ಈಕ್ವೆಡಾರ್‌ನ ಕಣ್ಣೀರಿನ ಗೋಡೆ!

–  ಕೆ.ವಿ. ಶಶಿದರ.

wall of tears, ಕಣ್ಣೀರಿನ ಗೋಡೆ

ಈಕ್ವೆಡಾರ‍್‌ನ ಜ್ವಾಲಾಮುಕಿ ದ್ವೀಪ ಸರಪಳಿಯ ಪಶ್ಚಿಮ ಬಾಗದಲ್ಲಿರುವ ಇಸಾಬೆಲಾದಲ್ಲಿ ಒಂದು ವಿಲಕ್ಶಣವಾದ ಗೋಡೆಯಿದೆ. ಸುಮಾರು 100 ಮೀಟರ್ ಉದ್ದವಿರುವ ಈ ಗೋಡೆ 8 ಮೀಟರ್ ಎತ್ತರ ಹಾಗೂ 3 ಮೀಟರ್ ಅಗಲವಿದೆ. ಇದು ದ್ವೀಪದ ಇತಿಹಾಸದ ಕರಾಳ ಯುಗದ ಏಕೈಕ ಕುರುಹಾಗಿ ಉಳಿದುಕೊಂಡಿದೆ. ಈಕ್ವೆಡಾರ‍್‌ನ ಮುಕ್ಯ ಬೂಬಾಗದಲ್ಲಿನ ಕೈದಿಗಳನ್ನು ಈ ದ್ವೀಪಕ್ಕೆ ಎಳೆದು ತಂದು, ಸಮಬಾಜಕದ ಸೂರ‍್ಯನ ಅತ್ಯಂತ ತೀಕ್ಶ್ಣ ಬಿಸಿಲಿನಲ್ಲಿ, ಮೈಮುರಿಯೇ ದುಡಿಸುವ ಶಿಕ್ಶೆ ನೀಡಲಾಗುತ್ತಿತ್ತು. ಅವರು ಸುರಿಸಿದ ಕಣ್ಣೀರು, ರಕ್ತ ಹಾಗೂ ಬೆವರಿನ ಪರಿಣಾಮವೇ, ಯಾವುದಕ್ಕೂ ಉಪಯೋಗವಿಲ್ಲದ, ಕೆಲಸಕ್ಕೆ ಬಾರದ ಈ ಬ್ರುಹತ್ ಕಲ್ಲಿನ ಗೋಡೆ.

20ನೇ ಶತಮಾನದ ಮದ್ಯಬಾಗದಲ್ಲಿ ಈಕ್ವೆಡಾರ‍್‌ನ ಕಾರಾಗ್ರುಹಗಳು ತುಂಬಿ ತುಳುಕುತ್ತಿದ್ದವು. ಈ ಪರಿಸ್ತಿತಿಗೆ ಈ ದ್ವೀಪ ತ್ವರಿತ ಪರಿಹಾರ ನೀಡುತ್ತಿತ್ತು. ಹೊಸ ಹೊಸ ಕಾರಾಗ್ರುಹಗಳ ನಿರ‍್ಮಾಣಕ್ಕಿಂತ, ಅವರನ್ನು ಅತ್ಯಂತ ವಿರಳ ಜನಸಂದಣಿಯಿರುವ ಈ ದ್ವೀಪ ಸಮೂಹಕ್ಕೆ ಅನಪೇಕ್ಶಿತ ಕೈದಿಗಳಾಗಿ ನೂಕುವುದು ಅಗ್ಗದ ಕೆಲಸ. ಆ ದಿನಗಳಲ್ಲಿ ಅಪರಿಚಿತ ಹಾಗೂ ಅನಾದರಣೆಯ ತಾಣವಾಗಿತ್ತು ಈ ದ್ವೀಪಗಳು. ಕಡಲ್ಗಳ್ಳರ, ವಿಲಕ್ಶಣ ವ್ಯಕ್ತಿಗಳ ಹಾಗೂ ಗಡಿಪಾರಾದವರ ಆಶ್ರಯ ತಾಣವಾಗಿತ್ತು ಇದು. ಇಸಾಬೆಲಾ ಒಂದೇ ಅಲ್ಲ ಇದರ ಜೊತೆ ಪ್ಲೋರಿಯಾನಾ ಮತ್ತು ಸ್ಯಾನ್ ಕ್ರಿಸ್ಟೊಬಲ್ ದ್ವೀಪಗಳು ಸಹ ಸೇರಿದ್ದವು. ಇವುಗಳನ್ನೂ ಸಹ 20ನೇ ಶತಮಾನದಲ್ಲಿ ಕಾರಾಗ್ರುಹ ವಸಾಹತುಗಳಾಗಿ ಮಾರ‍್ಪಾಡು ಮಾಡಲಾಗಿತ್ತು. ಇವು ತೆರೆದ ಕಾರಾಗ್ರುಹಗಳಾದ ಕಾರಣ ಮೂಲ ಸೌಕರ‍್ಯಗಳ ನಿರ‍್ಮಾಣಕ್ಕೆ ಹೆಚ್ಚಿನ ಹಣದ ವಿನಿಯೋಗಿಸುವ ಅವಶ್ಯಕತೆ ಇರಲಿಲ್ಲ. ಈ ದ್ವೀಪಗಳ ಸುತ್ತ ಬಲವಾದ ಪ್ರವಾಹಗಳು ಬರುತ್ತಿದ್ದ ಕಾರಣ ಕೈದಿಗಳು ತಪ್ಪಿಸಿಕೊಳ್ಳುವ ಸಾದ್ಯತೆ ಕ್ಶೀಣವಾಗಿತ್ತು.

2ನೇ ಮಹಾಯುದ್ದದ ನಂತರ, 1946ರಲ್ಲಿ, ಸರಿ ಸುಮಾರು ಮುನ್ನೂರು ಕೈದಿಗಳು ಮತ್ತು ಅವರ ಮೇಲ್ವಿಚಾರಣೆಗೆ 30 ಸಿಬ್ಬಂದಿ ಈ ದ್ವೀಪದಲ್ಲಿ ಅಡಿಯಿಟ್ಟರು. ಮಹಾಯುದ್ದದ ಸಮಯದಲ್ಲಿ ಇಲ್ಲಿ ಅಮೇರಿಕದ ಸೈನ್ಯ ಬೀಡುಬಿಟ್ಟಿತ್ತು. ಅದರ ಉಪಯೋಗ ಪಡೆದು ಇವರು, ಅವರುಗಳು ತಮಗಾಗಿ ನಿರ‍್ಮಿಸಿಕೊಂಡಿದ್ದ ತಾತ್ಕಾಲಿಕ ಮರದ ಮನೆಗಳನ್ನು ಪೂರ‍್ಣ ಪ್ರಮಾಣದಲ್ಲಿ ಬಳಸಿಕೊಂಡು ತರಾತುರಿಯಲ್ಲಿ ಅತಿ ಸಾಮಾನ್ಯ ಕಟ್ಟಡಗಳನ್ನು ನಿರ‍್ಮಿಸಿದರು. ಕೈದಿಗಳನ್ನು ಸುಮ್ಮನೆ ಕಾಲ ಹರಣ ಮಾಡಿಸಲು ಇಶ್ಟಪಡದ ಈ ತೆರೆದ ಕಾರಾಗ್ರುಹದ ವಾರ‍್ಡನ್‍ಗಳು, ಕಟಿಣ ಶ್ರಮದ ಕೆಲಸದ ಹುಡುಕಾಟದಲ್ಲಿದ್ದರು. ಆಗ ಅವರ ಕಲ್ಪನೆಗೆ ಬಂದಿದ್ದೇ ಬ್ರುಹತ್ ಗೋಡೆಯ ನಿರ‍್ಮಾಣ. ಈ ಗೋಡೆಯ ನಿರ‍್ಮಾಣದ ಹಿಂದೆ ಯಾವುದೇ ಉದ್ದೇಶವಿಲ್ಲದಿರುವುದು ಅವರಿಗೆ ಸಂಪೂರ‍್ಣ ತಿಳಿದಿತ್ತು. ಕೇವಲ ಅಲ್ಲಿನ ಕೈದಿಗಳಿಗೆ ದೈಹಿಕ ಶ್ರಮದ ಶಿಕ್ಶೆ ನೀಡುವ ಉದ್ದೇಶ ಮಾತ್ರ ಇದರಲ್ಲಿ ಅಡಗಿತ್ತು.

ಈ ದ್ವೀಪದ ಕರಾಳತೆಯನ್ನು ಸ್ತಳೀಯ ಬಾಶೆಯಲ್ಲಿ “ಲಾಸ್ ವ್ಯಾಲಿಯೆಂಟಿಸ್ ಲೊರೆನ್ ವೈ ಲಾಸ್ ಡೆಬಿಲ್ಸ್ ಮ್ಯೂರೆನ್” ಎನ್ನಲಾಗುತ್ತದೆ. ಅಂದರೆ ‘ಬಲಾಡ್ಯರು ಅಳುತ್ತಾರೆ, ದುರ‍್ಬಲರು ಸಾಯುತ್ತಾರೆ” ಎಂದರ‍್ತ. ಅತಿ ಎತ್ತರದ, ಅಸಮಪಾರ‍್ಶ್ವದ ಇಲ್ಲಿನ ಗೋಡೆ ನಿರ‍್ಮಿಸಿರುವ ಬಗ್ಗೆ ಕೊಂಚ ಚಿಂತಿಸಿದರೆ, ಅದರ ಹಿಂದೆ ಅಡಗಿರುವ ಕಶ್ಟಕೋಟಲೆಗಳು, ಅನುಬವಿಸಿದ ನೋವು, ದುಕ್ಕವನ್ನು ಕಲ್ಪಿಸಿಕೊಂಡರೆ ಕರುಳು ಕಿವಿಚುತ್ತದೆ. ಬಾರವಾದ, ಮೊನಚಾದ ಕಲ್ಲಿನ ಬಂಡೆಗಳನ್ನು, ದೂರದ ಕಲ್ಲು ಗಣಿಗಳಿಂದ, ರಣಬಿಸಿಲಿನಲ್ಲಿ ಹೊತ್ತು ತರುವಶ್ಟರಲ್ಲಿ ಅವರ ಬುಜ ಹರಿದು ಹೋಗಿ ರಕ್ತ ಒಸರುತ್ತಿತ್ತು. ಆದರೂ ಕಾರ‍್ಯವನ್ನು ನಿಲ್ಲಿಸುವಂತಿಲ್ಲ. ಈ ಕಟಿಣ ಕೆಲಸವನ್ನು ದೀರ‍್ಗಕಾಲ ಬಿಡುವಿಲ್ಲದೆ, ಹಸಿದ ಹೊಟ್ಟೆಯಲ್ಲಿ ಮಾಡುತ್ತಿದ್ದರೆ ಅದಕ್ಕಿಂತ ಚಿತ್ರಹಿಂಸೆ ಬೇರೆ ಇದೆಯೇ??? ಇಲ್ಲಿ ಅದೇ ಅವರ ನಿತ್ಯ ಕಾಯಕ.

ಅವರುಗಳು ನಿರ‍್ಮಿಸುತ್ತಿದ್ದ ಗೋಡೆಯಲ್ಲಿ ಬಾರಿ ಗಾತ್ರದ ಕಲ್ಲು ಬಂಡೆಗಳು, ಒಂದನೊಂದು ಹಿಡಿದಿಟ್ಟುಕೊಳ್ಳಲು ಸುಣ್ಣವಾಗಲಿ, ಬೇರಾವುದೇ ಅಂಟನ್ನಾಗಲಿ ಬಳಸಿಲ್ಲ. ಈ ಕಾರಣ ಗೋಡೆ ಎತ್ತರ, ಎತ್ತರಕ್ಕೆ ಏರುತ್ತಿದ್ದಂತೆ ಹಟಾತ್ ಕುಸಿಯುವ ಸಾದ್ಯತೆ ಬಹಳವಿತ್ತು. ಗೋಡೆ ಕುಸಿದ ಸಮಯದಲ್ಲಿ ಅದರಡಿಯಲ್ಲಿ ಸಿಕ್ಕ ನತದ್ರುಶ್ಟರ ಪಾಡಂತೂ ಬಣ್ಣಿಸಲು ಅಸಾದ್ಯ. ಸತ್ತವರೆಶ್ಟೋ, ಮೂಳೆಗಳ ಮುರಿತಕ್ಕೆ ಒಳಗಾಗಿ ನೋವನುಬವಿಸಿ ಸತ್ತವರು ಎಶ್ಟೋ, ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಸುರಿದು ಒದ್ದಾಡಿದವರೆಶ್ಟೋ, ಗಾಯದ ಚಿಕಿತ್ಸೆಗೆ ಮೂಲಬೂತ ವೈದ್ಯಕೀಯ ಅರೈಕೆಯಿಲ್ಲದೆ ಗಾಯ ಉಲ್ಬಣಗೊಂಡು ಅದು ಮಾರಣಾಂತಿಕವಾಗಿ ಬದಲಾಗಿ ಸತ್ತವರೆಶ್ಟೋ ಬಲ್ಲವರಿಲ್ಲ. ಅಶ್ಟು ಬೀಕರತೆ ಇಲ್ಲಿ ತಾಂಡವವಾಡುತ್ತಿತ್ತು.

ಇಲ್ಲಿನ ಕೈದಿಗಳ ಶಿಬಿರದಲ್ಲಿನ ಕೆಟ್ಟ ಜೀವನ ಪರಿಸ್ತಿತಿ, ಅಲ್ಲಿನವರ ಜೀವನವನ್ನು ಇನ್ನೂ ಶೋಚನೀಯ ಸ್ತಿತಿಗೆ ತಂದಿತ್ತು. ಆಹಾರ ಮತ್ತು ಕುಡಿಯುವ ನೀರನ ಸರಬರಾಜೂ ಸಹ ಪೂರ‍್ಣ ಅಸಮಪರ‍್ಕವಾಗಿತ್ತು. ಇದರೊಂದಿಗೆ ಕ್ಶಯ, ಮಲೇರಿಯಾ ಹಾಗೂ ಇತರೆ ರೋಗಗಳೂ ವಿಪರೀತವಾಗಿತ್ತು. ಹಾಗಾಗಿ ಈ ದ್ವೀಪವನ್ನು ಅಲ್ಲಿನ ಕೈದಿಗಳೇ ‘ಇಸ್ಲಾಸ್ ಡೆಲ್ ಇನ್ಪಿಯೆರ‍್ನೋ’ ಅಂದರೆ ‘ನರಕದ ದ್ವೀಪ’ ಎನ್ನುತ್ತಿದ್ದದು ಅವರಲ್ಲಿ ಅಡಗಿದ್ದ ನೋವಿನ ಪ್ರತೀಕ.

ಬೆನ್ನು ಮೂಳೆ ಮುರಿಯುವ ಈ ಗೋಡೆಯ ನಿರ‍್ಮಾಣದ ಕೆಲಸಕ್ಕೆ ನೀಡಿದ ಹೆಸರೇ “ಮುರೊ ಡೆ ಲಾಸ್ ಲಗ್ರಿಮಾಸ್” ಅಂದರೆ ‘ವಾಲ್ ಆಪ್ ಟಿಯರ‍್ಸ್’ (ಕಣ್ಣೀರಿನ ಗೋಡೆ) ಎಂದು. ಸೂಕ್ತ ನಾಮದೇಯವಲ್ಲವೆ ಇದು? ಕೇವಲ ಹದಿಮೂರು ಕರಾಳ ವರ‍್ಶಗಳ ಕಾಲ ಕಾರ‍್ಯನಿರತವಾಗಿದ್ದ ಈ ಕಾರಾಗ್ರುಹಗಳು ನಂತರ ಮುಚ್ಚಿಹೋಯಿತು. ಆದರೂ ಒಮ್ಮೆ ಇಲ್ಲಿ ದೈಹಿಕ ನೋವು ಅನುಬವಿಸಿ ಪ್ರಾಣ ತೆತ್ತವರ ಪ್ರತೀಕವಾಗಿ ಈ ಸ್ಮಾರಕ ಮಾತ್ರ ಇನ್ನೂ ಜೀವಂತವಾಗಿದೆ. ಇಸಾಬೆಲಾ ದ್ವೀಪದ ಕೆಟ್ಟ ದಿನಗಳ ಮಾಸದ ಗಾಯದ ಗುರುತೇ ಈ ಬ್ರುಹತ್ ಗೋಡೆಗಳು.

(ಮಾಹಿತಿ ಸೆಲೆ: gadventures.com, atlasobscura.com)

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *