ಅವರೆ ಕಾಳು – ಆರೋಗ್ಯದ ಬಾಳು

– ಸಂಜೀವ್ ಹೆಚ್. ಎಸ್.

ಅವರೆ ಕಾಳು

ಆದಿಮಾನವ ಬೇಸಾಯ ಶುರು ಮಾಡಿದ ದಿನದಿಂದಲೂ ಬಗೆಬಗೆಯ ಗೆಡ್ಡೆಗೆಣಸು, ತರಾವರಿಯ ಹಣ್ಣು-ತರಕಾರಿ, ವಿವಿದ ಪ್ರಬೇದದ ಗಿಡಗಂಟೆಗಳನ್ನು ಬೆಳೆಯುತ್ತಾ ಅದನ್ನೇ ತನ್ನ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡು ಬಂದಿದ್ದಾನೆ. ಇಂತಹ ವಿವಿದ ರೀತಿಯ ಗಿಡಗಳಲ್ಲಿ “ಅವರೆಕಾಯಿ ಗಿಡ” ಕೂಡ ಒಂದು ವಿಶಿಶ್ಟ, ವಿಬಿನ್ನ ಮತ್ತು ಅದ್ಬುತವಾದದು.

ಡಿಸೆಂಬರ್ ಜನವರಿ ತಿಂಗಳು ಶುರುವಾಗುತ್ತಿದ್ದಂತೆ ಗಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಸೊಗಡು ಅವರೆಕಾಳಿನದ್ದಾಗಿದೆ. ರಸ್ತೆ ಬದಿಯಿಂದ ಹಿಡಿದು ಮನೆ, ಅಡುಗೆಮನೆ ತನಕವೂ ಅವರೆಕಾಳಿನದ್ದೇ ಗಮ. ಅಲ್ಲದೇ ತಣ್ಣನೆ ಶೀತ ಚಳಿಗೆ ಅವರೆಕಾಯಿ ಮದ್ದು ಎನ್ನುವುದು ಇಂದು ಓಪನ್ ಸೀಕ್ರೆಟ್ ಆಗಿದೆ. ತರಹೇವಾರಿ ತರಕಾರಿಗಳಿದ್ದರೂ ಚಳಿಗಾಲದಲ್ಲಿ ಅವರೆಕಾಳು ಎಲ್ಲರ ಮನೆಯಲ್ಲಿ ಕಾಯಂ ಅತಿತಿ. ಬೆಂಗಳೂರಿನಲ್ಲಿ ಅವರೆಕಾಯಿಯ ಪರಸೆ ಕೂಡ ಬಲು ಜೋರಾಗಿ ನಡೆಯುತ್ತದೆ. ಅಲ್ಲಿ ಅವರೆಕಾಳಿನ ವಿವಿದ ತಳಿಗಳನ್ನು ನೋಡಬಹುದು. ಅವರೆ ಕಾಳು, ಅವರೆ ಎಲೆ, ಅವರೆ ಹೂವು, ಅವರೆ ಸಿಪ್ಪೆ, ಅವರೆ ಕಾಂಡ ಪ್ರತಿಯೊಂದೂ ಉಪಕಾರಿ ಮತ್ತು ಅಮ್ರುತ!

ಹೊರ ದೇಶಗಳಲ್ಲಿನ ಅವರೆಕಾಯಿ ಬಳಕೆ

ಬಾರತದ ಇತಿಹಾಸದಲ್ಲಿಯೇ ಅತಿ ಪ್ರಾಚೀನ ಎಂಬ ಹೆಗ್ಗಳಿಕೆ ಪಡೆದ ಅವರೆಕಾಯಿ ನಮ್ಮಲ್ಲಶ್ಟೇ ಅಲ್ಲ, ಇಡೀ ಪ್ರಪಂಚದಲ್ಲಿ ಬಳಕೆಯಾಗುತ್ತದೆ. ಹೆಚ್ಚಾಗಿ ಆಪ್ರಿಕಾ ಮತ್ತು ಏಶ್ಯಾ ಕಂಡಗಳಲ್ಲಿ ಬೆಳೆಯೋ ಇದನ್ನು ತಲೆತಲಾಂತರದಿಂದ ಬಳಕೆ ಮಾಡುತ್ತಾ ಬಂದಿದ್ದಾರೆ. ಬಾರತದ ಪ್ರಾಚೀನ ಜನಾಂಗ ಸೇರಿಸಿದಂತೆ ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಅವರೆಕಾಯಿಯನ್ನು ಉಪಯೋಗಿಸುವುದರ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಕಲಾಗಿವೆ.

ಅವರೆ ಕಾಯಿಯಿಂದ ಮಾಡುವ ತಿಂಡಿಗಳು

ಅವರೆಕಾಳು ಉಪಯೋಗಿಸಿ ಮಾಡುವ ತಿಂಡಿಗಳು ಎಣಿಕೆಗೆ ಸಿಗದು. ಅವರೆಕಾಳು ಉಪ್ಪಿಟ್ಟು, ಅವರೆಕಾಳು ಪಲಾವು, ಅವರೆಕಾಳು ಅಕ್ಕಿರೊಟ್ಟಿ, ಅವರೆಕಾಳು ದೋಸೆ, ಅವರೆಕಾಳು ಇಡ್ಲಿ, ಮುದ್ದೆ-ಅವರೆಕಾಳು ಉಪ್ಸಾರು, ಪಲ್ಯ-ಸಾರು-ಸಾಗು ಇತ್ಯಾದಿ. ತಿತಿ ಕಾರ‍್ಯಗಳಲ್ಲಿ ಮುದ್ದೆ ಅವರೆಕಾಳು ಕೂಟು ಅತ್ಯಂತ ಜನಪ್ರಿಯ ಕಾಂಬಿನೇಶನ್. ಹಾಗೆ ನೋಡಿದರೆ ನೂರಾರು ತರದ ಅವರೆಕಾಳಿನ ಮೌಲ್ಯವರ‍್ದಿತ ಉತ್ಪನ್ನಗಳನ್ನು ತಯಾರಿಸುತ್ತಾರೆ; ಅವರೆಕಾಳು ಪಾಯಸ, ಅವರೆಕಾಳು ಉಪ್ಪಿನಕಾಯಿ ಹಾಗೂ ಅವರೆಕಾಳು ಬರ‍್ಪಿ ಕೂಡ ಮಾಡಲಾಗುತ್ತದೆ.

ಬಿಸಿಬಿಸಿ ಅವರೆಕಾಳು ತಿಂಡಿಗಳಿಗೆ ನಾಲಿಗೆಯ ಚಪಲಕ್ಕೆ ಹತ್ತಿರವಿದ್ದಶ್ಟೇ ಸರಿಸಮಾನವಾಗಿ ಶರೀರದ ಆರೋಗ್ಯಕ್ಕೂ ಬಹಳ ಹತ್ತಿರದ ನಂಟಿದೆ. ಇದರಿಂದ ಮಾನವನ ದೈನಂದಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಶಕಾಂಶಗಳು ದೊರೆಯುತ್ತವೆ. ದೇಹಕ್ಕೆ ಅವಶ್ಯವಿರುವ  ಶೇಕಡಾ 19% ಪೋಶಕಾಂಶಗಳಲ್ಲಿ ಶೇಕಡಾ 10 ಬಾಗವನ್ನು ಅವರೆಕಾಯಿ ಒಂದೇ  ಒದಗಿಸುತ್ತದೆ ಎಂದರೆ, ಇದೆಶ್ಟು ಉಪಕಾರಿ ಎಂದು ನಾವು ಊಹಿಸಿಕೊಳ್ಳಬಹುದು.

ಅವರೆ ಕಾಯಿಯ ಉಪಯೋಗ

ಯೂರೋಪಿಯನ್ ಜರ‍್ನಲ್ ಆಪ್ ಕ್ಲಿನಿಕಲ್ ನ್ಯೂಟ್ರಿಶನ್‘ ನಡೆಸಿದ ಅದ್ಯಯನದ ಪ್ರಕಾರ ಕಡಿಮೆ ಕ್ಯಾಲೋರಿಯ, ಹೆಚ್ಚಿನ ಪೋಶಕಾಂಶವಿರುವ, ನಾರಿನಂಶ ಹೆಚ್ಚಿರುವ ಹಾಗು ಕೊಬ್ಬು ಕಡಿಮೆ ಇರುವ ಮತ್ತು ಕಾರ‍್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳನ್ನು ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಎಲ್ಲಾ ಗುಣಲಕ್ಶಣಗಳು ಒಂದೇ ಆಹಾರದಲ್ಲಿ ಸಿಗುವ ಒಂದು ಉದಾಹರಣೆಯೆಂದರೆ ಅದು ಅವರೆಕಾಳು. ಅವರೆಕಾಳು ಹೆಚ್ಚಿನ ಮಟ್ಟದ ಪ್ರೊಟೀನ್, ಕಡಿಮೆ ಕೊಬ್ಬಿನಾಂಶ, ಸಾಚ್ಯುರೇಟೆಡ್ ಪ್ಯಾಟ್ ಮುಕ್ತ, ಕರಗುವಂತಹ ನಾರಿನಾಂಶ, ಕನಿಜಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು, ತಯಾಮಿನ್, ಪೊಟ್ಯಾಶಿಯಂ, ರಂಜಕ ಹೀಗೆ ಹಲವಾರು ಪೋಶಕಾಂಶಗಳನ್ನು ಹೊಂದಿದೆ. ಇದರಲ್ಲಿ ಕೋಳಿಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನು ಇರುವ ಕಾರಣ ಸಸ್ಯಾಹಾರಿಗಳೂ ಹೆಚ್ಚಿನ ಪೌಶ್ಟಿಕಾಂಶಗಳನ್ನು ಪಡೆಯಲು ಸಾದ್ಯ.

ಅವರೆಕಾಳು ದ್ವಿದಳದಾನ್ಯವಾಗಿದ್ದು ಇದರ ಸೇವನೆಯಿಂದ ನಿದಾನವಾಗಿ ರಕ್ತಕ್ಕೆ ಸಕ್ಕರೆ ಮತ್ತು ಪೋಶಕಾಂಶಗಳು ಬಿಡುಗಡೆಯಾಗುವ ಕಾರಣ ರಕ್ತದ ಸಕ್ಕರೆ ಅಂಶವನ್ನು ಸಮಸ್ತಿತಿಯಲ್ಲಿ ಇಡುತ್ತದೆ. ಯಾವುದೇ ದ್ವಿದಳದಾನ್ಯಗಳಂತೆ ಅವರೆಕಾಳು ಸಹ ಸುಲಬವಾಗಿ ಜೀರ‍್ಣಗೊಳ್ಳುವ ಆಹಾರವಾಗಿದ್ದು ಇಡೀ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಹ್ರುದ್ರೋಗಿಗಳೂ, ಮದುಮೇಹಿಗಳೂ, ಹಿರಿಯರೂ, ಮಕ್ಕಳೂ ಸೇವಿಸಬಹುದಾದ ಆಹಾರವಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರುಗಳಿವೆ. ಇದು ಜೀರ‍್ಣಗೊಂಡ ಆಹಾರವನ್ನು ಕರುಳುಗಳ ಒಳಗೆ ಸುಲಲಿತವಾಗಿ ಸಾಗಲು ನೆರವಾಗುವ ಮೂಲಕ ಕರುಳುಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಹಾಗೇ ಕರುಳುಗಳ ವ್ರಣ, ಹುಣ್ಣು ಮತ್ತು ಕ್ಯಾನ್ಸರ್ ಮೊದಲಾದ ತೊಂದರೆಗಳು ಎದುರಾಗದಂತೆ ಕಾಪಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಪೋಲೇಟ್ ಮತ್ತು ಮೆಗ್ನೀಶಿಯಂ ಇದ್ದು ಇವು ಹ್ರುದಯದ ಕ್ಶಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಇದರಲ್ಲಿರುವ ಪೋಲಿಕ್ ಆಮ್ಲ ಹ್ರುದಯದ ಕವಾಟ ಮತ್ತು ಗೋಡೆಗಳನ್ನು ದ್ರುಡಗೊಳಿಸುವ ಮೂಲಕ ಹ್ರುದಯ ಸಂಬಂದಿ ಕಾಯಿಲೆಗಳಿಂದ ರಕ್ಶಿಸುತ್ತದೆ. ಇನ್ನೊಂದೆಡೆ ಮೆಗ್ನೀಶಿಯಂ ರಕ್ತಸಂಚಾರವನ್ನು ನಿಯಂತ್ರಿಸಿ ಸುಲಲಿತವಾಗಿ ಹರಿಯಲು ನೆರವಾಗುತ್ತದೆ.

ಒಂದು ದಿನಕ್ಕೆ ಅಗತ್ಯವಿರುವ ಕಬ್ಬಿಣದ ಪ್ರಮಾಣವನ್ನು ಕೇವಲ ಒಂದು ಕಪ್ ಅವರೆಕಾಳು ನೀಡಬಲ್ಲದು. ಈ ಕಬ್ಬಿಣವನ್ನು ಬಳಸಿ ರಕ್ತದ ಕೆಂಪು ಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನತೆಯ ತೊಂದರೆ ಕಡಿಮೆಯಾಗುತ್ತದೆ. ಅವರೆಕಾಳು, ಬಾಣಂತಿಯರು ಮತ್ತು ಮಹಿಳೆಯರಿಗೆ ಅದ್ಬುತ ಆಹಾರವಾಗಬಲ್ಲದು. ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಮೆಗ್ನೀಶಿಯಂ ಮತ್ತು ಸತುಗಳಿವೆ. ಅದಲ್ಲದೇ ವಿವಿದ ಆಂಟಿ ಆಕ್ಸಿಡೆಂಟುಗಳಾದ ವಿಟಮಿನ್ ಎ ಮತ್ತು ಸಿ ಸಹಾ ಉತ್ತಮ ಪ್ರಮಾಣದಲ್ಲಿದ್ದು, ಇವು ದೇಹದ ರೋಗನಿರೋದಕ ಶಕ್ತಿಯನ್ನೂ ಹೆಚ್ಚಿಸಿ ವಿವಿದ ಸೋಂಕುಗಳಿಂದ ರಕ್ಶಿಸುತ್ತದೆ ಮತ್ತು ಕ್ಯಾನ್ಸರ್ ಕಾರಕ ಪ್ರೀ ರ‍್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಅವರೆಕಾಳಿನಲ್ಲಿರುವ ಇನ್ನೊಂದು ಪೋಶಕಾಂಶವೆಂದರೆ ಸಿಲಿನಿಯಂ, ಇದು ಉರಿಯೂತವಾಗುವುದನ್ನು ತಡೆಯುತ್ತದೆ, ಶ್ವಾಸಕೋಶದ ಕ್ಶಮತೆಯನ್ನು ಹೆಚ್ಚಿಸಿ ಉಸಿರಾಟಕ್ಕೆ ಸ್ವಾಸ್ತ್ಯ ನೀಡುವುದರ ಜೊತೆಗೆ ಕ್ಯಾನ್ಸರ್ ಉಂಟು ಮಾಡುವ ಟಿ-ಸೆಲ್ಸ್ ಎಂಬ ಕೊಲೆಗಾರ ಜೀವಕೋಶಗಳಿಗೆ ತಡೆಯೊಡ್ಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಅವರೆಕಾಳಿನ ಮತ್ತೊಂದು ಮುಕ್ಯ ವಿಶೇಶತೆಯೆಂದರೆ ಈ ಕಾಳುಗಳು ನಮ್ಮ ಮುಕದಲ್ಲಿ ಸದಾ ನಗುವನ್ನಿರಿಸುವ ಪ್ರಯತ್ನ ಮಾಡುತ್ತವೆ. ಏಕೆಂದರೆ ಇದರಲ್ಲಿರುವ ‘ಡೋಪೋಮೈನ್ ‘ ಎಂಬ ಅಮೈನೊ ಆಮ್ಲಗಳ ಸಮ್ರುದ್ದತೆಯು ನಾವು ಲವಲವಿಕೆಯಿಂದ ಇರುವಂತೆ ಮಾಡಿ, ಕಿನ್ನತೆಯ ಸಮಸ್ಯೆಯನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಕೊನೆಯಪಕ್ಶ ನಗುಮುಕದಿಂದ ಇರಲು ಅವರೆಕಾಳನ್ನು ಸೇವಿಸೋಣ. ಇಶ್ಟು ಸಣ್ಣ ಕಾಳಿನಲ್ಲಿ ಅಶ್ಟೆಲ್ಲಾ ಇದೆಯಾ ಎಂಬ ಅನುಮಾನ ಬೇಡ “ಮೂರ‍್ತಿ ಚಿಕ್ಕದಾದರೂ ಕೀರ‍್ತಿ ದೊಡ್ಡದು” ಎಂಬ ಗಾದೆ ಮಾತು ಕೇಳಿಲ್ಲವೇ?

ಅವರೆಕಾಯಿಯಿಂದ ಕಾಳನ್ನು ಬಿಡಿಸುವ ಪ್ರಕ್ರಿಯೆ ಇದೆಯಲ್ಲ ಅದು ಮನೆ ಮಂದಿ ಮತ್ತು ಅಕ್ಕಪಕ್ಕದ ಮನೆಯವರನ್ನು ಬೆಸೆಯಲು ಸಹಾಯ ಮಾಡುವುದು. ಅವರೆಕಾಳು ಬಿಡಿಸುತ್ತಾ ಹೆಂಗಸರ ಒಂದು ಸುತ್ತು ಮಾತುಕತೆ ಶುರುವಾಗಿ ಅಂತ್ಯ ಕಾಣುತ್ತದೆ. ದಾಸರು ಹೀಗೆ ಹೇಳುತ್ತಾರೆ “ಅವರೇ ನಮ್ಮನ್ನು ಕಾಯಬೇಕು” ಎಂದು, ಇಲ್ಲಿ “ಅವರೇ” ಎಂದರೆ “ದೇವರು”. ಮಾನವನ ದೇಹಕ್ಕೆ “ಅವರೆಕಾಯಿ” ನಮ್ಮ ಆರೋಗ್ಯವನ್ನು ಕಾಯುವ ದೇವರು ಆಗಬಲ್ಲದು ಎಂದರೆ ಅತಿಶಯೋಕ್ತಿ ಆಗಲಾರದು.

(ಚಿತ್ರ ಸೆಲೆ: vijayavani.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: