ಹಳ್ಳಿ ಬದುಕು: ಒಂದು ಅನುಬವ
ಒಂದೂರಿಂದ ಮತ್ತೊಂದೂರಿಗೆ ಹೋಗಿ ನಾಲ್ಕಾರು ದಿನಗಳು ಅಲ್ಲಿ ಇದ್ದಾಗ, ಆ ಬಾಗದ ಜನರು ಬದುಕುವ ರೀತಿ ಮತ್ತು ಅಲ್ಲಿನ ಬೌಗೋಳಿಕ ಸನ್ನಿವೇಶ ಇವುಗಳತ್ತ ಒಂದು ಬಗೆಯ ಕುತೂಹಲ ನಮ್ಮೊಳಗೆ ಒಡಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಪ್ರತಿ ಐವತ್ತರಿಂದ ಅರವತ್ತು ಕಿಲೋಮೀಟರ್ ಗಳಿಗೆ ಜನರ ಜೀವನ ಶೈಲಿ, ಜೊತೆಗೆ ಆ ಬಾಗದ ಪ್ರಕ್ರುತಿಯಲ್ಲಿನ ವಿಬಿನ್ನತೆ ನಮಗೆ ಅನಾವರಣಗೊಳ್ಳುವುದು ತೀರ ಸಾಮಾನ್ಯ.
ಮದಕರಿ ನಾಯಕರ ಚಿತ್ರದುರ‍್ಗದಿಂದ ತುಂಗಬದ್ರಾ ಅಣೆಕಟ್ಟಿರುವ ಹೊಸಪೇಟೆ ನಗರಿಯನ್ನು ಸಂಪರ‍್ಕಿಸುವ ರಾಶ್ಟ್ರೀಯ ಹೆದ್ದಾರಿ 50ರ ಮಾರ‍್ಗಮದ್ಯದಲ್ಲಿ ಬಣವಿಕಲ್ಲು ಎಂಬ ಊರು ಬರುತ್ತೆ. ಆ ಬಣವಿಕಲ್ಲಿನಿಂದ ಕೊಟ್ಟೂರಿಗೆ ಹೋಗುವ ದಾರಿಯಲ್ಲಿ ಸೂಲದಹಳ್ಳಿ ಹಾಗು ಅಗ್ರಹಾರ ಹೆಸರಿನ ಊರುಗಳು ಇವೆ.
ಸದ್ಯ ದರೆಯಾದ್ಯಂತ ಮನುಕುಲವನ್ನು ಹಿಡಿಯಾಗಿ ತನ್ನ ಹತೋಟಿಗೆ ತೆಗೆದುಕೊಂಡಿರುವ ಕೊರೋನಾ ವೈರಸಿನ ಮಹಾಕ್ರುಪೆಯಿಂದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿರುವ ಈ ಅಗ್ರಹಾರ, ಸೂಲದಹಳ್ಳಿ ಊರುಗಳಲ್ಲಿ ಸುಮಾರು ಒಂದು ತಿಂಗಳಿನಿಂದ ಇದ್ದೇನೆ. ಅರೆ ಮಲೆನಾಡಿನಂತಹ ಪ್ರಾಕ್ರುತಿಕ ಸೊಬಗನ್ನು ಈ ಎರಡು ಊರುಗಳು ಪಡೆದುಕೊಂಡಿವೆ. ವಿಶೇಶವಾಗಿ ಇಲ್ಲಿ ಬೇವು, ಹೊಂಗೆ, ಹುಣಸೆ ಮರಗಳು ಸಾಕಶ್ಟಿವೆ. ಇಶ್ಟಲ್ಲದೆ ಇವೆರಡು ಊರುಗಳ ಸುತ್ತಲೂ ಅಂತರ‍್ಜಲ ಸಮ್ರುದ್ದವಾಗಿದ್ದು, ರೈತರ ಹೊಲಗಳಲ್ಲಿ ಬೋರ‍್ವೆಲ್ ಮೂಲಕ ಹರಿದು ಬರುವ ನೀರು ಹೆಚ್ಚಿರುತ್ತೆ. ಬೇಸಿಗೆ ಕಾಲದಲ್ಲೂ ಈ ಬಾಗದ ರೈತರು ಶೇಂಗಾ, ನವಣೆ, ರಾಗಿ, ಟೊಮ್ಯಾಟೊ, ಈರುಳ್ಳಿ, ತೊಗರಿ, ಕುಂಬಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ ಕೂಡ. ಇಲ್ಲಿನ ರೈತರ ಹೊಲಗಳ ಬದುಗಳಲ್ಲಿ ಬೇವು, ಹೊಂಗೆ,ಜಾಲಿ, ಸೀತಾಪಲ ಗಿಡಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಇವೆಲ್ಲದರ ಜೊತೆಗೆ ಇವೆರಡು ಊರುಗಳಿಗೆ ಅನತಿ ದೂರದಲ್ಲಿ ಸುತ್ತುವರೆದ ವಿಸ್ತಾರವಾದ ಕಾಯ್ದಿಟ್ಟ ಕುರುಚಲು ಅರಣ್ಯ ಪ್ರದೇಶವಿದೆ. ಇದು ಪ್ರಕ್ರುತಿ ಪ್ರಿಯರಿಗೆ ಸಂತಸದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ.
ನಾನು ಗಮನಿಸಿದ ಹಾಗೇ ಕೋಗಿಲೆ, ಗುಬ್ಬಿ, ಕೆಂಬೂತ, ಕಾಗೆ, ಮರ ಕುಟುಕ, ಬಾವಲಿ ಇನ್ನು ಹಲವು ಬಗೆಯ ಹಕ್ಕಿಪಕ್ಶಿಗಳು ಬಹಳಶ್ಟು ಸಂಕ್ಯೆಯಲ್ಲಿ ಇವೆ. ಅವುಗಳ ಸಿರಿ ಕಂಟದಿಂದ ಬಿತ್ತರಗೊಳ್ಳುವ ವಿವಿದ ಬಗೆಯ ಚಿಲಿಪಿಲಿ ನಿನಾದ ಮನೆಯ ಅಕ್ಕಪಕ್ಕ ಇರುವ ಹಸಿರು ಮರಗಳಿಂದ ನಿರಂತರವೆನ್ನುವಂತೆ ಬೆಳಗ್ಗೆ, ಹಗಲು ಹಾಗೂ ಸಂಜೆಯ ವೇಳೆ ಕೇಳಿ ಬರುತ್ತಿರುತ್ತೆ. ನವಿಲುಗಳು ಸಹ ಇತ್ತೀಚೆಗೆ ಕಾಡನ್ನು ಬಿಟ್ಟು ನಾಡನ್ನು ಸೇರಿದಂತೆ ಕಾಣುತ್ತದೆ. ಆಗಾಗ ಅವುಗಳ ಕೂಗು ಕೇಳಿಬರುತ್ತೆ ಹಾಗು ದರ‍್ಶನವು ಕೂಡ ಆಗುತ್ತೆ.
ಈ ಬಾಗದ ಜನರನ್ನು ಜವಾರಿ (ನಾಟಿ) ಮಂದಿ ಎಂದು ಕರೆಯುವುದು ವಾಡಿಕೆ. ಅದು ಬಹುತೇಕ ನಿಜ ಎಂಬುದು ಇಲ್ಲಿಗೆ ಬಂದ ಮೇಲೆ ಗೊತ್ತಾಗುತ್ತೆ. ಇಲ್ಲಿ ಜನರು ಬಳಸುವ ಬೆಳ್ಳುಳ್ಳಿ, ಮೆಣಸಿನಕಾಯಿ, ಮ್ಯೆಂತ್ಯ, ಕೊತ್ತಂಬರಿ ಹೀಗೆ ಬಹುತೇಕ ತರಕಾರಿ, ಸೊಪ್ಪುಗಳು ನಾಟಿಯಾದ್ದಾಗಿರುತ್ತವೆ. ಸೂಲದಹಳ್ಳಿಯಲ್ಲಿ ಪ್ರತಿ ಶನಿವಾರ ಕೂಡುವ ಸಂತೆಯಲ್ಲಿ ಕೊರೊನಾದ ನಿಮಿತ್ತ ತರಕಾರಿ ಮಳಿಗೆಗಳನ್ನು ನೂರು, ಇನ್ನೂರು ಮೀಟರ್ ದೂರದಲ್ಲಿ ತೆರೆದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿರುವುದು ಕುಶಿಯ ವಿಚಾರ. ಜವಾರಿ ವಿಶಯವಾಗಿ ಮುಂದುವರೆದು ಹೇಳಬೇಕೆಂದರೆ ಸಿಂದಿ, ಜರ‍್ಸಿ ಮುಂತಾದ ತಳಿ ಹಸುಗಳಿಗಿಂತ ನಾಟಿ ಹಸುಗಳು, ಎಮ್ಮೆಗಳು ಹೆಚ್ಚಾಗಿ ಕಂಡು ಬರುತ್ತವೆ. ಎತ್ತಿನ ಗಾಡಿ, ಎತ್ತುಗಳನ್ನು ಹೊಲದ ಕೆಲಸಗಳಿಗೆ ಇಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಟ್ರ್ಯಾಕ್ಟರನ್ನು ಹೊಲ ಉಳುಮೆ ಮಾಡುವಲ್ಲಿ ಮಾತ್ರ ಬಳಸುತ್ತಾರೆ. ಬಹುತೇಕ ಟ್ರ್ಯಾಕ್ಟರಗಳಲ್ಲಿ ಮ್ಯೂಸಿಕ್ ಸಿಸ್ಟಮ್ ಕಡ್ಡಾಯವಾಗಿ ಇರುತ್ತವೆ. ಟ್ರ್ಯಾಕ್ಟರ್ ಓಡಿಸುವಾಗ ಕನ್ನಡ ಚಲನಚಿತ್ರ ಗೀತೆಗಳನ್ನು ಅತವಾ ಜನಪದ ಗೀತೆಗಳನ್ನು ಬಿತ್ತರಿಸೋದು ತೀರ ಸಾಮಾನ್ಯ. ಅದು ಜೋರು ದನಿಯಲ್ಲಿ!
ನಾನು ಕೇಳಿ ತಿಳಿದುಕೊಂಡ ಹಾಗೆ ಯಾವುದೇ ಒಂದು ಸಮುದಾಯದ ಜನರಶ್ಟೇ ಇಲ್ಲಿ ಬಾಳ್ವೆ ಕಟ್ಟಿಕೊಂಡಿರದೆ ಹತ್ತಾರು ಬಗೆಯ ವರ‍್ಗಗಳ ಜನರು ವಾಸ ಮಾಡುವ ಊರುಗಳಿವು. ಉದ್ಯೋಗಕ್ಕೆ ಸಂಬಂದಿಸಿದಂತೆ ಸರಕಾರಿ ಅತವಾ ಕಾಸಗಿ ವಲಯಗಳಲ್ಲಿ ಕೆಲಸ ಮಾಡುವವರ ಪ್ರಮಾಣಕ್ಕಿಂತ ಹೊಲಗಳಲ್ಲಿ ಕಶ್ಟಪಟ್ಟು ದುಡಿಮೆ ಮಾಡುವ ರೈತಾಪಿ ಜನರು ಹಾಗೂ ದಿನಗೂಲಿ ಕಾರ‍್ಮಿಕರ ಪ್ರಮಾಣ ಹೆಚ್ಚಿದೆ. ಹೈನುಗಾರಿಕೆ ಈ ಊರುಗಳಲ್ಲಿ ವ್ಯವಹಾರಿಕ ಮಟ್ಟದಲ್ಲಿ ಅಶ್ಟಾಗಿ ಜನಪ್ರಿಯವಾಗಿಲ್ಲ. ಜೋಳದ ರೊಟ್ಟಿ, ಜೋಳದ ಅತವಾ ರಾಗಿ ಮುದ್ದೆ ಜೊತೆಗೆ ಬೇಳೆ ಸಾಂಬಾರು, ಎಣ್ಣೆಗಾಯಿ ಪಲ್ಯ, ಶೇಂಗಾಪುಡಿ ಅತವಾ ಶೇಂಗಾ ಚಟ್ನಿ ಇವು ಜನರು ಹೆಚ್ಚಾಗಿ ಬಳಸುವ ಆಹಾರ. ಕೆಲ ವರ‍್ಗದ ಜನರು ಇಲ್ಲಿನ ವಿಸ್ತಾರವಾದ ಕುರುಚಲು ಅರಣ್ಯದಲ್ಲಿ ಕಾಣ ಸಿಗುವ ಕಾಡುಬೆಕ್ಕು, ಮೊಲ, ಉಡ, ಕಾಡು ಹಂದಿ, ಅಳಿಲುಗಳನ್ನು ಆಹಾರಕ್ಕಾಗಿ ಬೇಟೆ ಆಡುವುದುಂಟಂತೆ!
ಈ ಮೊದಲೇ ನಾನು ತಿಳಿಸಿದ ಹಾಗೆ, ಈ ಎರಡು ಊರುಗಳಿಗೆ ಅನತಿ ದೂರದಲ್ಲಿ ಸುತ್ತಲೂ ವಿಸ್ತಾರವಾದ ಕುರುಚಲು ಅರಣ್ಯವಿದೆ. ಈ ಅರಣ್ಯವನ್ನು ಸುಂಕದ ಕಲ್ಲು, ನಿಂಬಳ ಗೆರೆ, ಹೊಸಹಳ್ಳಿ, ಚಿರಬಿ.. ಇತ್ಯಾದಿ ಕಾಯ್ದಿಟ್ಟ ಅರಣ್ಯಗಳೆಂದು ವರ‍್ಗೀಕರಣ ಮಾಡಲಾಗಿದೆ. ಈ ಅರಣ್ಯಗಳಲ್ಲಿ ಪಾಲಯ್ಯನ ಕೋಟೆ, ಬೈರ ದೇವರ ಬೆಟ್ಟಗಳಿವೆ. ಇಲ್ಲಿ ಚಿತ್ರದುರ‍್ಗದ ನಾಯಕರ ಅಳ್ವಿಕೆಯ ಸಮಯದಲ್ಲಿ ಕಟ್ಟಿದ ಕಲ್ಲಿನ ಕೋಟೆಗಳಿವೆ. ಕುರಿಗಳನ್ನು ಮೇಯಿಸುವುದು, ಉರುವಲು ಹಾಗು ಕ್ರುಶಿಗೆ ಬೇಕಾದ ಕೋಲುಗಳಿಗಾಗಿ ಗಿಡಗಳನ್ನು ಕತ್ತರಿಸುವುದು, ಅರಣ್ಯದ ಬಾಗವನ್ನು ಒತ್ತುವರಿ ಮಾಡುವುದು ಈ ತರಹದ ವ್ಯತಿರಿಕ್ತವಾದ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪರಿಶ್ರಮವನ್ನು ಅರಣ್ಯ ಇಲಾಕೆಯವರು ವಹಿಸಬೇಕಾಗಿದೆ. ಅರಣ್ಯ ಇಲಾಕೆ ಹಾಗು ಸ್ತಳೀಯರು ಹೆಚ್ಚಿನ ಪ್ರಮಾಣದ ಮುತುವರ‍್ಜಿ ತೋರಿದರೆ ಈ ಕಾಯ್ದಿಟ್ಟ ಕುರುಚಲು ಅರಣ್ಯಗಳನ್ನು ದಟ್ಟವಾದ ಅರಣ್ಯ ವಲಯವನ್ನಾಗಿಸಬಹುದು.
ಪ್ರಸಿದ್ದವಾದ ಶ್ರೀ ಗುರು ಕೊಟ್ಟೂರೇಶ್ವರನ ನೆಲೆಬೀಡಾದ ಕೊಟ್ಟೂರು ಪಟ್ಟಣ ಹಾಗು ಶ್ರೀ ಮರುಳಸಿದ್ದೇಶ್ವರ ದೇಗುಲವಿರುವ ಉಜ್ಜಯಿನಿಯು ಈ ಊರುಗಳಿಗೆ ಸಮೀಪದಲ್ಲಿವೆ. ‘ಕೊಟ್ಟೂರು’ ಎಂದರೆ ನಮಗೆ ಶ್ರೀ ಗುರು ಕೊಟ್ಟೂರೇಶ್ವರನ ದೇಗುಲ ಹಾಗು ಜಾತ್ರೆ ತಕ್ಶಣ ನೆನಪಿಗೆ ಬರುವುದು ಸಹಜ. ಸುತ್ತಮುತ್ತಲ ಊರು ಹಾಗು ಜಿಲ್ಲೆಗಳಲ್ಲಿ ಅಶ್ಟು ಹೆಸರು ವಾಸಿಯಾದ ಜಾತ್ರೆ ಅದು. ಪ್ರತಿವರ‍್ಶ ಪೆಬ್ರುವರಿ ತಿಂಗಳಲ್ಲಿ ಜರಗುವ ಈ ಜಾತ್ರಾ ಮಹೋತ್ಸವದಲ್ಲಿ ಲಕ್ಶಾಂತರ ಮಂದಿ ಬಕ್ತಾದಿಗಳು ಬಾಗವಹಿಸುತ್ತಾರೆ. ಈ ಜಾತ್ರೆಯ ವೈಶಿಶ್ಟ್ಯವೆಂದರೆ ಸಹಸ್ರಾರು ಸಂಕ್ಯೆಯಲ್ಲಿ ಬಕ್ತರು ರಾಜ್ಯದ ಮೂಲೆ, ಮೂಲೆಗಳಿಂದ ಕಾಲ್ನಡಿಗೆಯಲ್ಲಿ ಬರುವುದು. ವಿಶೇಶವಾಗಿ ದಾವಣಗೆರೆ, ಚಿತ್ರದುರ‍್ಗ, ಜಗಳೂರು, ಹರಪ್ಪನಹಳ್ಳಿ, ಹೂವಿನ ಹಡಗಲಿ, ಹೊಳಲ್ಕೆರೆ, ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಬಾಗದ ಬಕ್ತಾದಿಗಳು ಬಹಳಶ್ಟು ಸಂಕ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಜಾತ್ರೆಗೆ ಬರುತ್ತಾರೆ. ಜಾತ್ರಾ ಮಹೋತ್ಸವದ ದಿನದಂದು ಜನ ಸಾಗರದಿಂದ ತುಂಬಿ ಹೋಗಿರುತ್ತೆ ಕೊಟ್ಟೂರು.
ಇಲ್ಲಿ ತಯಾರಿಸುವ ಬಗೆ ಬಗೆಯ ಕಾರ, ಮಂಡಕ್ಕಿ, ಮಿರ‍್ಚಿ, ಪಡ್ಡು. ಈ ತಿಂಡಿ, ತಿನಿಸುಗಳು ಶ್ರೀ ಗುರುಕೊಟ್ಟೂರೇಶ್ವರನಶ್ಟೇ ಹೆಸರುವಾಸಿ. ಇಲ್ಲಿನ ವಿಶಿಶ್ಟ ಬಗೆಯ ರುಚಿ ಬೇರೆಡೆ ಸಿಗೋಲ್ಲ. ಕೊಟ್ಟೂರು ಪಟ್ಟಣವನ್ನು ಒಂದು ಸುತ್ತು ಹಾಕಿಬಂದಾಗ ಬಹಳಶ್ಟು ‘ಮಂಡಕ್ಕಿ ಪಳಾಹಾರ’ದ ಅಂಗಡಿಗಳು ಸಿಗುತ್ತವೋ ಲೆಕ್ಕ ಸಿಗಲಿಕ್ಕಿಲ್ಲ!
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು