ಪಿಲಿಪೈನ್ಸ್‌ನ ಬಿದಿರಿನ ಸಂಗೀತ ಸಾದನ

– .

ಪಿಲಿಪಿನೋಸ್‍ಗಳು ಅಂತರ‍್ಗತವಾಗಿ ಸಂಗೀತ ಪ್ರೇಮಿಗಳು. ಇಲ್ಲಿನ ಅನೇಕರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ನುರಿತವರು ಹಾಗೂ ಹಾಡುಗಳನ್ನು ಹಾಡುವುದರಲ್ಲಿ ಪರಿಣಿತರು. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಸಹ ಜನ ತಮ್ಮದೇ ಆದ ತಂಡವನ್ನು ರಚಿಸಿಕೊಂಡು ಸ್ತಳೀಯವಾಗಿ ತಯಾರಿಸಿದ ವಾದ್ಯಗಳನ್ನು ನುಡಿಸುತ್ತಾ ನಲಿಯುತ್ತಾರೆ.

ಪಿಲಿಪೈನ್ಸ್ ಅನೇಕ ಸಣ್ಣ ಪುಟ್ಟ ದ್ವೀಪಗಳ ಸಮೂಹ. ಪಿಲಿಪೈನ್ಸ್ ದೇಶವನ್ನು ಗೆದ್ದ ಕ್ಯಾತೋಲಿಕರು ಅದರ ಪ್ರತಿಯೊಂದು ದ್ವೀಪಗಳಲ್ಲೂ ಕ್ಯಾತೋಲಿಸಿಸಮ್ ವಿಸ್ತರಿಸುವ ಅಂಗವಾಗಿ, ಮಿಶಿನರಿಗಳು ಪಿಲಿಪಿನೋಸ್‍ಗಳ ಅತ್ಯಂತ ಆಪ್ಯಾಯಮಾನವಾದ ಸಂಗೀತ ಸಾದನಗಳೊಂದಿಗೆ ಚರ‍್ಚುಗಳನ್ನು ನಿರ‍್ಮಿಸಿದರು. ಪರಂಪರಾಗತ ಶೈಲಿಯಲ್ಲಿ ತಯಾರಿಸಲಾದ ಈ ಸಂಗೀತ ಸಾದನಗಳು, ಪಿಲಿಪೈನ್ಸ್ ದೇಶದಲ್ಲಿನ ಪ್ರತಿಕೂಲ ವಾತಾವರಣದಿಂದ ಸ್ವಲ್ಪ ದಿನಗಳಲ್ಲೇ ನಿಶ್ಪ್ರಯೋಜಕವಾದವು. ವಾತಾವರಣದಲ್ಲಿನ ಹೆಚ್ಚು ತೇವಾಂಶ ಈ ಸಂಗೀತ ಸಾದನಗಳ ತಯಾರಿಕೆಯಲ್ಲಿ ಬಳಸಲಾಗಿದ್ದ ಕಬ್ಬಿಣದ ಅಂಗಗಳು ತುಕ್ಕು ಹಿಡಿದು ಉಪಯೋಗವಿಲ್ಲದಂತೆ ಮಾಡಿದವು, ವಾತಾವರಣದಲ್ಲಿನ ತೇವಾಂಶವನ್ನು ಮೆಟ್ಟಿ ನಿಲ್ಲುವ ಸಲುವಾಗಿ ಲಾಸ್ ಪಿನಾಸ್‍ನಲ್ಲಿನ ಕ್ಯಾತೋಲಿಕರು ಕಬ್ಬಿಣದ ಸಂಗೀತ ಸಾದನದ ಪರ‍್ಯಾಯವಾಗಿ, ಬಿದಿರಿನಲ್ಲಿ ತಯಾರಿಸಿದ ಸಂಗೀತ ಸಾದನ ತಯಾರಿಸುವುದನ್ನು ಕಂಡು ಕೊಂಡರು. ಈ ರೀತಿಯಲ್ಲಿ ಬಿದಿರಿನಿಂದ ತಯಾರಾದ ಸಂಗೀತ ಸಾದನಗಳನ್ನು ಗುರುತಿಸಿ, ಪಿಲಿಪೈನ್ಸ್ ನ್ಯಾಶನಲ್ ಮ್ಯೂಸಿಯಂ, ನವೆಂಬರ್ 24, 2003 ರಂದು ಅದನ್ನು ‘ಪಿಲಿಪೈನ್ಸ್‌ನ ರಾಶ್ಟ್ರೀಯ ನಿದಿ’ ಎಂದು ಗೋಶಿಸಿತು.

19ನೇ ಶತಮಾನದ ಈ ಸಂಗೀತ ಸಾದನ ಇಂದಿಗೂ ಕೆಲಸಮಾಡುತ್ತಿದೆ!

ಲಾಸ್ ಪಿನಾಸ್‍ನಲ್ಲಿನ ಚರ‍್ಚಿನಲ್ಲಿರುವ ಹತ್ತೊಂಬತ್ತನೇ ಶತಮಾನದ ಬಿದಿರು ಸಂಗೀತ ಸಾದನ ಇನ್ನೂ ಕಾರ‍್ಯ ನಿರ‍್ವಹಿಸುತ್ತಿರುವುದರಿಂದ ಈ ಸನ್ಮಾನಕ್ಕೆ ಅದನ್ನು ಪರಿಗಣಿಸಲಾಯಿತು. ಈ ಸಂಗೀತ ಸಾದನದಲ್ಲಿ ಬಳಸಲಾಗಿರುವ 1,031 ನಳಿಕೆಗಳಲ್ಲಿ 902 ನಳಿಕೆಗಳು ಬಿದಿರಿನಿಂದ ತಯಾರಿಸಲಾಗಿದ್ದು ಉಳಿದವು ಲೋಹದ ನಳಿಕೆಗಳಾಗಿವೆ. ಬಿದಿರಿನ ಈ ಸಂಗೀತ ಸಾದನ ಇರುವುದು ಲಾಸ್ ಪಿನಾಸ್‌ನ ಸೇಂಟ್ ಜೋಸೆಪ್ ಪಾರಿಶ್ ಚರ‍್ಚಿನಲ್ಲಿ. ಇದು ಮನಿಲಾದ ದಕ್ಶಿಣಕ್ಕೆ ಹತ್ತು ಕಿಲೋಮೀಟರ್ ಅಂತರದಲ್ಲಿದೆ. ಈ ಚರ‍್ಚಿನ ನಿರ‍್ಮಾಣ 1797 ಮತ್ತು 1819ರ ನಡುವಿನ 22 ವರ‍್ಶಗಳ ಅವದಿಯಲ್ಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಚರ‍್ಚ್ ಬರೊಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ‍್ಮಿಸಲಾಗಿದೆ. ಈ ವಾಸ್ತುಶಿಲ್ಪದ ಶೈಲಿಯಲ್ಲಿ ಅಡೋಬ್ (ಮಣ್ಣು, ನೀರು, ಸಗಣಿ ಅತವಾ ಹುಲ್ಲನ್ನು ಬೆರೆಸಿ ತಯಾರಿಸಿ, ಸೂರ‍್ಯನ ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆ) ಇಟ್ಟಿಗೆಗಳನ್ನು ಬಳಸಲಾಗುತ್ತದೆ. ಈ ಚರ‍್ಚ್ ಅನ್ನು ಮೂಲ ಸ್ತಿತಿಯಲ್ಲಿ ಕಾಪಾಡಲು 1971 ರಿಂದ 1975ರ ಅವದಿಯಲ್ಲಿ, ಸ್ತಳೀಯ ಸಮುದಾಯ ಮತ್ತು ನೆರೆಹೊರೆಯವರ ನೆರವಿನೊಂದಿಗೆ ನವೀಕರಣಗೊಳಿಸಲಾಯಿತು. ಈ ನವೀಕರಣ, ವಾಸ್ತುಶಿಲ್ಪಿಗಳಾದ ಪ್ರಾನ್ಸಿಸ್ಕೋ ಬಾಬಿ ಮನೋಸಾ ಮತ್ತು ಲಿಡ್ವಿಗ್ ಅಲ್ವಾರೆಜ್ ರವರ ನೇತ್ರುತ್ವದಲ್ಲಿ ನಡೆದಿದ್ದು ವಿಶೇಶ.

ಈ ಸಂಗೀತ ಸಾದನದ ಹಿಂದಿದೆ ಇನ್ನೂರು  ವರುಶ ಮೀರಿದ ಹಳಮೆ

ಈ ಬಿದಿರು ಸಂಗೀತ ಸಾದನದ ನಿರ‍್ಮಾಣವನ್ನು 1816ರಲ್ಲಿ, ಪಾದರ್ ಡಿಯಾಗೋ ಸೆರಾವು ಪ್ರಾರಂಬಿಸಿದರು. 1824ರಲ್ಲಿ, ಪ್ರಾರಂಬಿಸಿದ ಎಂಟು ವರ‍್ಶಗಳ ತರುವಾಯ ಇದು ಮುಕ್ತಾಯಗೊಂಡಿತು. 1880ರಲ್ಲಿ ಬೀಸಿದ ಚಂಡ ಮಾರುತ ಹಾಗೂ ಬೂಕಂಪನದಿಂದ ಚರ‍್ಚಿನ ಮೇಲ್ಚಾವಣಿಗೆ ಹಾನಿಯಾಯಿತು. ಮೇಲ್ಚಾವಣಿಯ ಅನುಪಸ್ತಿತಿಯಲ್ಲಿ ಬಿದಿರು ಸಂಗೀತ ಸಾದನ ಬಿಸಿಲು, ಮಳೆ, ಗಾಳಿ, ನೀರಿಗೆ ತೆರೆದುಕೊಂಡಿತು. ಗಾಳಿಯಲ್ಲಿನ ದೂಳಿನ ಕಣಗಳು ಹಾಗೂ ನೀರು ಬಿದಿರಿನೊಳಗೆ ಸೇರಿಕೊಂಡು ಈ ಸಂಗೀತ ಸಾದನ ವರ‍್ಶಾನುಗಟ್ಟಲೆ ಸ್ವರ ಹೊರ ಹೊಮ್ಮದಂತೆ ನಿಶ್ಕ್ರಿಯಗೊಂಡಿತ್ತು. ಪೂರ‍್ಣವಾಗಿ ಹಾಳಾಗುವುದನ್ನು ತಡೆಯಲು, ಆ ಸಂಗೀತ ಸಾದನದಲ್ಲಿ ಬಳಸಲಾಗಿದ್ದ ಬಿದಿರಿನ ನಳಿಕೆಗಳನ್ನು ಹೊರ ತೆಗೆದು ಸುರಕ್ಶಿತ ಸ್ತಳದಲ್ಲಿ ದಾಸ್ತಾನು ಮಾಡಲಾಗಿತ್ತು.

ಬಿದಿರು ಸಂಗೀತ ಸಾದನದ ಮರುಸ್ತಾಪನೆಯ ಯೋಜನೆ ಪ್ರಾರಂಬವಾಗಿದ್ದು 1972ರಲ್ಲಿ. ಈ ಯೋಜನೆಯ ಗುತ್ತಿಗೆಯನ್ನು ಪಡೆದ ಜೋಹನ್ನೆಸ್ ಕ್ಲೈಸ್ ಓರ‍್ಗೆಲ್ಬೌ, 1973ರಲ್ಲಿ ಈ ಎಲ್ಲಾ ಬಿದಿರು ಸಂಗೀತ ಸಾದನದ ನಳಿಕೆ ಮತ್ತು ಇತರೆ ಬಿಡಿ ಬಾಗಗಳನ್ನು ಜರ‍್ಮನಿಯ ಬಾನ್‍ಗೆ ಹಡಗಿನ ಮೂಲಕ ಸಾಗಿಸಿದರು. ಸುಮಾರು ಎರಡು ವರ‍್ಶಗಳ ಸತತ ಪ್ರಯತ್ನದಿಂದ ಈ ಸಂಗೀತ ಸಾದನವನ್ನು ಸಂಪೂರ‍್ಣ ದುರಸ್ತಿಗೊಳಿಸಿ, 1975ರಲ್ಲಿ ಅದರ ತಾಯ್ನಾಡಿಗೆ ಹಿಂದಿರುಗಿಸಿ, ಲಾಸ್ ಪಿನಾಸ್‍ನ ಸೇಂಟ್ ಜೋಸೆಪ್ ಪಾರಿಶ್ ಚರ‍್ಚಿನಲ್ಲಿ ಮರು ಸ್ತಾಪಿಸಿದರು.

ಈ ಬಿದಿರು ಸಂಗೀತ ಸಾದನದ ಮರುಸ್ತಾಪನೆಯ ಅಂಗವಾಗಿ, ಪ್ರತಿ ವರ‍್ಶ ಪೆಬ್ರವರಿಯಲ್ಲಿ ಸ್ತಳೀಯರು ಸಂಬ್ರಮದ ಅಂತರರಾಶ್ಟ್ರೀಯ ಬಿದಿರು ಸಂಗೀತ ಸಾದನದ ಉತ್ಸವವನ್ನು ಆಚರಿಸಲು ಪ್ರಾರಂಬಿಸಿದರು. ಲಾಸ್ ಪಿನಾಸ್‍ನ ಸ್ತಳೀಯರ ಸಹಕಾರದಿಂದ ಬಿದಿರು ಸಾದನದ ಪೌಂಡೇಶನ್ ಇಂಕ್ ಸಂಸ್ತೆ ವಾರ‍್ಶಿಕ ಸಂಗೀತೋತ್ಸವ ಮತ್ತು ಸಾಂಸ್ಕ್ರುತಿಕ ಕಾರ‍್ಯಕ್ರಮವನ್ನು ರೂಪಿಸಿ ಆಯೋಜಿಸುತ್ತದೆ. ಲಾಸ್ ಪಿನಾಸ್‍ನ ಶ್ರೀಮಂತ ಸಾಂಸ್ಕ್ರುತಿಕ ಸಂಪ್ರದಾಯವನ್ನು ಮುಂದುವರೆಸುವುದು ಹಾಗೂ ಅಬಿವ್ರುದ್ದಿ ಪಡಿಸುವುದು ಈ ಉತ್ಸವದ ಪ್ರಮುಕ ಉದ್ದೇಶ.

ಈ ಅಂತರರಾಶ್ಟ್ರೀಯ ಸಂಗೀತ ಉತ್ಸವದಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿರುವ ಅನೇಕ ಸುಪ್ರಸಿದ್ದ ಸಂಗೀತಗಾರರು ಬಾಗವಹಿಸುತ್ತಾರೆ, ಈ ಕಾರಣದಿಂದ ಈ ಉತ್ಸವ ವಿದೇಶಿ ಪ್ರವಾಸಿಗರ, ಹಾಗೂ ಎಲ್ಲಾ ವಿದದ ಸಂಗೀತ ಪ್ರೇಮಿಗಳ, ಅಬಿಮಾನಿಗಳ ಆಕರ‍್ಶಣೀಯ ಕೇಂದ್ರವಾಗಿ ಹೊರಹೊಮ್ಮಿದೆ.

(ಮಾಹಿತಿ ಮತ್ತು ಚಿತ್ರ  ಸೆಲೆ: atlasobscura.com, mypipeorganhobby.blogspot.in, ethnicgroupsphilippines.com, bamboomusic.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: