‘ಬಸ್ಸು ಬಂತು ಬಸ್ಸು’

ವೆಂಕಟೇಶ ಚಾಗಿ.

ಬಸ್, ಬಸ್ಸು, Bus

“ಪಪ್ಪಾ, ಬಸ್ಸು ಬಂತು ಬಸ್ಸು” ಅಂತ ಮಗಳು ಅನ್ನುತ್ತಿದ್ದಂತೆಯೇ ಅಂಗಿ ಬಟನ್ ಹೇಗೆ ಹಾಕಿದ್ದೆನೋ ಗೊತ್ತಿಲ್ಲ, ಬ್ಯಾಗ್ ತೆಗೆದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದೆನು. ನಮ್ಮೂರ ಬಸ್ ನಿಲ್ದಾಣಕ್ಕೆ ಕೆಂಪು ಬಸ್ಸು ಬರುವುದು ಇನ್ನೂ 15 ನಿಮಿಶ ತಡವಾದರೂ, ಮಹಡಿಯ ಮೇಲೆ ನಿಂತು ದೂರದಲ್ಲಿ ಬಸ್ಸು ಬರುವುದನ್ನು ಕಂಡು ಬಸ್ಸು ಬರುವ ಮಾಹಿತಿಯನ್ನು ತಕ್ಶಣ ತಿಳಿಸಿದಳು. ಬರುವಾಗ ಕಡ್ಡಾಯವಾಗಿ ತರುವಂತೆ ಕೆಲವು ತಿನ್ನುವ ವಸ್ತುಗಳ ಲಿಸ್ಟ್ ಕೊಟ್ಟು “ಪಪ್ಪಾ, ಟಾಟಾ” ಎನ್ನುವುದು ಅವಳ ಪ್ರತಿ ದಿನದ ಕಾಯಕ.

ಮಗಳಿಗೆ ಕಂಡ  ಬಸ್ಸು ಅಶ್ಟೇನು ದೂರದಲ್ಲಿ ಇರದಿದ್ದರೂ ನಮ್ಮ ಹಳ್ಳಿಯ ಬಸ್ ನಿಲ್ದಾಣಕ್ಕೆ ಬರುವುದಕ್ಕೆ ಏನಿಲ್ಲವೆಂದರೂ ಹದಿನೈದು ನಿಮಿಶ ತೆಗೆದುಕೊಳ್ಳದೇ ಇರದು. ಏಕೆಂದರೆ ನಮ್ಮ ದೇವರ ಮಹಿಮಾ ನಮಗೇ ಗೊತ್ತು. ನಮ್ಮೂರ ರಸ್ತೆ ಮತ್ತು ಬಸ್ಸು ಹೇಳಿ ಮಾಡಿಸಿದಂತಿವೆ. ಬಸ್ಸಿನಂತೆ ನಮ್ಮೂರ ರಸ್ತೆ ಕೂಡಾ ರೋಗಗ್ರಸ್ತ. ಮೊನ್ನೆ ಪಕ್ಕದ ಮನೆ ರಂಗಣ್ಣನ ಹೆಂಡತಿಗೆ ಹೆರಿಗೆ ನೋವು ಬಂದಾಗ ಊರಲ್ಲಿದ್ದ ನರ‍್ಸ್ ಮೇಡಂ ಒಬ್ಬರು “ಈ ಕೇಸ್ ಬಾಳ ಸೀರಿಯಸ್ ಐತ್ರಿ, ಸಿಟಿ ದವಾಕಾನೆಗೆ ಕರಕೊಂಡು ಹೋಗ್ರಿ” ಅಂತ ಅಂದು ಕೈ ತೊಳಕೊಂಡಿದ್ರು. ಆಗ ರಾತ್ರಿ ಬೇರೆ. ಬೇರೆ ವಾಹನ ಇಲ್ಲ. ನಮ್ಮ ದೇವರೇ ಗತಿ ಅಂತ ಕೊನೆ ಬಸ್ ಏರಿ ಸಿಟಿಗೆ ಹೊರೆಟೆವು. ನಮ್ಮ ಪುಣ್ಯಕ್ಕೆ ನಮ್ಮ ಜೊತೆಗೆ ನರ‍್ಸ ಕೂಡ ಬಂದಿದ್ರು. ಸಾಕಶ್ಟು ಡೆಲಿವರಿ ಮಾಡಿಸಿದ್ದ ನಮ್ಮ ಬಸ್ಸಿನ ಬಗ್ಗೆ ಎಲ್ಲರಿಗೂ ಅನುಮಾನ. ಬಸ್ಸಿನ ಹೊಯ್ದಾಟ ನೋಡಿದ್ರೆ ಹೆರಿಗೆ ಬಸ್ಸಲ್ಲೆ ಆದ್ರೆ ? ಎಲ್ಲರ ಎದೆಯಲ್ಲೂ ಡವಡವ. “ಎಪ್ಪಾ, ಡ್ರೈವರ‍್ರ ನಿದಾನಕ್ಕ ಓಡ್ಸಪ್ಪಾ” ಅಂತ ರಂಗಣ್ಣನ ತಾಯಿ ಡ್ರೈವರ್ ಗೆ ಬೇಡ್ಕೊತಿದ್ಲು. ಕೊನೆಗೂ ಬಸ್ಸು ಹೆರಿಗೆ ಬಾಗ್ಯ ಕರುಣಿಸೇ ಬಿಡ್ತು, ಅದೂ ನಾರ‍್ಮಲ್ ಡೆಲಿವರಿ. ತುಂಬಾ ನೋವಿಲ್ಲದೆ. ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ ಬಸ್ಸು ನಮಗಂತೂ ಅಂಬುಲೆನ್ಸ್ ಇದ್ದ ಹಾಗೆ.

ಇನ್ನು ಬಸ್ಸಿನಲ್ಲಿ ಪ್ರತಿದಿನ ಪ್ರಯಾಣ ಮಾಡುವ ನಮಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದೇ ಗೊತ್ತಾಗುವುದಿಲ್ಲ. ಎಲ್ಲಾ ಅಡೆತಡೆಗಳು ನಮಗೆ ರೂಡಿಗತವಾಗಿರುವುದರಿಂದ ಬಸ್ಸು ನಮ್ಮ ದಿನಚರಿಯಲ್ಲಿ ಮುಕ್ಯ ಪಾತ್ರದಾರಿ. ನಮ್ ಟೀಮಿಗೆ ಸೀಟು ಪಕ್ಕಾ. ನಮ್ಮ ಮಲ್ಲಣ್ಣ ಬೇಗ ಬರುವ ಆಸಾಮಿ. ಬೆಳಿಗ್ಗೆ ಬೇಗ ಬಂದು ಬಸ್ಸಿಗಾಗಿ ಕಾಯುವ ಅವನು, ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಏರಿ ತನಗೂ ಅಲ್ಲದೇ ನಮ್ಮ ಟೀಮಿನ ಎಲ್ಲರಿಗೂ ಸೀಟು ಹಿಡಿದು ಕೊಡುವ ದಯಾಳು. ತನ್ನ ಬಳಿ ಇರುವ ಕರ‍್ಚೀಪು, ಟವೆಲ್ಲು, ಕೈಚೀಲ, ನೋಟುಬುಕ್ಕು ಹೀಗೆ ಏನಾದರೂ ಒಂದನ್ನು ಸೀಟಿಗೆ ಹಾಕಿ ನಮಗಾಗಿ ರಿಸರ‍್ವ್ ಮಾಡಿ ಇಡುತ್ತಿದ್ದ. ಒಬ್ರು ಮೇಡಂ ಗೆ ಮಾತ್ರ ಕಿಡಕಿ ಸೀಟ್ ಪಿಕ್ಸ್. ಅವನ ದುರಾದ್ರುಶ್ಟನೋ ಏನೋ ಪ್ರತಿದಿನ ತನ್ನ ಸೀಟನ್ನು ವಯಸ್ಸಾದವರಿಗೋ, ಬಾಣಂತಿಯರಿಗೋ ಬಿಟ್ಟುಕೊಡುವಂತಹ ಪರಿಸ್ತಿತಿ ಬರುತ್ತಿತ್ತು.

ಹಬ್ಬ ದಿನಾಚರಣೆಗಳು ಬಂದರೆ ನಮ್ಮೂರ ಬಸ್ಸನ್ನು ಸಿಂಗಾರ ಮಾಡುವುದು ಎಂದರೆ ನಮ್ಮೂರ ಯುವಕರಿಗೆ ಕುಶಿಯೋ ಕುಶಿ. ಬಸ್ಸಿನ ಮುಕಕ್ಕೆ ನಾನಾ ರೀತಿಯ ಚಿತ್ರ ಗಳನ್ನು, ಬಣ್ಣ ಬಣ್ಣದ ಹಾಳೆಗಳನ್ನು,  ತಳಿರು ತೋರಣಗಳನ್ನು ತೆಂಗಿನ ಗರಿಗಳನ್ನು ಬಾಳೆ ಕಂಬಗಳನ್ನು ಕಟ್ಟಿ ಚಂದ ಮಾಡುವುದು ಎಂದರೆ ನಮ್ಮೂರ ಯುವಕರಿಗೆ ಹಬ್ಬ. ಬಸ್ಸಿನ ಡ್ರೈವರ್,  “ನೋಡ್ರಪ್ಪ , ನನಗಾದ್ರೂ ದಾರಿ ಕಾಣುವಶ್ಟು ಜಾಗ ಬಿಟ್ಟಿರಿ” ಅನ್ನುತ್ತಿದ್ದ. ಈಗಂತೂ ಜಯಂತಿಗಳು,  ಹಬ್ಬಗಳು ಹೆಚ್ಚಾಗಿವೆ. ರೋಡು ಕಚ್ಚಾ ಆದರೂ ಇಂತಹ ದಿನಗಳಲ್ಲಿ ನಮ್ಮೂರಿನ ಯುವಕರಿಂದ ಆ ದಾರಿಯಲ್ಲಿ ಹೋಗುವ ಜನರಿಗೆಲ್ಲ ಶುಬಾಶಯಗಳನ್ನು ಕೋರುವ ಅಕ್ಶರಗಳು ದಾರಿಯ ಮೇಲೆ ಇರುತ್ತಿದ್ದವು .ಬಸ್ಸಿನ ಪ್ರಯಾಣಿಕರಂತೂ ಮದುವೆ ಸಮಾರಂಬಕ್ಕೆ ಹೊರಟಿರುವಂತೆ ಬಾಸವಾಗುತ್ತದೆ. ಕೆಲವೊಮ್ಮೆ ಕೆಲವರು ನಗರಕ್ಕೆ ಹೋಗಿಬಂದು ಒಂದು ಕಪ್ ಚಹಾ ಕುಡಿದು ಬರುವುದಿದ್ದರೂ ಟಿಪ್-ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಹೋಗಿ ಬಂದರೇನೆ ಅವರಿಗೆ ಸಮಾದಾನ . ಇನ್ನು ಕೆಲವರಂತೂ ಬೇರೆಯವರ ವ್ಯವಹಾರಕ್ಕಾಗಿ ಹೋಗುತ್ತಿದ್ದುದೂ ಉಂಟು. ದೂರದ ಸಿಟಿಯಲ್ಲಿ ತಮ್ಮ ಸರಕಾರಿ ಕಚೇರಿ ವ್ಯವಹಾರಗಳಿದ್ದ ಜನರು, ಇಂತವರಿಗೆ ತಮ್ಮ ಕೆಲಸ ನೀಡುತ್ತಿದ್ದರು. ನೂರು ರುಪಾಯಿ ಕೆಲಸಕ್ಕೆ ಐದು ನೂರು ರೂಪಾಯಿ ತೆಗೆದುಕೊಂಡು ನಗರಕ್ಕೆ ಹೋಗಿ ಕೆಲಸ ಮಾಡಿಕೊಡುವುದು ಇವರ ಕೆಲಸ. ಕೆಲವು ಅನಕ್ಶರಸ್ತರಿಗೆ, ಕೈಲಾಗದವರಿಗೆ ಇಂತವರೇ ಗತಿ ಆದರೂ ಕೆಲಸ ಪಕ್ಕಾ ಆಗುತ್ತಿತ್ತು.

ಒಂದನ್ನು ಮಾತ್ರ ಮೆಚ್ಚಲೇಬೇಕು. ಬಸ್ಸಿನಲ್ಲಿ ಪ್ರಯಾಣ ಮಾಡುವವರೆಲ್ಲ ಉಳಿದವರನ್ನು ಅಕ್ಕ, ಅಣ್ಣ, ತಂಗಿ, ತಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ ಎಂದೇ ಕರೆಯುವುದು. ಹೀಗೆ ಬಸ್ಸಿನಲ್ಲಿ ಪ್ರಯಾಣ ಮಾಡುವವರೆಲ್ಲರೂ ಒಂದು ಕುಟುಂಬದವರಿದ್ದಂತೆ ಇದ್ದೆವು. ಬಸ್ಸಿನ ಕಂಡಕ್ಟರ್ ಡ್ರೈವರ್ ಗೆ ರಾತ್ರಿ ಊರಲ್ಲೇ ವಾಸ್ತವ್ಯ ಹೂಡಬೇಕಾದ ಪರಿಸ್ತಿತಿ ಬಂದರಂತೂ ಅವರಿಗೆ ಗ್ರಾಮದ ಯಾವುದಾದರೂ ಮನೆ ಊಟ ಕಾಯಂ.

ಆಗಾಗ ಕೆಟ್ಟು ನಿಲ್ಲುವ ಬಸ್ಸಿಗೆ ಊರಿನ ಯುವಕರೇ ಮೆಕ್ಯಾನಿಕ್ ಗಳು. ನಮ್ಮದೇನೇ ಮಹತ್ವದ ಕೆಲಸವಿದ್ದರೂ ಬಸ್ಸು ಸರಿಯಾಗುವವರೆಗೂ ಯಾರೂ ಕದಲಲ್ಲ. ಎಂಎಲ್ಎ ಗೂ ಪೋನ್ ಮಾಡುವಂತಹ ಜನ ನಮ್ಮೂರಲ್ಲಿ. ಬಸ್ಸಿಗೂ ನಮ್ಮೂರ ಜನಕ್ಕೂ ಅದೊಂದು ಅವಿನಾಬಾವ ಸಂಬಂದ.  ಬಸ್ಸಿಗೆ ವಯಸ್ಸಾಗಿದ್ದರೂ ನಮ್ಮೂರ ಬಸ್ಸು ನಮಗೆ ಹೆಮ್ಮೆ. ಬೆಳಗ್ಗೆ ಸೂರ‍್ಯ ಬರದಿದ್ದರೂ ಚಿಂತೆಯಿಲ್ಲ ನಮ್ಮೂರಿಗೆ ಬಸ್ ಬಂದು ” ಬಸ್ಸು ಬಂತು ಬಸ್ಸು ” ಎನ್ನುವ ದನಿಯೇ ನಮ್ಮೂರಿನ ಜನರಿಗೆ ಚೈತನ್ಯ 🙂

( ಚಿತ್ರ ಸೆಲೆ : stockphotos.ro )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: