ಐಸ್ಲ್ಯಾಂಡ್ : ನೈಸರ್ಗಿಕ ವಿಸ್ಮಯಗಳ ಆಗರ (ಬಾಗ-1)
ಐಸ್ಲ್ಯಾಂಡ್ ಉತ್ತರ ಅಟ್ಲಾಂಟಿಕ್ ನಲ್ಲಿನ ಒಂದು ಪುಟ್ಟ ದೇಶ. ಈ ಪುಟ್ಟ ದೇಶದ ಜನಸಂಕ್ಯೆ ಅಂದಾಜು 3.5 ಲಕ್ಶ ಮಾತ್ರ. ಇದರ ವಿಸ್ತೀರ್ಣ ಕೇವಲ 40,000 ಚದರ ಮೈಲಿ. ಜಗತ್ತಿನ ವಿಸ್ತೀರ್ಣಕ್ಕೆ ಹೋಲಿಸಿದರೆ ಇದು ತುಂಬಾ ಚಿಕ್ಕದು. ಆದರೂ ಇದು ಅನೇಕ ನೈಸರ್ಗಿಕ ವಿಸ್ಮಯಗಳು ಆಗರ. ಹಾಗಾಗಿ ಇದನ್ನು ‘ಪ್ಲಾನೆಟ್ ಐಸ್ಲ್ಯಾಂಡ್’ ಎಂಬ ಅಡ್ಡ ಹೆಸರಿನಿಂದ ವಿಶ್ವದ ಎಲ್ಲೆಡೆಯಲ್ಲೂ ಪ್ರಸಿದ್ದವಾಗಿದೆ. ಈ ಪ್ರದೇಶ ವಿಶ್ವವಿಕ್ಯಾತವಾಗಲು ಇದೇ ಮೂಲ ಕಾರಣ. ಈ ದೇಶದಲ್ಲಿ ಅಡಗಿರುವ ನೈಸರ್ಗಿಕ ವಿಸ್ಮಯಗಳು ಒಂದಕ್ಕೊಂದು ಅಂಟಿಕೊಂಡಂತಿದೆ. ಈ ವಿಸ್ಮಯಗಳು ಬೇರೆಲ್ಲೂ ಇರದಶ್ಟು ಸನಿಹದಲ್ಲಿರುವುದರಿಂದ ಪ್ರವಾಸಿಗರಿಗೆ ಹೆಚ್ಚು ಪ್ರಯಾಸವಿಲ್ಲದೆ ವೀಕ್ಶಿಸಲು ಸಹಕಾರಿ. ಇದೇ ಒಂದು ವಿಬಿನ್ನ ಜಗತ್ತು. ಇಲ್ಲಿಗೆ ಪ್ರವಾಸಕ್ಕೆ ಒಮ್ಮೆ ಬಂದಲ್ಲಿ ಎಲ್ಲವನ್ನೂ ನೋಡುವ ಕುತೂಹಲ ದ್ವಿಗುಣಗೊಳ್ಳುತ್ತದೆ. ಹಾಗಾಗಿ ವಿಶ್ವಾದಾದ್ಯಂತ ಅನೇಕ ಪ್ರವಾಸಿಗರ ಸುತ್ತಾಟದ ತಾಣಗಳ ಪಟ್ಟಿಯ ಮಂಚೂಣಿಯಲ್ಲಿ ಐಸ್ಲ್ಯಾಂಡ್ ಇದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಹಾಗಾದರೆ ಇಲ್ಲಿರುವ ಅದ್ಬುತ ಹಾಗೂ ವಿಸ್ಮಯಕಾರಕ ನೈಸರ್ಗಿಕ ತಾಣಗಳು ಯಾವುವು? ಅವುಗಳ ವಿಶೇಶತೆ ಏನು? ಏಕಾಗಿ ಅವು ಪ್ರವಾಸಿಗರನ್ನು ಆಕರ್ಶಿಸುತ್ತಿವೆ? ಇಲ್ಲಿದೆ ಅದಕ್ಕೆ ಉತ್ತರ.
1. ಉತ್ತರದ ದೀಪಗಳು
ಉತ್ತರದ ದೀಪಗಳು ಪ್ರವಾಸಿಗರು ಐಸ್ಲ್ಯಾಂಡ್ ದೇಶವನ್ನು ಎಡತಾಕಲು ಮೊದಲ ಪ್ರಮುಕ ಆಕರ್ಶಣೆ. ಆಗಸದಲ್ಲಿ ನಾಟ್ಯವಾಡುವ ಈ ಅದ್ಬುತ ಬೆಳಕಿನ ಪ್ರದರ್ಶನಗಳು ಪದಗಳ ವರ್ಣನೆಗೆ ನಿಲುಕುವುದಿಲ್ಲ. ಅದರ ಸೌಂದರ್ಯ, ವಿನ್ಯಾಸವನ್ನು ಕಣ್ಣಾರೆ ನೋಡಿ ಅನುಬವಿಸಬೇಕೇ ಹೊರತು ಬೇರೆ ದಾರಿಯಿಲ್ಲ. ನಿಜವಾದ ತ್ರುಪ್ತಿ, ಆನಂದ ಅಲ್ಲೇ ದೊರೆಯಲು ಸಾದ್ಯ. ಬೇರಾವುದೇ ರೀತಿಯ ವಿವರಣೆ ತೀರಾ ಕ್ಶುಲ್ಲಕ, ಬಾಲಿಶವಾಗಿ ಕಾಣುತ್ತದೆ. ಈ ಅರುಣೋದಯ ಶೋಬೆ ಸಕ್ರಿಯವಾಗಿದ್ದಾಗ ಅದು ಇಡೀ ಬಾನನ್ನು ತನ್ನ ಅವರ್ಣನೀಯ ಬಣ್ಣದ ಸಂಯೋಜನೆಯಿಂದ ಬೆಳಗುತ್ತದೆ. ಆ ಸಮಯದಲ್ಲಿ ವೈವಿದ್ಯಮಯ ಆಕಾರಗಳು ಆಕಾಶದಲ್ಲಿ ಸ್ರುಶ್ಟಿಗೊಳ್ಳುತ್ತವೆ. ಚಿತ್ತಾಕರ್ಶಕ ಬಣ್ಣಗಳನ್ನು ಲೇಪಿಸಿದಂತೆ ಬಾನು ಕಂಗೊಳಿಸುತ್ತದೆ. ಈ ಬಣ್ಣಗಳ ವಿದ್ಯಮಾನ ಅದ್ಬುತ. ನೋಡುಗರನ್ನು ಮೋಡಿ ಮಾಡುತ್ತದೆ. ಇಲ್ಲಿನ ಸ್ತಳೀಯರಿಗೆ ಇದು ದಿನಿತ್ಯದ ಆಗುಹೋಗುಗಳಲ್ಲಿ ಒಂದಾದರೂ ಸಹ ಅವರಿಗೂ ಅತ್ತ ನೋಡಲು ಬೇಸರವಾಗುವುದಿಲ್ಲ. ಇದಕ್ಕೆ ಮೂಲ, ಬಾನಿನಲ್ಲಿ ಮೂಡುವ ಬಣ್ಣಗಳ ಚಿತ್ತಾರ ದಿನವೂ ಒಂದೇ ಆಗಿರುವುದಿಲ್ಲ. ಬೇರೆ ಬೇರೆಯದೇ ವಿನ್ಯಾಸ ಹಾಗೂ ಬಣ್ಣಗಳು ಗೋಚರಿಸುತ್ತವೆ. ಪ್ರತಿಯೊಂದು ದಿನದ ಪ್ರದರ್ಶನವೂ ವಿಶಿಶ್ಟ ಹಾಗೂ ಅನನ್ಯ.
ಉತ್ತರದ ದೀಪಗಳನ್ನು ‘ಅರೋರಾ ಬೋರಿಯಾಲಿಸ್’ ಎಂತಲೂ, ದಕ್ಶಿಣದಲ್ಲಿನ ದೀಪಗಳನ್ನು ‘ಅರೋರಾ ಆಸ್ಟ್ರಾಲಿಸ್’ ಎಂತಲೂ ಕರೆಯಲಾಗುತ್ತದೆ. ವಿಜ್ನಾನಿಗಳ ಸಂಶೋದನೆಯ ಪ್ರಕಾರ ಉತ್ತರ ಮತ್ತು ದಕ್ಶಿಣ ಅರೋರಾಗಳು, ಹೆಚ್ಚಿನ ಸಂದರ್ಬಗಳಲ್ಲಿ ‘ಕನ್ನಡಿಯ ಬಿಂಬ’(ಮಿರರ್ ಇಮೇಜ್) ದಂತೆ ಕಂಡ ಬರುತ್ತವೆ ಎನ್ನುತ್ತದೆ. ಐಸ್ಲ್ಯಾಂಡಿನಲ್ಲಿ ಅರುಣೋದಯ ಶೋಬೆ ನೋಡಲು ಉತ್ತಮ ಸಮಯ ಸೆಪ್ಟಂಬರ್ನಿಂದ ಏಪ್ರಿಲ್ವರೆಗೆ. ಕಪ್ಪನೆ ಹಾಗೂ ನಿರ್ಮಲ ಆಕಾಶವಿದ್ದಾಗ ದೀಪಗಳು ಸ್ಪಶ್ಟವಾಗಿ ಗೋಚರಿಸುತ್ತವೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ!
2. ನಡುರಾತ್ರಿಯ ರವಿ
ಉತ್ತರ ದೀಪಗಳು ಕಾಣದಿದ್ದಲ್ಲಿ, ನೋಡಲು ಅಸಾದ್ಯವಾದ ವಾತಾವರಣ ಇದ್ದಲ್ಲಿ, ಮತ್ತೊಂದು ವಿಶೇಶವಾದ ಮಾಂತ್ರಿಕ ಸ್ಪರ್ಶದ ವಿದ್ಯಮಾನವಿದೆ. ಅದೇ ನಡುರಾತ್ರಿಯ ಸೂರ್ಯ. ಇವುಗಳ ನಡುವೆ ಹೋಲಿಕೆ ಸಲ್ಲ. ಏಕೆಂದರೆ ಈ ಎರೆಡೂ ವಿದ್ಯಮಾನಗಳು ತೀರ ವಿಬಿನ್ನವಾದವುಗಳು. ಅವುಗಳಿಗೆ ಅವುಗಳದೇ ಆದ ವ್ಯೆಶಿಶ್ಟ್ಯತೆ, ವಿಶೇಶತೆ ಇದೆ. ನಡುರಾತ್ರಿಯ ಸೂರ್ಯನ ವಿದ್ಯಮಾನವು ಪ್ರತಿ ಬೇಸಿಗೆಯಲ್ಲಿ ದ್ರುವ ವಲಯದ ಸುತ್ತಲೂ ಕಾಣುವ ನೈಸರ್ಗಿಕ ಕ್ರಿಯೆ. ಆರ್ಕ್ಟಿಕ್ ವ್ರುತ್ತದಲ್ಲಿ ಸೂರ್ಯ ರಾತ್ರಿಯಿಡೀ ಗೋಚರಿಸುತ್ತಾನೆ. ಈ ಕ್ರಿಯೆ ನಡೆಯುವುದು ಜೂನ್ ತಿಂಗಳಿನಲ್ಲಿ. ನಮ್ಮಲ್ಲೂ ಸಹ ಜೂನ್ ತಿಂಗಳಿನಲ್ಲಿ ಹಗಲು ಹೆಚ್ಚಿರುತ್ತದೆ. ಐಸ್ಲ್ಯಾಂಡ್ ಆರ್ಕ್ಟಿಕ್ ವ್ರುತ್ತದ ಸನಿಹದಲ್ಲಿ ಇರುವುದರಿಂದ ಇಲ್ಲಿ ಮೇ ಮಾಹೆಯಿಂದ ಆಗಸ್ಟ್ ಮಾಹೆಯವರೆಗೆ ನಡುರಾತ್ರಿಯ ಸೂರ್ಯನ ವಿದ್ಯಮಾನವನ್ನು ಕಾಣಬಹುದು. ಉತ್ತರದ ಪ್ರದೇಶಗಳಲ್ಲಿ ಸೂರ್ಯ ರಾತ್ರಿಯಿಡೀ ದಿಗಂತದ ಮೇಲೆ ಇದ್ದಲ್ಲಿ, ದಕ್ಶಿಣದ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ದಿಗಂತದಿಂದ ಕೆಳಗೆ ಇಳಿಯುವ ಕಾರಣ ಕೆಲ ಕಾಲ ಕತ್ತಲು ಆವರಿಸುತ್ತದೆ. ಸೂರ್ಯನ ಅರುಣೋದಯದ ಮತ್ತು ಅಸ್ತಂಗತದ ಸಮಯದಲ್ಲಿ ಬಾನಿನಲ್ಲಿ ಮೂಡುವ ಚಿನ್ನ ಮತ್ತು ಗುಲಾಬಿ ಬಣ್ಣಗಳ ಚಿತ್ರಣ ಮನಸೊರೆಗೊಳ್ಳುವಂತಹದ್ದಾಗಿದೆ. ಈ ವಿದ್ಯಮಾನ ಇಡೀ ರಾತ್ರಿ ಕಂಗೊಳಿಸುವುದು ಮತ್ತೂ ವಿಶೇಶವಾಗಿದೆ. ಹವಾಮಾನ ವೈಪರೀತ್ಯವಿಲ್ಲದಿದ್ದರೆ, ಬಾನು ನಿರ್ಮಲವಾಗಿದ್ದರೆ ಇಂತಹ ಸುಂದರ ಪ್ರದರ್ಶನವನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಪೋಟೋಗಳನ್ನೂ ಕ್ಲಿಕ್ಕಿಸಲು ಸಾದ್ಯ.
3. ಹಿಮನದಿಗಳು ಮತ್ತು ನೀಲಿ ಮಂಜುಗಡ್ಡೆಯ ಗುಹೆಗಳು
ಐಸ್ಲ್ಯಾಂಡಿನ ಒಟ್ಟು ಬೂ ಪ್ರದೇಶದಲ್ಲಿ ಶೇಕಡಾ 11 ರಶ್ಟು ಪ್ರದೇಶ ಹಿಮದಿಂದ ಆವ್ರುತವಾಗಿದೆ. ಇದು ಹಿಮನದಿಗಳ ಸ್ವರ್ಗ. ಯುರೋಪಿನ ಅತಿ ದೊಡ್ಡ ಹಿಮಹೊದಿಕೆಯನ್ನು ಇಲ್ಲಿ ಕಾಣಬಹುದು. ಇದರೊಂದಿಗೆ ಅನಂತ ಸಣ್ಣ ಸಣ್ಣ ಹೊದಿಕೆಗಳೂ ಸಹ ಕಾಣಸಿಗುತ್ತವೆ. ಐಸ್ಲ್ಯಾಂಡಿನಲ್ಲಿರುವ ಹೆಚ್ಚಿನ ಹಿಮನದಿಗಳ ಹಿಮದ ಹೊದಿಕೆಯ ಕೆಳಗೆ ಸಕ್ರಿಯ ಜ್ವಾಲಾಮುಕಿಗಳಿವೆ. ಇದಕ್ಕೆ ಸೂಕ್ತ ಉದಾಹರಣೆ: ಏಯೈಪಿಯಾತ್ಲಯೋಕಿತಲ್(Eyjafjallajökull). ಈ ಹೆಸರು ಹಿಮನದಿ ಹಾಗೂ ಜ್ವಾಲಾಮುಕಿ ಎರಡನ್ನೂ ಸೂಚಿಸುತ್ತದೆ. ಇಲ್ಲಿನ ಹಿಮನದಿ ನೂರಾರು ಅತವಾ ಸಾವಿರಾರು ವರ್ಶಗಳ ಹಿಂದೆ ಸ್ಪೋಟಿಸಿದ ಜ್ವಾಲಾಮುಕಿಯ ಕುರುಹುಗಳನ್ನು ಹೊಂದಿದೆ. ಜಾಲಾಮುಕಿ ಸ್ಪೋಟಿಸಿದಾಗ ಹೊರಬರುವ ಲಾವಾರಸ, ಬೂದಿ ಹಿಮದ ಉಶ್ಣತೆಗೆ ಗಟ್ಟಿಯಾಗಿ ಹಿಮದ ಪದರುಗಳಲ್ಲಿ ಸೇರಿಕೊಂಡಿರುತ್ತದೆ. ಈ ಕಾರಣದಿಂದ ಐಸ್ಲ್ಯಾಂಡಿನ ಹಿಮನದಿಗಳಲ್ಲಿ ಕಪ್ಪು ಪಟ್ಟೆಗಳು ದಾರಾಳವಾಗಿ ಕಂಡು ಬರುತ್ತವೆ. ಐಸ್ಲ್ಯಾಂಡಿನಲ್ಲಿರುವ ಹಿಮನದಿಗಳೊಳಗೆ ಪ್ರವೇಶ ಸುಲಬ. ಆದ ಕಾರಣ ಪ್ರವಾಸಿಗರಿಗೆ ಹಿಮನದಿಯ ಅನೇಕ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ. ಇದರಲ್ಲಿ ರೂಪುಗೊಂಡಿರುವ ಸ್ಪಟಿಕ ನೀಲಿ ಬಣ್ಣದ ಹಿಮಚ್ಚಾದಿತ ಗುಹೆಗಳನ್ನು ಅನ್ವೇಶಿಸುವುದು ಪ್ರವಾಸಿಗರು ಮಾಡಬಹುದಾದಂತಹ ಅತ್ಯಂತ ವಿಶಿಶ್ಟವಾದ ಕೆಲಸಗಳಲ್ಲಿ ಒಂದು. ಇಂತಹ ಗುಹೆಗಳನ್ನು ಪ್ರವೇಶಿಸಿದಲ್ಲಿ ತಮ್ಮದೇ ಆದ ಕಾಲ್ಪನಿಕ ಲೋಕದಲ್ಲಿ ಕಾಲಿರಿಸಿದಂತೆ ಬಾಸವಾಗುತ್ತದೆ. ಇಲ್ಲಿ ಕಂಡುಬರುವ, ವಜ್ರದಂತಿರುವ, ಹಸಿರು ಮಿಶ್ರಿತ ನೀಲಿ ಹಾಗೂ ಸ್ಪಟಿಕದಶ್ಟು ಸ್ಪಶ್ಟವಾದ ಹೊಳೆಯುವ ಹಿಮಚ್ಚಾದಿತ ಗುಹೆಗಳನ್ನು ನೋಡುವುದೇ ಒಂದು ಸುಯೋಗ. ಇಂತಹ ವಾತಾವರಣವಿರುವ ಗುಹೆಗಳು ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ. ಈ ಹಿಮಚ್ಚಾದಿತ ಗುಹೆಗಳು ಅಲ್ಪಾವದಿ ಅದ್ಬುತಗಳು. ಬೇಸಿಗೆ ಬಂದಂತೆ ಅವು ಕರಗಿ ಕುಸಿಯುತ್ತವೆ. ಮತ್ತೆ ಚಳಿಗಾಲದಲ್ಲಿ ಹೊಸ ಹೊಸ ಗುಹೆಗಳು ರೂಪುಗೊಳ್ಳುತ್ತವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಹತ್ತಾರು ವರ್ಶಗಳಿಂದ ನೀರ್ಗಲ್ಲುಗಳ ಪ್ರದೇಶ ಸಾಕಶ್ಟು ಕಡಿತವಾಗಿದೆ. ಹೀಗೇ ಮುಂದುವರೆದರೆ, ವಿಜ್ನಾನಿಗಳ ಪ್ರಕಾರ, ಮುಂದಿನ ಐವತ್ತು ನೂರು ವರ್ಶಗಳಲ್ಲಿ ಇವು ಸಂಪೂರ್ಣವಾಗಿ ಕಣ್ಮರೆಯಾಗುವ ಸಾದ್ಯತೆಗಳಿವೆ. ಐಸ್ಲ್ಯಾಂಡ್ಗೆ ಬೇಟಿ ನೀಡುವವರು ನೀರ್ಗಲ್ಲು ಮತ್ತು ಅದರಲ್ಲಿನ ಗುಹೆಗಳನ್ನು ನೋಡಲು ಮರೆತರೆ, ಅಲ್ಲಿ ಏನನ್ನೂ ನೋಡಿಲ್ಲ ಎಂದೇ ಬಾವಿಸಬಹುದು!
4. ನೀರ್ಗಲ್ಲ ಕೊಳ ಮತ್ತು ಡೈಮಂಡ್ ಕರಾವಳಿ
ಐಸ್ಲ್ಯಾಂಡಿನಲ್ಲಿರುವ ನೀರ್ಗಲ್ಲ ಕೊಳಗಳು ವಿಶ್ವದ ಅತ್ಯಂತ ಪ್ರಸಿದ್ದ ನೈಸರ್ಗಿಕ ಅದ್ಬುತಗಳಲ್ಲಿ ಒಂದು. ಇವುಗಳಲ್ಲಿ ಯೋಕುಲ್ಸಾರ್ಲೊ(Jökulsárlón) ಮಂಚೂಣಿಯಲ್ಲಿರುವ ನೀರ್ಗಲ್ಲ ಕೊಳ. ವಿಶ್ವದಲ್ಲೇ ಅತ್ಯಂತ ಪ್ರಸಿದ್ದಿ. ಪ್ರವಾಸಿಗರು ಇದನ್ನು ಐಸ್ಲ್ಯಾಂಡಿನ ಮುಕುಟ ರತ್ನ ಎಂದು ಹಾಗೂ ಪ್ರವಾಸದ ಮುಕ್ಯಾಂಶವೆಂದೂ ಗುರುತಿಸುತ್ತಾರೆ. ನಯನ ಮನೋಹರವಾದ ಈ ನೀರ್ಗಲ್ಲ ಕೊಳಗಳು ಹಿಮನದಿಯ ತುದಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಮಂಜುಗಡ್ಡೆ ನಿದಾನವಾಗಿ ಕರಗಿ ಹಿಂದಕ್ಕೆ ಸರಿಯುತ್ತಿದ್ದಂತೆ ಕೊಳಗಳು ಹುಟ್ಟು ಕಾಣುತ್ತವೆ. ಈ ಕೊಳಗಳಲ್ಲಿ ಹಿಮ ಕರಗಿದ ನೀರು ಮತ್ತು ಅದರ ಮೇಲೆ ನೀರ್ಗಲ್ಲಿನಿಂದ ಬೇರ್ಪಟ್ಟ ಸಣ್ಣ ಸಣ್ಣ ಪದರದ ಮಂಜುಗಡ್ಡೆ ತೇಲುತ್ತಿರುತ್ತದೆ. ಬೇರೆ ಬೇರೆ ಗಾತ್ರದ ಹಾಗೂ ಆಕಾರದ ಮಂಜುಗಡ್ಡೆಗಳು ಈ ಕೊಳಗಳಲ್ಲಿ ಇರುವುದನ್ನು ಕಾಣಬಹುದು. ಸಣ್ಣ ಸಣ್ಣ ವಜ್ರದಂತಹ ಮಂಜುಗಡ್ಡೆಯಿಂದ ಹಿಡಿದು, 20ರಿಂದ 30 ಮೀಟರ್ನಶ್ಟು (65 ರಿಂದ 100 ಅಡಿ) ದೈತ್ಯಾಕಾರದ ಹಾಗೂ ಉದ್ದದ ಮಂಜುಗಡ್ಡೆಯನ್ನು ಕಾಣಬಹುದು. ಈ ರೀತಿಯಲ್ಲಿ ರೂಪುಗೊಂಡ ನೀರ್ಗಲ್ಲ ಕೊಳಗಳಲ್ಲಿ, ಯೋಕುಲ್ಸಾರ್ಲೊ ಕೊಳವು ನೇರವಾಗಿ ಸಾಗರದೊಡನೆ ಸಂಪರ್ಕ ಹೊಂದಿರುವ ಕಾರಣ, ಇದರ ನೀರು ನೇರವಾಗಿ ಸಾಗರಕ್ಕೆ ಹರಿಯುತ್ತದೆ. ನೀರಿನೊಡನೆ ಅನೇಕ ಸಣ್ಣ ಪುಟ್ಟ ಮಂಜುಗಡ್ಡೆಯ ಪದರಗಳು ಸಹ ಸಾಗರವನ್ನು ಸೇರುತ್ತವೆ. ಸಾಗರದ ಅಲೆಗಳು ಅವುಗಳನ್ನು ಮತ್ತೆ ಕರಾವಳಿಗೆ ತಳ್ಳುತ್ತದೆ. ಹೀಗೆ ತಳ್ಳಲ್ಪಟ್ಟ ಮಂಜುಗಡ್ಡೆ ಕರಾವಳಿಯ ಮರಳಿಗೆ ಬಡಿದಾಗ ಮಿಲಿಯಗಟ್ಟಲೆ ತುಣುಕುಗಳಾಗಿ ಒಡೆಯುತ್ತದೆ. ಈ ಬಿಳಿ ಬಣ್ಣದ ಪುಟ್ಟ ಪುಟ್ಟ ಐಸ್ನ ತುಂಡುಗಳು, ಕಪ್ಪು ಮರಳ ಮೇಲೆ ವಜ್ರದಂತೆ ಹೊಳೆಯ ತೊಡಗುತ್ತದೆ. ಹಾಗಾಗಿ ಇಲ್ಲಿನ ಕರಾವಳಿಗೆ ‘ಡೈಮಂಡ್ ಬೀಚ್’ ಎಂಬ ಅನ್ವರ್ತನಾಮ. ವಿಶ್ವದಲ್ಲೇ ಅತಿ ಹೆಚ್ಚು ಚಾಯಾಗ್ರ್ರಹಣಕ್ಕೆ ಒಳಗಾದ ನೈಸರ್ಗಿಕ ಆಕರ್ಶಣೆಗಳಲ್ಲಿ ಇದು ಉತ್ತುಂಗದಲ್ಲಿದೆ. ನೀರ್ಗಲ್ಲ ನದಿಯಲ್ಲಿ ಹೋದಲ್ಲಿ ಅಲ್ಲಿ ಲಬಿಸುವ ಅನುಬವ ಮತ್ತಾವುದರಿಂದಲೂ ದೊರೆಯುವುದಿಲ್ಲ. ತಣ್ಣನೆಯ ನೀರಿನಲ್ಲಿ ತೇಲುತ್ತಿರುವ ಮಂಜುಗಡ್ಡೆಗಳು, ವಜ್ರದಂತೆ ಹೊಳೆಯುವ ಕರಾವಳಿ, ಇವುಗಳೊಡನೆ ಇರುಳ ಸೂರ್ಯನ ಅನುಬವವನ್ನು ಬೆರೆಸಿದಲ್ಲಿ,ಬೆರಗುಗೊಳಿಸುವ ಶಾಶ್ವತ ಸ್ಮರಣೆ ಮನದಲ್ಲಿ ಅಚ್ಚಾಗುತ್ತದೆ.
ಮತ್ತಶ್ಟು ವಿಸ್ಮಯಗಳ ಬಗ್ಗೆ ಮಾಹಿತಿ, ಮುಂದಿನ ಬರಹದಲ್ಲಿ…
( ಚಿತ್ರಸೆಲೆ : guidetoiceland.is )
ಇತ್ತೀಚಿನ ಅನಿಸಿಕೆಗಳು