ಗಜೇಶ ಮಸಣಯ್ಯನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಕಾಲ : ಕ್ರಿ.ಶ.12ನೆಯ ಶತಮಾನ
ಊರು : ಕರಜಿಗಿ ಗ್ರಾಮ, ಬಿಜಾಪುರದಿಂದ ಅರವತ್ತು ಮೈಲಿ ದೂರದಲ್ಲಿರುವ ಅಕ್ಕಲಕೋಟೆಗೆ ಸಮೀಪದಲ್ಲಿದೆ.
ದೊರೆತಿರುವ ವಚನಗಳು :70
ಅಂಕಿತ ನಾಮ : ಮಹಾಲಿಂಗ ಗಜೇಶ್ವರ

ಒಲಿದವರ ಕೊಲುವಡೆ
ಮಸೆದ ಕೂರಲಗೇಕೆ
ಅವರನೊಲ್ಲೆನೆಂದಡೆ ಸಾಲದೆ. (215/1223)

ಒಲಿ=ಮೆಚ್ಚು/ಮೋಹಗೊಳ್ಳು/ಒಪ್ಪು; ಒಲಿದವರ=ಮೋಹಗೊಂಡವರನ್ನು/ಮೆಚ್ಚಿದವರನ್ನು; ಕೊಲ್=ಸಾಯಿಸು/ಪ್ರಾಣವನ್ನು ತೆಗೆ/ಪೀಡಿಸು/ನೋಯಿಸು; ಕೊಲುವಡೆ=ನೋಯಿಸುವುದಾದರೆ/ಕೊಲ್ಲುವುದಾದರೆ; ಮಸೆ=ಕತ್ತಿ, ಚಾಕು ಮುಂತಾದ ಹತಾರಗಳ ಬಾಯಿ ಹರಿತಗೊಳ್ಳುವಂತೆ ಉಜ್ಜುವುದು;

ಮಸೆದ=ಹರಿತಗೊಂಡ/ಸಾಣೆ ಹಿಡಿದ; ಕೂರ್+ಅಲಗು+ಏಕೆ; ಕೂರ್=ಹರಿತವಾದ/ಚೂಪಾದ ಮೊನೆಯುಳ್ಳ; ಅಲಗು=ಕತ್ತಿ; ಕೂರಲಗು=ಹರಿತವಾದ ಕತ್ತಿ; ಏಕೆ=ಯಾವುದಕ್ಕೆ ಬೇಕು/ಅಗತ್ಯವಿಲ್ಲ; ಅವರನ್+ಒಲ್ಲೆನ್+ಎಂದಡೆ; ಒಲ್ಲೆನ್=ಬೇಕಾಗಿಲ್ಲ/ಮೆಚ್ಚುವುದಿಲ್ಲ; ಎಂದಡೆ=ಎಂದು ಹೇಳಿದರೆ; ಸಾಲು=ಸಾಕು; ಸಾಲದೆ=ಸಾಕಾಗುವುದಿಲ್ಲವೇ ;

ನಮ್ಮಲ್ಲಿ ಮೋಹಗೊಂಡಿರುವ ವ್ಯಕ್ತಿಯನ್ನು ನಮ್ಮ ಮನಸ್ಸಿನಿಂದಲೇ ಹೊರಹಾಕುವಂತೆ “ ನಿನ್ನ ಒಡನಾಟವೇ ನನಗೆ ಬೇಕಾಗಿಲ್ಲ “ ಎಂದು ನೇರವಾಗಿ ಹೇಳುವ ನುಡಿಯೇ ಒಲಿದವರ ಪಾಲಿಗೆ ಸಾವಿಗಿಂತಲೂ ಹೆಚ್ಚಾದ ಮಾನಸಿಕ ಯಾತನೆಯನ್ನು ನೀಡುತ್ತದೆ.

ಕೂಪರನಗಲುವುದು ಆತ್ಮಘಾತಕವವ್ವಾ
ದಿಬ್ಯವ ತುಡುಕಿದಡೆ
ಕೈ ಬೇವುದಲ್ಲದೆ ಮೈ ಬೇವುದೆ
ಒಲಿದವರನಗಲಿದಡೆ
ಸರ್ವಾಂಗವೂ ಬೇವುದವ್ವಾ. ( 220/1223)

ಕೂಪರ್+ಅನ್+ಅಗಲುವುದು; ಕೂಪ=ಪ್ರಿಯ, ನಲ್ಲ ; ಕೂಪರ್=ಪ್ರಿಯರು/ನಲ್ಲರು/ಒಲಿದವರು/ಮೋಹಗೊಂಡವರು; ಅನ್=ಅನ್ನು ; ಕೂಪರನ್=ಒಲಿದವರನ್ನು; ಅಗಲು=ಬಿಟ್ಟು ದೂರ ಸರಿಯುವುದು/ತೊರೆಯುವುದು; ಆತ್ಮ+ಘಾತಕ+ಅವ್ವಾ; ಆತ್ಮ=ಜೀವ; ಘಾತಕ=ಕೊಲ್ಲುತ್ತದೆ/ನಾಶ ಮಾಡುತ್ತದೆ; ಆತ್ಮಘಾತಕ=ಜೀವ ಹಾನಿ; ಅವ್ವಾ=ಹೆಂಗಸರ ಜತೆ ಮಾತನಾಡುವಾಗ ಒಲವು ನಲಿವು ಆದರದಿಂದ ಬಳಸುವ ಪದ;

ದಿಬ್ಯ=ಒಂದು ಬಗೆಯ ಆಚರಣೆ. ಯಾವುದೇ ಬಗೆಯ ಆರೋಪಕ್ಕೆ ಗುರಿಯಾದ ವ್ಯಕ್ತಿಯು ತಾನು ತಪ್ಪನ್ನು ಮಾಡಿಲ್ಲವೆಂದು ಜನರ ಮುಂದೆ ಸಾಬೀತು ಪಡಿಸುವುದಕ್ಕಾಗಿ ಆಣೆಯನ್ನು ಇಕ್ಕುವಾಗ ಇಲ್ಲವೇ ಪ್ರಮಾಣವನ್ನು ಮಾಡುವಾಗ ಕಾದ ಕಬ್ಬಿಣದ ಸರಳನ್ನು ಕಯ್ಯಿಂದ ಹಿಡಿದುಕೊಳ್ಳುವ ಆಚರಣೆ. ಆಗ ಕಯ್ ಸುಡದಿದ್ದರೆ ವ್ಯಕ್ತಿಯು ತಪ್ಪನ್ನು ಮಾಡಿಲ್ಲವೆಂದು ಸಾಬೀತಾಗುತ್ತಿತ್ತು;

ತುಡುಕು=ಮುಟ್ಟು/ಹಿಡಿ; ತುಡುಕಿದಡೆ=ಹಿಡಿದುಕೊಂಡರೆ; ಕೈ=ಹಸ್ತ; ಬೇವುದು+ಅಲ್ಲದೆ; ಬೇವುದು=ಸುಟ್ಟು ಹೋಗುತ್ತದೆ; ಅಲ್ಲದೆ=ಹೊರತು ; ಮೈ=ದೇಹ/ಶರೀರ; ಬೇವುದೆ=ಬೆಂದುಹೋಗುವುದೆ;

ಕೈ ಬೇಹುದಲ್ಲದೆ ಮೈ ಬೇಹುದೆ=ಕಯ್ ಸುಡುತ್ತದೆಯೇ ಹೊರತು ಇಡೀ ದೇಹ ಬೇಯುವುದಿಲ್ಲ; ಒಲಿದವರನ್+ಅಗಲಿದಡೆ; ಒಲಿದವರನ್=ಮೋಹಿಸಿದವರನ್ನು/ಪ್ರೀತಿಸಿದವರನ್ನು; ಅಗಲಿದಡೆ=ದೂರ ಸರಿದರೆ; ಸರ್ವ+ಅಂಗವೂ; ಸರ್ವ=ಎಲ್ಲ/ಸಕಲ/ಸಮಸ್ತ; ಅಂಗ=ದೇಹ/ಶರೀರ; ಬೇವುದು+ಅವ್ವಾ;

ಜೀವನದಲ್ಲಿ ವ್ಯಕ್ತಿಗಳ ಮನಸ್ಸನ್ನು ಒಂದುಗೂಡಿಸುವ ‘ ಒಲವು ‘ ಎಂಬುದು ತುಂಬಾ ದೊಡ್ಡದು. ಏಕೆಂದರೆ ಒಲವಿನಿಂದ ಕೂಡಿ ಬಾಳುತ್ತಿರುವ ವ್ಯಕ್ತಿಗಳು ಪರಸ್ಪರ ಸಹನೆ, ನಂಬಿಕೆ ಮತ್ತು ಕರುಣೆಯ ನಡೆನುಡಿಗಳಿಂದ ಜೀವನದಲ್ಲಿ ಎದುರಾಗುವ ಎಡರು ತೊಡರುಗಳೆಲ್ಲವನ್ನೂ ಸಹಿಸಿಕೊಂಡು ಜತೆಗೂಡಿ ಬಾಳುತ್ತಿರುತ್ತಾರೆ. ಈ ರೀತಿ ಒಲಿದು ಒಂದಾದವರು ಪರಸ್ಪರ ದೂರವಾಗುವ ಸನ್ನಿವೇಶ ಒದಗಿ ಬಂದರೆ, ಆಗ ಅವರ ಪಾಲಿಗೆ ‘ ಅಗಲಿಕೆ ‘ ಎಂಬುದು ದಿಬ್ಯದ ಆಚರಣೆಯ ಸನ್ನಿವೇಶದಲ್ಲಿ ಉಂಟಾಗುವ ನೋವಿಗಿಂತಲೂ ಹೆಚ್ಚಾಗಿ ಮಯ್ ಮನಗಳೆರಡನ್ನೂ ತೀವ್ರವಾದ ಯಾತನೆಗೆ ಗುರಿಮಾಡುತ್ತದೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: