ಮೊಮ್ಮಗನ ಮುಗ್ದ ಪ್ರಶ್ನೆ
ಅಂದು ಬಾನುವಾರ. ಎಲ್ಲರಿಗೂ ರಜೆಯಿದ್ದ ಕಾರಣ, ಹೊರಗೆ ಸುತ್ತಾಡಿ ಬರುವ ತೀರ್ಮಾನವಾಯಿತು. ಕಾರನ್ನು ತೆಗೆದು ಬಹಳ ದಿನವಾಗಿತ್ತು. ಎಲ್ಲಿಗೆ? ಎಂಬ ಬ್ರುಹತ್ ಪ್ರಶ್ನೆ ಎದುರಾಯಿತು. ಬೆಂಗಳೂರು ಸುತ್ತ ಮುತ್ತಲಿನ ಎಲ್ಲಾ ಪ್ರೇಕ್ಶಣೀಯ ಸ್ತಳಗಳೂ ಚರ್ಚೆಯಲ್ಲಿ ಹಣಕಿದವು. ಸಂಜೆ ವಾಪಸ್ಸಾಗಲೇ ಬೇಕಿದ್ದ ಕಾರಣ ಊರ ಹೊರ ಹೋಗುವುದು ಅಶ್ಟು ಸಮಂಜಸವೆನಿಸಲಿಲ್ಲ. ಬೆಂಗಳೂರಿನಲ್ಲೇ ಯಾವುದಾದರೊಂದು ಸ್ತಳ ನಿಗದಿ ಪಡಿಸುವ ನಿರ್ದಾರಕ್ಕೆ ಬಂದ ಮೇಲೆ, ತಲೆಗೊಂದರಂತೆ ಹತ್ತಾರು ಸ್ತಳಗಳು ಹೊರಬಂದವು. ಒಮ್ಮತಕ್ಕೆ ಆಲ್ಲಲ್ಲ ಬಹುಮತಕ್ಕೆ ಬರುವಶ್ಟರಲ್ಲಿ ಎರಡು ತಾಸು ಸಮಯ ಹಾಳಾಗಿತ್ತು. ಹೋಗಿ ಬರುವ ಸಮಯ ಸಹ ಕಡಿಮೆಯಾಗಿತ್ತು. ಇಶ್ಟೆಲ್ಲಾ ಸರ್ಕಸ್ ಆದ ನಂತರ ಆಯ್ಕೆಯಾದ ಸ್ತಳ ಕಬ್ಬನ್ ಪಾರ್ಕ್. ಈ ವಿಶಯ ತಿಳಿದ ಕೂಡಲೇ ನನ್ನ ಮೊಮ್ಮಗ ರುತ್ವಿಕ್ ಪ್ರಸಾದ್ ಕುಣಿದು ಕುಪ್ಪಳಿಸಿದ. ಅವನ ಸಂತೋಶಕ್ಕೆ ಎಣೆಯಿಲ್ಲದಾಯಿತು.
ಎಲ್ಲರೂ ಹೊರಟೆವು. ಅಲ್ಲೇ ಎಲ್ಲಾದರೂ ಒಳ್ಳೆಯ ಹೋಟೆಲ್ ನಲ್ಲಿ ಊಟ ಸಹ ಮುಗಿಸುವ ವಿಚಾರ ಸಹ ಎಲ್ಲರ ಒಪ್ಪಿಗೆ ಪಡೆದಿತ್ತು. ಕಬ್ಬನ್ ಪಾರ್ಕ್ ಬಳಿಯಿದ್ದ ಸರ್. ಎಂ.ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂ, ಪಕ್ಕದಲ್ಲಿದ್ದ ಅಕ್ವೇರಿಯಂ ನೋಡಿ ನಂತರ, ಕಬ್ಬನ್ ಪಾರ್ಕಿನ ‘ಟಾಯ್ ಟ್ರೈನ್’, ಕುದುರೆ ಸವಾರಿಯಾಯಿತು. ಕಡಲೇಕಾಯಿ, ಸುಟ್ಟ, ಬೇಯಿಸಿದ ಜೋಳ, ಪಾನಿ ಪೂರಿ, ಸೌತೆಕಾಯಿ, ಪುರಿ ಮಂಡಕ್ಕಿ, ಕೋನ್ ಐಸ್ ಕ್ರೀಂ, ಹಾಗೂ ಅಲ್ಲಿ ಮಾರಾಟಕ್ಕಿದ್ದ ಎಲ್ಲವನ್ನೂ ಮೆದ್ದಿದ್ದಾಯಿತು.
ಬಾನುವಾರವಾಗಿದ್ದ ಕಾರಣ ಮಕ್ಕಳ ದಂಡೇ ಅಲ್ಲಿ ನೆರೆದಿತ್ತು. ಈ ಸಂಬ್ರಮದಲ್ಲಿ ಹೊತ್ತು ಉರುಳಿದ್ದೇ ತಿಳಿಯಲಿಲ್ಲ. ಸಂಜೆಯಾಗುತ್ತಾ ಬಂದಿತ್ತು. ಇಡೀ ದಿನ ಬಹಳ ಕುಶಿಯಿಂದ ಎಲ್ಲವನ್ನೂ ಅನುಬವಿಸಿದ ಮೊಮ್ಮಗ ರುತ್ವಿಕ್, ಹೊರಡುವ ಸಮಯಕ್ಕೆ ಕೊಂಚ ಕಳೆಗುಂದಿದವನಂತೆ ಕಂಡ. ಮನೆಗೆ ಹೊರಡುವ ಮುನ್ನ, ಮೊಮ್ಮಗನನ್ನು ಕುರಿತು “ಪಾಪು ಹೆಂಗಿತ್ತು ಇವತ್ತಿನ ಔಟಿಂಗ್, ಸಕತ್ತಾಗಿತ್ತಲ್ವಾ!! ಹಾರ್ಸ್ ರೈಡಿಂಗ್, ಟಾಯ್ ಟ್ರೈನ್ ರೈಡಿಂಗ್ ಮಜಾ ಇತ್ತಲ್ವಾ? ಕುಶಿಯಾಯಿತಾ?” ಎಂದೆ. ಯಾಕೋ ಅವನ ಮುಕದಲ್ಲಿ ಮಂದಹಾಸವಿರಲಿಲ್ಲ. ಸಂತೋಶ ಕಾಣಲಿಲ್ಲ. ಇನ್ನೂ ಏನೋ ಸಿಗಲಿಲ್ಲ ಎಂಬ ಅತ್ರುಪ್ತಿ, ಬೇಕೆನ್ನುವ ಆಸೆ ಅವನ ಮುಕದಲ್ಲಿ ಕಂಡಿತು. ಅತ್ತ ಇತ್ತ ಎಲ್ಲಾ ಅವನ ದ್ರುಶ್ಟಿ ಹುಡುಕಾಡುತ್ತಿತ್ತು.
“ಯಾಕಪ್ಪಾ ಪಾಪು? ಯಾಕಮ್ಮ ಒಂತರಾ ಇದ್ದೀಯಾ?” ಎನ್ನುತ್ತಾ ಅವನನ್ನು ಬರಸೆಳೆದು ಅಪ್ಪಿದೆ. ಕೊಂಚ ಕೊಸರಾಡಿದ. ನಂತರ “ಯಾಕೋ ರಾಜಾ? ಏನಾಯ್ತು? ಇನ್ನೂ ಸ್ವಲ್ಪ ಹೊತ್ತು ಆಡಬೇಕಾ? ಇಲ್ಲ ತಿನ್ನಲಿಕ್ಕೆ ಇನ್ನೂ ಏನಾದರೂ ಬೇಕಾ?” ಎನ್ನುತ್ತಾ ಅವನನ್ನು ಸಮಾದಾನ ಪಡಿಸಲು ತಲೆ ನೇವರಿಸಿದೆ. ನನ್ನ ಕಡೆಯಿಂದ ಬಂದ ಸಮಾದಾನದ ಮಾತುಗಳಿಗೆ ಅವನ ಬೇಸರ ಕೊಂಚ ಕಡಿಮೆಯಾಯಿತು. “ಮತ್ತೆ ಬೆಳಿಗ್ಗೆ ನೀನೇಳಿದ್ದು ಕಬ್ಬನ್ ಪಾರ್ಕಿಗೆ ಹೋಗೋಣಾ ಅಂತಲ್ವಾ?” ಎಂದು ಮಗದೊಮ್ಮೆ ನನ್ನನ್ನೇ ನೋಡುತ್ತಾ ಪ್ರಶ್ನಿಸಿದ. ನಾನು ಗೊಣಾಡಿಸಿದ ಕೂಡಲೇ “ಮತ್ತೆ ಇಲ್ಲಿ ಕಬ್ಬು ಇಲ್ಲ, ಕಬ್ಬಿನ್ ಹಾಲು ಇಲ್ಲ, ಇದೆಂತ ಕಬ್ಬನ್ ಪಾರ್ಕ್?” ಎನ್ನುತ್ತಾ ತನ್ನ ಅಸಹನೆಯನ್ನು ಹೊರ ಹಾಕಿದ ರುತ್ವಿಕ್. ಅವನ ಮುಗ್ದ ಮಾತಿಗೆ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಕೊನೆಯಲ್ಲಿ ಅವನ ಈ ಪುಟ್ಟ ಆಸೆಯನ್ನು ಪೂರೈಸಲು ಕಬ್ಬಿನ ಹಾಲು ಮಾರುವ ಕೇಂದ್ರವನ್ನು ಹುಡುಕಿ, ಅಲ್ಲಿ ಕಬ್ಬಿನ ಹಾಲನ್ನು ಕೊಡಿಸಿ ಅವನ ಆಸೆಯನ್ನು ತೀರಿಸಿದ್ದಾಯಿತು.
(ಚಿತ್ರ ಸೆಲೆ: wiki)
Ha ha… Beautiful write up sir! Enjoyed reading it…
ಮಕ್ಕಳ ಮುಗ್ದತೆ ! ತುಂಬಾ ಚೆನ್ನಾಗಿದೆ.