ರಣಜಿ ಕ್ರಿಕೆಟ್ – ಒಂದು ಕಿರುನೋಟ

ರಾಮಚಂದ್ರ ಮಹಾರುದ್ರಪ್ಪ.

03001392

ಬಾರತದಲ್ಲಿ ಕ್ರಿಕೆಟ್ ಎಂಬುದು ಬರಿ ಆಟವಾಗಿ ಉಳಿದಿಲ್ಲ ಅನ್ನೋದು ಎಲ್ಲರಿಗೂ ತಿಳಿದೇ ಇದೆ. 125 ಕೋಟಿ ಬಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಕ್ರಿಕೆಟ್ ಬೆಳೆದಿದೆ ಎಂದರೆ ತಪ್ಪಾಗಲಾರದು. ಒಂದು ಅಂತರಾಶ್ಟ್ರೀಯ ಕ್ರಿಕೆಟ್ ತಂಡವಾಗಿ ಬಾರತ ಹಲವಾರು ಮೈಲಿಗಲ್ಲುಗಳನ್ನು ಮುಟ್ಟಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ನಲ್ಲಿ ಸಾಕಶ್ಟು ದಿಗ್ಗಜರನ್ನು ಕ್ರಿಕೆಟ್ ಲೋಕಕ್ಕೆ ಕೊಡುಗೆಯಾಗಿ ನೀಡಿದೆ. ಈ ದಿಗ್ಗಜರು ಬಾರತದ ಬೇರೆ ಬೇರೆ ರಾಜ್ಯಗಳಿಗೆ ಸೇರಿದವರು. ಇವರೆಲ್ಲರೂ ಅಂತರಾಶ್ಟ್ರೀಯ ಕ್ರಿಕೆಟ್ ಗೆ ಬಡ್ತಿ ಪಡೆಯಲು ನೆರವಾಗಿದ್ದು ಬಾರತದ ದೇಶೀ ಕ್ರಿಕೆಟ್ ನ ಸರ‍್ವಶ್ರೇಶ್ಟ ಪೋಟಿ “ರಣಜಿ ಟ್ರೋಪಿ”. ರಣಜಿ ಟ್ರೋಪಿಯು ರಾಜ್ಯಗಳ ನಡುವಣ ಬಹುದಿನಗಳ ಕ್ರಿಕೆಟ್ ಪೋಟಿಯಾಗಿದ್ದು, ಇದರಲ್ಲಿ ಒಳ್ಳೇ ಪ್ರದರ‍್ಶನ ಮಾಡಿದವರಿಗೆ ಬಾರತ ತಂಡ ಸೇರುವ ಅವಕಾಶ ಸಿಗುತ್ತದೆ. ಈ ವಾಡಿಕೆ ಈಗಲೂ ತಕ್ಕಮಟ್ಟಿಗೆ ಇದೆ.

ರಣಜಿ ಟ್ರೋಪಿಯ ಇತಿಹಾಸ

ರಣಜಿ ಟ್ರೋಪಿ ಶುರುವಾಗಿದ್ದು 1934 ರಲ್ಲಿ. ಈ ಟ್ರೋಪಿಯನ್ನು ಪಟಿಯಾಲಾದ “ಮಹಾರಾಜ ಬೂಪೆಂದರ್ ಸಿಂಗ್” ದೇಣಿಗೆಯಾಗಿ ನೀಡಿದ್ದರು. ಬಾರತದ ಮೊದಲ ಅಂತರಾಶ್ಟ್ರೀಯ ಕ್ರಿಕೆಟಿಗರಾದ ರಣಜಿತ್ ಸಿಂಗ್ ಜಿ ಅವರ ನೆನಪಿನಲ್ಲಿ ಈ ಪಂದ್ಯಾವಳಿಯನ್ನು ರಣಜಿ ಟ್ರೋಪಿ ಎಂದು ಹೆಸರಿಸಲಾಯಿತು. ಆದರೆ ಇಲ್ಲಿ ಗಮನಿಸಬೇಕಾದ ವಿಶಯವೆಂದರೆ ರಣಜಿತ್ ಸಿಂಗ್ ಅವರು ಎಂದೂ ಸಹ ಬಾರತದ ಪರ ಆಡಿದವರಲ್ಲ. ಇಂಗ್ಲೆಂಡ್ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ ಅವರು ಅಲ್ಲಿನ ಕೌಂಟಿ ಸಸೆಕ್ಸ್ ಪರ ಮೊದಲ ದರ‍್ಜೆ ಕ್ರಿಕೆಟ್ ಆಡಿದ್ದರು. 1934 ರ ಮೊದಲ ರಣಜಿ ಟ್ರೋಪಿಯ ಮೊದಲ ಪಂದ್ಯ ಅಂದಿನ ನಮ್ಮ ಮೈಸೂರು ಹಾಗು ಮದ್ರಾಸ್ ನಡುವೆ ಚೆಪಾಕ್ ನಲ್ಲಿ ನಡೆದಿತ್ತು. ಮೈಸೂರು ಎರಡೇ ದಿನಗಳಲ್ಲಿ ಹೀನಾಯ ಸೋಲು ಕಂಡಿತ್ತು.

ಇಲ್ಲಿಯವರೆಗೂ ನಡೆದಿರುವ 82 ರಣಜಿ ಟ್ರೋಪಿಗಳಲ್ಲಿ ಬಾಂಬೆ(ಮುಂಬೈ) ಆತ್ಯದಿಕ 41 ಬಾರಿ ಗೆಲ್ಲುಗರಾಗಿದ್ದರೆ ಅವರ ಹಿಂದೆ ಮೈಸೂರು(ಕರ‍್ನಾಟಕ) 8 ಬಾರಿ ಗೆಲ್ಲುಗರಾಗಿದ್ದಾರೆ. 82 ವರ‍್ಶಗಳ ದೊಡ್ಡ ಇತಿಹಾಸ ಇರೋ ಈ ಪೋಟಿಗಳಲ್ಲಿ ಮುಂಬೈನ ವಸಿಮ್ ಜಾಪರ್ ಆತ್ಯದಿಕ (10143) ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ದೆಹಲಿ ಮತ್ತು ಹರಿಯಾಣ ಪರ ಆಡಿದ ರಾಜಿಂದರ್ ಗೋಯಲ್ ಅತಿ ಹೆಚ್ಚು (640) ವಿಕೆಟ್ ಪಡೆದಿದ್ದಾರೆ. ಆದರೆ ದುರಂತ ಎಂದರೆ ಗೋಯಲ್ ಅವರು ಬಾರತದ ಪರ ಒಂದೇ ಒಂದು ಅಂತರಾಶ್ಟ್ರೀಯ ಪಂದ್ಯ ಕೂಡ ಆಡಲಿಲ್ಲ.

ಪಂದ್ಯಾವಳಿಯ ಸ್ವರೂಪ ಹಾಗು ನಡೆದು ಬಂದ ದಾರಿ

1934 ರಿಂದ 2001/02 ರ ಸಾಲಿನ ರಣಜಿ ಪಂದ್ಯಗಳು ವಲಯವಾರು ಸ್ವರೂಪದಲ್ಲಿ ನಡೆಯುತ್ತಿದ್ದವು. ಅಂದರೆ ಪಾಲ್ಗೊಳ್ಳುವ ತಂಡಗಳನ್ನು ಉತ್ತರ, ದಕ್ಶಿಣ, ಪೂರ‍್ವ, ಪಶ್ಚಿಮ ಹಾಗು ಕೇಂದ್ರ ವಲಯಗಳಾಗಿ ಬಾಗ ಮಾಡಲಾಗುತ್ತಿತ್ತು. ಪ್ರತಿ ವಲಯದ ಗೆಲ್ಲುಗರು ಸೆಮಿಪೈನಲ್ ಪೋಟಿಯಲ್ಲಿ ಸೆಣಸಿ ನಂತರ ಪೈನಲ್ ಪ್ರವೇಶಿಸುತ್ತಿದ್ದರು. 2002/03 ರ ಸಾಲಿನಿಂದ ವಲಯವಾರು ಸ್ವರೂಪವನ್ನು ರದ್ದುಗೊಳಿಸಿ ತಂಡಗಳನ್ನು 3 ಗುಂಪುಗಳಾಗಿ ಬಾಗ ಮಾಡಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಇದು ಸರಿಯಾದುದು ಎಂದು ಕ್ರಿಕೆಟ್ ಪಂಡಿತರು ಒಪ್ಪಿದ್ದಾರೆ ಏಕೆಂದರೆ ಈ ಸ್ವರೂಪದಲ್ಲಿ ಗಟಾನುಗಟಿ ತಂಡಗಳ ಪಂದ್ಯಗಳು ಹೆಚ್ಚು ನೋಡಸಿಗುತ್ತವೆ. 2015/16 ತನಕ ಪ್ರತಿ ತಂಡವು ತವರು ಹಾಗು ಹೊರಗೆ ಸಮಾನ ಪಂದ್ಯಗಳನ್ನು ಆಡುತ್ತಿದ್ದರು, ಆದರೆ 2016/17 ರಿಂದ ಎಲ್ಲಾ ಪಂದ್ಯಗಳನ್ನು ತಟಸ್ತ ಸ್ತಳದಲ್ಲಿ ನಡೆಸಲು ಬಿ.ಸಿ.ಸಿ.ಐ ತೀರ‍್ಮಾನ ಮಾಡಿದೆ. ಇದು ಕ್ರಿಕೆಟ್ ಪ್ರಿಯರಿಗೆ, ತಮ್ಮ ನಾಡಿನ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಬಯಸುವವರಿಗೆ ತುಂಬಾ ನಿರಾಸೆ ಉಂಟು ಮಾಡಿದೆ. ಆಟದ ಅಂಗಣದಲ್ಲಿ ಬೆರಳೆಣಿಕೆಯಶ್ಟು ಜನ ಮಾತ್ರ ನೋಡ ಸಿಗುತ್ತಿದ್ದಾರೆ. ಈ ನೀರಸ ಪ್ರತಿಕ್ರಿಯೆಯಿಂದ ಬಿ.ಸಿ.ಸಿ.ಐ ನ ಈ ನಡೆ ತಪ್ಪೆಂದು ಸಾಬೀತಾಗಿದೆ. ಮುಂದಿನ ವರ‍್ಶದಿಂದ ತಂಡಗಳ ತವರು ನೆಲದಲ್ಲೇ ಪಂದ್ಯಗಳನ್ನು ನಡೆಸಬೇಕಾದ ಒತ್ತಡ ಈಗ ಬಿ.ಸಿ.ಸಿ.ಐ ಮೇಲಿದೆ.

ಒಂದು ತಂಡಕ್ಕೆ ಒಂದು ಗೆಲುವಿಗೆ 6 ಅಂಕಗಳು ಸಿಗುತ್ತವೆ. ಒಂದು ವೇಳೆ ಪಂದ್ಯ ಗೆಲ್ಲಲಾಗದೆ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದರೆ 3 ಅಂಕಗಳು ಸಿಗುತ್ತವೆ, ಹಾಗೆಯೇ ಮೊದಲ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಪಡೆದವರಿಗೆ ೧ ಅಂಕ ದಕ್ಕುತ್ತದೆ. ಇದಲ್ಲದೆ ಇನ್ನಿಂಗ್ಸ್ ನಿಂದ ಅತವಾ ಹತ್ತು ವಿಕೆಟ್ ಗಳಿಂದ ಪಂದ್ಯ ಗೆದ್ದರೆ ಒಂದು ಬೋನಸ್ ಅಂಕ ಸಿಗುತ್ತದೆ. ಸೋಲದೇ ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದವರಿಗೆ 1 ಅಂಕ ಕಟ್ಟಿಟ್ಟ ಬುತ್ತಿ. ಇದು ಲೀಗ್ ಹಂತದಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಕ ಹಂಚಿಕೆಯ ವಿದಾನ. ಇದೇ ಅಂಕಗಳ ಸ್ವರೂಪವನ್ನು 2008/09 ಸಾಲಿನಿಂದ ಬಿ.ಸಿ.ಸಿ.ಐ ಕಾಯ್ದುಕೊಂಡು ಬಂದಿದ್ದಾರೆ. 90 ರ ದಶಕದ ಕೊನೆಯಿಂದ ಟೀವಿಯಲ್ಲಿ ರಣಜಿ ಪಂದ್ಯಗಳ ನೇರ ಪ್ರಸಾರ ಕೂಡ ಶುರುವಾಗಿದೆ.

ರಣಜಿ ಟ್ರೋಪಿಯಲ್ಲಿ ಕರ‍್ನಾಟಕದ ಸಾದನೆ

1934 ರಿಂದ 1972/73 ರ ತನಕ ಮೈಸೂರು ತಂಡವಾಗಿ ರಣಜಿ ಟ್ರೋಪಿಯಲ್ಲಿ ಪಾಲ್ಗೊಂಡಿದ್ದ ಕನ್ನಡಿಗರು 1973/74 ರ ಸಾಲಿನಿಂದ ಕರ‍್ನಾಟಕ ತಂಡವಾಗಿ ಕಣಕ್ಕಿಳಿದರು. ಮುಂಬೈ ನಂತರ ಅತ್ಯಂತ ಹೆಚ್ಚು ಗೆಲುವ ಕಂಡಿರುವ ತಂಡ ಕರ‍್ನಾಟಕ. ಆಡಿರುವ 414 ಪಂದ್ಯಗಳಲ್ಲಿ ಒಟ್ಟು 186 ಪಂದ್ಯಗಳನ್ನು ಕರ‍್ನಾಟಕ ಗೆದ್ದಿದೆ. ಅಶ್ಟೇ ಅಲ್ಲದೇ ಬಾರತ ಕ್ರಿಕೆಟ್ ಗೆ ಹಲವಾರು ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ನಮ್ಮ ನಾಡಿಗಿದೆ. ಅಂದಿನ ಎರಾಪಲ್ಲಿ ಪ್ರಸನ್ನ ಅವರಿಂದ ಹಿಡಿದು ಇಂದಿನ ಕರುಣ್ ನಾಯರ್ ವರೆಗೂ ಕರ‍್ನಾಟಕದಿಂದ ಸುಮಾರು 30 ಮಂದಿ ಆಟಗಾರರು ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ್ದಾರೆ.

img_93552206334231

ಬಾರತ ಕ್ರಿಕೆಟ್ ನ ಬೆನ್ನೆಲುಬಿನಂತಿರುವ ಕರ‍್ನಾಟಕಕ್ಕೆ ತನ್ನ ಮೊದಲ ರಣಜಿ ಟ್ರೋಪಿಯನ್ನು ಗೆಲ್ಲಲು 40 ವರ‍್ಶ ಬೇಕಾಯಿತು ಅನ್ನೋದು ಸೋಜಿಗವೇ ಸರಿ. 1941/42 ಮತ್ತು 1959/60 ಎರಡು ಬಾರಿ ಪೈನಲ್ ನಲ್ಲಿ ಬಾಂಬೆ ವಿರುದ್ದ ಮುಗ್ಗರಿಸಿದ್ದ ಮೈಸೂರು, 1973/74 ರಲ್ಲಿ ಕರ‍್ನಾಟಕ ತಂಡವಾಗಿ ಜೈಪುರದಲ್ಲಿ ರಾಜಸ್ತಾನವನ್ನು 185 ರನ್ ಗಳಿಂದ ಸೋಲಿಸಿ ಮೊದಲ ರಣಜಿ ಟ್ರೋಪಿಯನ್ನು ತೆಕ್ಕೆಗೆ ಹಾಕಿಕೊಂಡಿತು. ಕನ್ನಡಿಗರ ಈ ರಣಜಿ ಗೆಲುವು ಕ್ರಿಕೆಟ್ ವಲಯವನ್ನೇ ತಲ್ಲಣಗೊಳಿಸಿತ್ತು. ಅದಕ್ಕೆ ಕಾರಣ ಪ್ರಸನ್ನರ ಕರ‍್ನಾಟಕ ತಂಡ 1958 ರಿಂದ 73 ರ ತನಕ ದಾಕಲೆಯ ಸತತ 15 ಬಾರಿ ರಣಜಿ ಟ್ರೋಪಿಯನ್ನು ಗೆದ್ದಿದ್ದ ಅಂದಿನ ಬಲಿಶ್ಟ ಬಾಂಬೆ ತಂಡವನ್ನು ಸೆಮಿಪೈನಲ್ ನಲ್ಲಿ ಮೊದಲ ಇನ್ನಿಂಗ್ಸ್ ನ ಮುನ್ನಡೆಯಿಂದ ಮಣಿಸಿ ಪೈನಲ್ ಗೆ ಲಗ್ಗೆ ಇಟ್ಟಿತ್ತು. ಅಜಿತ್ ವಾಡೇಕರ್ ರ ಬಾಂಬೆ ತಂಡದಲ್ಲಿ ಸುನಿಲ್ ಗಾವಸ್ಕರ್, ಅಶೋಕ್ ಮಂಕಡ್ ರಂತಹ ದಿಗ್ಗಜ ಆಟಗಾರರಿದ್ದರು. ಆದರೆ ನಮ್ಮ ಪ್ರಸನ್ನ, ಚಂದ್ರಶೇಕರರ ಸ್ಪಿನ್ ಮೋಡಿಗೆ ಅವರು ತತ್ತರಿಸಿದರು. ಜೊತೆಗೆ ನಮ್ಮ ತಂಡಕ್ಕೆ ಗುಂಡಪ್ಪ ವಿಶ್ವನಾತ್ ಹಾಗು ಬ್ರಿಜೇಶ್ ಪಟೇಲ್ ರ ಬ್ಯಾಟಿಂಗ್ ಬಲವೂ ಇತ್ತು. ಈಗಲೂ, ಆ ಪಂದ್ಯದಲ್ಲಿ ಸುದಾಕರ್ ರಾವ್ ರವರು ನೇರ ವಿಕೆಟ್ ಗೆ ಚೆಂಡು ಎಸೆದು ವಾಡೇಕರ್ ರನ್ನು ರನ್ ಔಟ್ ಮಾಡಿದ್ದೇ ಪಂದ್ಯಕ್ಕೆ ತಿರುವು ನೀಡಿದ್ದು ಎಂದು ಎಲ್ಲರೂ ನೆನೆಯುತ್ತಾರೆ.

1973/74 ರ ರಣಜಿ ಟ್ರೋಪಿಯನ್ನು ಗೆದ್ದು ಜೈಪುರದಿಂದ ರೈಲಿನಲ್ಲಿ ಬೆಂಗಳೂರು ತಲುಪಿದ ಕರ‍್ನಾಟಕ ತಂಡವನ್ನು ಬರಮಾಡಿಕೊಳ್ಳಲು ಸುಮಾರು 3000 ಕ್ರಿಕೆಟ್ ಅಬಿಮಾನಿಗಳು ಹಾಗೂ ಅಂದಿನ ಕೆ.ಎಸ್.ಸಿ.ಎ ಅದ್ಯಕ್ಶ ಚಿನ್ನಸ್ವಾಮಿ ಅವರು ಸಿಟಿ ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದರು. ಅಂದಿನ ಮಕ್ಯಮಂತ್ರಿಗಳಾದ ದೇವರಾಜ್ ಅರಸ್ ರವರು ಗೆದ್ದ ತಂಡಕ್ಕೆ ವಿದಾನ ಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಹಾ ಕೂಟ ಏರ‍್ಪಡಿಸಿ ಎಲ್ಲಾ ಆಟಗಾರರನ್ನು ಗೌರವಿಸಿದ್ದರು. ರಣಜಿ ಟ್ರೋಪಿಯ ಬೆಲೆ ಏನೆಂದು ತಿಳಿಯಲು ಈ ಎತ್ತುಗೆ ಸಾಕಲ್ಲವೇ?

ನಂತರ ಕರ‍್ನಾಟಕ ತಂಡ ಪ್ರಸನ್ನರ ನಾಯಕತ್ವದಲ್ಲೇ 1977/78 ರ ಟ್ರೋಪಿಯನ್ನು ಗೆದ್ದಿತ್ತು. 1982/83 ರಲ್ಲಿ ಬ್ರಿಜೇಶ್ ಪಟೇಲ್ ಸಾರತ್ಯದಲ್ಲಿ ಗೆದ್ದ ಬಳಿಕ ರಾಜ್ಯ ತಂಡ ಸೊರಗಿತ್ತು. ಒಂದು ದಶಕದ ಕಾಲ ಗೆಲ್ಲಲು ಪರದಾಡಿತ್ತು. ಆದರೆ 90ರ ದಶಕದ ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾತ್, ರಾಹುಲ್ ದ್ರಾವಿಡ್ ರ ಬಲದಿಂದ 13 ವರ‍್ಶಗಳ ನಂತರ 1995/96 ರಲ್ಲಿ ತಮಿಳುನಾಡನ್ನು ಮಣಿಸಿ 4ನೇ ರಣಜಿ ಕಿರೀಟವನ್ನು ಕರ‍್ನಾಟಕ ಮುಡಿಗೇರಿಸಿಕೊಂಡಿತು. ಈ ಪಂದ್ಯಕ್ಕೆ ಸ್ಪಿನ್ ದಿಗ್ಗಜ ಕುಂಬ್ಳೆ ಅವರು ನಾಯಕರಾಗಿದ್ದರೆ 1997/98 ರಲ್ಲಿ ಗೆದ್ದ ತಂಡಕ್ಕೆ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಮುಂದಾಳು ಆಗಿದ್ದರು. 1998/99 ರಲ್ಲಿ 6ನೇ ಬಾರಿ ಟ್ರೋಪಿ ಗೆದ್ದ ತಂಡಕ್ಕೆ ಸುನಿಲ್ ಜೋಶಿ ನಾಯಕರಾಗಿದ್ದರು. ಈ ಕಾಲದಲ್ಲಿ ಸುಮಾರು 6 ಮಂದಿ ಕನ್ನಡಿಗರು ಬಾರತದ ಪರ ಆಡುತ್ತಿದ್ದರಿಂದ 2000ದ ಇಸವಿಯ ನಂತರ ಕರ‍್ನಾಟಕ ಮತ್ತೊಮ್ಮೆ ಸೋಲಿನ ಹಾದಿ ಹಿಡಿಯಿತು. ಮುಂದಿನ 14 ವರ‍್ಶಗಳ ಕಾಲ ಗೆಲ್ಲಲಾಗದೆ ಹತಾಶೆಗೊಳಗಾಗಿದ್ದರು.

img_93571663004463

14 ವರ‍್ಶಗಳ ವನವಾಸದಂತೆ ಗೆಲುವಿಗಾಗಿ ಕಾಯುತ್ತಿದ್ದ ತಂಡಕ್ಕೆ ನಾಯಕರಾಗಿ ನಮ್ಮ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್ ಹೊಸ ಚೈತನ್ಯ ತುಂಬಿದರು. ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಮಿತುನ್, ಉತ್ತಪ್ಪ, ಬಿನ್ನಿ, ಕರುಣ್ ರಂತಹ ಪ್ರತಿಬಾವಂತ ಆಟಗಾರರ ಬಲದಿಂದ 2013/14 ರಲ್ಲಿ ಕರ‍್ನಾಟಕ ತಂಡ 7ನೇ ರಣಜಿ ಟ್ರೋಪಿ ಗೆದ್ದು ಬೀಗಿತು. ಈ ಗೆಲುವಿನ ನಾಗಾಲೋಟ 2014/15 ರಲ್ಲೂ ಮುಂದುವರೆದು 8ನೇ ಬಾರಿ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದರ ಪರಿಣಾಮವಾಗಿ ಕನ್ನಡಿಗರಾದ ರಾಹುಲ್, ಕರುಣ್, ಮನಿಶ್, ಬಿನ್ನಿ ಅಂತರಾಶ್ಟ್ರೀಯ ಕ್ರಿಕೆಟ್ ಗೆ ಬಡ್ತಿ ಪಡೆದರು. 2015/16 ರಲ್ಲಿ ಗೆಲ್ಲಲಾಗದೇ ಇದ್ದರೂ ದೇಶೀ ಕ್ರಿಕೆಟ್ ನಲ್ಲಿ ಈಗಲೂ ಕರ‍್ನಾಟಕವೇ ಬಲಾಡ್ಯ ತಂಡವೆಂಬುದು ಕ್ರಿಕೆಟ್ ಬಲ್ಲವರ ಅಂಬೋಣ.

ಮೈ ನವಿರೇರಿಸಿದ ಪಂದ್ಯಗಳು

82 ವರ‍್ಶಗಳ ಇತಿಹಾಸ ಇರುವ ರಣಜಿ ಪೋಟಿ ಹಲವಾರು ರೋಚಕ ಪಂದ್ಯಗಳಿಗೆ ಸಾಕ್ಶಿಯಾಗಿದೆ. ಅವುಗಳಲ್ಲಿ ಈಗಲೂ ಅಬಿಮಾನಿಗಳು ಹಾಗು ಆಟಗಾರರು ಹೆಚ್ಚಾಗಿ ನೆನೆಯುವ ಪಂದ್ಯ 91ರಲ್ಲಿ ವಾಂಕಡೇ ಅಂಗಣದಲ್ಲಿ ನಡೆದ ಹರಿಯಾಣ ಹಾಗು ಬಾಂಬೆ ನಡುವಣ ಪೈನಲ್ ಪಂದ್ಯ. ಕಪಿಲ್ ದೇವ್ ರ ಹರಿಯಾಣ ತಂಡ ತೆಂಡೂಲ್ಕರ್, ಮಂಜ್ರೇಕರ್, ವೆಂಗಸರ‍್ಕಾರ್, ಕಾಂಬ್ಳಿಯವರನ್ನು ಒಳಗೊಂಡ ಬಲಿಶ್ಟ ಬಾಂಬೆ ತಂಡವನ್ನು 2 ರನ್ ಗಳಿಂದ ಸೋಲಿಸಿತ್ತು. ಔಟ್ ಆಗದೇ 139 ರನ್ ಗಳಿಸಿದ್ದ ವೆಂಗಸರ‍್ಕಾರ್ ತಮ್ಮ ಜೊತೆಗಾರ ಕುರುವಿಲ್ಲ ರನ್ ಔಟ್ ಆದಾಗ ದುಗುಡದಿಂದ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದನ್ನು ನೋಡಿ ಅಂಗಣದಲ್ಲಿ ನೆರೆದಿದ್ದ ಸಾವಿರಾರು ಬಾಂಬೆ ಬೆಂಬಲಿಗರ ಕಂಬನಿಯ ಕಟ್ಟೆ ಒಡೆದಿತ್ತು. ವೆಂಗಸರ‍್ಕಾರ್ ಮಂಡಿ ಊರಿ ಕಣ್ಣೀರು ಸುರಿಸುತ್ತಿರುವ ಚಿತ್ರ ಎಲ್ಲಾ ಪತ್ರಿಕೆಗಳ ತಲೆಬರಹವಾಗಿತ್ತು. ಈ ಎತ್ತುಗೆ ರಣಜಿ ಪಂದ್ಯಗಳ ಮಹತ್ವವನ್ನು ಸಾರಿ ಹೇಳುತ್ತದೆ.

91 ರಲ್ಲಿ ಬಾಂಬೆಗೆ ಆಗಾತವಾದರೆ 2010 ರಲ್ಲಿ ಮೈಸೂರಿನಲ್ಲಿ ನಡೆದ ಮುಂಬೈ ಮೇಲಿನ ಪೈನಲ್ ಪಂದ್ಯದಲ್ಲಿ ಕರ‍್ನಾಟಕಕ್ಕೆ ಆಗಾತವಾಯಿತು. ಆ ಸೋಲು ಈಗಲೂ ಕಾಡುತ್ತದೆ ಎಂದು ಅಂದಿನ ನಾಯಕ ರಾಬಿನ್ ಉತ್ತಪ್ಪ ನೆನೆಯುತ್ತಾರೆ. 10 ವರ‍್ಶದ ನಂತರ ಪೈನಲ್ ಪ್ರವೇಶಿಸಿದ್ದ ಕರ‍್ನಾಟಕ ಕೇವಲ 6 ರನ್ ಗಳಿಂದ ಸೋಲುಂಡು ತೀವ್ರ ನಿರಾಸೆಗೊಳಗಾಗಿತ್ತು. ಮನೀಶ್ ಪಾಂಡೆ ಅವರ ಅಬ್ಬರದ 144 ರನ್ ಹಾಗು ಗಣೇಶ್ ಸತೀಶ್ ರ ತಾಳ್ಮೆಯ 75 ರನ್ ವ್ಯರ‍್ತವಾಯಿತು. ಬರಿ ಚುಟುಕು ಕ್ರಿಕೆಟ್ ನಲ್ಲಶ್ಟೇ ಒಳ್ಳೆ ಪಂದ್ಯಗಳು ನೋಡಲು ಸಾದ್ಯ ಎನ್ನುವವರಿಗೆ ಈ ಬಹುದಿನಗಳ ರೋಚಕ ಪಂದ್ಯಗಳು ಅವರ ಗ್ರಹಿಕೆಯನ್ನು ಬದಲಾಯಿಸಿಕೊಳ್ಳುವ ಹಾಗೆ ಮಾಡುವುದರಲ್ಲಿ ಅನುಮಾನವಿಲ್ಲ.

img_52544371298786

 ಐ.ಪಿ.ಎಲ್ ನಂತರ ಕಳೆಗುಂದುತ್ತಿರುವ ರಣಜಿ ವರ‍್ಚಸ್ಸು

2008 ರಲ್ಲಿ ಶುರುವಾದ ಐ.ಪಿ.ಎಲ್ ಚುಟುಕು ಕ್ರಿಕೆಟ್ ನಿಂದ ರಣಜಿ ಟ್ರೋಪಿಯ ಮಹತ್ವ ಹಾಗು ಆಟಗಾರರ ಹಂಬಲ ಕುಂದಿರುವುದು ರಹಸ್ಯವಾಗೇನೂ ಉಳಿದಿಲ್ಲ. 20 ಓವರ್ ಗಳ ಕ್ರಿಕೆಟ್ ಆಡಲು ಪ್ರಾನ್ಚೈಸಿಗಳು ಕೋಟಿ ಕೋಟಿ ಹಣ ಕೊಡುತ್ತಿರುವಾಗ ನಾಲ್ಕು ದಿನ ಬೆವರು ಹರಿಸಿ ಸಾವಿರಗಳನ್ನು ಪಡೆಯಲು ಯಾವ ಆಟಗಾರ ತಾನೇ ಮುಂದೆ ಬರುತ್ತಾನೆ ಅಲ್ಲವೇ? ಅಂತರಾಶ್ಟ್ರೀಯ ಕ್ರಿಕೆಟ್ ಇಲ್ಲದಿರುವಾಗ ಅಂದಿನ ದಿಗ್ಗಜರಾದ ಗಾವಸ್ಕರ್, ವಿಶ್ವನಾತ್, ವಾಡೇಕರ್, ಪ್ರಸನ್ನ, ಚಂದ್ರಶೇಕರ್, ಬೇಡಿ ಅಂತವರು ರಣಜಿ ಟ್ರೋಪಿಯಲ್ಲಿ ತಮ್ಮ ರಾಜ್ಯದ ಪರ ಆಡಿ ದೇಶೀ ಕ್ರಿಕೆಟ್ ಗೆ ಮೆರಗು ತರುತ್ತಿದ್ದರು. ನಂತರದ ಪೀಳಿಗೆಯ ದ್ರಾವಿಡ್, ತೆಂಡೂಲ್ಕರ್, ಕುಂಬ್ಳೆ ಅವರು ಕೂಡ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ದೇಶೀ ಕ್ರಿಕೆಟ್ ಆಡಿರೋ ಎತ್ತುಗೆಗಳಿವೆ. ತಮ್ಮ ಟೆಸ್ಟ್ ಕ್ರಿಕೆಟ್ ನ ವಿದಾಯದ ಬಾಶಣದಲ್ಲಿ ತೆಂಡೂಲ್ಕರ್ ಅವರು ಬೆಳಗ್ಗೆ 3ಕ್ಕೆ ನ್ಯೂಜಿಲ್ಯಾಂಡ್ ನಿಂದ ಬಂದು ಬೆಳಗ್ಗೆ 9ಕ್ಕೆ ಮುಂಬೈ ಪರ ರಣಜಿ ಪಂದ್ಯ ಆಡಿದ್ದನ್ನು ನೆನಪಿಸಿಕೊಳ್ಳುತ್ತಾ ರಣಜಿ ಟ್ರೋಪಿ ಆಡುವುದು ಹೆಮ್ಮೆಯ ವಿಶಯವಾಗಿತ್ತು ಅಂದಿದ್ದರು. ಆದರೆ ಈಗಿನ ಪೀಳಿಗೆಯ ಆಟಗಾರರ ದೋರಣೆಯೇ ಬೇರೆ ಇದೆ. ಇಂದಿನ ಅಂತರಾಶ್ಟ್ರೀಯ ಕ್ರಿಕೆಟಿಗರು ದೇಶೀ ಕ್ರಿಕೆಟ್ ಕಡೆ ಮುಕ ಮಾಡುವುದು ತೀರಾ ವಿರಳ. ಇದನ್ನು ಸರಿ ಪಡಿಸುವ ಹೊಣೆ ಬಿ.ಸಿ.ಸಿ.ಐ ಮೇಲಿದೆ.

2016/17 ರ ರಣಜಿ ಟ್ರೋಪಿಯಲ್ಲಿ ಕರ‍್ನಾಟಕ ತಂಡ

ಹಿಂದಿನ ವರ‍್ಶದ ಸೋಲನ್ನು ಮರೆಯುವ ನಿಟ್ಟಿನಲ್ಲಿ ಕರ‍್ನಾಟಕ ತಂಡ ಬರ‍್ಜರಿ ಆರಂಬ ಮಾಡಿದೆ. ಈ ವರ‍್ಶ ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಬೋನಸ್ ಅಂಕಗಳಿಂದ ಗೆದ್ದು ‘ಬಿ’ ಗುಂಪಿನಲ್ಲಿ 17 ಅಂಕಗಳಿಂದ ಅಗ್ರಸ್ತಾನದಲ್ಲಿದೆ. ಮೊದಲ ಪಂದ್ಯದಲ್ಲೇ ನಾಯಕ ವಿನಯ್ ಗಾಯಗೊಂಡು ಹೊರನಡೆದರೂ ತಂಡದ ಬಲ ಕುಂದಲಿಲ್ಲ. ಕರುಣ್ ರ ನಾಯಕತ್ವದಲ್ಲಿ 2 ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದು ತಮ್ಮ ಶಕ್ತಿ ಪ್ರದರ‍್ಶನ ಮಾಡಿದ್ದಾರೆ. 3ನೇ ಪಂದ್ಯದಲ್ಲಿ ಅನುಬವಿ ಮಿತುನ್ ಕೂಡ ಪೆಟ್ಟು ಮಾಡಿಕೊಂಡು ಹೊರಗುಳಿದರೂ ಯುವ ಆಟಗಾರರು ತಂಡವನ್ನು ದಡ ಸೇರಿಸಿದರು. ಈಗ ಕರುಣ್ ಬಾರತ ತಂಡಕ್ಕೆ ಆಯ್ಕೆ ಆಗಿ ಹೊರಹೋಗಲಿದ್ದರೆ ಅವರ ಬದಲಾಗಿ ಅನುಬವಿ ಮನೀಶ್ ತಂಡಕ್ಕೆ ಮರಳಿದ್ದಾರೆ. ಇದು ಕರ‍್ನಾಟಕ ತಂಡದ ಬಲವನ್ನು ಸಾರಿ ಹೇಳುತ್ತದೆ. ಕಾಗದದ ಮೇಲೆ ನೋಡಿದರೆ ಕರ‍್ನಾಟಕವೇ ದೇಶೀ ಕ್ರಿಕೆಟ್ ನ ಬಲಾಡ್ಯ ತಂಡವೆಂದು ಯಾರಾದರೂ ಹೇಳುತ್ತಾರೆ. ಯುವ ಆಟಗಾರರಾದ ಸಮರ‍್ತ, ಮಾಯಂಕ್ ಜೊತೆಗೆ ಅನುಬವಿಗಳಾದ ಉತ್ತಪ್ಪ, ಬಿನ್ನಿರ ಬ್ಯಾಟಿಂಗ್ ಬಲವು ತಂಡಕ್ಕಿದೆ. ಆಡಿರುವ 3 ಪಂದ್ಯಗಳಿಂದ 3 ಅರ‍್ದ ಶತಕ ಸಿಡಿಸಿರುವ ಅಬ್ಬಾಸ ಬರವಸೆ ಮೂಡಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಿ.ಎಮ್ ಗೌತಮ್ ಅವರು ಈ ವರ‍್ಶವೂ ತಮ್ಮ ಎಂದಿನ ಸ್ತಿರ ಪ್ರದರ‍್ಶನ ಕಾಯ್ದುಕೊಂಡಿದ್ದಾರೆ. ತಂಡದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಸಹ ಬ್ಯಾಟ್ ಹಾಗು ಬಾಲ್ ನಿಂದ ಒಳ್ಳೆ ಕೊಡುಗೆಯನ್ನೇ ನೀಡುತ್ತಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಬಾಗದಲ್ಲಿ ವಿನಯ್, ಮಿತುನ್, ಅರವಿಂದ್ ರ ಜೊತೆ ರೋನಿತ್ ಮೋರೆ ತಂಡದಲ್ಲಿದ್ದಾರೆ. ಆದರೆ ಈ ವರ‍್ಶದ ಅಚ್ಚರಿ ಆಪ್ ಸ್ಪಿನ್ನರ್ ಕೆ. ಗೌತಮ್. 3 ಪಂದ್ಯಗಳಿಂದ 18 ವಿಕೆಟ್ ಪಡೆದು ಎರಡು ಗೆಲುವಿಗೂ ಮುನ್ನುಡಿ ಬರೆದರು.

ಈ ಆಟಗಾರರೆಲ್ಲರೂ ಒಗ್ಗಟ್ಟಿನಿಂದ ತಮ್ಮ ಸಾಮರ‍್ತ್ಯಕ್ಕೆ ತಕ್ಕಂತೆ ಆಡಿದರೆ ಕರ‍್ನಾಟಕವು 2016/17 ರ ರಣಜಿ ಟ್ರೋಪಿ ಗೆದ್ದು 9ನೇ ಬಾರಿ ರಣಜಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತು ಎಲ್ಲಾ ತಂಡಗಳನ್ನು ಬಗ್ಗು ಬಡಿದು ರಣಜಿ ಟ್ರೋಪಿ ಗೆಲ್ಲಲಿ ಎಂದು ಹಾರೈಸೋಣ.

(ಚಿತ್ರ ಸೆಲೆ: ksca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: