ಕವಿತೆ : ದಾರಿಹೋಕರು

ದ್ವಾರನಕುಂಟೆ ಪಿ. ಚಿತ್ತನಾಯಕ.

ದಾರಿಹೋಕರು, Passerby

ನೆಳಲಿಲ್ಲದ ಮರವೊಂದು
ಕೈಚಾಚಿ ಮಲಗಿದಂತೆ
ರೆಂಬೆಕೊಂಬೆಯ ತುಂಬ
ಗೂಡುಕಟ್ಟಿಕೊಂಡಂತೆ
ನಮ್ಮ ಮನೆಗಳ ಪಾಡು
ಮರಹತ್ತಿ ಮರವಿಳಿದು
ಹೋಗುವ ತರಾತುರಿಯ
ದಾರಿಹೋಕರು

ಮರಕೋತಿಯ ಆಟ
ಮರದ ಮೇಲೊಂದು
ಹಗ್ಗ ಜಗ್ಗಾಟ
ಕಾಲೆಳೆದು ಬೀಳಿಸುವ
ಕಣ್ಣೆದುರೆ ಮುಕಗಳಿಗೆ
ಕಣ್ಣಾಮುಚ್ಚಾಲೆ ನಿತ್ಯ
ತಳ್ಳುವ ನಾವು ದಾರಿಹೋಕರು

ಅವರಿವರ ಹೊಟ್ಟೆ
ಬರಿದು ಮಾಡಿ
ತಮ್ಮ ತಮ್ಮ ಹೊಟ್ಟೆಗಳು
ಬಿರಿದು ನಿಂತವು
ಬಡಿದು ತಿನ್ನುವುದಕ್ಕೆ ಹಬ್ಬ
ಹರಿದಿನಗಳು ಒಂದಿಶ್ಟು
ರಂಜನೆಗೆ ದಿನವಿಡೀ ಮೈಮರೆವ
ದಾರಿಹೋಕರು

ದಾರಿಗಳಶ್ಟೇ ಇಲ್ಲಿ
ಶಾಶ್ವತ ಕುರುಹುಗಳು
ಹೆಜ್ಜೆಗಳ ಮೇಲೆ ಹೆಜ್ಜೆಗಳೊತ್ತಿ
ತುಳಿದಾಟದ ಸರದಿಯಲಿ
ಬವದ ಹುಡುಕಾಟ ಮುಕ್ತಿಗಾಗಿ
ದಾರಿಹೋಕರು ಇಲ್ಲಿ
ಹುಟ್ಟಿ ಸಾಗುವುದೆಲ್ಲ ಸಾವಿಗಾಗಿ

( ಚಿತ್ರಸೆಲೆ : wikimedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks