ಮಕ್ಕಳ ಬೆಳವಣಿಗೆಯಲ್ಲಿ ಆಹಾರದ ಪಾತ್ರ

– ಸಂಜೀವ್ ಹೆಚ್. ಎಸ್.

ಆರೋಗ್ಯ ಎಂಬುದು ಒಮ್ಮೆಲೆ ಒಲಿಯುವ ವರವಲ್ಲ; ಬದಲಿಗೆ ಅದು ಸತತ ಅಬ್ಯಾಸ ಮತ್ತು ಹವ್ಯಾಸದಿಂದ ಬೆಳೆಯುವಂತಹದ್ದು. ನಮ್ಮ ಇಂದಿನ ಆರೋಗ್ಯಕ್ಕೆ ಹಿಂದಿನ ಹವ್ಯಾಸ ಮತ್ತು ಅಬ್ಯಾಸಗಳೇ ಕಾರಣ ಹಾಗೂ ಇಂದಿನ ಅಬ್ಯಾಸ ಹವ್ಯಾಸಗಳೇ ಮುಂದಿನ ದಿನಗಳ ಆರೋಗ್ಯಕ್ಕೆ ಅಡಿಪಾಯ.

ತಂದೆ-ತಾಯಂದಿರು ತಮ್ಮ ಮಕ್ಕಳ ಬವಿಶ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲು ಸದಾ ಪ್ರಯತ್ನ ಮಾಡುತ್ತಿರುತ್ತಾರೆ. ತಮ್ಮ ಎಲ್ಲಾ ಅನುಬವವನ್ನು ದಾರೆ ಎರೆದು, ತಮ್ಮ ಆಸೆ ಆಕಾಂಕ್ಶೆಗಳನ್ನು ಬದಿಗೊತ್ತಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಬುದ್ದಿವಂತರನ್ನಾಗಿ ಮಾಡಲು ಶ್ರಮ ಪಡುತ್ತಾರೆ. ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಪೋಶಕರ ಪಾತ್ರ ದೊಡ್ಡದಿದೆ.  ಮಕ್ಕಳಲ್ಲಿ ಅಪೌಶ್ಟಿಕತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಮಗು ಅಂಬೆಗಾಲಿಡುವ ಹಂತದಿಂದ ಹಿಡಿದು, ಶಾಲೆಗೆ ಹೋಗುವ ಮತ್ತು ಬೆಳವಣಿಗೆಯ ಇನ್ನಿತರ ಹಂತಗಳಲ್ಲಿ ಮಕ್ಕಳ ರಕ್ಶಣೆ ಮತ್ತು ರೋಗಗಳನ್ನು ತಡೆಯಲು ಪೋಶಕರ ವಿಶೇಶ ಗಮನ ಮತ್ತು ಆರೈಕೆಯ ಅಗತ್ಯವಿದೆ.

ಮಕ್ಕಳು ಯಾವಾಗಲೂ ಲವಲವಿಕೆಯಿಂದ ಇರುತ್ತಾರೆ. ಒಂದು ನಿಮಿಶ ಕೂಡ ಸುಮ್ಮನೆ ಕೂರುವುದಿಲ್ಲ. ಆಟ, ಪಾಟ, ಓಟ ಹೀಗೆ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಸದಾ ಮಗ್ನರಾಗಿರುತ್ತಾರೆ. ಇಂತಹ ಮಕ್ಕಳ ಸರ‍್ವತೋಮುಕ ಬೆಳವಣಿಗೆಗೆ ಉತ್ತಮ ಆಹಾರ ಪದ್ದತಿ ಬಹಳ ಮುಕ್ಯ. ಮಕ್ಕಳ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಅವರಲ್ಲಿ ಆಹಾರ ಪದ್ದತಿಯನ್ನು ರೂಡಿಸಬೇಕು. ಮಕ್ಕಳು ಸದಾ ಲವಲವಿಕೆಯಿಂದ  ಇರುವುದರಿಂದ ಹೆಚ್ಚು ಶಕ್ತಿ ವ್ಯಯಿಸುತ್ತಾರೆ. ಆದ್ದರಿಂದ ಅವರ ಜೀವಕೋಶಗಳಿಗೆ ಶಕ್ತಿಯನ್ನು ತುಂಬುವ ಕ್ಯಾಲರಿಯುಕ್ತ ಆರೋಗ್ಯಕರ ಆಹಾರ ಒದಗಿಸಬೇಕು. ಶಕ್ತಿಯನ್ನು ಬಿಡುಗಡೆ ಮಾಡಲು ಸರಿಯಾದ ಮತ್ತು ಒಳ್ಳೆಯ ಕಾರ‍್ಬೋಹೈಡ್ರೇಟ್‌ಗಳು ಆಹಾರದಲ್ಲಿ ಇರಬೇಕು. ದಾನ್ಯಗಳು, ದ್ವಿದಳ ದಾನ್ಯಗಳು ಮತ್ತು ಸಿರಿದಾನ್ಯಗಳಿಂದ ಮಾಡಿದ ಆಹಾರಗಳು ಇದಕ್ಕೆ ಉದಾಹರಣೆಯಾಗಿವೆ.

ಮಕ್ಕಳ ಬೆಳವಣಿಗೆ ಎಂದರೆ ಜೀವಕೋಶಗಳ ಬೆಳವಣಿಗೆ ಎಂಬುದಾಗಿದೆ. ಜೀವಕೋಶಗಳ ಬೆಳವಣಿಗೆ ಮತ್ತು ಅಬಿವ್ರುದ್ದಿಗಾಗಿ ಪ್ರೊಟೀನ್ ಯುಕ್ತ ಆಹಾರ ಅತ್ಯವಶ್ಯಕ ಮತ್ತು ಇದು ಬುದ್ದಿಶಕ್ತಿಯನ್ನು ಚುರುಕುಗೊಳಿಸಿ ಮಕ್ಕಳ ಸರ‍್ವತೋಮುಕ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಪೋಶಕರು ತಮ್ಮ ಮಕ್ಕಳು‌ ಕರ‍್ಚು ಮಾಡುವ ಶಕ್ತಿಯು ಪ್ರೋಟೀನ್‌ನಿಂದ ಬರುವಂತೆ ಎಚ್ಚರವಹಿಸಿಬೇಕು ಮತ್ತು ಸಾಕಶ್ಟು ಪ್ರಮಾಣದ ಮೊಸರು ಬೆಣ್ಣೆ ತುಪ್ಪವನ್ನು ಆಹಾರವಾಗಿ ಕೊಡಬೇಕು. ಮಕ್ಕಳಿಗೆ ರೋಗರುಜಿನಗಳು ತಗುಲದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಹಲವು ರೀತಿಯ ವಿಟಮಿನ್‌ಗಳು ಮತ್ತು ಕನಿಜಾಂಶಗಳು ದೇಹಕ್ಕೆ ಅತ್ಯವಶ್ಯಕ. ಹಣ್ಣು-ತರಕಾರಿ, ಸೊಪ್ಪು ವಿವಿದ ರೀತಿಯ ಗೆಡ್ಡೆಗೆಣಸುಗಳನ್ನು ಹಲವು ರೀತಿಯ ತಿಂಡಿಗಳ ರೂಪದಲ್ಲಿ ಮಕ್ಕಳಿಗೆ ಸೇವಿಸಲು ಅಬ್ಯಾಸ ಮಾಡಿಸಿದರೆ, ಮುಂದೆ ಅವರು ಜಂಕ್ ಆಹಾರಗಳನ್ನು ಸೇವಿಸಿದಂತೆ ತಡೆಯಬಹುದು. ಕಾಲಕ್ಕೆ ತಕ್ಕಂತೆ ಮಕ್ಕಳ ಆಹಾರ ಪದ್ದತಿಗಳನ್ನು ಕೂಡ ಬದಲಾಯಿಸುತ್ತಾ ಮಕ್ಕಳಿಗೆ ವಿವಿದ ಆಹಾರಗಳನ್ನು ಪರಿಚಯಿಸುವುದನ್ನು ಮರೆಯಬಾರದು. ಮಕ್ಕಳಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ತಿಳಿದಿರುವುದಿಲ್ಲ, ಅದನ್ನು ಅರಿತ ತಂದೆ-ತಾಯಂದಿರು ಮಕ್ಕಳ ಮನಸ್ಸಿಗೆ ಇಶ್ಟವಾಗುವ, ಅವರ ಮನಸ್ಸನ್ನು ಮುದಗೊಳಿಸುವ, ಅಶ್ಟೇ ಅಲ್ಲದೆ ಅರೋಗ್ಯಕರ ಆಹಾರ ಪದ್ದತಿ ಹೇಳಿಕೊಡಬೇಕು. ಮಕ್ಕಳ ಊಟದ ತಟ್ಟೆಯಲ್ಲಿ ಸದಾ ಬಣ್ಣಬಣ್ಣಗಳಿಂದ ತುಂಬಿದ ಆಹಾರ ಇದ್ದರೆ ಮಕ್ಕಳು ಇಶ್ಟಪಟ್ಟು ತಿನ್ನುತ್ತಾರೆ. ಸದಾ ತಿನ್ನುತ್ತಾ ಇರು ಎಂದು ಮಕ್ಕಳ ಬಾಯಿಗೆ ಆಹಾರವನ್ನು ತುರುಕುವ ಗೀಳು ಬಿಡಬೇಕು. ಅವರಿಗೆ ಹಸಿವಾದರೆ ಕಂಡಿತ ಕೇಳಿ ಪಡೆದು ತಿನ್ನುತ್ತಾರೆ ಮತ್ತು ಅದನ್ನೇ ರೂಡಿ ಮಾಡಿಸಬೇಕು. ಸಂಸ್ಕರಿಸಿದ ಆಹಾರ ಪದಾರ‍್ತಗಳನ್ನು ಅಂದರೆ ಐಸ್ ಕ್ರೀಮ್, ಚಾಕ್ಲೇಟ್, ಬಿಸ್ಕೆಟ್ಗಳನ್ನು ಆದಶ್ಟು ಕಡಿಮೆ ಸೇವಿಸುವಂತೆ ನೋಡಿಕೊಳ್ಳಬೇಕು. ಇವುಗಳ ಬದಲು ಹಣ್ಣು, ತರಕಾರಿಯ ರುಚಿಯನ್ನು ಮಕ್ಕಳ ನಾಲಿಗೆಗೆ ಪರಿಚಯಿಸುವುದು ಒಳ್ಳೆಯದು.

ಅದೊಂದು ಕಾಲವಿತ್ತು, ಮನೆಯಲ್ಲಿ ಮಕ್ಕಳ ಆರೋಗ್ಯ ಬೆಳವಣಿಗೆ, ಅಬಿವ್ರುದ್ದಿ, ಕಾಳಜಿ, ಪೋಶಣೆ ಎಲ್ಲವನ್ನೂ ಕೂಡ ಮನೆಯಲ್ಲಿರುವ ಅಜ್ಜಿ ನೋಡಿಕೊಳ್ಳುತ್ತಿದ್ದಳು. ಆದರೆ ಈಗ ಮನೆಯಲ್ಲಿ ಅಜ್ಜಿಯಂದಿರು ಇಲ್ಲ, ಕುಟುಂಬಗಳು  ಚಿಕ್ಕದಾಗಿವೆ. ಅಜ್ಜಿಯಂದಿರ ಅನುಬವದ ಜ್ನಾನವಂತೂ ನಮಗಿಲ್ಲ. ಆದರೆ ಬಳುವಳಿಯಾಗಿ ಬಂದಿರುವ ಪದ್ದತಿಗಳನ್ನು ಹೆಚ್ಚು ತರ‍್ಕ ಮಾಡದೆ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಬೆಳಕಾದೀತು. ಇದೆಲ್ಲದರ ನಡುವೆ ಇಂದಿನ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯನ್ನು ನಿರ‍್ದರಿಸುತ್ತಿರುವರು ಜಾಹೀರಾತಿನವರು. ಜಾಹೀರಾತಿನಲ್ಲಿ ಒಳ್ಳೆಯದು-ಕೆಟ್ಟದ್ದು ಎರಡು ಇದೆ, ಇದು ಮಕ್ಕಳ ಮೇಲೆ ಅತ್ಯಂತ ಪ್ರಬಾವ ಬೀರುವ ಸಾದ್ಯತೆ ಹೆಚ್ಚು. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಆಯ್ಕೆಮಾಡಿ ಮಕ್ಕಳಿಗೆ ತಿಳಿಹೇಳುವುದು ಪೋಶಕರ ಜವಾಬ್ದಾರಿ.  ಉತ್ತಮ ಆಹಾರ ಮತ್ತು ಆರೋಗ್ಯ ಜೀವನಶೈಲಿಯನ್ನು ನಾವು ಮಕ್ಕಳಿಗೆ ಪರಿಚಯಿಸಿದರೆ ಮುಂದಿನ ಪೀಳಿಗೆಯು ಕೂಡ ಆರೋಗ್ಯವಂತವಾಗಿರುತ್ತದೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: