ಕಿಂಬರ‍್ಲಿ ಗಣಿ – ವಿಶ್ವದ ಅತಿದೊಡ್ಡ ಕುಳಿ

– ಕೆ.ವಿ. ಶಶಿದರ.

ಕಿಂಬರ‍್ಲಿ ಮೈನ್ ಇರುವುದು ದಕ್ಶಿಣ ಆಪ್ರಿಕಾದ ಉತ್ತರದ ತುದಿಯಲ್ಲಿ. ಕಿಂಬರ‍್ಲಿ ಮೈನ್ ಒಂದು ಅಗಾದವಾದ ಕುಳಿ. ಈ ಬ್ರುಹತ್ ಕುಳಿ ಯಾವುದೇ ಆಟಂ ಬಾಂಬ್ ಅತವಾ ನ್ಯೂಕ್ಲಿಯರ್ ಬಾಂಬ್‍ಗಳ ಪ್ರಯೋಗದಿಂದಾಗಲಿ ಅತವಾ ಯಾವುದೇ ಉಲ್ಕೆಯಿಂದಾಗಲಿ ಸ್ರುಶ್ಟಿಯಾದುದಲ್ಲ. ಬದಲಿಗೆ, ವಜ್ರವನ್ನು ಹೆಕ್ಕಲು ಕೈಯಲ್ಲೇ ಅಗೆದ, ಪಾತಾಳಕ್ಕೆ ತಲುಪಿದ ಅತಿ ದೊಡ್ಡ ಕುಳಿ. ಆಗಿನ ಸಮಯದಲ್ಲಿ ಸಿಗುತ್ತಿದ್ದ ಯಾವುದೇ ಯಂತ್ರೋಪಕರಣಗಳನ್ನು ಇಲ್ಲಿನ ಉತ್ಕನನಕ್ಕೆ ಬಳಸಲಾಗಿಲ್ಲ. ಬದಲಿಯಾಗಿ ಕೇವಲ ಗುದ್ದಲಿ, ಸನಿಕೆ, ಪಿಕಾಸಿಗಳಂತಹ ಉಪಕರಣಗಳನ್ನು ಮಾತ್ರವೇ ಉಪಯೋಗಿಸಿ ಕೈ ಕೆಲಸದಿಂದಲೇ ಮಣ್ಣನ್ನು ಅಗೆದು ಹೊರಹಾಕಲಾಗಿದೆ. ತೆರದ ಬಾಯನ್ನು ಹೊಂದಿರುವುದು ಈ ಗಣಿಯ ಮತ್ತೊಂದು ವಿಶೇಶತೆ.

‘ದ ಬಿಗ್ ಹೋಲ್’ ‘ಗ್ರೂಟ್ ಗಟ್’ ಎಂಬ ಹೆಸರು ಇದಕ್ಕಿದೆ. ‘ಡಿ-ಬೀರ‍್ಸ್’ ಕಂಪನಿ ಇಲ್ಲಿ ವಜ್ರದ ನಿಕ್ಶೇಪ ಇದ್ದುದನ್ನು ಮನಗಂಡು ವಜ್ರಗಣಿಗಾರಿಕೆಗೆ ಅಗೆಯಲಾಯಿತು ಎಂದು ಇತಿಹಾಸ ಹೇಳುತ್ತದೆ. ಕಿಂಬರ‍್ಲಿ ಮೈನ್‍ನಿಂದ ಡಿ-ಬೀರ‍್ಸ್ ಕಂಪನಿ ಅಂದಾಜು 2720 ಕೆಜಿಯಶ್ಟು ವಜ್ರವನ್ನು ಹೊರ ತೆಗಿದಿರುವುದಾಗಿ ದಾಕಲೆಗಳಿಂದ ತಿಳಿದು ಬರುತ್ತದೆ.

ಕಿಂಬರ‍್ಲಿ ಗಣಿಯ ಇತಿಹಾಸ

ಕಿಂಬರ‍್ಲಿ ಗಣಿಯಲ್ಲಿನ ವಜ್ರದ ಹರಳಿನ ಉತ್ಕನನ ‘ಡಿ-ಬೀರ‍್ಸ್’ ಕಂಪನಿಯ ಯಜಮಾನಿಕೆಯಲ್ಲಿ 1871ರಲ್ಲಿ ಪ್ರಾರಂಬವಾಯಿತು. ಡಿ-ಬೀರ‍್ಸ್ ಕಂಪನಿಯು ಗಣಿಗಾರಿಕೆಯ ಕೆಲಸವನ್ನು ಹಲವಾರು ದಶಕಗಳ ಕಾಲ ಸರಾಗವಾಗಿ ಮುಂದುವರೆಸಿಕೊಂಡು ಹೋಯಿತು. ಮೊದ ಮೊದಲು ಈ ಪ್ರದೇಶವನ್ನು ‘ನ್ಯೂ ರಶ್’ ಎಂದು ಗುರುತಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಇದನ್ನು ಕಿಂಬರ‍್ಲಿ ಎಂದು ಬದಲಾವಣೆ ಮಾಡಲಾಯಿತು. ಈ ರಾಕ್ಶಸ ಪ್ರಮಾಣದ ಕುಳಿಯು ಅಡ್ಡವಾಗಿ 463 ಮೀಟರ್ ಇದ್ದು ಆಳ 240 ಮೀಟರ‍್‌ಗಳಶ್ಟಿದೆ. 17 ಹೆಕ್ಟೇರ್ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕಿಂಬರ‍್ಲಿ ಮೈನ್ 1.6 ಕಿಲೋಮೀಟರ‍್‌ನಶ್ಟು ಸುತ್ತಳತೆಯನ್ನು ಹೊಂದಿದೆ. 50,000 ಗಣಿ ಕೆಲಸಗಾರರ ಅವಿರತ ಶ್ರಮದಿಂದ, ಶ್ರದ್ದೆಯಿಂದ ಬೆವರು ಸುರಿಸಿದ ಪರಿಣಾಮ ಇಂತಹ ಬ್ರುಹತ್ ಪ್ರಮಾಣದ ಕುಳಿಯ ಸ್ರುಶ್ಟಿಗೆ ಕಾರಣವಾಯಿತು. ಅದರೊಂದಿಗೆ ಅಗಾದ ಪ್ರಮಾಣದ ವಜ್ರ ಸಹ ಡಿ-ಬೀರ‍್ಸ್ ಕಂಪನಿಯ ಪಾಲಾಯಿತು.

ಈ ಬ್ರುಹತ್ ಕುಳಿಯ ಆಳ 240 ಮೀಟರ‍್‌ಗಳಿದ್ದರೂ ನೀರು 40 ಮೀಟರ‍್‌ನಶ್ಟು ತುಂಬಿದೆ. ಬಗ್ನಾವಶೇಶಗಳು 25 ಮೀಟರ‍್‌ನಶ್ಟು ತುಂಬಿರುವುದರಿಂದ ಕುಳಿಯ ಪೂರ‍್ಣ ಆಳ ಕಣ್ಣಿಗೆ ಗೋಚರಿಸುವುದಿಲ್ಲ. ಈಗ ಕೇವಲ 215 ಮೀಟರ‍್‌ನಶ್ಟು ಮಾತ್ರ ಅಳತೆ ಮಾಡಲು ಸಾದ್ಯ. ನೆಲದ ಮೇಲ್ಮೈನಿಂದ ನೀರಿನ ಮೇಲ್ಪದರದವರೆಗೆ 175 ಮೀಟರ‍್‌ನಶ್ಟು ಆಳವಿದ್ದು ಅದನ್ನು ಪ್ರವಾಸಿಗರು ಗಮನಿಸಲು ಸಾದ್ಯ.

ಇಂದಿನ ಸ್ತಿತಿಗತಿ?

ಕಿಂಬರ‍್ಲಿ ಮೈನ್ ಗಣಿಯನ್ನು 14ನೇ ಆಗಸ್ಟ್ 1914ರಲ್ಲಿ ಮುಚ್ಚಲಾಯಿತು. ಆ ವೇಳೆಗಾಗಲೆ ಇದರಿಂದ 22.5 ಮಿಲಿಯನ್ ಟನ್ ಮಣ್ಣನ್ನು ಹಾಗೂ ಅದರಲ್ಲಿ ಅಡಗಿದ್ದ ಸರಿ ಸುಮಾರು 2720 ಕೆ.ಜಿ ಅಂದರೆ ಸುಮಾರು 14,504,566 ಕ್ಯಾರೆಟ್ ವಜ್ರವನ್ನು ಹೊರ ತೆಗೆಯಲಾಗಿತ್ತು. ಇಲ್ಲಿ ಗಣಿಗಾರಿಕೆ ನಡೆದಿದ್ದು ಕೇವಲ 43 ವರ‍್ಶಗಳ ಕಾಲ ಮಾತ್ರ. ಈ ಅವದಿಯಲ್ಲಿ ಗಣಿಯಲ್ಲಿನ ಅನಾರೋಗ್ಯಕರ ವಾತಾವರಣ, ಕೊಳಕು ನಿರ‍್ವಹಣಾ ಪರಿಸ್ತತಿ, ಶುದ್ದ ಕುಡಿಯುವ ನೀರಿನ ಕೊರತೆ ಹಾಗೂ ಇವೆಲ್ಲಕ್ಕೂ ಪುಟವಿಟ್ಟಂತೆ ಉಸಿರಾಡಲು ಒಳ್ಳೆಯ ಗಾಳಿಯ ಅಬಾವ ಎಲ್ಲಾ ಸೇರಿದ ಪರಿಣಾಮ ಲೆಕ್ಕವಿಲ್ಲದಶ್ಟು ಗಣಿ ಕಾರ‍್ಮಿಕರು ವಿವಿದ ಕಾಯಿಲೆಯಿಂದ ನರಳಿ ಅಸುನೀಗಿದರು.

ಕಿಂಬರ‍್ಲಿ ಮೈನ್‍ನಲ್ಲಿನ ಗಣಿಗಾರಿಕೆ ಸ್ತಗಿತಗೊಂಡ ನಂತರ ಈ ಸ್ತಳವನ್ನು ಉಳಿಸಲು ಹಲವಾರು ಯೋಜನೆಗಳನ್ನು ಪ್ರಸ್ತುತ ಪಡಿಸಲಾಯಿತು. ತೆರೆದ ಬಾಯಿಯ ಈ ಬ್ರುಹತ್ ಕುಳಿಯನ್ನು ನೋಡಲು ದೇಶ ವಿದೇಶದ ಪ್ರವಾಸಿಗರು ಹೆಚ್ಚು ಒಲವು ತೋರಿದರು. ಇದರೊಂದಿಗೆ ಇಲ್ಲಿನ ಹಳೆಯ ಕಟ್ಟಡಗಳು, ಅಮೂಲ್ಯವಾದ ಅವಶೇಶಗಳು ಪ್ರವಾಸಿಗರಿಗೆ ಅಚ್ಚುಮೆಚ್ಚಾಯಿತು. ಈ ಹಿನ್ನಲೆಯಲ್ಲಿ ಇದನ್ನು ಪ್ರವಾಸಿ ತಾಣವಾನ್ನಾಗಿ ಅಬಿವ್ರುದ್ದಿ ಪಡಿಸಲು ಡಿ-ಬೀರ್ ಕಂಪನಿ ಮುಂದೆ ಬಂದಿತು. 50 ಮಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಿ ಅತ್ಯುತ್ತಮ ಮಟ್ಟದ ಹಾಗೂ ವಿಶ್ವ ದರ‍್ಜೆಯ ಪ್ರವಾಸೋದ್ಯಮ ಸೌಲಬ್ಯಗಳನ್ನು ಒದಗಿಸಿ ಅಬಿವ್ರುದ್ದಿ ಪಡಿಸಿತು.

ಕಿಂಬರ‍್ಲಿ ಮೈನ್ ಪ್ರಮುಕ ಆಕರ‍್ಶಣೆ ‘ಮೈನ್ ಮ್ಯೂಸಿಯಮ್’ ಇದರಲ್ಲಿ ಗಣಿಗಾರಿಕೆಗೆ ಸಂಬಂದಿಸಿದ ಎಲ್ಲಾ ವಿವರಗಳೂ ಪ್ರವಾಸಿಗರಿಗೆ ದೊರಕುವುದು.

(ಮಾಹಿತಿ ಸೆಲೆ: mining-technology.com)

(ಚಿತ್ರ ಸಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks