ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ
ಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ.(195-963)

ನೆರೆದು+ಇರ್ದ; ನೆರೆ=ಒಟ್ಟುಗೂಡು/ತುಂಬಿಕೊಳ್ಳು/ಸೇರು; ಇರ್ದ=ಇದ್ದ; ನೆರೆದಿರ್ದ=ಕೂಡಿಕೊಂಡಿದ್ದ/ಒಟ್ಟುಗೂಡಿದ್ದ; ಪಾಪ=ಕೆಟ್ಟ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಗಳಿಸಿಕೊಳ್ಳುವುದು; ಪುಣ್ಯ=ಒಳ್ಳೆಯ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಪಡೆದುಕೊಳ್ಳುವುದು;

ಒಳ್ಳೆಯ ನಡೆನುಡಿಯಿಂದ ವ್ಯಕ್ತಿಗೆ ‘ ಪುಣ್ಯ’ ಬಂದು ಜೀವನದಲ್ಲಿ ಒಲವು ನಲಿವು ನೆಮ್ಮದಿಯು ದೊರಕುವುದೆಂದೂ, ಕೆಟ್ಟ ನಡೆನುಡಿಯಿಂದ ‘ ಪಾಪ ’ ತುಂಬಿಕೊಂಡು ಸಾವು ನೋವು ಉಂಟಾಗುವುದೆಂಬ ನಂಬಿಕೆಯು ಜನಸಮುದಾಯದ ಮನದಲ್ಲಿ ನೆಲೆಗೊಂಡಿದೆ;

ಪಾಪವ=ಪಾಪವನ್ನು; ಹೊನಲು+ಅಲ್ಲಿ; ಹೊನಲು=ಹರಿಯುತ್ತಿರುವ ನೀರಿನ ಪ್ರವಾಹ/ತೊರೆ/ಹೊಳೆ/ನದಿ; ಹೊನಲಿನಲ್ಲಿ=ತುಂಬಿ ಹರಿಯುತ್ತಿರುವ ನೀರಿನಲ್ಲಿ; ಕಳೆದೆನ್+ಎಂಬ; ಕಳೆ=ಹೋಗಲಾಡಿಸು/ನಾಶಮಾಡು/ಇಲ್ಲದಂತೆ ಮಾಡು; ಕಳೆದೆನ್=ನಿವಾರಿಸಿಕೊಂಡೆನು/ಪರಿಹರಿಸಿಕೊಂಡೆನು/ಹೋಗಲಾಡಿಸಿಕೊಂಡೆನು ; ಎಂಬ=ಎನ್ನುವ/ಎಂದು ಹೇಳುವ;

ಅಣ್ಣ=ವಯಸ್ಸಿನಲ್ಲಿ ಹಿರಿಯನಾದ ವ್ಯಕ್ತಿ ಇಲ್ಲವೇ ಸಾಮಾಜಿಕವಾಗಿ ದೊಡ್ಡ ಗದ್ದುಗೆಯಲ್ಲಿರುವ ವ್ಯಕ್ತಿ; ಮತ್ತೊಬ್ಬ ವ್ಯಕ್ತಿಯ ನಡೆನುಡಿಗಳಲ್ಲಿನ ತಪ್ಪುಗಳನ್ನು ಕುರಿತು ಅಣಕ ಮಾಡುವಾಗ ಕೆಲವೊಮ್ಮೆ ‘ ಅಣ್ಣ ‘ ಎಂಬ ಪದವನ್ನು ಬಳಸುತ್ತಾರೆ; ಅಣ್ಣಗಳ=ಅಣ್ಣಂದಿರ; ಬೆಡಗು=ಚತುರತೆ/ತಳುಕು/ಚಮತ್ಕಾರ;

ಅಣ್ಣಗಳ ಬೆಡಗು=ಅಣ್ಣಂದಿರ ಚಮತ್ಕಾರದ ಮಾತು/ತಮ್ಮನ್ನು ತಾವೇ ವಂಚಿಸಿಕೊಳ್ಳುವ ಮಾತು; ಬೇಡ+ಎಂದ+ಆತನ್+ಅಂಬಿಗ; ಬೇಡ=ಅಗತ್ಯವಿಲ್ಲ/ಬೇಕಾಗಿಲ್ಲ; ಎಂದ=ಹೇಳಿದ; ಆತನ್=ಅವನು; ಬೇಡೆಂದಾತನ್=ಬೇಡವೆಂದು ಹೇಳಿದವನು; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವುದನ್ನು ಕಸುಬನ್ನಾಗಿ ಮಾಡಿಕೊಂಡಿರುವ ವ್ಯಕ್ತಿ; ಚೌಡಯ್ಯ=ಹನ್ನೆರಡನೆಯ ಶತಮಾನದ ಒಬ್ಬ ವಚನಕಾರ; ಅಂಬಿಗ ಚೌಡಯ್ಯ=ಅಂಬಿಗ ಚೌಡಯ್ಯನ ವಚನಗಳ ಅಂಕಿತನಾಮ;

ದೇಗುಲವಿರುವ ಇಲ್ಲವೇ ಪವಿತ್ರವಾದ ನೆಲೆಯೆಂದು ಹೆಸರು ಪಡೆದಿರುವ ಊರಿನ ಬಳಿ ಹರಿಯುತ್ತಿರುವ ತೊರೆಯಲ್ಲಿ ಮಿಂದೇಳುವುದರಿಂದ ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಮಾಡಿದ್ದ ಪಾಪವೆಲ್ಲ ಹೊರಟುಹೋಗುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ. ಈ ಬಗೆಯ ನಂಬಿಕೆಯು ಕೇವಲ ಬೆಡಗಿನ ಮಾತೇ ಹೊರತು, ನಿಜಕ್ಕೂ ವಾಸ್ತವವಲ್ಲ. ಏಕೆಂದರೆ ನೀರಿನಲ್ಲಿ ಮುಳುಗಿ ಏಳುವುದರಿಂದ ಮಯ್ಯಿನ ಕೊಳೆ ಹೋಗಬಹುದೇ ಹೊರತು ವ್ಯಕ್ತಿಯು ಮಾಡಿದ ಪಾಪ ಪರಿಹಾರವಾಗುವುದಿಲ್ಲ.

ಪಾಪವೆಂಬುದು ವ್ಯಕ್ತಿಯ ಕೆಟ್ಟ ನಡೆನುಡಿಯಿಂದ ಅವನ ವ್ಯಕ್ತಿತ್ವಕ್ಕೆ ಅಂಟಿರುವ ಕಳಂಕ. ವ್ಯಕ್ತಿಯು ತನ್ನ ಕೆಟ್ಟತನಕ್ಕಾಗಿ ಮನನೊಂದು, ಮತ್ತೆ ಅಂತಹ ತಪ್ಪುಗಳನ್ನು ಮಾಡದಿರುವ ನಿಲುವನ್ನು ತಳೆದು , ಒಳ್ಳೆಯ ನಡೆನುಡಿಗಳಿಂದ ಬಾಳಲು ತೊಡಗಿದಾಗ ಮಾತ್ರ ಮಾಡಿದ ಪಾಪ ನಿವಾರಣೆಯಾಗುತ್ತದೆ ಎಂಬುದು ವಚನಕಾರನ ಇಂಗಿತವಾಗಿದೆ.

ಲಿಂಗವಿದ್ದಲ್ಲಿ ಫಲವೇನು
ಆಚಾರವಿಲ್ಲದನ್ನಕ್ಕ.(243-968)

ಲಿಂಗ+ಇದ್ದಲ್ಲಿ; ಲಿಂಗ=ಶಿವನ ಸಂಕೇತವಾದ ವಿಗ್ರಹ. ಲಿಂಗವಿದ್ದಲ್ಲಿ=ಅಂಗಯ್ ಮೇಲೆ ಇಟ್ಟುಕೊಂಡು ಪೂಜಿಸುವ ಇಶ್ಟಲಿಂಗ ಇಲ್ಲವೇ ಕೊರಳಲ್ಲಿ ಕಟ್ಟಿಕೊಳ್ಳುವ ಲಿಂಗವನ್ನು ವ್ಯಕ್ತಿಯು ಹೊಂದಿದ್ದರೆ; ಫಲ+ಏನು; ಫಲ=ಪ್ರಯೋಜನ/ಪರಿಣಾಮ; ಏನು=ಯಾವುದು; ಆಚಾರ+ಇಲ್ಲದ+ಅನ್ನಕ್ಕ; ಆಚಾರ=ಒಳ್ಳೆಯ ನಡೆನುಡಿ/ಒಳ್ಳೆಯ ನಡವಳಿಕೆ; ಅನ್ನಕ್ಕ=ವರೆಗೆ/ತನಕ; ಇಲ್ಲದನ್ನಕ್ಕ=ಇಲ್ಲದಿದ್ದರೆ/ಇಲ್ಲದಿರುವ ತನಕ;

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ಪಾಲಿಗೆ ದೇವರ ಪ್ರತಿರೂಪವಾದ ಲಿಂಗವೆಂಬುದು ‘ ಕಲ್ಲು/ಮರ/ಮಣ್ಣು/ಲೋಹ” ದಿಂದ ಮಾಡಿದ ವಿಗ್ರಹವಾಗಿರಲಿಲ್ಲ. ವ್ಯಕ್ತಿಯ ಮಯ್ ಮನದಲ್ಲಿ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಮೂಡಿಸುವ ಒಳದನಿಯನ್ನು ಲಿಂಗವೆಂದು ತಿಳಿದಿದ್ದರು. ಆದ್ದರಿಂದಲೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಎಸಗದಿರುವ ವ್ಯಕ್ತಿಯು ಮಾಡುವ ಲಿಂಗ ಪೂಜೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ನುಡಿಗಳು ಸೂಚಿಸುತ್ತಿವೆ.

ಲೋಭವೆಂಬ ಗ್ರಹಣ ಹಿಡಿದವರ
ಏತರಿಂದಲೂ ನಿಲ್ಲಿಸಲಾಗದು.(176-962)

ಲೋಭ+ಎಂಬ; ಲೋಭ=ಅತಿಯಾಸೆ/ದುರಾಸೆ/ಜಿಪುಣತನ; ಎಂಬ=ಎನ್ನುವ; ಗ್ರಹಣ=ಹಿಡಿಯುವುದು/ಆವರಿಸಿಕೊಳ್ಳುವುದು/ವಶಪಡಿಸಿಕೊಳ್ಳುವುದು; ಗ್ರಹಣ=ಬೂಮಿ, ಸೂರ‍್ಯ ಹಾಗೂ ಚಂದ್ರ – ಇವು ಮೂರು ಒಂದೇ ರೇಕೆಯಲ್ಲಿ ಬಂದಾಗ ಬೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಇಲ್ಲವೇ ಸೂರ‍್ಯನ ಬಿಂಬಕ್ಕೆ ಚಂದ್ರ ಬಿಂಬ ಅಡ್ಡವಾಗಿ ಉಂಟಾಗುವ ಕತ್ತಲೆಯ ಆವರಣ;

ಏತರಿಂದಲೂ=ಯಾವುದರಿಂದಲೂ/ಯಾವುದೇ ಬಗೆಯಿಂದಲೂ; ನಿಲ್ಲಿಸಲ್+ಆಗದು; ನಿಲ್ಲಿಸಲ್=ತಡೆಯಲು/ಹತೋಟಿಯಲ್ಲಿಡಲು/ತಿದ್ದಿ ಸರಿಪಡಿಸಲು; ಆಗದು=ಆಗುವುದಿಲ್ಲ;

“ ಗ್ರಹಣ ಹಿಡಿಯುವುದು “ ಎಂಬ ನುಡಿಗಟ್ಟು ಒಂದು ರೂಪಕವಾಗಿ ಬಳಕೆಯಾಗಿದೆ. ಚಂದ್ರಗ್ರಹಣದಲ್ಲಿ ಹೇಗೆ ಚಂದ್ರನ ಕಾಂತಿಯು ಮಸುಕಾಗುವುದೋ ಹಾಗೂ ಸೂರ‍್ಯಗ್ರಹಣದಲ್ಲಿ ಹೇಗೆ ಸೂರ‍್ಯನ ಪ್ರಕಾಶ ಕುಗ್ಗುವುದೋ ಅಂತೆಯೇ ವ್ಯಕ್ತಿಯ ಮಯ್ ಮನದಲ್ಲಿ ಅತಿಯಾಸೆ ಎಂಬುದು ತುಂಬಿಕೊಂಡಾಗ ಅವನ ವ್ಯಕ್ತಿತ್ವಕ್ಕೆ ಕಪ್ಪುಮಸಿಯು ಬಳಿದುಕೊಳ್ಳುತ್ತದೆ.

“ ಲೋಕದಲ್ಲಿರುವ ಸಂಪತ್ತು , ಆಡಳಿತದ ಗದ್ದುಗೆ ಮತ್ತು ಚೆನ್ನಾಗಿರುವುದೆಲ್ಲವೂ ತನ್ನೊಬ್ಬನದೇ ಆಗಬೇಕು ಮತ್ತು ಎಂದೆಂದಿಗೂ ಅದೆಲ್ಲವೂ ತನ್ನಲ್ಲಿಯೇ ಇರಬೇಕು “ ಎಂಬ ದುರಾಸೆಯು ವ್ಯಕ್ತಿಯನ್ನು ಗ್ರಹಣದಂತೆ ಹಿಡಿಯುತ್ತದೆ. ಇಂತಹ ವ್ಯಕ್ತಿಗೆ ತಿಳಿಯ ಹೇಳಿ , ಅವನ ದುರಾಸೆಯನ್ನು ತಗ್ಗಿಸಿ, ಅವನನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಯಾರಿಂದಲೂ ಆಗುವುದಿಲ್ಲ.

ಏಕೆಂದರೆ ಮಿತಿಯಿಲ್ಲದ ಆಸೆಗೆ ಒಳಗಾಗಿರುವ ವ್ಯಕ್ತಿಯಲ್ಲಿ ಸಾಮಾಜಿಕ ಜವಾಬ್ದಾರಿಯಾಗಲಿ, ನಾಲ್ಕು ಜನ ತನ್ನನ್ನು ಏನೆಂದಾರು ಎಂಬ ಹೆದರಿಕೆಯಾಗಲಿ ಇಲ್ಲವೇ ನಾಚಿಕೆಯಾಗಲಿ ಇರುವುದಿಲ್ಲ. ತನ್ನ ದುರಾಸೆಯ ಈಡೇರಿಕೆಗಾಗಿ ಯಾವುದನ್ನು ಬೇಕಾದರೂ ಹಾಳು ಮಾಡಲು, ಯಾರನ್ನು ಬೇಕಾದರೂ ಬಲಿಕೊಡಲು ಇಲ್ಲವೇ ಬಲಿ ತೆಗೆದುಕೊಳ್ಳಲು ಅವನು ತಯಾರಾಗಿರುತ್ತಾನೆ.

( ಚಿತ್ರ ಸೆಲೆ: lingayatreligion.com )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: