ನಾನು ಮತ್ತು ಮಶೀನುಗಳು
ಕಲಿಮನೆಯಲ್ಲಿ ಓದುತ್ತಿದ್ದಾಗ ನಡುಹೊತ್ತಿನ ಊಟಕ್ಕೆ ಬಿಡುವು ಕೊಟ್ಟಾಗ, ಊಟ ಮಾಡಿಕೊಂಡು ನೀರು ಕುಡಿಯಲು ಬೋರವೆಲ್ ಕಡೆಗೆ ಹೋಗುತ್ತಿದ್ದೆವು. ಶಾಲೆಯಲ್ಲಿ ನೀರಿನ ಏರ‍್ಪಾಡು ಕೇವಲ ಟೀಚರುಗಳಿಗೆ ಮಾತ್ರ ಇತ್ತು, ನಮಗೆ ಕಲಿಮನೆಯ ನೀರು ಬೇಕಾಗಿಯೂ ಇರಲಿಲ್ಲ. ನಮಗೆ ನಮ್ಮ ಒಲವಿನ ಬೋರವೆಲ್ ನೀರೇ ಬೇಕಾಗಿತ್ತು. ಅದಕ್ಕೂ ಒಂದು ನೆಪವಿದೆ, ಬೋರವೆಲ್ ಕಲಿಮನೆಯಿಂದ ದೂರದಲ್ಲಿತ್ತು. ನಮಗೆ ಆ ಬೋರವೆಲ್ ಕಲಿಮನೆಯಿಂದ ಇನ್ನೂ ದೂರದಲ್ಲಿರಬೇಕೆಂದು ಅನ್ನಿಸುತ್ತಿತ್ತು. ಅಲ್ಲಿಯೇ ನೀರು ಕುಡಿಯುತ್ತಾ ಹೊತ್ತು ಕಳೆಯುತ್ತಾ ಇರುತ್ತಿದ್ದೆವು. ಆಮೇಲೆ ಕಲಿ ಮನೆಯಲ್ಲಿ ಟೀಚರು ಕೇಳಿದರೆ “ನೀರು ಕುಡಿಯಲು ಬೋರವೆಲ್ಗೆ ಹೋಗಿದ್ದೆ, ಅದಕ್ಕೆ ತಡವಾಯ್ತು” ಅಂತ ಸಬೂಬು ಹೇಳುತ್ತಿದ್ದೆವು. ಟೀಚರುಗಳು ನಮ್ಮ ತಲೆಬುಡವಿಲ್ಲದ ನೆಪಗಳನ್ನು ಎತ್ತಿ ಕಿಟಕಿಯಿಂದ ಹೊರಗೆ ಬಿಸಾಡಿ ಚಡಿಯಿಂದ ರಪ್ ಎಂದು ಅಂಗೈಗೆ ಹೊಡೆಯುತ್ತಿದ್ದರು.
