ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ.

ಒಲವು

ಬಾಗಿಲ ಬಳಿ ಕನಸುಗಳೆಲ್ಲ
ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ
ನೂರಾರು ಬಾವನೆಗಳು ಬಣ್ಣ ಬಳಿದು
ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ

ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ
ಕನಸನ್ನು ನಿನಗೆ ಹೇಳಬಯಸಿದೆ
ಹೂದೋಟದ ರಾಣಿಯರ ಮನಸುಗಳು ಅರಳಿ
ಸುವಾಸನೆ ಬೀರುತ್ತಿವೆ ನಿನ್ನ ಆಗಮನಕ್ಕಾಗಿ

ಆಕಾಶದ ಮಲ್ಲಿಗೆಯ ಮೋಡಗಳು
ಹಾತೊರೆದು ದಾವಿಸಿವೆ ಹೊಸ ವಿಶಯದೊಂದಿಗೆ
ಆ ಬೆಟ್ಟಗಳು ನವಿರಾದ ಮಂಜು ಹೊದ್ದು
ಶ್ರುಂಗಾರಗೊಂಡಿವೆ ನಿನ್ನ ಆಗಮನಕ್ಕಾಗಿ

ಅಂತರಂಗದ ಅರಮನೆಯಲ್ಲಿ
ನಿನ್ನ ಹೆಸರಿನ ಅಲೆಗಳು ವಿನಾಕಾರಣ ಹೆಚ್ಚುತಲಿವೆ
ಹೊಸ ಕವನದ ಸಂಬ್ರಮಗಳು ಗರಿ ಬಿಚ್ಚಿ
ಹರಡಿಕೊಂಡಿವೆ ನಿನ್ನ ಆಗಮನಕ್ಕಾಗಿ

ಬಿಳಿ ಹಾಳೆಯ ಕಾಗದವೊಂದು ಕನ್ನಡಿಯಲ್ಲಿ
ತನ್ನನ್ನೇ ತಾನು ಪರೀಕ್ಶಿಸಿಕೊಂಡಿದೆ
ನನ್ನ ಕವನಗಳು ಬರೆಯಲ್ಪಟ್ಟು
ಪರಿತಪಿಸುತ್ತಿವೆ ನಿನ್ನ ಆಗಮನಕ್ಕಾಗಿ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ: