಂಸ್ಕಾರಯುತವಾಗಿ ಬೆಳೆಸುವ, ಬೆಂಬಲಿಸುವ ಮನಸ್ತಿತಿ ನಮ್ಮದಾಗಬೇಕು. ಹೂವು ಬಾಡದಂತೆ ಸದಾ ತನ್ನ ತಾಜಾ ತನವನ್ನು ಜಗತ್ತಿಗೆ  ಉಣಬಡಿಸಿ ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಕೀಳುವ ಕೈಗಳಿಂದ ರಕ್ಶಿಸಬೇಕು. ದಮನಗೈಯುವ ವ್ಯವಸ್ತೆಯಿಂದ ದೂರವಿರಿಸಬೇಕು. ಸಾಮಾಜಿಕ ಪಿಡುಗುಗಳು ಬಾದಿಸದಂತೆ ಎಚ್ಚರಿಕೆ ವಹಿಸಬೇಕು. ಆಗ ಮಾತ್ರ ಮನಕುಲ ಸುಬಿಕ್ಶವಾಗಿ, ಸುಬದ್ರವಾಗಿ, ಸಂತ್ರುಪ್ತಿಯಿಂದ ಬದುಕಲು ಸಾದ್ಯವಾಗುವುದು.

ಎಲ್ಲಾ ಮಕ್ಕಳನ್ನು ಆರೋಗ್ಯವಂತರಾಗಿ, ಸುಶಿಕ್ಶಿತರನ್ನಾಗಿ ಮಾಡಿ ಸಮಾಜದ ಅಗತ್ಯಗಳಿಗೆ ತಕ್ಕಂತೆ ಬೆಳೆಸಿದಾಗ ಮಾತ್ರ ಆರೋಗ್ಯಪೂರ‍್ಣ ಸಮಾಜದ ನಿರ‍್ಮಾಣ ಸಾದ್ಯ. ಈ ಸಂದರ‍್ಬದಲ್ಲಿ ಅಂತಹ ಮಹೋನ್ನತ ಕಾರ‍್ಯ ನಿರ‍್ವಹಿಸುವ ಮೂಲಕ ಮನುಕಲದ ದಾವಂತದ ಬದುಕಿನಲ್ಲಿ ದಾರಿ ತಪ್ಪಿ ದಂಗುಬಡಿಸುವ ಸ್ತಿತಿ ನಿರ‍್ಮಾಣ ಆಗದಂತೆ ಎಚ್ಚರ ವಹಿಸುವುದು ನಮ್ಮ ಆದ್ಯ ಕರ‍್ತವ್ಯವಾಗಿದೆ.

(ಚಿತ್ರ ಸೆಲೆ: pixabay.com

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *