ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

–  ಸಿ.ಪಿ.ನಾಗರಾಜ.

ಚೆನ್ನಬಸವಣ್ಣ, Chenna Basavanna

ಬಾಹ್ಯದ ಜಲತೀರ್ಥದಲ್ಲಿ
ಮುಳುಮುಳುಗಿ ಎದ್ದಡೇನು
ಅಂತರಂಗದ ಮಲಿನತ್ವವು
ಮಾಂಬುದೆ ಹೇಳಾ. (1731-515)

ಬಾಹ್ಯ=ಹೊರಗಿನ/ಹೊರಗಡೆ/ಬಹಿರಂಗ; ಜಲ+ತೀರ್ಥ+ಅಲ್ಲಿ; ಜಲ=ನೀರು; ತೀರ್ಥ=ಪವಿತ್ರವಾದುದು/ಉತ್ತಮವಾದುದು/ಒಳ್ಳೆಯದು; ತೀರ್ಥ=ದೇವಾಲಯಗಳಲ್ಲಿ ಪೂಜೆಯ ನಂತರ ನೀಡುವ ನೀರು. ಇದನ್ನು ಕುಡಿಯುವುದರಿಂದ ಇಲ್ಲವೇ ತಮ್ಮ ತಲೆಯ ಮೇಲೆ ಸಿಂಪಡಿಸಿಕೊಳ್ಳುವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆಯೆಂಬ ನಂಬಿಕೆಯು ಜನಮನದಲ್ಲಿದೆ;

ಜಲತೀರ್ಥ=ದೇಗುಲಗಳ ಬಳಿ ಹರಿಯುತ್ತಿರುವ ನದಿ/ತೊರೆ/ಹೊಳೆ; ಮುಳುಗಿ=ನೀರಿನಲ್ಲಿ ಮಯ್ಯನ್ನು ಅದ್ದುವುದು; ಮುಳುಮುಳುಗಿ=ಮತ್ತೆ ಮತ್ತೆ ತಲೆಯನ್ನು ಅದ್ದಿ ಸ್ನಾನ ಮಾಡುವುದು;

ಎದ್ದಡೆ+ಏನು; ಎದ್ದಡೆ=ಎದ್ದರೆ; ಏನು=ಯಾವುದು;ಎದ್ದಡೇನು=ಏಳುವುದರಿಂದ ಬಂದ ಪ್ರಯೋಜನವೇನು; ಅಂತರಂಗ=ಒಳಗಡೆ/ಮನಸ್ಸು/ಚಿತ್ತ; ಮಲಿನತೆ=ಕೊಳಕು/ಹೊಲಸು; ಮಲಿನತ್ವ=ಕೊಳಕಾಗಿರುವುದು/ಹೊಲಸಾಗಿರುವುದು;

‘ ಅಂತರಂಗದ ಮಲಿನತ್ವ’ ಎಂಬ ಪದಕಂತೆಯು ಒಂದು ರೂಪಕವಾಗಿ ಬಳಕೆಯಾಗಿದೆ. ವ್ಯಕ್ತಿಯ ಮನದಲ್ಲಿರುವ ಕೆಟ್ಟ ಆಸೆ, ಹಗೆತನ, ಕಪಟತನ ಮುಂತಾದ ಒಳಮಿಡಿತಗಳನ್ನು ಇದು ಸೂಚಿಸುತ್ತದೆ; ಮಾಣ್=ಕಳೆ/ಬಿಡು/ತ್ಯಜಿಸು/ನಿಲ್ಲಿಸು; ಮಾಣ್ಬುದೆ>ಮಾಂಬುದೆ;

ಮಾಂಬುದೆ=ಬಿಡುವುದೆ/ನಾಶವಾಗುವುದೆ/ಇಲ್ಲವಾಗುವುದೆ; ಅಂತರಂಗದ ಮಲಿನತ್ವವು ಮಾಂಬುದೆ=ಮನಸ್ಸಿನಲ್ಲಿರುವ ಕೊಳೆಯು ನಾಶವಾಗುತ್ತದೆಯೇ; ಹೇಳ್+ಆ; ಹೇಳ್=ನುಡಿ/ತಿಳಿಸು; ಹೇಳಾ=ಹೇಳಲು ತೊಡಗು/ವಿವರಿಸಿ ಹೇಳು.

ದೇಗುಲವಿರುವ ಇಲ್ಲವೇ ಪವಿತ್ರವಾದ ನೆಲೆಯೆಂದು ಹೆಸರು ಪಡೆದಿರುವ ಊರಿನ ಬಳಿ ಹರಿಯುತ್ತಿರುವ ತೊರೆಯಲ್ಲಿ ಮತ್ತೆ ಮತ್ತೆ ಮಿಂದೇಳುವುದರಿಂದ ವ್ಯಕ್ತಿಯ ಮಯ್ ಮೇಲೆ ಬಹಿರಂಗದಲ್ಲಿ ಮೆತ್ತಿಕೊಂಡಿರುವ ಕೊಳೆ ಹೋಗಬಹುದೇ ಹೊರತು ವ್ಯಕ್ತಿಯ ಅಂತರಂಗದ ಮನದಲ್ಲಿರುವ ಕೊಳೆಯು ಹೋಗುವುದಿಲ್ಲ.

‘ ಮನದಲ್ಲಿರುವ ಕೊಳೆ ’ ಎಂದರೆ ಮನದಲ್ಲಿ ತುಡಿಯುವ ದುರಾಸೆ, ಕಪಟತನ ಮತ್ತು ಹಗೆತನವೆಂಬ ಕೆಟ್ಟ ಒಳಮಿಡಿತಗಳು. ಈ ಬಗೆಯ ಕೊಳೆಯನ್ನು ತೊಳೆಯಲು ವ್ಯಕ್ತಿಯು ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಒಳ್ಳೆಯ ನಡೆನುಡಿಗಳಿಂದ ಬಾಳಬೇಕೆಂಬ ಅರಿವು ಮತ್ತು ಎಚ್ಚರವನ್ನು ಹೊಂದಿರಬೇಕು.

ಸದಾಚಾರವುಳ್ಳವರು ಅನಾಚಾರಕ್ಕೆ
ಅನುಸರಿಸಿ ನಡೆದರೆ ನಾಯಕನರಕ. (187-314)

ಸದಾಚಾರ+ಉಳ್ಳವರು; ಸದಾಚಾರ=ಒಳ್ಳೆಯ ನಡೆನುಡಿ/ಉತ್ತಮ ವರ‍್ತನೆ; ಉಳ್ಳ್=ಇರು/ಪಡೆ/ಹೊಂದು; ಉಳ್ಳವರು=ಇರುವವರು; ಅನಾಚಾರ=ಕೆಟ್ಟ ನಡೆನುಡಿ/ಕೆಟ್ಟ ವರ‍್ತನೆ; ಅನುಸರಿಸಿ=ಹೊಂದಿಕೊಂಡು/ಹಿಂಬಾಲಿಸಿ; ನಡೆದರೆ=ಬಾಳತೊಡಗಿದರೆ/ವರ‍್ತಿಸತೊಡಗಿದರೆ;

ನಾಯಕ=ಮುಂದಾಳು/ನೇತಾರ; ನರಕ=ನೋವು/ಸಂಕಟ/ಯಾತನೆಯ ನೆಲೆ; ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು ಅನಂತರ ತಾನು ಮಾಡಿದ ಕೆಟ್ಟಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದಲ್ಲಿರುವ ಜಾಗವೇ ನರಕ. ಜನರಿಗೆ ಕೇಡನ್ನು ಬಗೆದವರು ಸಂಕಟದ ನೆಲೆಯಾದ ನರಕಕ್ಕೆ, ಒಳಿತನ್ನು ಮಾಡಿದವರು ಆನಂದದ ನೆಲೆಯಾದ ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಸಮುದಾಯದ ಮನದಲ್ಲಿದೆ.

ನಾಯಕನರಕ=ಬಹು ಬಗೆಯ ದಂಡನೆಗಳನ್ನು ನೀಡಿ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡುವ ಜಾಗ. ನಾಯಕನರಕ ಎಂಬ ಪದಕಂತೆಯು “ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಕೊಲೆ ಸುಲಿಗೆ ಹಿಂಸೆಯು ಉಂಟಾಗುವುದು “ ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಕುಟುಂಬದಲ್ಲಾಗಲಿ ಇಲ್ಲವೇ ಸಮಾಜದಲ್ಲಾಗಲಿ ಒಳ್ಳೆಯ ಗುಣವುಳ್ಳ ವ್ಯಕ್ತಿಯು ಕಾಲಕ್ರಮೇಣ ಕೆಟ್ಟ ನಡೆನುಡಿಯುಳ್ಳವರ ಒಡನಾಟದಿಂದಾಗಿ ಅನಾಚಾರಿಯಾಗಿ ಬಾಳಲು ತೊಡಗಿದರೆ, ಅವನನ್ನು ನಂಬಿಕೊಂಡು ಬಾಳುತ್ತಿರುವ ಜನರ ಬದುಕು ದೊಡ್ಡ ನರಕವಾಗುತ್ತದೆ.

ಏಕೆಂದರೆ ಕೆಟ್ಟವನು ಎನಿಸಿಕೊಂಡ ವ್ಯಕ್ತಿಯು ಮಾಡುವ ಕೆಡುಕಿಗಿಂತ ಒಳ್ಳೆಯವನು ಎನಿಸಿಕೊಂಡ ವ್ಯಕ್ತಿಯು ಮಾಡುವ ಕೆಡುಕು ಜನರಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ದಿನನಿತ್ಯದ ವ್ಯವಹಾರಗಳಲ್ಲಿ ಕೆಟ್ಟ ವ್ಯಕ್ತಿಯನ್ನು ಕಂಡ ಕೂಡಲೇ ಜನರು “ ಎಲ್ಲಿ, ಯಾವಾಗ, ಯಾವ ರೀತಿಯಿಂದ ಕೇಡನ್ನು ಮಾಡುತ್ತಾನೆಯೋ “ ಎಂಬ ಹೆದರಿಕೆಯಿಂದ ಅವನಿಂದ ದೂರವಿರುತ್ತಾರೆ. ಆದರೆ ಒಳ್ಳೆಯವನು ಎನಿಸಿಕೊಂಡ ವ್ಯಕ್ತಿಯು “ ತಮ್ಮನ್ನು ಕಾಪಾಡುತ್ತಾನೆ/ಚೆನ್ನಾಗಿ ನೋಡಿಕೊಳ್ಳುತ್ತಾನೆ “ ಎಂಬ ನಂಬಿಕೆಯಿಂದ ಅವನ ಹತ್ತಿರವಿರುತ್ತಾರೆ.

ಆದ್ದರಿಂದ ಸದಾಚಾರವುಳ್ಳವನು ಅನಾಚಾರಿಯಾಗಿ ಬದಲಾದಾಗ ಜನರಿಗೆ ಮತ್ತು ಸಮಾಜಕ್ಕೆ ಉಂಟಾಗುವ ಕೇಡಿನ ಪ್ರಮಾಣ ಹೆಚ್ಚಾಗುತ್ತದೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks