ಮಕ್ಕಳ ಕತೆ: ಕಳ್ಳನಿಗೆ 3 ಶಿಕ್ಶೆಗಳು
ನಾಗರನು ಇರುಳು ನಡೆದು ದಟ್ಟಕಾಡನ್ನು ದಾಟಿ ಕಟಕಸಾವಿರ ಹಳ್ಳಿ ತಲುಪಿದ. ಆಗ ನಡು ಇರುಳು ಆಗಿತ್ತು. ದೂರದಲ್ಲಿ ನರಿಗಳು ಕೂಗುತ್ತಿದ್ದವು, ಗೂಬೆಗಳು ಗುಟುರು ಹಾಕುತ್ತಿದ್ದವು. ಕಟಕಸಾವಿರ ಹಳ್ಳಿಗೆ ತುಂಬಾ ದೊಡ್ಡವನಾಗಿದ್ದ ಬರಮಣ್ಣನ ಮನೆಗೆ ಹಿಂದಿನಿಂದ ನುಗ್ಗಿದ. ಅಲ್ಲಿಂದ ಮೆಲ್ಲಗೆ ಮನೆಯ ಮಾಡನ್ನು ಏರಿ ಅಲ್ಲಿಂದ ಸಪ್ಪಳವಾಗದಂತೆ ಹೆಂಚುಗಳನ್ನು ಸರಿಸಿ, ಮನೆಯ ಒಳಗೆ ಇಳಿದು, ಮನೆಯಿಂದ ಬಂಗಾರ ಬೆಳ್ಳಿ ಕದ್ದುಕೊಂಡ. ಒಳಗೆ ಬಂದ ದಾರಿಯಿಂದಲೇ ಮತ್ತೆ ಮೇಲಕ್ಕೆ ಏರಿ ಹೊರಗೆ ಬಂದು ಕಾಡಿನ ಕಡೆಗೆ ಓಡಿದ.
ಸಾವಿರಹಳ್ಳಿ ಊರಿನ ಕೊನೆಗೆ ಯಾರದೋ ಸೌತೆಕಾಯಿಯ ಹೊಲವಿತ್ತು. ಅಲ್ಲಿ ಹುಲಿಯನ್ನು ಹಿಡಿಯಲು ಕುರಿಯನ್ನು ಕಟ್ಟಿದ್ದರು. ಅದರ ಸುತ್ತಮುತ್ತ ಇಟ್ಟಿದ್ದ ಒಂದು ಕಾಲುಬೋನಿನಲ್ಲಿ ನಾಗರನು ಕಾಲು ಇಟ್ಟ. ಅಲ್ಲಿಗೆ ಅವನ ಕಾಲು ಬೋನಿನ ಬಾಯಲ್ಲಿ ಸಿಕ್ಕಿಬಿದ್ದಿತು. ನಾಗರನು ಅದನ್ನು ಬಿಡಿಸಿಕೊಳ್ಳಲು ಪರದಾಡಿದ ಆದರೆ ಆಗಲಿಲ್ಲ. ನಾಗರನು ತಿಣುಕಾಡುವ ಸಪ್ಪಳ ಕೇಳಿದ ಕುರಿ, ಹುಲಿಯೇ ಬಂದಿತೆಂದು ಕಿರುಚತೊಡಗಿತು. ಕಡಲೆ ಹೊಲದಲ್ಲಿ ಮಂಚಿಕೆ ಹಾಕಿ ಅದರ ಮೇಲೆ ಮಲಗಿದ್ದ ಒಕ್ಕಲಿಗರು ಹುಲಿ ಬೋನಿಗೆ ಬಿತ್ತು ಎಂದು ಕತ್ತಿ ಕುಡಗೋಲು ದೀವಟಿಗೆ ಹಿಡಿದುಕೊಂಡು ಕುರಿಯತ್ತ ಓಡಿಬಂದರು. ಆದರೆ ಅಲ್ಲಿ ಈ ನಾಗರನೆಂಬ ಕಳ್ಳನನ್ನು ಕಂಡರು. ಅವನ ಬಳಿ ಕದ್ದು ತಂದ ಬಂಗಾರ ಬೆಳ್ಳಿ ಇದ್ದ ಗಂಟು ಕಾಣಿತು. ಅವನು ಕಳ್ಳನೇ ಅಂತ ಗಟ್ಟಿ ಮಾಡಿ ಅವನ ಕಾಲನ್ನು ಬೋನಿನಿಂದ ಬಿಡಿಸಿ, ಹಗ್ಗಗಳಿಂದ ಅವನ ಕೈಕಾಲು ಕಟ್ಟಿದರು. ಅಲ್ಲಿಗೆ ಬೆಳಕು ಹರಿದು ಮುಂಜಾನೆ ಆಗಹತ್ತಿತು.
ನಾಗರನನ್ನು ಎತ್ತಿಕೊಂಡು ಗಂಟಿನ ಜೊತೆಗೆ ಊರಿಗೆ ಬಂದು ಒಂದು ಬೇವಿನಮರಕ್ಕೆ ಕಟ್ಟಿದರು. ಊರಿನ ಎಲ್ಲ ಚಿಕ್ಕ-ದೊಡ್ಡ ಗಂಡಸು-ಹೆಂಗಸು ಮಕ್ಕಳು ಮಂದಿ ಅಲ್ಲಿಗೆ ಒಬ್ಬೊಬ್ಬರಾಗಿ ಬಂದು ಸೇರಿದರು. ಮಂದಿಯೆಲ್ಲಾ ಕಳ್ಳನನ್ನು ಬಡಿದು ಹಾಕಿ ಅಂತ ಕೂಗುತ್ತಿದ್ದರು. ಊರಿನಲ್ಲಿ ಕಳ್ಳತನವಾದ ಮನೆಯವರೆಲ್ಲಾ ಇವನೇ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದು ಅಂತ ಬಯ್ಯತೊಡಗಿದರು. ಆಗ ಊರಿಗೆ ಹಿರಿಯರಾಗಿದ್ದ ಮೂವರು ಮುದುಕರು ಬಂದರು. ಅವರೆಲ್ಲರೂ ನೂರು ಮಳೆಗಾಲ ಕಂಡ ಹಿರಿಯರು. ಊರಿನ ಮಂದಿಯೆಲ್ಲಾ ಅವರ ಮಾತನ್ನು ಕೇಳುತ್ತಿದ್ದರು.
ಆ ಮೂವರು ಹಿರಿಯರು ಮುಂದೆ ಬಂದು ಮಂದಿಯನ್ನು ಸುಮ್ಮನಿರಲು ಹೇಳಿದರು. ಕಳ್ಳನ ಕಡೆಗೆ ನೋಡಿದ ಒಬ್ಬ ಹಿರಿಯ “ಇಪ್ಪತ್ತು ಚಡಿ ಏಟುಗಳು ಬೇಕೋ?” ಅಂತ ಕೇಳಿದ. ಎರಡನೇ ಹಿರಿಯ “ಐವತ್ತು ಈರುಳ್ಳಿ ತಿನ್ನುತ್ತಿಯೋ?” ಎಂದನು. ಮೂರನೆಯ ಹಿರಿಯ “ನೂರು ಬೆಳ್ಳಿ ದುಡ್ಡುಗಳ ದಂಡ ಕಟ್ಟುತ್ತಿಯೋ?” ಎಂದನು. ನಾಗರನು ತಟ್ಟನೆ ಈರುಳ್ಳಿ ತಿನ್ನುತ್ತೇನೆ ಎಂದ. ಮಂದಿ ಐವತ್ತು ಈರುಳ್ಳಿ ತಂದು ಕಳ್ಳನ ಮುಂದೆ ಇಟ್ಟರು. ಕಳ್ಳನು ನಾಲ್ಕು ಈರುಳ್ಳಿ ಗಬಗಬನೆ ತಿಂದ. ಕಣ್ಣು, ಗಂಟಲು ಹೊಟ್ಟೆ ಉರಿಯ ತೊಡಗಿದವು. ಆದರೂ ನಿಲ್ಲಿಸದೇ ಹತ್ತು ಈರುಳ್ಳಿ ತಿಂದ.
ಅಲ್ಲಿಗೆ ಕಣ್ಣಿನಿಂದ ನೀರು ಹರಿಯತೊಡಗಿ ಬಾಯಿಂದ “ಹಾ…ಹಾ…ಹಾ…” ಅಂತ ಕೂಗುತ್ತಾ ನರಳತೊಡಗಿದ. “ಹಿರಿಯರೇ ನನಗೆ ಚಡಿಯೇಟು ಕೊಡಿರಿ ನಾನು ಇನ್ನೂ ಈರುಳ್ಳಿ ತಿನ್ನಲಾರೆ” ಎಂದ. ಆಗ ಒಬ್ಬ ಕಟ್ಟಾದ ಆಳೊಬ್ಬನು ಮುಂದೆ ಬಂದು ಎತ್ತಿಗೆ ಹೊಡೆಯಲು ಬಳಸುವ ಚಡಿಯಿಂದ ರಪ್ಪ್ ರಪ್ಪ್.. ಅಂತ ಬೆನ್ನ ಮೇಲೆ ನಾಲ್ಕು ಬಾರಿಸಿದ. ಈರುಳ್ಳಿ ತಿಂದು ಬಾಯಿ ಕಣ್ಣು ಹೊಟ್ಟೆ ಉರಿಯುತ್ತಿದ್ದ ಕಳ್ಳನು ಅಯ್ಯೋ… ಅಯ್ಯೋ… ಅಂತ ಕೂಗಿದ. “ಹಿರಿಯರೇ ನಾನು ಇನ್ನೂ ಚಡಿಯೇಟು ತಾಳಲಾರೆ ನಾನು ನೂರು ದುಡ್ಡು ದಂಡ ಕಟ್ಟುತ್ತೇನೆ” ಅಂತ ಕೂಗಿ ಹೇಳಿದ. ಮೂವರು ಹಿರಿಯರು ಕಳ್ಳನ ದಡ್ಡತನಕ್ಕೆ ನಕ್ಕರು. ನಾಗರನು “ಹಿರಿಯರೇ ನನ್ನ ಬಳಿ ನೂರು ಬೆಳ್ಳಿ ದುಡ್ಡು ಇಲ್ಲ ಎಲ್ಲಿಂದ ದಂಡ ಕಟ್ಟಲಿ?” ಅಂತ ಕೇಳಿದ. ಆಗ ಹಿರಿಯರು “ಹೇಗೂ ಜೋಳದ ಒಕ್ಕಣೆ ಮಾಡುವ ಹೊತ್ತು ಬಂದಿದೆ. ನೀನು ಇವತ್ತಿನಿಂದ ಜೋಳದ ಒಕ್ಕಣೆ ರಾಶಿ ಮುಗಿಯುವವರೆಗೆ ಊರಿನ ಎಲ್ಲರ ಬಳಿ ಕೆಲಸ ಮಾಡಿ ನೂರು ದಂಡ ತೀರುವವರೆಗೆ ದುಡಿಯಬೇಕು” ಎಂದರು. ನಾಗರನು ಒಪ್ಪಿ ಹಾಗೆಯೇ ಮಾಡಿದನು.
(ಚಿತ್ರ ಸೆಲೆ: prajavani.net)
ಇತ್ತೀಚಿನ ಅನಿಸಿಕೆಗಳು