ಶಣ್ಮುಕಸ್ವಾಮಿಯ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಸತ್ಯವಚನವ ನುಡಿಯಬಲ್ಲರೆ
ಶರಣನೆಂಬೆನು
ಸದಾಚಾರದಲ್ಲಿ ನಡೆಯಬಲ್ಲರೆ
ಶರಣನೆಂಬೆನು. (443/1058)

ಸತ್ಯ=ದಿಟ/ನಿಜ/ವಾಸ್ತವ; ವಚನ=ಮಾತು; ಸತ್ಯವಚನ=ವಾಸ್ತವದ ಸಂಗತಿಯನ್ನು ಹೇಳುವ ಮಾತು; ನುಡಿ=ಹೇಳು; ಬಲ್=ತಿಳಿ/ಅರಿ; ನುಡಿಯಬಲ್ಲರೆ=ಹೇಳಬಲ್ಲವರಾದರೆ/ನುಡಿಯಲು ಅರಿತಿದ್ದರೆ;

ಶರಣನ್+ಎಂಬೆನು; ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು ಬಾಳುತ್ತಿರುವ ವ್ಯಕ್ತಿ; ಎಂಬೆನು=ಎನ್ನುವೆನು/ಎಂದು ಹೇಳುವೆನು/ಎಂದು ತಿಳಿಯುವೆನು;

ಸದಾಚಾರ+ಅಲ್ಲಿ; ಸದಾಚಾರ=ಒಳ್ಳೆಯ ನಡತೆ/ಉತ್ತಮ ನಡವಳಿಕೆ; ; ನಡೆ=ವರ‍್ತನೆ/ಆಚರಣೆ/ನಡವಳಿಕೆ; ನಡೆಯಬಲ್ಲರೆ=ಒಳ್ಳೆಯ ನಡವಳಿಕೆಯಿಂದ ಬಾಳುತ್ತಿದ್ದರೆ;

ತೊರೆಯಲ್ಲಿ ಮಿಂದೆದ್ದು, ಮಡಿ ಬಟ್ಟೆಯನ್ನುಟ್ಟು, ದೇವರ ವಿಗ್ರಹವನ್ನು ಹೂವು ಹಣ್ಣುಗಳಿಂದ ಸಿಂಗರಿಸಿ, ದೂಪ ದೀಪಗಳನ್ನು ಬೆಳಗಿಸುತ್ತ , ದೇವರ ಮುಂದೆ ಅಡ್ಡಬೀಳುವ ಇಲ್ಲವೇ ಜಪ ತಪ ಉಪವಾಸಗಳಿಂದ ದೇಹವನ್ನು ದಂಡಿಸಿ ಮಾಡುವ ಆಚರಣೆಗಳಿಂದ ವ್ಯಕ್ತಿಯು ಶರಣನಾಗುವುದಿಲ್ಲ.

ವಚನಕಾರರ ನಿಲುವಿನಲ್ಲಿ ಶರಣನೆಂದರೆ “ ದಿನನಿತ್ಯದ ಜೀವನದಲ್ಲಿ ಸತ್ಯದ ನುಡಿಗಳನ್ನು ಆಡಬಲ್ಲ ಮತ್ತು ಸದಾಚಾರದಿಂದ ನಡೆಯಬಲ್ಲ ವ್ಯಕ್ತಿ.”

ಶರಣನಾಗುವುದೆಂದರೆ ವ್ಯಕ್ತಿಯು ಸಾಮಾಜಿಕವಾಗಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬಾಳುವುದು.

‘ ಒಳ್ಳೆಯ ವ್ಯಕ್ತಿತ್ವ ‘ ಎಂದರೆ ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ಕೆಲಸಗಳು ತನ್ನನ್ನು ಒಳಗೊಂಡಂತೆ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಿರುವುದು.

ಗುರುವಿಂಗಾದಡೂ
ಅರುಹು ಆಚಾರ
ಸತ್ಕ್ರಿಯವೇ ಬೇಕು
ಲಿಂಗಕ್ಕಾದಡೂ
ಅರುಹು ಆಚಾರ
ಸತ್ಕ್ರಿಯವೇ ಬೇಕು
ಜಂಗಮಕ್ಕಾದಡೂ
ಅರುಹು ಆಚಾರ
ಸತ್ಕ್ರಿಯವೇ ಬೇಕು. (454/1060)

ಗುರುವಿಂಗೆ+ಆದಡೂ; ಗುರುವಿಂಗೆ=ಗುರುವಿಗೆ; ಗುರು=ತನ್ನ ಬಳಿ ಬಂದ ಮಕ್ಕಳಿಗೆ ಮತ್ತು ವ್ಯಕ್ತಿಗಳಿಗೆ ವಿದ್ಯೆಯನ್ನು ಕಲಿಸಿ, ಅರಿವನ್ನು ಮೂಡಿಸಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವವನು; ಆದಡೂ=ಆದರೂ ;

ಅರುಹು=ತಿಳುವಳಿಕೆ; ಆಚಾರ=ಒಳ್ಳೆಯ ವರ‍್ತನೆ/ನಡವಳಿಕೆ; ಸತ್ಕ್ರಿಯ=ಒಳ್ಳೆಯ ಕಸುಬು/ಕೆಲಸ/ಕಾರ‍್ಯ; ಬೇಕು=ಅಗತ್ಯ;

ಲಿಂಗಕ್ಕೆ+ಆದಡೂ; ಲಿಂಗ=ದೇವರಾದ ಶಿವ/ಶಿವನ ಸಂಕೇತವಾದ ಮಣ್ಣಿನ, ಮರದ, ಕಲ್ಲಿನ ಲೋಹದ ವಿಗ್ರಹ; ಜಂಗಮಕ್ಕೆ+ಆದಡೂ;

ಜಂಗಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ಜನರಿಗೆ ತಿಳಿಯ ಹೇಳುತ್ತ, ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರವಾಗಿ ಸಂಚರಿಸುತ್ತಿರುವ ಶಿವಶರಣ;

ಜನಸಮುದಾಯ ಒಲವು, ನಲಿವು ಮತ್ತು ನೆಮ್ಮದಿಯಿಂದ ಬಾಳಬೇಕಾದರೆ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ತಿಳುವಳಿಕೆಯನ್ನು ಪಡೆದುಕೊಂಡು, ಒಳ್ಳೆಯ ನಡವಳಿಕೆಯನ್ನು ಹೊಂದಿ, ಒಳ್ಳೆಯ ಕಾಯಕದಲ್ಲಿ ತೊಡಗಬೇಕು. ಇದಕ್ಕೆ ಗುರು ಲಿಂಗ ಜಂಗಮ ಹೊರತಲ್ಲ.

ಶಿವನನ್ನು ಒಲವು ನಲಿವಿನಿಂದ ಪೂಜಿಸುವ ಶ್ರೀಸಾಮಾನ್ಯ ವ್ಯಕ್ತಿಯನ್ನು ‘ ಲಿಂಗ ‘ ಎಂಬ ಪದ ಸೂಚಿಸುತ್ತದೆ. ’ಲಿಂಗ‘ ಎಂಬ ಪದ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ

‘ ಕಾಯಕ ’ ಎಂದರೆ ವ್ಯಕ್ತಿಯು ಮಾಡುವ ಕೆಲಸವು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ದುಡಿಮೆ.

ಇದಿರ ಹಳಿದು
ತನ್ನ ಬಣ್ಣಿಸುವನ್ನಕ್ಕರ
ಶಿವಜ್ಞಾನಿ ಎಂತಪ್ಪನಯ್ಯಾ. (573/1076)

ಇದಿರ=ಇತರರನ್ನು/ಬೇರೆಯವರನ್ನು; ಹಳಿ=ತೆಗಳು/ನಿಂದಿಸು/ಬಯ್ಯುವುದು/ಕಡೆಗಣಿಸು/ಅಲ್ಲಗಳೆ; ಇದಿರ ಹಳಿದು=ಬೇರೆಯವರನ್ನು ನಿಂದಿಸಿ/ಬಯ್ದು/ತೆಗಳಿ;

ತನ್ನ=ವ್ಯಕ್ತಿಯು ತನ್ನನ್ನು ತಾನು; ಬಣ್ಣಿಸುವ+ಅನ್ನಕ್ಕರ; ಬಣ್ಣನೆ=ಹೊಗಳಿಕೆ/ವರ‍್ಣನೆ ಬಣ್ಣಿಸು=ಹೊಗಳುವುದು/ಗುಣಗಾನ ಮಾಡುವುದು; ತನ್ನ ಬಣ್ಣಿಸುವ=ತನ್ನನ್ನು ತಾನೇ ಹೊಗಳಿಕೊಳ್ಳುವ;

ಅನ್ನಕ್ಕರ=ಅಲ್ಲಿಯ ವರೆಗೆ/ಆ ತನಕ; ಶಿವ=ಈಶ್ವರ/ದೇವರು; ಜ್ಞಾನಿ=ಅರಿವು ಉಳ್ಳವನು ; ಶಿವಜ್ಞಾನಿ=ಜೀವನದಲ್ಲಿ ಒಳ್ಳೆಯ ನಡೆನುಡಿಗಳೇ ಶಿವನ ಸಂಕೇತವೆಂದು ತಿಳಿದು ಬಾಳುತ್ತಿರುವವನು; ಎಂತು+ಅಪ್ಪನ್+ಅಯ್ಯಾ; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ; ಅಪ್ಪನ್=ಆಗುವನು/ಆಗುತ್ತಾನೆ; ಎಂತಪ್ಪನ್=ಹೇಗೆ ತಾನೆ ಆಗುತ್ತಾನೆ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಇತರರನ್ನು ಬಯ್ಯುತ್ತ, ತನ್ನನ್ನು ತಾನು ಹೊಗಳಿಕೊಳ್ಳುವ ವ್ಯಕ್ತಿಯು ಅರಿವುಗೇಡಿ ಮತ್ತು ಅಹಂಕಾರಿಯಾಗಿರುತ್ತಾನೆ. ಏಕೆಂದರೆ ಇಂತಹ ವ್ಯಕ್ತಿಯು ತನ್ನ ನಡೆನುಡಿಯನ್ನು ತಾನು ಒರೆಹಚ್ಚಿ ನೋಡಿಕೊಂಡು , ತಾನು ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದಿರುವುದಿಲ್ಲ ಮತ್ತು ತಾನೊಬ್ಬನೇ ಗುಣವಂತ, ಪ್ರಾಮಾಣಿಕ , ಸತ್ಯವಂತನೆಂಬ ತಪ್ಪು ತಿಳುವಳಿಕೆಯಿಂದ ಅಹಂಕಾರಿಯಾಗಿರುತ್ತಾನೆ. ಇಂತಹ ತಿಳಿಗೇಡಿಯು ಒಳ್ಳೆಯ ನಡೆನುಡಿಗಳ ಪ್ರತಿರೂಪನಾದ ಶಿವನನ್ನು ಅರಿಯಲಾರ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: