ಹಳೆ ಹುಡುಗಿಯ ಹೊಸ ಬೇಟಿ

– ನಾಗರಾಜ್ ಬದ್ರಾ.

rail-track

ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಅಜೇಯನು ಕೆಲಸ ಮುಗಿಸಿಕೊಂಡು, ಸಂಜೆ ಮರಳಿ ಊರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಹೋದನು. ರೈಲು ಹೊರಡಲು ಸಿದ್ದವಾಗಿತ್ತು. ತಡ ಮಾಡದೆ ರೈಲು ಹತ್ತಿ ತನ್ನ ಸೀಟನ್ನು ಹುಡುಕಿಕೊಂಡು ಹೋಗಿ ಕುಳಿತ. ರೈಲು ಹೊರಟಿತು. ಅಜೇಯನು ತನ್ನ ಬ್ಯಾಗನ್ನು ಸೀಟಿನ ಒಂದು ತುದಿಯಲ್ಲಿಟ್ಟು ಸ್ವಲ್ಪ ಆರಾಮಾಗಿ ಕುಳಿತುಕೊಳ್ಳಬೇಕು ಎನ್ನುವಶ್ಟರಲ್ಲಿಯೇ ಈ ಸೀಟು ನನ್ನದು ಸರ್ ಎನ್ನುತ್ತಾ ಪ್ರಯಾಣಿಕನೊಬ್ಬ ಬಂದನು. ಅದನ್ನು ಕೇಳಿದ ಕೂಡಲೇ ಅಜೇಯನು ಗಾಬರಿಯಿಂದ,
“ಸರ್ ಇದು ನನ್ನ ಸೀಟ್. ಇನ್ನೊಮ್ಮೆ ಸರಿಯಾಗಿ ನಿಮ್ಮ ಸೀಟು, ಬೋಗಿ ನಂಬರ್ ನೋಡಿಕೊಳ್ಳಿ” ಎಂದನು.
“ನನ್ನದು ಎಸ್ 6 ಬೋಗಿನಲ್ಲಿ 7 ನೇ ನಂಬರ್ ಸೀಟ್ ಸರ್. ಅದು ಇದೇ ಸೀಟ್.” ಎಂದನು.
ಅಜೇಯನು ತನ್ನ ಟಿಕೆಟಿನಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ನೋಡಿಕೊಂಡನು. ಅಲ್ಲಿ ಯಾವ ತಪ್ಪು ಕಾಣಲಿಲ್ಲ. ಇದು ಹೇಗೆ ಸಾದ್ಯ ಎಂದು ಯೋಚಿಸ ತೊಡಗಿದ, ತಟ್ಟನೆ ಅವನಿಗೆ ಅವರು ಪ್ರಯಾಣಿಸುವ ದಿನಾಂಕದಲ್ಲಿ ಏನಾದರು ತಪ್ಪಾಗಿರಬಹುದು ಎಂಬ ಅನುಮಾನ ಬಂತು,
“ಸರ್, ಟಿಕೆಟಿನಲ್ಲಿ ಪ್ರಯಾಣಿಸುವ ದಿನಾಂಕ ಏನಾದರೂ ಬೇರೆ ಇರಬಹುದು. ಒಮ್ಮೆ ಸರಿಯಾಗಿ ನೋಡಿಕೊಳ್ಳಿ.” ಎಂದನು.
ಆತನು ಇನ್ನೊಮ್ಮೆ ತನ್ನ ಟಿಕೆಟ್ ನೋಡಿಕೊಂಡು,
“ಇಲ್ಲ ಸರ್. ಇಂದಿನ ದಿನಾಂಕವೇ ಇದೆ ನೋಡಿ.” ತನ್ನ ಟಿಕೆಟನ್ನು ತೋರಿಸಿದನು.
ಅವರಿಬ್ಬರಿಗೂ ಇದು ಹೇಗಾಗಿದೆ ಎಂದು ತಿಳಿಯಲಿಲ್ಲ. ಕಡೆಗೆ ಇಬ್ಬರೂ ಏನೋ ತಪ್ಪಾಗಿದೆ ಎಂದು ಮಾತನಾಡುತ್ತಾ ಟಿ.ಸಿ ಯ ಹತ್ತಿರ ಹೋದರು. ಟಿ.ಸಿ ತನ್ನ ಹತ್ತಿರದ ಸೀಟ್ ಕಾದಿರಿಸುವಿಕೆ ಪಟ್ಟಿಯನ್ನು ನೋಡಿದರು. ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿನ ಸೀಟುಗಳು ಕಾಲಿಯಿರುವುದರಿಂದ ಅಜೇಯನ ಸೀಟನ್ನು ಸಾಮಾನ್ಯ ಸ್ಲೀಪರ್ ಬೋಗಿಯಿಂದ ಹವಾನಿಯಂತ್ರಿತ ಸ್ಲೀಪರ್ ಬೋಗಿಗೆ ಮುಂಬಡ್ತಿ ಮಾಡಲಾಗಿತ್ತು. ಯಾರಾದರೂ ಬಿಟ್ಟಿಯಾಗಿ ಏ.ಸಿ ಸೀಟ್ ಸಿಕ್ಕರೆ ಬೇಡ ಎನುತ್ತಾರೇನು? ಅಜೇಯನು ಇಬ್ಬರಿಗೂ ಕ್ಶಮೆ ಕೇಳಿ ಮನಸ್ಸಿನಲ್ಲಿಯೇ ಸಂತೋಶ ಪಡುತ್ತಾ ಏ.ಸಿ ಬೋಗಿಯ ಆ ಸೀಟನ್ನು ಹುಡುಕಿಕೊಂಡು ಹೋದನು. ಅಲ್ಲಿ ಹೋಗಿ ನೋಡಿದರೆ ಆತನು ಊಹಿಸಲು ಸಾದ್ಯವಾಗದಂತಹ ಇನ್ನೊಂದು ಆಶ್ಚರ‍್ಯ ಕಾದಿತ್ತು. ಅವನ ಹಳೆಯ ಹುಡುಗಿ, ಒಂದು ಕಾಲದ ಹ್ರುದಯದ ಒಡತಿ, ಗೀತಾ ಆ ಸೀಟಲ್ಲಿ ಕುಳಿತಿದ್ದಳು. ಅವಳನ್ನು ನೋಡಿದ ಕೂಡಲೇ ಒಂದು ಗಳಿಗೆಯಲ್ಲಿ ಅಜೇಯನ ಮನಸ್ಸು ಇದು ಕನಸೋ ನಿಜವೋ ಎಂದು ತಿಳಿಯಲಾಗದೆ ಗೊಂದಲಕ್ಕೆ ಸಿಕ್ಕಿತು. ಇನ್ನೊಮ್ಮೆ ಸರಿಯಾಗಿ ಕಣ್ಣುಗಳನ್ನು ಉಜ್ಜಿಕೊಂಡು ನೋಡಿದ ಅವಳೇ ಆಗಿದ್ದಳು.

ಅದನ್ನು ತಿಳಿದು ಮನಸ್ಸಿನಲ್ಲಿ ಸಂತೋಶ, ಕೋಪ, ನೋವು ಮುಂತಾದ ಬದುಕಿನ ಬಗೆಬಗೆಯ ಬಣ್ಣಗಳು ಒಮ್ಮೆಲೆ ಮೂಡಿ ಅವನಿಗೆ ಏನು ಮಾಡಬೇಕೆಂದು ತೋಚದಂತಾಯಿತು. ಕಡೆಗೆ ದೈರ‍್ಯ ಮಾಡಿ ಸೀಟ್ ಹತ್ತಿರ ಹೋದ. ಅಜೇಯನನ್ನು ನೋಡಿದ ಕೂಡಲೇ ಗೀತಾಳ ಬಾಯಿಯಲ್ಲಿ ಮಾತೇ ಬರಲಿಲ್ಲ. ಸಿಡಿಲು ಬಡಿದವರಂತೆ ನೋಡುತ್ತಾ ನಿಂತಳು. ಮುಕದಲ್ಲಿ ಒಂದು ತರಹದ ಇರಿಸು ಮುರಿಸು, ಇವನ್ಯಾಕೆ ಸಿಕ್ಕಿದ ಎಂದು ಮನ್ಸಸಿನಲ್ಲಿ ಗೋಳಾಡುತ್ತಿದ್ದಂತೆ ಇತ್ತು. ಕೆಲವು ನಿಮಿಶಗಳವರೆಗೆ ಇಬ್ಬರೂ ಒಬ್ಬರಿಗೊಬ್ಬರ ಮುಕ ನೋಡುತ್ತಿದ್ದರು. ರೈಲಿನ ಏ.ಸಿ ಬೋಗಿಯಲ್ಲಿಯೂ ಅವಳು ಬೆವರಿದಳು. ಕೆಲವು ನಿಮಿಶಗಳ ನಂತರ ಅಜೇಯನು ದೈರ‍್ಯ ಮಾಡಿ,
“ಹೇಗಿದ್ದೀಯಾ?” ಎಂದು ಮಾತು ಆರಂಬಿಸಿದ.
ಅವನ ಮುಕವನ್ನು ನೇರವಾಗಿ ನೋಡಿ ಮಾತನಾಡಲಾಗದೆ, ಬೋಗಿಯ ಕಪ್ಪು ಕಿಟಕಿಯಲ್ಲಿ ಏನೋ ನೋಡುವಂತೆ ಮಾಡಿ
“ಚೆನ್ನಾಗಿದ್ದಿನಿ, ನೀನು?” ಎಂದಳು.
“ಪರವಾಗಿಲ್ಲ ಇನ್ನೂ ಬದುಕಿದ್ದೀನಿ.”
ಕೆಲ ಹೊತ್ತು ಇಬ್ಬರ ನಡುವೆ ಮೌನ.
ಅಜೇಯನು “ಇವಾಗಾದರೂ ಸಂತೋಶವಾಗಿ ಇದ್ದಿಯಾ?” ಎಂದು ಮತ್ತೆ ಮಾತು ತೆಗೆದ.
“ಗೊತ್ತಿಲ್ಲ, ನನ್ನ ಕತೆ ಬಿಡು ನೀನು ಸಂತೋಶವಾಗಿ ಇದ್ದಿಯಾ?”
“ಸಂತೋಶವು ನನ್ನ ಬದುಕಿನಿಂದ ದೂರವಾಗಿ ತುಂಬಾ ದಿನಗಳಾದವು ಬಿಡು, ನೀನು ಚೆನ್ನಾಗಿದ್ದಿಯಾ ತಾನೇ?”
ಇನ್ನೂ ಬೆವರುತ್ತಿದ್ದ ಮುಕವನ್ನು ಒರಿಸಿಕೊಳ್ಳುತ್ತಾ “ಹಾ, ಏನೋ ಚೆನ್ನಾಗಿ ಇದ್ದೀನಿ” ಎಂದಳು.
“ನಿನ್ನ ಬದುಕು ನೀನು ಇಶ್ಟಪಟ್ಟ ಹಾಗೆ ಸಾಗಿದರೂ ‘ಏನೋ ಚೆನ್ನಾಗಿದ್ದೀನಿ’ ಎಂದರೆ ಏನರ‍್ತ?”
“ನಿನ್ನ ಈ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರವಿಲ್ಲ. ಇಂದು ನನ್ನ ಬದುಕೇ ಒಂದು ಪ್ರಶ್ನೆಯಾಗಿ ಹೋಗಿದೆ.”
“ಹೋಗಲಿ ಬಿಡು ಗೀತಾ, ನಿನ್ನ ಕೆಲಸ ಹೇಗೆ ನಡೆಯುತ್ತಿದೆ?”
“ಚೆನ್ನಾಗಿ ನಡೆಯುತ್ತಿದೆ, ನಿನ್ನ ಬದುಕು ಹೇಗೆ ಸಾಗುತ್ತಿದೆ?”

ಅದೇ ಸಮಯದಲ್ಲಿ ಏ.ಸಿ ಬೋಗಿಯ ಟಿ.ಸಿ ಅಜೇಯನ ಸೀಟ್ ನಂಬರ್ ಕೂಗುತ್ತಾ ಬಂದರು. ಕೂಡಲೇ ಅವನು ಬ್ಯಾಗಿನಿಂದ ತನ್ನ ಟಿಕೆಟನ್ನು ತೆಗೆದು ತೋರಿಸಿದ. “ರೈಲು ಹತ್ತಿದ ಕೂಡಲೇ ನಿಮ್ಮ ಟಿಕೆಟ್ ತೋರಿಸುವುದನ್ನು ಬಿಟ್ಟು ಎಲ್ಲಿಗೆ ಹೋಗಿದ್ರಿ?” ಎಂದು ವಿಚಾರಿಸುತ್ತಾ ಟಿ.ಸಿ. ಟಿಕೆಟನ್ನು ಪರೀಶಿಲಿಸಿದರು. ಅಜೇಯನು ಮೊದಲು ನಡೆದ ಟಿಕೆಟ್ ಕತೆಯನ್ನು ವಿವರಿಸಿದ. ಅವರು ಸಣ್ಣ ನಗು ಬೀರುತ್ತಾ “ಹೌದಾ, ಸರಿ” ಎಂದು ಅಲ್ಲಿಂದ ಹೋದರು.
ಅಜೇಯನು ಗೀತಾಳ ಕಡೆಗೆ ತಿರುಗಿ “ನಿನ್ನ ಸೀಟ್ ಯಾವುದು?” ಎಂದು ಕೇಳುತ್ತಾ ಮತ್ತೆ ಮಾತು ತೇಗೆದ.
“ನನ್ನದು ಮೇಲಿನ 8 ನೇ ನಂಬರ್ ಸೀಟ್.”
“ಸರಿ, ಅವಾಗಲೇ ಏನೋ ಕೇಳಿದೆ. ನನ್ನ ಬದುಕು ಹೇಗೆ ಸಾಗುತ್ತಿದೆ ಎಂದಲ್ವಾ? ಬದುಕು ನೆನಪುಗಳ ಆಸರೆಯಲ್ಲಿ, ತನ್ನ ಪಾಡಿಗೆ ತಾನು ಸಾಗುತ್ತಿದೆ. ಅದರಲ್ಲಿ ಹೊಸದೆನಿಲ್ಲ, ಆದರೆ ನಿನ್ನ ಬದುಕು ಸುನೀಲ ಸಿಕ್ಕ ಮೇಲೆ ಸೂಪರ್ ಆಗಿರಬಹುದಲ್ಲಾ?”
ಸುನೀಲನ ಹೆಸರು ಕೇಳಿದ ಕೂಡಲೇ ಗೀತಾಳ ಮುಕದ ಹಾವಬಾವಗಳೆ ಬದಲಾದವು. ಕಣ್ಣುಗಳಲ್ಲಿ ಒಂದು ತರಹದ ಸಿಟ್ಟು ಆವರಿಸಿತು. ಸಿಟ್ಟಿನಿಂದ ಅಜೇಯನ ಕಡೆಗೆ ನೋಡುತ್ತಿದ್ದಳು. ಅಶ್ಟಕ್ಕೇ ಅಜೇಯನು ಸುಮ್ಮನಾಗದೇ “ಸುನೀಲ ಹೇಗಿದ್ದಾನೆ?” ಎಂದು ಕೇಳಿದನು.
ಅವಳು ಅದೇ ಸಿಟ್ಟಿನ ದಾಟಿಯಲ್ಲಿ “ಅವನಿಗೆ ಏನಾಗಿದೆ ಚೆನ್ನಾಗೆ ಇದ್ದಾನೆ.” ಎಂದಳು.
ಮತ್ತೆ ಕೆಲ ಹೊತ್ತು ಇಬ್ಬರ ನಡುವೆ ಮೌನ.
ಗೀತಾಳ ಮುಕದಲ್ಲಿನ ಲಕ್ಶಣವೇ ಮಾಯವಾಗಿ, ಯಾವುದೋ ಚಿಂತೆಯಲ್ಲಿ ಇರುವ ಹಾಗೆ ಕಾಣುತ್ತಿತ್ತು.
“ಯಾಕೆ ಡಲ್ ಆಗಿದ್ದೀಯಾ? ಏನಾದರೂ ಸಮಸ್ಯೆಯಾ?” ಎಂದು ಅಜೇಯನು ಕೇಳಿದ.
“ಹಾಗೇನಿಲ್ಲ. ಸ್ವಲ್ಪ ತಲೆ ನೋವು.” ಅವಳೆಂದಳು. ಆದರೂ ಗೀತಾಳ ಮಾತಿನ ಮೇಲೆ ಅವನಿಗೆ ನಂಬಿಕೆ ಬರಲಿಲ್ಲ. ಒಂದು ಸಣ್ಣ ತಲೆ ನೋವಿಗೆ ಅವಳು ಹಿಂದೆ ಯಾವತ್ತು ಇಶ್ಟು ಡಲ್ ಆಗಿರುವುದನ್ನು ಆತ ನೋಡಿರಲಿಲ್ಲ. ಆತನು ಕೂಡ ಒತ್ತಾಯ ಮಾಡಿ ಕೇಳಲು ಹೋಗದೆ, ಹೇಳಬೇಕೆಂದು ಅನಿಸಿದರೆ ತಾನಾಗಿಯೇ ಹೇಳುತ್ತಾಳೆ ಬಿಡು ಎಂದು ಸುಮ್ಮನಾದನು. ಆಗಲೇ ಸಮಯ ರಾತ್ರಿ 11 ಗಂಟೆ, ಹೊರಗಡೆ ಗುಡುಗು ಹಾಗೂ ಸಿಡಿಲಿನ ಮೂಲಕ ಮಳೆಯು ತಾನು ಬರುವ ಮುನ್ಸೂಚನೆ ನೀಡಲಾರಂಬಿಸಿತು.
“ನನಗೆ ನಿದ್ದೆ ಬರುತ್ತಿದೆ ನಾನು ಈ ಕೆಳಗಿನ ಸೀಟ್ ನಲ್ಲಿ ಮಲಗಲಾ?” ಎಂದು ಕೇಳಿದಳು.
“ಸರಿ ಮಲಗು, ಶುಬರಾತ್ರಿ” ಎಂದು ಹೇಳಿ ಅಜೇಯನು ಮೇಲಿನ ಸೀಟ್ ಹತ್ತಿ ಮಲಗಿದ.

ಏ.ಸಿ ಯಿಂದ ಬೋಗಿಯ ವಾತಾವರಣ ಮೊದಲೇ ತಂಪಾಗಿತ್ತು, ಹೊರಗಡೆ ಮಳೆ ಶುರುವಾಗಿ ತಂಪೆರೆಯುತ್ತಿತ್ತು. ಆದರೆ ಗೀತಾಳ ಮನಸ್ಸು ಇನ್ನೂ ಬಿಸಿಯಾಗಿದ್ದಂತೆ ಕಾಣುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಅಜೇಯನಿಗೆ ನಿದ್ದೆಯ ನಡುವೆ ಎಚ್ಚರ ಆಯಿತು. ರೈಲಿನ ಮೇಲೆ ಬೀಳುತ್ತಿರುವ ಮಳೆ ಹನಿಗಳ ಟಪ್ ಟಪ್ ಶಬ್ದವು ಜೋರಾಗಿ ಕೇಳಿಸತೊಡಗಿತ್ತು. ಮಳೆ ಬಂದಿದ್ದು ತುಂಬಾ ಒಳ್ಳೆಯದಾಯಿತು ಎಂದು ಮನಸ್ಸಿನಲ್ಲಿ ಸಂತೋಶ ಪಡುತ್ತಾ, ಬಚ್ಚಲು ಕೋಣೆಗೆ ಹೋಗಬೇಕೆಂದು ಸೀಟಿನಿಂದ ಕೆಳಗಿಳಿದು ನೋಡಿದರೆ ಅವನಿಗೆ ಇನ್ನೊಂದು ಆಗಾತ ಕಾದಿತ್ತು. ಗೀತಾ ಮಲಗದೇ ಅಳುತ್ತಾ ಕುಳಿತಿದ್ದಳು.
“ಹೇ! ಯಾಕೆ ಏನಾಗಿದೆ?”
“ಏನಿಲ್ಲ. ನೀನು ಮಲಗು”
ಮತ್ತೆ ‘ಏನಿಲ್ಲ’ವನ್ನೇ ಕೇಳಿದ ಅವನಿಗೆ ತುಂಬಾ ಕೋಪ ಬಂತು. “ಸುಳ್ಳು ಹೇಳಿದ್ದು ಸಾಕು. ನನಗೆ ಕೋಪ ಬರಿಸಬೇಡ ಸುಮ್ಮನೇ ನಿಜ ಹೇಳು” ಎಂದನು.
“ಸುನೀಲ ನನಗೆ ಮೋಸ ಮಾಡಿಬಿಟ್ಟ. ಅವನ ಪ್ರೀತಿ ಎಲ್ಲಾ ಸುಳ್ಳು, ಬರೀ ನಾಟಕವಾಡಿದ್ದಾನೆ. ಇಂದು ಅವನ ನಿಜವಾದ ಬಣ್ಣ ನಾನೇ ಕಣ್ಣಾರೆ ನೋಡಿದೆ. ಸುನೀಲನಿಗೆ ತುಂಬಾ ಹುಡುಗಿಯರ ಜೊತೆ ಸಂಬಂದವಿದೆ, ನೀನು ಹೇಳಿದ್ದು ನಿಜವಾಯಿತು…” ಎಂದವಳೆ ನೋವು ತಡೆಯಲಾಗದೆ ಜೋರಾಗಿ ಅಳತೊಡಗಿದಳು. ಅವನು ಎಶ್ಟು ಸಮಾದಾನ ಮಾಡಿದರೂ ಸುಮ್ಮನಾಗಲಿಲ್ಲ. ಆತನಿಗೆ ಏನು ಹೇಳಬೇಕೆಂದು ತೋಚದಂತಾಯಿತು. ಅಳುವಿನ ನಡುವೆಯೇ,
“ಅದಕ್ಕೆ ನಾನು ಕೆಲಸಕ್ಕೆ ರಾಜೀನಾಮೆ ನೀಡಿ ಮರಳಿ ಊರಿಗೆ ಹೋಗುತ್ತಿದ್ದೀನಿ.” ಎಂದಳು.
“ಸುನೀಲನ ಬಗ್ಗೆ ಬೇಗನೆ ಗೊತ್ತಾಗಿದ್ದು ತುಂಬಾ ಒಳ್ಳೆದಾಯಿತು ಎಂದು ನೀನು ಸಮಾದಾನ ಪಡಬೇಕು.”
“ಹೌದು. ನಾ ನಿನಗೆ ಮಾಡಿದ ಮೋಸಕ್ಕೆ ಆ ದೇವರು ನನಗೆ ಸರಿಯಾದ ಪಾಟ ಕಲಿಸಿದ್ದಾನೆ.”
“ಆಗೋದೆಲ್ಲಾ ಒಳ್ಳೆಯದಕ್ಕೆ. ಹೋಗಲಿ ಬಿಟ್ಟುಬಿಡು. ಏನೂ ಯೋಚನೆ ಮಾಡಬೇಡ.”
ಮೊದಲು ಸ್ವಲ್ಪ ನೀರು ಕುಡಿದು ಶಾಂತವಾಗು ಎಂದು ತನ್ನ ಹತ್ತಿರವಿದ್ದ ನೀರಿನ ಬಾಟಲನ್ನು ಕೊಟ್ಟನು. ಅವಳು ಸ್ವಲ್ಪ ನೀರು ಕುಡಿದು, “ನಾನು ಸುನೀಲನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೆ. ಆದರೆ ನಂಬಿಕೆ ದ್ರೋಹ ಮಾಡಿಬಿಟ್ಟ, ಅವನನ್ನು ನಂಬಿ ನಾನು ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟೆ.” ಎಂದು ಮತ್ತೆ ಮಾತು ತೆಗೆದಳು.
“ಇದರ ಬಗ್ಗೆ ರೈಲಿನಲ್ಲಿ ಮಾತಾಡೋದು ಬೇಡ. ಬೆಳಿಗ್ಗೆ ರೈಲಿನಿಂದ ಇಳಿದ ಮೇಲೆ ಮಾತಾಡೋಣ.” ಎಂದನು.
ಬಾರವಾದ ಮನಸ್ಸಿನಲ್ಲಿಯೇ “ಸರಿ” ಎಂದಳು.

ಅಶ್ಟರಲ್ಲಿಯೇ ರೈಲಿನ ಒಂದು ಜಂಕ್ಶನ್ ನಿಲ್ದಾಣ ಬಂತು. ಈ ನಿಲ್ದಾಣದಲ್ಲಿ ರೈಲ್ವೆಯ ಸಿಬ್ಬಂದಿ ಬದಲಾವಣೆ ಹಾಗೂ ಡೀಸೆಲ್ ತುಂಬುವುದಕ್ಕಾಗಿ ರೈಲು ಸುಮಾರು 10 ನಿಮಿಶಗಳ ಕಾಲ ನಿಲ್ಲುತ್ತದೆ ಎಂದು ಅಜೇಯನಿಗೆ ಮೊದಲೇ ಗೊತ್ತಿತ್ತು. ಹಾಗೆಯೇ ಈ ಮನಸ್ತಿತಿಯಲ್ಲಿ ಗೀತಾ ಊಟ ಮಾಡಿರಲು ಸಾದ್ಯವಿಲ್ಲವೆಂದು ತಿಳಿದಿತ್ತು. ಅವಳಿಗೆ ನೀನು ಇಲ್ಲಿಯೇ ಕುಳಿತಿರು ನಾನು ಸ್ವಲ್ಪ ಕೆಳಗಡೆ ಹೋಗಿ ಬರುತ್ತೀನಿ ಎಂದು ಹೇಳಿ ಹೋದನು. ಹೊರಗಡೆ ಇನ್ನೂ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿಯೇ ನಿಲ್ದಾಣದಲ್ಲಿ ತಿಂಡಿ ತಿನಿಸು ಹುಡುಕಿದ. ಇಡ್ಲಿ, ವಡೆ ಸಿಕ್ಕಿತು ಅದನ್ನೇ ತೆಗೆದುಕೊಂಡು ಹೋಗಿ, “ಏನೂ ಯೋಚನೆ ಮಾಡಬೇಡ, ಸ್ವಲ್ಪ ತಿಂಡಿ ತಿನ್ನು” .
“ನನ್ನ ಊಟ ಆಗಿದೆ. ನೀನು ತಿನ್ನು”.
“ನೀನು ಊಟ ಮಾಡಿಲ್ಲ ಎಂದು ನನಗೆ ಗೊತ್ತು. ಸುಮ್ಮನೇ ಸುಳ್ಳು ಹೇಳಬೇಡ, ತಿನ್ನು”.
ಅದನ್ನು ಕೇಳಿ ಕಣ್ಣೀರು ಹರಿಸುತ್ತಾ “ನನ್ನ ಎಶ್ಟು ಅರ‍್ತ ಮಾಡಿಕೊಂಡಿದ್ದೀಯಾ, ತ್ಯಾಂಕ್ಸ್”.
“ಸರಿ. ನೀನು ಮೊದಲು ತಿಂಡಿ ತಿನ್ನು.”
“ಆಯಿತು, ನನ್ನ ಜೊತೆಯಲ್ಲಿ ನೀನು ಸ್ವಲ್ಪ ತಿನ್ನಬೇಕು.”
“ಸರಿ” ಎಂದು. ಅಜೇಯನು ಕೂಡ ಗೀತಾಳ ಜೊತೆಯಲ್ಲಿ ಸ್ವಲ್ಪ ತಿಂಡಿ ತಿಂದನು. ರೈಲು ಮತ್ತೆ ಹೊರಟಿತು. ಇಬ್ಬರೂ ಮತ್ತೆ ಮಾತನಾಡುತ್ತಾ ಕುಳಿತುಕೊಂಡರು. ರೈಲಿನ ಏ.ಸಿ ಹಾಗೂ ಹೊರಗಿನ ಮಳೆಯಿಂದಾಗಿ ತಂಪು ಹೆಚ್ಚಾಗಿ ಅವಳು ನಡುಗ ತೊಡಗಿದಳು. ಅಜೇಯನು ತನ್ನ ಬ್ಯಾಗಿನಿಂದ ಶಾಲನ್ನು ತೆಗೆದು ಕೊಡಲು ಹೋದನು.
“ಹೇ!. ಬೇಡಬೇಡ “.
“ತಗೋ, ಚಳಿ ಹೆಚ್ಚಾಗಿದೆ.”
“ಸರಿ, ತ್ಯಾಂಕ್ಸ್” ಎಂದು ತೆಗೆದುಕೊಂಡಳು.
ಸ್ವಲ್ಪ ಸಮಯದ ನಂತರ “ನನಗೆ ನಿದ್ದೆ ಬರುತ್ತಿದೆ ಮಲಗಲಾ” ಎಂದಳು.
“ಸರಿ. ಏನು ಯೋಚನೆ ಮಾಡದೆ ಮಲಗು.”
“ನಿನ್ನ ನಿಜವಾದ ಪ್ರೀತಿಯನ್ನು ಅರ‍್ತಮಾಡಿಕೊಳ್ಳದೇ ನಿನಗೆ ಮೋಸ ಮಾಡಿ ತುಂಬಾ ನೋವು ನೀಡಿದ್ದೀನಿ. ಸಾದ್ಯವಾದರೆ ದಯವಿಟ್ಟು ನನ್ನ ಕ್ಶಮಿಸೋ”.
ಅಜೇಯನಿಗೆ ಆ ಸಮಯದಲ್ಲಿ ಏನು ಹೇಳಬೇಕೆಂದು ತೋಚಲಿಲ್ಲ.
“ಈಗ ಏನು ಯೋಚನೆ ಮಾಡದೆ ಸುಮ್ಮನೇ ಮಲಗು.” ಎಂದು ಮೇಲಿನ ಸೀಟಿನಲ್ಲಿ ಮಲಗಿಕೊಂಡನು.

ರಾತ್ರಿ ಇಡೀ ಅಜೇಯನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಹರಿದಾಡ ತೊಡಗಿದವು. ಮನಸ್ಸು ಒಂದು ಗಳಿಗೆಯಲ್ಲಿ ಹಳೆಯ ಪ್ರೀತಿ ಮತ್ತೆ ಸಿಗುವುದು ಎಂದು ಸಂತೋಶದಲ್ಲಿ ತೇಲಾಡುತ್ತಿತ್ತು. ಆದರೆ ಮತ್ತೊಂದು ಗಳಿಗೆಯಲ್ಲಿ ನಿನ್ನ ಬದುಕಿನ ಪಯಣವು ಆ ನಿಲ್ದಾಣದಿಂದ ಮುಂದೆ ಸಾಗಿಬಂದಿದೆ ಮತ್ತೆ ಯಾಕೆ ಮರಳಿ ಹೋಗುವೆ ಎನ್ನುತ್ತಿತ್ತು. ಈ ಎರಡರ ನಡುವೆ ಸಿಕ್ಕಿ ಹಾಕಿಕೊಂಡ ಮನಸ್ಸು ಕಡೆಗೂ ಯಾವ ನಿರ‍್ದಾರಕ್ಕೆ ಬರಲಾಗದೆ ಶಿವನ ಮೇಲೆ ಬಾರ ಹಾಕಿ, ಗೀತಾಳ ಈ ಪರಿಸ್ತಿತಿಯನ್ನು ಕಂಡು ಮರಕುತ್ತಾ ನಿದ್ದೆಗೆ ಜಾರಿತ್ತು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಜೇಯನಿಗೆ ನಿದ್ಡೆಯಿಂದ ಎಚ್ಚರವಾಯಿತು. ಎದ್ದವನೇ ಕಣ್ಣುಗಳನ್ನು ಉಜ್ಜಿಕೊಂಡು ಸೀಟಿನಿಂದ ಕೆಳಗಿಳಿದು ನೋಡಿದರೆ ಗೀತಾ ಆ ಸೀಟಲ್ಲಿ ಕಾಣಲಿಲ್ಲ. ಬಚ್ಚಲು ಕೋಣೆಗೆ ಏನಾದರೂ ಹೋಗಿರಬಹುದು ಎಂದು ಸ್ವಲ್ಪ ಸಮಯದವರೆಗೆ ಕಾದ. ಆದರೆ ಎಶ್ಟೊತ್ತಾದ್ದರೂ ಬರಲಿಲ್ಲ. ಕಡೆಗೆ ಸಂಶಯ ಬಂದು ಸೀಟ್ ಕೆಳಗಡೆ ಇಟ್ಟಿದ್ದ ಅವಳ ಲಗೇಜನ್ನು ನೋಡಿದ, ಅದು ಕೂಡ ಇರಲಿಲ್ಲ. ಅವನ ಮನಸ್ಸಿನ ತುಂಬೆಲ್ಲ ಆತಂಕ ಆವರಿಸಿತು. ಕೂಡಲೇ ರೈಲಿನ ತಮ್ಮ ಬೋಗಿ ಅಲ್ಲದೇ ಅದರ ಹಿಂದಿನ ಹಾಗೂ ಮುಂದಿನ ಇತರೆ ಬೋಗಿಗಳನ್ನು ಕೂಡ ಹುಡುಕಾಡಿದ. ಅವಳು ಎಲ್ಲಿಯೂ ಸಿಗಲಿಲ್ಲ. ರಾತ್ರಿ ಕಂಡ ಕನಸುಗಳೆಲ್ಲಾ ನುಚ್ಚುನೂರಾದವು. ಈ ಆಸೆ, ನೋವುಗಳಿಗೆ ಎಲ್ಲಾ ನೀನೆ ಕಾರಣವೆಂದು ಹುಚ್ಚು ಮನಸ್ಸಿಗೆ ಬೈಯುತ್ತಾ ಕುಳಿತನು. ಕೆಲವು ನಿಮಿಶಗಳ ನಂತರ ಬಾಯಾರಿಕೆಯಿಂದ ನೀರು ಕುಡಿಯಲು ಮೇಲಿನ ಸೀಟ್ ತುದಿಯಲ್ಲಿ ಇಟ್ಟಿದ್ದ ನೀರಿನ ಬಾಟಲನ್ನು ತೆಗೆದುಕೊಳ್ಳಲು ಹೋದ ಅದರ ಕೆಳಗಡೆ ಒಂದು ಚೀಟಿ ಕಾಣಿಸಿತು. ಏನಿದೆ ಎಂದು ತೆಗೆದು ನೋಡಿದ. “ಜೀವನದಲ್ಲಿ ಮತ್ತೆ ನಿನ್ನ ಪ್ರೀತಿಯನ್ನು ಪಡೆಯುವ ಯೋಗ್ಯತೆ ನನಗಿಲ್ಲ. ಅದಕ್ಕೆ ನಿನ್ನ ನೆನಪು ನನ್ನ ಜೊತೆಯಲ್ಲಿ ಸದಾ ಇರಲಿ ಎಂದು ನಿನ್ನ ಶಾಲನ್ನು ತೆಗೆದುಕೊಡು ಹೋಗುತ್ತಿದ್ದೀನಿ. ಸಾದ್ಯವಾದರೆ ದಯವಿಟ್ಟು ನನ್ನ ಕ್ಶಮಿಸು, ಇಂತಿ ನಿನ್ನ …” ಎಂದು ಬರೆದಿತ್ತು.

(ಚಿತ್ರ ಸೆಲೆ: manversusworld.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: