ಮನೆಸೆರೆ, housearrest

Home security concept. House with lock and chain. 3d

ಅನಿವಾರ‍್ಯ ಗ್ರುಹಬಂದನ…!?

.

ಮನೆಸೆರೆ, housearrest

ಕಳ್ಳರನ್ನು ಮೋಸಗಾರರನ್ನು ಹಿಡಿದು ಅವರನ್ನು ಗ್ರುಹಬಂದನದಲ್ಲಿರಿಸುವದನ್ನು ಕೇಳಿದ್ದೆವು, ನೋಡಿದ್ದೆವು. ಆದರೆ ಕೊರೊನಾ ಹಾವಳಿಯಿಂದ ಈಗ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿದೆ – ಅಂದರೆ ಈ ಗ್ರುಹಬಂದನ ಅನಿವಾರ‍್ಯ. ಈ ಗ್ರುಹಬಂದನ ನಮ್ಮ ಕುಟುಂಬವನ್ನು ಪ್ರೀತಿಸಲು, ಕುಟುಂಬದವರ ಜೊತೆ ಆತ್ಮೀಯವಾಗಿ ಒಡನಾಡಲು, ಅವರೊಡನೆ ಬೆರೆಯಲು, ಸಂವಾದ ಮಾಡಲು ಸದಾವಕಾಶ. ಸಮಯದ ಅಬಾವದಿಂದ ಎಶ್ಟೋ ದಿನಗಳಿಂದ ಬಚ್ಚಿಟ್ಟಿದ್ದ ಮನದಾಳದ ಮಾತುಗಳನ್ನು ವ್ಯಕ್ತಪಡಿಸಲು ಸಾದ್ಯವಾಗದಿದ್ದವರು, ಇತರ ಸದಸ್ಯರ ಸಮ್ಮುಕದಲ್ಲಿ ವ್ಯಕ್ತಪಡಿಸಿ ಹಗುರಾಗಬಹುದು!

ಮನೆಯಲ್ಲಿಯೇ ಉಳಿಯುವುದರಿಂದ ಸಾಕಶ್ಟು ಸಮಯ ಇರುತ್ತದೆ. ಹಾಗಾಗಿ ನಾವು ನಮ್ಮ ಕುಟುಂಬ ಸದಸ್ಯರೊಡಗೂಡಿ ಅಡುಗೆ ಮಾಡಬಹುದು. ಹೆಂಡತಿಗೆ ರಜೆ ಎಂಬುದಿಲ್ಲ, ಆಕೆ ನಿತ್ಯದ ಮನೆಗೆಲಸ ಮಾಡಲೇಬೇಕು. ಕೆಲಸದವಳೂ ಬರುವುದಿಲ್ಲ ಹಾಗಾಗಿ ನಾವು ಪಾತ್ರೆ ತೊಳೆಯಬಹುದು, ಕಸ ಗುಡಿಸಬಹುದು, ಬಟ್ಟೆ ಒಗೆಯಬಹುದು, ಮನೆಯನ್ನು ಶುಚಿಗೊಳಿಸಿ ಒಪ್ಪ ಓರಣವಾಗಿ ಇಡಬಹುದು. ಮನೆಯ ಹೂಗಿಡಗಳ ಆರೈಕೆ ಮಾಡಬಹುದು. ಹೀಗೆ ಹೆಂಡತಿಗೂ ನೆರವಾಗಬಹುದು ಮತ್ತು ಇದರಿಂದ ಸಾಕಶ್ಟು ಸಮಯವೂ ಕಳೆಯುತ್ತದೆ.

ಓದುವ ಅಬಿರುಚಿ ಇರುವವರು ಪುಸ್ತಕಗಳನ್ನು ಓದಿ ಸಂತೋಶಿಸಬಹುದು, ಬರೆಯುವ ಹವ್ಯಾಸವಿರುವವರು ಬರೆದು ಕುಶಿ ಪಡಬಹುದು, ಸಂಗೀತ ಆಲಿಸುವವರು ಯೂ ಟ್ಯೂಬ್ ನಲ್ಲಿ ತಮ್ಮ ಆಯ್ಕೆಯ ಸಂಗೀತ ಕೇಳಬಹುದು. ಕೆಲಸದ ಒತ್ತಡದ ನಡುವೆ ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಲಾಗದಿದ್ದವರು ಆರಾಮಾಗಿ ಸಿನೆಮಾಗಳನ್ನು ನೋಡಬಹುದು. ಚಿತ್ರ ಬಿಡಿಸುವ ಅಬಿರುಚಿ ಇರುವವರು ಚಿತ್ರಕಲೆಯನ್ನು‌ ಕಾಗದದ ಮೇಲೆ, ಕ್ಯಾನ್ವಾಸ್ ಮೇಲೆ ಅರಳಿಸಬಹುದು. ಮಕ್ಕಳೊಡನೆ ಪತ್ನಿಯೊಡನೆ ಬೆರೆತು ಕೇರಂ, ಚೆಸ್, ಚೌಕಾಬಾರ, ಹಾವುಏಣಿಯಾಟ ಮುಂತಾದ ಮನೆಯೊಳಗೆ ಕುಳಿತು ಆಡುವ ಆಟಗಳನ್ನು ಆಡಿ ಸಮಯ ಕಳೆಯಬಹುದು.

ಆದರೆ ಇದೆಲ್ಲ ದೀರ‍್ಗಕಾಲ ಸಾಂಗವಾಗಿ ನೆರವೇರಬೇಕಾದರೆ ಕುಟುಂಬದ ಸದಸ್ಯರೊಡನೆ ಒಳ್ಳೆಯ ಬಾಂದವ್ಯ ಇರಬೇಕು. ‘ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು’ ಎಂಬಂತೆ ಇದ್ದರೆ ಗ್ರುಹಬಂದನವೆಂಬುದು ನರಕವಾಗುತ್ತದೆ. ಆದ್ದರಿಂದ ನಗು ನಗುತ್ತ ಹೊಂದಾಣಿಕೆಯಿಂದಿರಿ, ಪ್ರೀತಿಯಿಂದ ಬೆರೆಯಿರಿ. ಕಂಡಿತ ಸ್ವರ‍್ಗ ನಿಮ್ಮ ಮನೆಯಲ್ಲಿಯೇ ಇರುತ್ತದೆ. ಈ ರೀತಿಯ ಗ್ರುಹಬಂದನವನ್ನು ಸರಿಯಾಗಿ ಪಾಲಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಈ ಮಹಾಮಾರಿ ಕೊರೊನಾದ ವಿರುದ್ದ ಸೆಣೆಸಾಡಿ ಗೆಲ್ಲೋಣ!

( ಚಿತ್ರಸೆಲೆ : positivesecuritywa.com.au )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: