ಕೀನ್ಯಾದ ಆಲಿ ಬಾರ್ಬೂರ್ ಗುಹೆ ರೆಸ್ಟೋರೆಂಟ್
‘ಆಲಿ ಬಾಬಾ ಮತ್ತು ನಲವತ್ತು ಮಂದಿ ಕಳ್ಳರು’ ಕತೆ ಕೇಳದವರಿಲ್ಲ. ಈ ಗುಂಪು ದೋಚಿದ ನಗ ನಾಣ್ಯಕ್ಕೆ ಲೆಕ್ಕವೇ ಇಲ್ಲ. ಇಂತಹ ಕಾಲ್ಪನಿಕ ವ್ಯಕ್ತಿ ಹಾಗೂ ಆತನ ಗುಂಪು ತಾವು ಲೂಟಿ ಮಾಡಿದ ಅಪಾರ ಸಂಪತ್ತನ್ನು ಅಡಗಿಸಿ ಇಡಲು ಉಪಯೋಗಿಸಿದ ತಾಣದಂತಿರುವ ಗುಹೆಯಲ್ಲೇ ಇರುವುದು ಆಲಿ ಬಾರ್ಬೂರ್ ಗುಹೆ ರೆಸ್ಟೋರೆಂಟ್.
ಕೀನ್ಯಾದ ಡಯಾನಿ ಕರಾವಳಿಯಲ್ಲಿರುವ ಈ ನೈಸರ್ಗಿಕ ಗುಹೆ ರೆಸ್ಟೋರೆಂಟ್, ಸುತ್ತಲೂ ಮುತ್ತಿನಂತಹ ಬಿಳುಪಿನ ಮರಳ ರಾಶಿ ಹಾಗೂ ಹಚ್ಚ ಹಸುರಿನ ಕಾಡುಗಳಿಗೆ ಹೆಸರುವಾಸಿ ಸ್ತಳ. ಮತ್ತೊಂದು ವಿಚಿತ್ರ ಹಾಗೂ ಆಶ್ಚರ್ಯಕರ ಸಂಗತಿಯೆಂದರೆ ಇಲ್ಲಿನ ಹಿಂದೂ ಮಹಾಸಾಗರದ ನೀರೂ ಸಹ ಸ್ಪಟಿಕದಶ್ಟು ತಿಳಿಯಾಗಿರುವುದು. ಇವೆಲ್ಲಾ ಈ ಗುಹೆಯಿರುವ ಸ್ತಳವನ್ನು ಮತ್ತೂ ಸೌಂದರ್ಯವಾಗಿಸಿವೆ.
ಸಾವಿರಾರು ವರುಶಗಳ ಹಳೆಯ ಗುಹೆಯ ನೋಡಲು ಎರಡು ಕಣ್ಣು ಸಾಲದು
ಈ ಗುಹೆಯು ಸರಿ ಸುಮಾರು 120,000 ದಿಂದ 180,000 ವರ್ಶಗಳಶ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದು ವಿಶ್ವದ ಅನೇಕ ಐತಿಹಾಸಿಕ ಕೌತುಕಗಳಲ್ಲಿ ಒಂದು. ಈ ಗುಹೆ ಐತಿಹಾಸಿಕ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸೌಂದರ್ಯವನ್ನು ನೋಡಿದ ಪ್ರತಿಯೊಬ್ಬರೂ ಮಂತ್ರಮುಗ್ದರಾಗುತ್ತಾರೆ.
ನಾಯಿ ಹುಡುಕಲು ಹೋದವನಿಗೆ ಸಿಕ್ಕ ಗುಹೆ ಇಂದು ರೆಸ್ಟೋರೆಂಟ್!
ಈ ರೆಸ್ಟೋರೆಂಟ್ನ ಒಡೆಯ ಜಾರ್ಜ್ ಬಾರ್ಬೂರ್. 1983ನೇ ಇಸವಿಯಲ್ಲಿ ಬಾರ್ಬೂರ್ನ ನಾಯಿ ಇಲ್ಲಿನ ಪ್ರದೇಶದಲ್ಲಿ ತಪ್ಪಿಸಿಕೊಂಡಿತ್ತು. ತನ್ನ ಸಾಕು ನಾಯಿಯನ್ನು ಹುಡುಕುತ್ತಾ ಆತ ಅಲ್ಲಿನ ಕಾಡು ಮೇಡುಗಳೆನ್ನೆಲ್ಲಾ ಸುತ್ತಿದ. ತನ್ನ ಪ್ರೀತಿಯ ನಾಯಿ ಸಿಗಲೇ ಇಲ್ಲ ಆತನಿಗೆ. ಬದಲಿಗೆ ಎತ್ತರದ ಮರಗಳ ನಡುವೆ, ದಟ್ಟ ಪೊದೆಗಳಲ್ಲಿ ಹುದುಗಿದ್ದ, ನೂರಾರು, ಸಾವಿರಾರು ವರ್ಶಗಳಶ್ಟು ಹಳೆಯದಾದ, ಈಗ ವಿಶ್ವದಲ್ಲೇ ಸುಪ್ರಸಿದ್ದವಾಗಿರುವ ಈ ಗುಹೆ ಅವನ ಕಣ್ಣಿಗೆ ಬಿತ್ತು.
ಇಲ್ಲಿಗೆ ತಲುಪುವುದೂ ಒಂದು ಸಾಹಸವೇ!
ಗುಹೆಯಿರುವ ಈ ಸ್ತಳವನ್ನು ಹುಡುಕುವುದು ಒಂದು ಸಾಹಸ. ಕಾರಣ ಇದು ಇರುವ ಜಾಗ. ಸವೆಯದ, ಅತಿ ಉದ್ದವಾದ ಕತ್ತಲೆ ಕವಿದಂತಿರುವ ರಸ್ತೆಯಲ್ಲಿ, ದೀರ್ಗಕಾಲ ಪಯಣಿಸಿದಲ್ಲಿ ಮಾತ್ರ ಈ ಗುಹೆ ರೆಸ್ಟೋರೆಂಟ್ ಬಳಿ ಸೇರಲು ಸಾದ್ಯ. ದೂರದ ಪ್ರಯಾಣದಿಂದ ಬಸವಳಿದಿದ್ದರೂ ಸಹ ಅಲ್ಲಿನ ದ್ರುಶ್ಯ ನೋಡಿದಾಗ, ಆಯಾಸ ಪರಿಹಾರವಾದಂತೆ ಅನಿಸುತ್ತದೆ. ತಾಳೆ ಮರದಿಂದ ಮತ್ತು ಅಂಟಿನ ಮರದಿಂದ ನಿರ್ಮಾಣವಾಗಿರುವ ಮೇಲ್ಚಾವಣಿಯನ್ನು ನೋಡಲೇ ಕುಶಿಯಾಗುತ್ತದೆ. ಅಂಕುಡೊಂಕಾದ ಸುರಳಿಯಾಕಾರದ ಮೆಟ್ಟಿಲುಗಳನ್ನು ಬಳಸಿ ಕೆಳಗಿಳಿದರೆ, ಅದು ಬೂಗತ ಲೋಕದ ರೆಸ್ಟೋರೆಂಟ್ಗೆ ಕರೆದೊಯ್ಯುತ್ತದೆ. ಈ ಪ್ರದೇಶ ಸಮುದ್ರ ಮಟ್ಟಕ್ಕಿಂತ ಹತ್ತು ಮೀಟರ್ ಕೆಳಗಿದೆ. ಇದು ಪ್ರಾಚೀನ ನೈಸರ್ಗಿಕ ಹವಳದ ಗುಹೆ. ಕೆಲವು ಪ್ರದೇಶದಲ್ಲಿ ಈ ಗುಹೆಯು ಬಾನಿನತ್ತ ತೆರದುಕೊಳ್ಳುತ್ತದೆ. ಅಲ್ಲಿಂದ ಚಂದ್ರನ ತಂಪಾದ ಬೆಳಕು ಬಂದು ಸುತ್ತಲೂ ಪಸರಿಸುವುದರಿಂದ, ಗುಹೆಯ ಸೊಬಗನ್ನು ಮತ್ತಶ್ಟು ಹೆಚ್ಚಿಸುತ್ತದೆ. ಗುಹೆಯ ಪ್ರಮುಕ ಹೂವಿನಮಂಟಪದಲ್ಲಿನ ಮೇಣದ ದೀಪಗಳು, ಶಾಂತವಾದ ಸಮುದ್ರದ ತಂಗಾಳಿಯ ಬೀಸುವಿಕೆಗೆ ತಲೆಬಾಗಿ ನ್ರುತ್ಯಿಸುವ ದ್ರುಶ್ಯ ಕಣ್ಮನ ಸೆಳೆಯುತ್ತದೆ.
ರೆಸ್ಟೋರೆಂಟ್ನ ವಾಸ್ತು ವಿನ್ಯಾಸ ನಿಮ್ಮನ್ನು ಅಚ್ಚರಿಗೊಳಿಸದೇ ಇರದು
ಇಡೀ ರೆಸ್ಟೋರೆಂಟ್ ಅನ್ನು ಅಸಾದಾರಣ ಸ್ವಾಹಿಲಿ ಶೈಲಿಯ ವಾಸ್ತು ವಿನ್ಯಾಸದಿಂದ ಅಣಿಗೊಳಿಸಲಾಗಿದೆ. ಗುಹೆಯಲ್ಲಿ ಲಬ್ಯವಿರುವ ನೈಸರ್ಗಿಕ ರಂದ್ರಗಳಲ್ಲಿ ಅದಕ್ಕೊಪ್ಪುವ ರೀತಿಯ ಸಣ್ಣ ಸಣ್ಣ ದೀಪ ಮತ್ತು ಕೈದೀವಿಗೆಗಳನ್ನು ಇರಿಸಲಾಗಿದೆ. ಲಾಮೂ ವಿನ್ಯಾಸದ ಪೀಟೋಪಕರಣಗಳು ಮತ್ತು ಆಸನಗಳು ಬಹಳ ಆರಾಮದಾಯಕ. ಅದರ ಬಳಕೆ ಇಲ್ಲಿ ಮಾಡಲಾಗಿದೆ. ಡೈನಿಂಗ್ ಮೇಜುಗಳನ್ನು ಹಿಮಬರಿತ ಸ್ತಳದಂತೆ ಕಾಣಲು ಶುಬ್ರ ಬಿಳಿ ಬಣ್ಣದ ವಸ್ತ್ರಗಳಿಂದ ಅಲಂಕರಿಸಿದ್ದು, ಅದರ ಮೇಲೆ ಬೆಳ್ಳಿಯ ಮತ್ತು ತಳ ತಳ ಹೊಳೆಯುವ ಗಾಜಿನ ಸಾಮಾನುಗಳನ್ನು ಜೋಡಿಸಿಡಲಾಗಿದೆ. ಗುಹೆ ರೆಸ್ಟೋರೆಂಟ್ನಲ್ಲಿ ಮಾನವ ನಿರ್ಮಿತವಾದದ್ದು ಅಡುಗೆ ಮನೆ ಹಾಗೂ ಸ್ನಾನಗ್ರುಹಗಳು ಮಾತ್ರ. ಉಳಿದಂತೆ ಎಲ್ಲವೂ ಸಂಪೂರ್ಣವಾಗಿ ನೈಸರ್ಗಿಕ.
ಹಿಂದೂ ಮಹಾಸಾಗರದಲ್ಲಿ ಇದು ಇರುವುದರಿಮದ ಅನೇಕ ರೀತಿಯ ಸಮದ್ರಾಹಾರವನ್ನು ತಾಜಾವಾಗಿ, ಮನಸ್ಸಿಗೊಪ್ಪುವ ರೀತಿಯಲ್ಲಿ ಅವಶ್ಯಕತೆಗೆ ತಕ್ಕಂತೆ ತಯಾರಿಸಿ ನೀಡುವಲ್ಲಿ ಇಲ್ಲಿನ ಸಿಬ್ಬಂದಿ ಸಿದ್ದಹಸ್ತರು ಮತ್ತು ನಿಪುಣರು. ಹೀಗೆ ತಯಾರಿಸಿದ ಕಾದ್ಯಗಳನ್ನು ಗ್ರಾಹಕರಿಗೆ ತಲುಪಿಸುವುದು ನಗುಮುಕದ ಪರಿಚಾರಿಕೆಯರು. ಇಲ್ಲಿ ಸಿಗುವ ತಿನಿಸುಗಳ ವಿವರ ಅಬೂತಪೂರ್ವವಾಗಿದ್ದು, ಉದ್ದನೆಯ ಪಟ್ಟಿ ಕಾಣಸಿಗುತ್ತದೆ. ಅದರಲ್ಲಿ, ತಮಗೆ ಬೇಕಾದುದನ್ನು ಆರಿಸಲು ಗ್ರಾಹಕರು ಬಹಳ ಕಶ್ಟಪಡಬೇಕು ಹಾಗೂ ಸಮಯವನ್ನು ವಿನಿಯೋಗಿಸಬೇಕು.
ಕೀನ್ಯಾ ಸಪಾರಿಗೆ ಎಶ್ಟು ಹೆಸರುವಾಸಿಯೋ, ಈ ಗುಹೆಯ ರೆಸ್ಟೋರೆಂಟ್ ವಿಶ್ರಾಂತಿ ಪಡೆಯಲು, ವೈವಿದ್ಯಮಯ ತಿನಿಸು ಮತ್ತು ಬವ್ಯವಾದ ಬೋಜನವನ್ನು ಸವಿಯಲು ಅಶ್ಟೇ ಹೆಸರುವಾಸಿ. ಇದರಂತಹ ಅತ್ಯಂತ ಪ್ರಶಸ್ತ ಸ್ತಳ ಬೇರೆಲ್ಲೂ ಸಿಗಲಾರದು.
(ಮಾಹಿತಿ ಮತ್ತು ಚಿತ್ರ ಸೆಲೆ: inspiredtraveller.in, inhabitat.com)
ಇತ್ತೀಚಿನ ಅನಿಸಿಕೆಗಳು