ಬೋರವೆಲ್ಗೆ ಹೋಗುವಾಗ ಒಂದು ದಿನ, ರೋಡು ಮಾಡುತ್ತಿದ್ದರು. ಗಟ್ಟಿಯಾದ ಟಾರಿನ ಪೀಪಿಗಳಿಗೆ ತೂತು ಹೊಡೆದು ಅವನ್ನು ಡಾಂಬರು ಕಲಸುವ ಮಶೀನಿನ ಬಾಯಿಗೆ ಹಾಕುತ್ತಿದ್ದರು ಆ ಮಶೀನಿನ ಹೊಟ್ಟೆಯಲ್ಲಿ ಬೆಂಕಿ ದಗದಗ ಉರಿಯುತ್ತಾ ಇತ್ತು. ಕೆಲಸದಾಳುಗಳು ತೆಲುಗಿನಲ್ಲಿಯೂ ಕನ್ನಡದಲ್ಲಿಯೂ ಬೈದಾಡಿಕೊಳ್ಳುತ್ತಾ, ಚೀರುತ್ತಾ, ಕೂಗುತ್ತಾ ಬುಟ್ಟಿಯಲ್ಲಿ ಚಿಕ್ಕ ಜಲ್ಲಿಕಲ್ಲು ತುಂಬಿ ಮಶೀನಿನ ಬಾಯಿಗೆ ಹಾಕುತ್ತಿದ್ದರು. ಡಾಂಬರು ಕಲಸುವ ಮಶೀನು ಗರಗರ ತಿರುಗುತ್ತಾ ಜಲ್ಲಿ ಮತ್ತು ಟಾರನ್ನು ಬೆಂಕಿಯಿಂದ ಬಿಸಿಮಾಡುತ್ತಾ ಹದವಾಗಿ ಮಿಕ್ಸ್ ಮಾಡುತ್ತಿತ್ತು. ಮಿಕ್ಸ್ ಆದ ಮೇಲೆ ಮಶೀನ್ ಆಪರೇಟರ್ ಅದನ್ನು ಬಗ್ಗಿಸಿ ಒಂಟಿಗಾಲಿ ಬಂಡಿಗಳಿಗೆ ತುಂಬುತ್ತಿದ್ದ. ತಳ್ಳಿಕೊಂಡು ಹೋಗುತ್ತಾ ಅದನ್ನು ಮಣ್ಣಿನ ಕಚ್ಚಾ ಹಾದಿಯ ಮೇಲೆ ಹಾಕಿ ಬರುತ್ತಾ ಇದ್ದರು. ರೋಡ್ ರೋಲರ್ ಗಡಗಡ ಎಂದು ನನಗೆ ಬಲು ಇಶ್ಟವಾದ ಸದ್ದು ಮಾಡುತ್ತಾ, ಡುಮ್ಮನೆಯ ಪುಟ್ಟ ಹುಡುಗನ ಹಾಗೆ ಅತ್ತಿಂದ ಇತ್ತ ಓಡಾಡುತ್ತಾ ಡಾಂಬರನ್ನು ತನ್ನ ಗನ ತೂಕದ ಗಾಲಿಗಳ ಕೆಳಗೆ ತಟ್ಟಿ ಸಮಮಾಡುತ್ತಾ ಹೋಗುತ್ತಿತ್ತು. ಅದರ ಎರಡು ಹಿಂಗಾಲಿಗಳ ಮೇಲೆ ಒಬ್ಬಳು ಬಕೆಟಿನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಬಟ್ಟೆ ಒದ್ದೆ ಮಾಡಿ ಗಾಲಿಗಳ ಮೇಲೆ ಹಾಕುತ್ತಿದ್ದಳು. ಡಾಂಬರು ರೋಲರ‍್ಗೆ ಅಂಟಿಕೊಳ್ಳಬಾರದು ಎಂದು.
ಈ ಡಾಂಬರು ಕೆಲಸ ಮಾಡುವವರ ಮಕ್ಕಳು ಜಲ್ಲಿಕಲ್ಲಿನ ಕುಪ್ಪೆಯ ಬಳಿ, ಮರದ ಕೆಳಗೆ ಹಾಸಿದ ಹೊಲಸಾದ ಕಾರ‍್ಪೆಟ್ ಮೇಲೆ, ಅಲ್ಲಿ ಇಲ್ಲಿ ಆಡಿಕೊಳ್ಳುತ್ತಾ ಇರುತ್ತಿದ್ದರು. ನನಗೂ ಎಶ್ಟೋ ಸಲ ನನ್ನ ಅಪ್ಪ-ಅಮ್ಮ ಕೂಡ ಡಾಂಬರು ಕೆಲಸ ಮಾಡುವವರು ಆಗಿದಿದ್ದರೆ ನಾನು ಕಲಿಮನೆಗೆ ಹೋಗುವುದೂ ಇರುತ್ತಿರಲಿಲ್ಲ ಮತ್ತೆ ಯಾವಾಗಲೂ ರೋಡ್ ರೋಲರ್ ನ ಬಳಿಯೇ ಆಟವಾಡುತ್ತಾ ರೋಡು ಮಾಡುವುದನ್ನು ನೋಡುತ್ತಾ ಇರಬಹುದಾಗಿತ್ತು ಎಂದು ಬಲವಾಗಿ ಅನ್ನಿಸುತ್ತಿತ್ತು! ನನ್ನ ಅಪ್ಪ ಒಂದು ಸಲ “ಮುಂದೆ ಏನಾಗ್ತಿಯೋ?” ಅಂತ ಕೇಳಿದ್ದರು ನಾನು ಪಟಕ್ಕನೇ “ರೋಡ್ ರೋಲರ್ ನಡೆಸುವ ಡ್ರೈವರ್ ಆಗ್ತೀನಿ” ಎಂದು ಹೇಳಿ ಅಪ್ಪ-ಅಮ್ಮ ಇಬ್ಬರ ಕೈಯಲ್ಲಿ ಬೈಸಿಕೊಂಡಿದ್ದೆ. ಆದರೆ ನಾನು ಮನಸಿನಲ್ಲಿ ಮುಂದೆ ರೋಡ್ ರೋಲರ್ ಡ್ರೈವರೇ ಆಗುತ್ತೇನೆ ಎಂದು ದಿಟಮಾಡಿಕೊಂಡಿದ್ದೆ! ಡಾಂಬರು ಮಾಡುವುದನ್ನು ನೋಡುತ್ತಾ ಕಲಿಕೆಯನ್ನೇ ಮರೆತಿದ್ದ ನನಗೆ ನನ್ನ ಗೆಳೆಯನೊಬ್ಬ ಓಡುತ್ತಾ ಬಳಿ ಬಂದು “ಟೀಚರ್ ನಿನ್ನ ಕರೀತಾ ಇದ್ದಾರೆ ಬಾ” ಎಂದು ಕರೆದ. ಊಟದ ಬಿಡುವು ಮುಗಿದು ಹತ್ತು ನಿಮಿಶಗಳಾಗಿತ್ತು. ನಾನು ಇನ್ನೂ ಕ್ಲಾಸಿಗೆ ಸೇರಿರಲಿಲ್ಲ. ಕ್ಲಾಸಿಗೆ ಹೋದ ಮೇಲೆ ಗಣಿತದ ಟೀಚರ್ ನನ್ನನ್ನು ಎಲ್ಲಿಲ್ಲದ ಅಕ್ಕರೆಯಿಂದ ಬಳಿ ಕರೆದು ಕೈಗಳನ್ನು ಬಿಸಿಬಿಸಿ ಹೋಳಿಗೆಗಳಿಂದ ತುಂಬಿದ್ದರು!
ಇನ್ನೂ ಮನೆ ಕಟ್ಟುವಾಗ ಬಳಸುವ ಕಾಂಕ್ರೀಟ್ ಮಾಡುವ ಮಶೀನ್ ಕೆಲಸ ಮಾಡುವುದನ್ನು ನೋಡುವುದು ನನಗೆ ಆರನೇ ಪ್ರಾಣ! ಜಲ್ಲಿಕಲ್ಲು ತರುವವರು, ಮರಳು ತರುವವರು ಸಿಮೆಂಟ್ ಚೀಲವನ್ನು ಕಲ್ಲಿನ ಚೂರಿಯಿಂದ ಪರಪರ ಹರಿದು ತರುವವರು, ಕೊಡಗಟ್ಟಲೇ ನೀರು ಹೊತ್ತೊಯ್ಯುವವರು, ಆ ಮಶೀನ್ ತಿರುಗಿಸುವವನು ಒಬ್ಬರೇ ಇಬ್ಬರೇ ಈ ಕೆಲಸ ಮಾಡುವವರು! ಒಂದು ಪಟಾಲಮ್ ಬರುತ್ತೆ. ಮಾಡಿದ ಕಾಂಕ್ರೀಟ್ ಅನ್ನು ಕ್ರೇನ್ ನಲ್ಲಿ ತುಂಬಿ ಅದನ್ನು ಮೇಲೆ ಕಳುಹಿಸುವುದು. ಮೇಲೆ ಮಾಳಿಗೆ ಹಾಕುತ್ತಿರುವವರು ಮೇಲೆ ಬಂದ ಕಾಂಕ್ರೀಟ್ ಅನ್ನು ಬಗ್ಗಿಸಿಕೊಂಡು ಕಬ್ಬಿಣದ ಸರಳುಗಳ ಬಲೆಯ ಮೇಲೆ ಹರಡಿಸುವುದು. ಆಟವಾಡುವುದನ್ನು ನಿಲ್ಲಿಸಿ ಇವನ್ನೆಲ್ಲಾ ಇಶ್ಟಪಟ್ಟು ನೋಡಲು ಹೋಗುತ್ತಿದ್ದೆ.
ಬುಲ್ ಡೋಜರ್ ಬಗ್ಗೆ ಹೇಳುವುದೇನಿದೆ?! ಈವಾಗಂತೂ 10×10 ಅಡಿ ಗುಂಡಿ ತೋಡಲೂ ಬುಲ್ ಡೋಜರ್ ಕರೆಸಿಕೊಳ್ಳುತ್ತಿದ್ದಾರೆ! ಕೆಲಸದಾಳುಗಳು ಮುಂಜಾನೆ ಹತ್ತೂವರೆ ಗಂಟೆಗೆ ಬರಬೇಕು ಮೆಲ್ಲಗೆ ಕೆಲಸ ಶುರುಮಾಡಬೇಕು. ಅವರು ಕೆಲಸ ಮಾಡುವಾಗ ದೊಡ್ಡದೊಂದು ಅಡ್ಡಿಯಾಗುತ್ತೆ, ಅದೇ ನಡುಹೊತ್ತಿನ ಊಟದ ಸಮಯ. ಅದಕ್ಕೆ ಸುಮಾರು ಒಂದು ಗಂಟೆ ಕಳೆದ ಮೇಲೆ ಮತ್ತೆ ಕೆಲಸ ಶುರುಮಾಡಿ ಮುಗಿಸಿದಾಗ ಅವರ ಪ್ರಕಾರ ನಡುರಾತ್ರಿ ಆಗಿರುತ್ತದೆ. ಅಂದರೆ ಸಂಜೆ ಐದು ಗಂಟೆ! ಆಗ ಎಲ್ಲ ಪ್ಯಾಕ್ಅಪ್. ಇದರಿಂದಾಗಿ ಚಿಕ್ಕಪುಟ್ಟ ಕೆಲಸಕ್ಕೂ ದೊಡ್ಡ ಮಶಿನರಿಗಳ ಬಳಕೆ ಮಾಡುತ್ತಿದ್ದಾರೆ ಜನ. ಐದು ಎಕರೆ ಹೊಲದಲ್ಲಿ ರಾಶಿ ಮಾಡಲೂ ಒಕ್ಕಣೆ ಮಶೀನ್ ಗೆ (ಹಾರ‍್ವೆಸ್ಟಿಂಗ್ ಮಶೀನ್) ಬೇಡಿಕೆ ಹೆಚ್ಚುತ್ತಿದೆ. ಪುಸ್ತಕಗಳು ಮನುಶ್ಯನ ನಿಜವಾದ ಗೆಳೆಯರು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಮಶೀನುಗಳು ಮಾತ್ರ ಮನುಶ್ಯನ ನಿಜವಾದ ಗೆಳೆಯರು, ಹೊಸ ಜಗತ್ತಿನ ನಿಯತ್ತಾಗಿರುವ ಹೆವೀ ಎತ್ತುಗಳು!
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು