ಮುದ್ದು ಮುದ್ದಾದ ಪಾಂಡಾಗಳು

– ಮಾರಿಸನ್ ಮನೋಹರ್.

panda, bear, ಪಾಂಡಾ, ಕರಡಿ

ಜಗತ್ತಿನಲ್ಲಿ ಕರಿ ಕರಡಿ, ಬಿಳಿ ಮಂಜು ಕರಡಿ, ಕಂದು ಕರಡಿ ಅಂತೆಲ್ಲಾ ಇವೆ. ಆದರೆ ಇವತ್ತು ಹೇಳ ಹೊರಟಿರುವುದು ಕಪ್ಪು-ಬಿಳಿ ಎರಡೆರಡು ಬಣ್ಣದ ತುಪ್ಪಳ ಹೊಂದಿರುವ ಒಂದೇ ಒಂದು ತಳಿಯ ಕರಡಿ ಅದು ಪಾಂಡಾಗಳು. ನೋಡಲು ಎಲ್ಲಕ್ಕಿಂತ ಮುದ್ದಾದ ಕರಡಿಗಳು ಇವು. ಕಣ್ಣಿನ ಸುತ್ತ ಕೈಕಾಲುಗಳು ಕಿವಿಗಳು ಕರ‍್ರಗೆ ಇದ್ದು ಉಳಿದ ಮೈಯೆಲ್ಲಾ ಬಿಳಿ ಬಣ್ಣದ ತುಪ್ಪಳ (fur) ಉಳ್ಳದ್ದಾಗಿರುತ್ತವೆ. ಮೊದಲು ಚೈನಾ ಅಂದರೆ ಚೈನಾದ ದೊಡ್ಡ ಗೋಡೆ (the great wall of China), ಚೈನೀಸ್ ಅಡುಗೆ, ಡ್ರಾಗನ್ ಹೀಗೆಲ್ಲಾ ದಿಡೀರ್ ನೆನಪಿಗೆ ಬರುತ್ತಿದ್ದವು. ಈಗ ಚೈನಾ ಅಂದರೆ ಮುದ್ದು ಮುದ್ದಾದ ಪಾಂಡಾಗಳು ಕಣ್ಣು ಎದುರಿಗೆ ಬರುತ್ತವೆ. ಚೈನಾದ ಕುರುಹಾಗಿ ಪಾಂಡಾಗಳೂ ಬಿಂಬಿತವಾಗಿವೆ. ಕುಂಗ್ ಪು ಪಾಂಡಾ ಸಿನಿಮಾದಲ್ಲಿ ಬರುವ ಕರಡಿ ಇದೇ ಪಾಂಡಾ. ತನ್ನ ಪೆದ್ದುತನ ಮತ್ತು ಕುಂಗ್-ಪೂ ಚಿತ್-ಪಟ್ ಗಳಿಂದ ಮಕ್ಕಳು ಮತ್ತು ದೊಡ್ಡವರಿಗೆ ನಗು ತರಿಸುತ್ತದೆ ದಡೂತಿ ಪಾಂಡಾ ಕರಡಿ.

ಪಾಂಡಾಗಳು ಕಾಣಸಿಗುವುದು ಚೈನಾದಲ್ಲಿ ಮಾತ್ರ

ಕೆಲವು ಉಸಿರಿಮನೆಗಳನ್ನು(zoo) ಬಿಟ್ಟರೆ, ಪಾಂಡಾಗಳು ಕಾಣಸಿಗುವುದು ಚೈನಾದಲ್ಲಿ ಮಾತ್ರ. ಅವುಗಳ ತವರೂರು ಚೈನಾದ ತೆಂಕಣ-ನಡು ಬೆಟ್ಟ ಪ್ರದೇಶವಾದ ಸಿಚುವಾನ್. ಈ ಸಿಚುವಾನ್ ಬೆಟ್ಟಪ್ರದೇಶದಲ್ಲಿ ಬಿದಿರಿನ ಕಾಡುಗಳು ಹೇರಳವಾಗಿವೆ. ಈ ಬಿದಿರಿನ ಕಾಡುಳ್ಳ ಬೆಟ್ಟಗಳ ಇಳಿಜಾರಿನ ಜಾಗಗಳಲ್ಲಿ ಪಾಂಡಾಗಳು ತಮ್ಮ ಬದುಕನ್ನು ಸಾಗಿಸುತ್ತವೆ. ಬಿದಿರು ಹೆಚ್ಚಾಗಿರುವ ಕಡೆ ಪಾಂಡಾಗಳು ಹತ್ತಾರು ಸಂಕ್ಯೆಯಲ್ಲಿ ಕಾಣಸಿಗುತ್ತವೆ. ಬಿದಿರಿನ ಕಾಡುಗಳ ಬೆಳೆಯಲ್ಲಿ ಸ್ವಲ್ಪ ಏರುಪೇರು ಆಗಿಬಿಟ್ಟರೆ ಇವು ಅಲ್ಲಿ ಬದುಕಲಾರವು. ಆ ಜಾಗವನ್ನು ಬಿಟ್ಟು ಬೇರೆ ಕಡೆ ಬದುಕಲು ಹೋಗುತ್ತವೆ. ಬಿದಿರಿನ ಹಚ್ಚಹಸುರಿನ ಮೇಲೆ ಇವುಗಳ ಬದುಕು ಕಟ್ಟಿಕೊಂಡಿದೆ. ಕೆಲವು ನೆಪಗಳಿಂದ ಬಿದಿರಿನ ಕಾಡುಗಳು ಹಾಳಾದರೆ ಮತ್ತು ಕಡಿಯಲ್ಪಟ್ಟರೆ ಪಾಂಡಾಗಳ ಎಣಿಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಿರುವುದರಿಂದ ಚೈನಾದ ಆಡಳಿತವು ಪಾಂಡಾಗಳನ್ನು ಸಾಕುವ ಜವಾಬ್ದಾರಿ ತಾನು ತೆಗೆದುಕೊಂಡು ಅವುಗಳನ್ನು ಉಸಿರಿಮನೆಗಳಲ್ಲಿ ಕಾಪಿಡುತ್ತಿದೆ. ಜಗತ್ತಿನಲ್ಲೆಡೆ ಸುಮಾರು 2,000 ಪಾಂಡಾಗಳಿವೆ ಎಂದು ಅಂದಾಜಿಸಲಾಗಿದೆ.

ಬಿದಿರು ಪ್ರಿಯ ಪಾಂಡಾ

ಗಂಡು ಪಾಂಡಾ ಮತ್ತು ಹೆಣ್ಣು ಪಾಂಡಾಗಳ ಮೈಮಾಟದಲ್ಲಿ ಬೇರ‍್ಮೆಯಿಲ್ಲ. ಎರಡೂ ನೋಡಲು ಒಂದೇ ತರಹ ಇರುತ್ತವೆ. ಗಂಡು ಮೈಮಾಟದಲ್ಲಿ ದೊಡ್ಡದಾಗಿದ್ದು ಸರಾಸರಿ 160 ಕಿಲೋ ತೂಗುತ್ತದೆ. ಹೆಣ್ಣು ಪಾಂಡಾ ಚಿಕ್ಕದಾಗಿದ್ದು 70 ಕಿಲೋ ತೂಗುತ್ತದೆ. ಪಾಂಡಾಗಳು ಮಾಂಸದುಣಿಸಿನ(carnivores) ಉಸಿರಿಗಳಾಗಿವೆ. ಕೆಲವೊಮ್ಮೆ ಚಿಕ್ಕ ಹಕ್ಕಿಗಳು, ಇಲಿ, ಜೇನು, ಮೊಟ್ಟೆ (ತತ್ತಿ) , ಮೀನು, ಕಿತ್ತಳೆ, ಬಾಳೆಹಣ್ಣು ತಿನ್ನುತ್ತವೆ. ಆದರೆ ಇವುಗಳು ಉಣಿಸಿನಲ್ಲಿ ಹೆಚ್ಚಾಗಿ ಬಿದಿರಿನ ಎಲೆಗಳು ಮತ್ತು ಕಾಂಡಗಳನ್ನೇ ತಿನ್ನುತ್ತವೆ. ಪಾಂಡಾಗಳ ಕರುಳು ಮತ್ತು ಹೊಟ್ಟೆಯಲ್ಲಿ ಬಿದಿರನ್ನು ಅರಗಿಸಿಕೊಳ್ಳುವ ಯಾವ ಏರ‍್ಪಾಡು ಇಲ್ಲ. ಬಿದಿರಿನಲ್ಲಿ ಸೆಲ್ಯುಲೋಸ್ ಇರುತ್ತದೆ. ಈ ಸೆಲ್ಯುಲೋಸ್ ಅನ್ನು ಪಾಂಡಾಗಳ ಹೊಟ್ಟೆಯಲ್ಲಿ ಇರುವ ಮೈಕ್ರೋಬುಗಳು ಅರಗಿಸುತ್ತವೆ. ಬಿದಿರಿನ ಎಲೆಗಳು ಮತ್ತು ಕಾಂಡಗಳಲ್ಲಿ ಹೆಚ್ಚು ಶಕ್ತಿ ಇಲ್ಲದ ಕಾರಣ ಪಾಂಡಾಗಳು ಹೆಚ್ಚು ಹೆಚ್ಚು ಬಿದಿರನ್ನು ತಿನ್ನುತ್ತಾ ಇರಬೇಕಾಗುತ್ತದೆ. ಪಾಂಡಾಗಳು ದಿನಾಲೂ 9-14 ಕಿಲೋ ಬಿದಿರು ಎಲೆಕಾಂಡ ಮೆಲ್ಲುತ್ತವೆ. ಬಿದಿರಿನಿಂದ ಪಾಂಡಾಗಳಿಗೆ ಬೇಕಾದ ಕಸುವು ದೊರೆಯುವದಿಲ್ಲ. ಮತ್ತು ಪಾಂಡಾಗಳ ಅರಗಿನೇರ‍್ಪಾಟು (digestive system) ಅರಗದ ಬಿದಿರನ್ನು ಬೇಗನೇ ಹಿಕ್ಕೆಯನ್ನಾಗಿ ಮಾಡಿ ಹೊರಗೆ ಹಾಕುತ್ತಾ ಇರುತ್ತದೆ. ಬೂಮಿಯ ಬಡಗು ಮತ್ತು ತೆಂಕಣ ತುದಿಯಲ್ಲಿರುವ(pole) ಮಂಜು ಕರಡಿಗಳ ಹಾಗೆ ಪಾಂಡಾಗಳು ಮೈಲುಗಟ್ಟಲೆ ಊಟವನ್ನು ಅರಸಿಕೊಂಡು ನಡೆಯಲಾರವು.

ಪಾಂಡಾಗಳು ತುಂಬಾ ಸೋಂಬೇರಿ!

ಸಿಚುವಾನ್ ಬೆಟ್ಟಗಳ ಕ್ವಿನ್ ಲಿಂಗ್ ಪ್ರದೇಶದಲ್ಲಿ ಪಾಂಡಾಗಳು ಹೆಚ್ಚಾಗಿ ಒಂಟಿಯಾಗಿ ಬದುಕುತ್ತಿರುತ್ತವೆ. ಕೂಡಿಕೆ ಕಾಲ ಬಂದಾಗ ಗಂಡು ಪಾಂಡಾ, ಹೆಣ್ಣು ಪಾಂಡಾವನ್ನು ಅರಸಿಕೊಂಡು ಹೋಗುತ್ತದೆ. ಮಾರ‍್ಚ್ ತಿಂಗಳಿನಿಂದ ಹಿಡಿದು ಮೇ ತಿಂಗಳಿನವರೆಗೆ ಪಾಂಡಾಗಳ ಕೂಡಿಕೆ ಕಾಲವಾಗಿದೆ. ಹೆಣ್ಣು ಪಾಂಡಾ ಕರಡಿ ಒಂದೇ ಮರಿಯನ್ನು ಹಾಕುತ್ತದೆ. ಅಪರೂಪಕ್ಕೆ ಎರಡು ಅವಳಿ ಜವಳಿ ಮರಿಗಳನ್ನು ಹಾಕುತ್ತದೆ. ಆದರೆ ಹುಟ್ಟಿದ ಅವಳಿ ಮರಿಗಳಲ್ಲಿ ಒಂದನ್ನು ಮಾತ್ರ ತಾಯಿ ಪಾಂಡಾ ಸಾಕಿಕೊಳ್ಳುತ್ತದೆ. ಏಕೆಂದರೆ ತಾಯಿ ಪಾಂಡಾದ ಬಳಿ ಎರಡು ಮರಿಗಳಿಗೆ ಉಣಿಸಲು ಬೇಕಾದಶ್ಟು ಹಾಲು ಇರುವುದಿಲ್ಲ. ಅವಳಿ ಮರಿಗಳಲ್ಲಿ ಒಂದು ತಾಯಿಯ ಹಾಲುಂಡು ಬೆಳೆದರೆ ಇನ್ನೊಂದು ಹಸಿವಿನಿಂದ ತೀರಿ ಹೋಗುತ್ತದೆ. ತಾಯಿಯ ಜೊತೆ ಪಾಂಡಾದ ಮರಿಯು ಎರಡು ಏಡುಗಳನ್ನು(year) ಕಳೆಯುತ್ತದೆ. ಮರಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಹೆಣ್ಣು ಪಾಂಡಾ ಮಾಡುತ್ತದೆ. ಪಾಂಡಾಗಳು ಎಲ್ಲ ಕರಡಿ ತಳಿಗಳಲ್ಲೇ ತುಂಬಾ ಸೋಂಬೇರಿಗಳು. ಮುಂಜಾವು, ನಡ್ಹೊತ್ತು, ನಟ್ಟಿರುಳಿನಲ್ಲಿ ಇವುಗಳ ಚಟುವಟಿಕೆ ಸ್ವಲ್ಪ ಹೆಚ್ಚಾಗಿರುತ್ತದೆ. ಇವು ಸಿಂಹಗಳ ಹಾಗೆ ಹಿಂಡಿನಲ್ಲಿ ಬೇಟೆಯಾಡುವದಿಲ್ಲ.

ನಾಡು-ನಾಡುಗಳನ್ನು ಬೆಸೆಯುವ ಕೆಲಸ ಮಾಡಿದ ಪಾಂಡಾಗಳು

ಮುದ್ದು ಮುದ್ದಾದ ಪಾಂಡಾಗಳು ಮಂದಿಯ ಮನಸೂರೆ ಮಾಡಿವೆ ಇಶ್ಟೆ ಅಲ್ಲ ಎರಡು ನಾಡುಗಳ ನಡುವೆ ಲಿಂಕ್ ಆಗಿ ಕೂಡ ಕೆಲಸ ಮಾಡಿವೆ! ಈಗ ಇದು ಚೀನಿಯರ ಹೊಸ ಡಿಪ್ಲೊಮಸಿ ಆಗಿದೆ. ಚೈನಾ ನಾಡು ತನ್ನ ಪಾಂಡಾಗಳನ್ನು ಮತ್ತೊಂದು ನಾಡಿಗೆ ಕೊಡುವುದು ಪಾಂಡಾ ಡಿಪ್ಲೊಮಸಿ ಆಗುತ್ತದೆ. 1970 ರಲ್ಲಿ ಚೈನಾ ತನ್ನ ನಾಡಿನ ಪಾಂಡಾಗಳನ್ನು ಅಮೆರಿಕ ಮತ್ತು ಜಪಾನ್ ಉಸಿರಿಮನೆಗಳಿಗೆ ಉಡುಗೊರೆಯಾಗಿ ಕೊಟ್ಟಿತು‌. ಅಲ್ಲಿಂದ ಪಾಂಡಾ ಡಿಪ್ಲೊಮಸಿ ಮೊದಲಾಯ್ತು. ಚೈನಾದ ಈ ನಡೆ ಸಾಂಸ್ಕ್ರುತಿಕ ಮತ್ತು ರಾಯಬಾರ ಡಿಪ್ಲೊಮಸಿ ಆಗಿತ್ತು. ಎರಡೂ ನಾಡುಗಳ ನಡುವೆ ಈ ಮುದ್ದಾದ ಪಾಂಡಾಗಳು ಶಾಂತಿ ಸಹಬಾಳ್ವೆ ಮತ್ತು ಹರದುಗಳ(trade) ಕುರುಹುಗಳು ಆದವು. ಆದರೆ 1984 ರಿಂದ ಚೈನಾ ತನ್ನ ಪಾಂಡಾಗಳನ್ನು ಬೇರೆ ದೇಶದ ಉಸಿರಿಮನೆಗಳಿಗೆ ಪುಕ್ಕಟ್ಟೆಯಾಗಿ ಕೊಡುತ್ತಿಲ್ಲ. ಬದಲಿಗೆ ಪಾಂಡಾಗಳನ್ನು ಸಾಲವಾಗಿ ಕೊಡುತ್ತಲಿದೆ. ಚೈನಾದ ಪಾಂಡಾಗಳು ಅಮರಿಕದ ಉಸಿರಿ ಮನೆಗಳಿಗೆ ಸಾಲವಾಗಿ ಕೊಡುವುದಾದರೆ ಆ ಉಸಿರಿಮನೆ ಚೈನಾ ಆಡಳಿತಕ್ಕೆ ಪ್ರತಿ ವರುಶ ಒಂದು ಮಿಲಿಯನ್ ಡಾಲರ್ ಕೊಡುತ್ತವೆ ಮತ್ತು ಈ ಒಪ್ಪಂದ ಹತ್ತು ವರುಶಗಳವರೆಗೆ ಚಾಲ್ತಿಯಲ್ಲಿರುತ್ತದೆ. ಹತ್ತು ವರುಶಗಳು ಆದ ಮೇಲೆ ಆ ಪಾಂಡಾಗಳು ಚೈನಾ ನಾಡಿಗೆ ಹಿಂದಕ್ಕೆ ಕೊಡಬೇಕು ಇಲ್ಲವೇ ಒಪ್ಪಂದ ಹೊಸದಾಗಿ ಮಾಡಿಕೊಳ್ಳಬೇಕು. ಬೇರೆ ದೇಶದಲ್ಲಿ ಹುಟ್ಟಿದ ಪಾಂಡಾ ಮರಿಯು ಚೈನಾ ದೇಶದ ಆಸ್ತಿಯಾಗಿ ಇರುತ್ತದೆ. ಚೈನಾ ಕೇಳಿದರೆ ಆ ಮರಿಯನ್ನು ಹಿಂದಕ್ಕೆ ಕೊಡಬೇಕು!

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: