ರಾಗಿ ತಿನ್ನುವವರಿಗೆ ರೋಗವಿಲ್ಲ

– ಶ್ಯಾಮಲಶ್ರೀ.ಕೆ.ಎಸ್.

ರಾಗಿಯ ಹಿನ್ನೆಲೆ ಮತ್ತು ಮಹತ್ವ

‘ರಾಗಿ ತಿನ್ನುವವನಿಗೆ ರೋಗವಿಲ್ಲ, ರಾಗಿ ತಿಂದವ ನಿರೋಗಿ’ ಎಂಬ ಮಾತುಗಳನ್ನು ನಮ್ಮ ಗ್ರಾಮೀಣ ಜನತೆಯ ಬಾಯಲ್ಲಿ ಕೇಳುತ್ತೇವೆ, ಈ ಮಾತುಗಳು ಸತ್ಯ ಎಂಬುದನ್ನು ರಾಗಿಯು ಸಾಬೀತು ಪಡಿಸಿದೆ. ರಾಗಿಯನ್ನು ನಮ್ಮ ಕರುನಾಡಿನ ಸಾಂಪ್ರದಾಯಿಕ ಬೆಳೆ ಎಂದೇ ಹೇಳಲಾಗುತ್ತದೆ. ನಮ್ಮ ದಾಸ ಶ್ರೇಶ್ಟರಾದ ಕನಕದಾಸ ಮತ್ತು ಪುರಂದರದಾಸರು ಸಹ ರಾಗಿಯ ಮಹತ್ವವನ್ನು ತಮ್ಮ ಕ್ರುತಿಗಳ ಮೂಲಕ ಸಾರಿದ್ದಾರೆ. ಕನಕದಾಸರು ರಾಮಧಾನ್ಯಚರಿತೆ ಕ್ರುತಿಯ ಮೂಲಕ ಮತ್ತು ಪುರಂದರದಾಸರು “ರಾಗಿ ತಂದೀರ” ಎಂಬ ಹಾಡಿನ ಮೂಲಕ ರಾಗಿಯ ಮಹತ್ವವನ್ನು ಪಸರಿಸಿದ್ದಾರೆ.

ರಾಗಿ ಏಶ್ಯಾ ಮತ್ತು ಆಪ್ರಿಕಾದ ಹಲವಾರು ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ದಾನ್ಯ. ಇತಿಯೋಪಿಯ ಮೂಲದ ಈ ವಾರ‍್ಶಿಕ ಬೆಳೆಯನ್ನು ಸುಮಾರು 4,000 ವರ‍್ಶಗಳ ಹಿಂದೆ ಬಾರತಕ್ಕೆ ತರಲಾಯಿತು. ಕರ‍್ನಾಟಕದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ ತುಮಕೂರು. ತುಮಕೂರನ್ನು ಹೊರತುಪಡಿಸಿದರೆ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ರಾಗಿಯ ಬೆಳೆಯನ್ನು ಹೆಚ್ಚಾಗಿ ಕಾಣಬಹುದು. ಕರ‍್ನಾಟಕವನ್ನು ಹೊರತು ಪಡಿಸಿದರೆ ಬಾರತದಲ್ಲಿ ತಮಿಳುನಾಡು, ಆಂದ್ರಪ್ರದೇಶ ,ಮಹಾರಾಶ್ಟ್ರ ರಾಜ್ಯಗಳಲ್ಲಿ ರಾಗಿಯ ಬೆಳೆಯನ್ನು ಹೆಚ್ಚಾಗಿ ಕಾಣಬಹುದು.

ರಾಗಿಯ ಗುಣಲಕ್ಶಣಗಳು ಮತ್ತು ತಳಿಯ ಬಗೆಗಳು

‘ಎಲುಸಿನ ಕೊರಕಾನ’(Eleusina CoraCona) ಎಂಬ ವೈಜ್ನಾನಿಕ ಹೆಸರಿನಿಂದ ಕರೆಯಲ್ಪಡುವ ರಾಗಿಯು ಕಪ್ಪು ಮಿಶ್ರಿತ ಕೆಂಪು ಇಲ್ಲವೇ ಕಂದು ಬಣ್ಣದಲ್ಲಿರುವ ಒಂದು ಆಹಾರ ದಾನ್ಯ. ನವಣೆ, ಸಜ್ಜೆ, ಜೋಳ ಇತ್ಯಾದಿ ಕಿರುದಾನ್ಯಗಳ ಪೈಕಿ ರಾಗಿಯೂ ಒಂದು. ಇದನ್ನು ಪಿಂಗರ್ ಮಿಲ್ಲೆಟ್ ಎಂದೂ ಕರೆಯುವರು. ರಾಗಿಯ ಗಿಡವು ಒಂದು ಪುಟ್ಟ ಗಿಡವಾಗಿದ್ದು, ಕಡಿಮೆ ವೆಚ್ಚದಲ್ಲಿ ಅದಿಕ ಇಳುವರಿಯನ್ನು ನೀಡುವ ಒಂದು ಬೆಳೆಯಾಗಿದೆ. ರಾಗಿಯಲ್ಲಿ ಇಂಡಾಪ್ 5, ಇಂಡಾಪ್ 8, ದೊಡ್ಡರಾಗಿ, ಐ ಆರ್ 64 ಎಂಬ ಹಲವು ಬಗೆಯ ತಳಿಗಳಿವೆ. ಹವಾಮಾನಕ್ಕೆ ಅನುಗುಣವಾಗಿ ಬೂಮಿಯನ್ನು ಹಸನುಗೊಳಿಸಿ ರಾಗಿಯನ್ನು ಬಿತ್ತಿದರೆ ರಾಗಿಯ ಪಸಲು ನಾಲ್ಕರಿಂದ ಆರು ತಿಂಗಳಿಗೊಮ್ಮೆ ಸಿಗುತ್ತದೆ. ಹೀಗಾಗಿ ವರ‍್ಶಕ್ಕೆ ಎರಡು ಪಸಲನ್ನು ಕಾಣಬಹುದು. ಈ ಬೆಳೆಗೆ ಹೆಚ್ಚು ನೀರಿನ ಅಗತ್ಯವಿದೆ. ಸಾಮಾನ್ಯವಾಗಿ ಕೆಂಪು ಮಣ್ಣಿನ ಬೂಮಿಯಲ್ಲಿ ರಾಗಿಯನ್ನು ಬೆಳೆಯಲಾಗುತ್ತದೆ. ಒಂದು ಎಕರೆ ಬೂಮಿಯಲ್ಲಿ ಸುಮಾರು ಹತ್ತರಿಂದ ಹದಿನೈದು ಕ್ವಿಂಟಾಲ್ ನಶ್ಟು ರಾಗಿಯ ಪಸಲನ್ನು ಪಡೆಯುತ್ತಾರೆ. ಒಮ್ಮೆ ರಾಗಿಯನ್ನು ಬಿತ್ತಿದರೆ ಅದರ ಪಸಲು ದೊರೆಯುವ ತನಕ ರೈತರು ಬಹಳ ಶ್ರಮವಹಿಸುತ್ತಾರೆ. ಮೊದಲಿಗೆ ಕಪ್ಪು ರಾಗಿಯನ್ನು ಬೆಳೆಯಲಾಗುತಿತ್ತು. ತದನಂತರ ವೈಗ್ನಾನಿಕವಾಗಿ ಅದರ ತಳಿಯು ಮಾರ‍್ಪಾಟಾಗಿದ್ದು, ಇಂದು ಹೈಬ್ರಿಡ್ ರಾಗಿಯಾದ ಕಪ್ಪು ಮಿಶ್ರಿತ ಕೆಂಪು ರಾಗಿಯನ್ನು ರೈತರು ಹೆಚ್ಚಾಗಿ ಬೆಳೆಯುವುದನ್ನು ನಾವು ಕಾಣಬಹುದು. ಇದರ ಗಾತ್ರ ಕಪ್ಪು ರಾಗಿ ಕಾಳಿಗಿಂತ ತುಸು ಕಡಿಮೆ ಇರುತ್ತದೆ. ಕಪ್ಪುರಾಗಿಯನ್ನು ನಾಟಿ ರಾಗಿ ಎಂದು ನಮ್ಮ ಗ್ರಾಮೀಣ ಜನತೆ ಗುರುತಿಸುತ್ತಾರೆ. ಕಪ್ಪು ರಾಗಿ (ನಾಟಿ ರಾಗಿ) ಬೆಳೆ ಬರೋಬ್ಬರಿ ಆರು ತಿಂಗಳಿಗೆ ಪಸಲು ಕೊಡುವ ಬೆಳೆಯಾಗಿದ್ದು, ಈಗ ಇದು ಹೆಚ್ಚಾಗಿ ಕಂಡುಬರುತ್ತಿಲ್ಲ. ಕಂದು ಬಣ್ಣದ ರಾಗಿಯ ಬೆಳೆಗೆ ಹಳ್ಳಿಗಳಲ್ಲಿ ಹೆಚ್ಚಾಗಿ ಮನ್ನಣೆ ನೀಡಲಾಗುತ್ತಿದೆ.

ರಾಗಿಯ ಬಳಕೆಯ ಒಳಿತುಗಳು

ರಾಗಿಯು ಅದಿಕ ಕ್ಯಾಲ್ಸಿಯಂ ಮತ್ತು ಡಿ ಜೀವಸತ್ವವನ್ನು ಹೊಂದಿರುವ ಆಹಾರ ದಾನ್ಯವಾಗಿದೆ. ವೈದ್ಯರು ಸಕ್ಕರೆ ಕಾಯಿಲೆಯ ರೋಗಿಗಳಿಗೆ ರಾಗಿಯಿಂದ ತಯಾರಿಸುವ ಆಹಾರಗಳನ್ನು ತಿನ್ನಲು ಹೆಚ್ಚಾಗಿ ಶಿಪಾರಸ್ಸು ಮಾಡುವರು.  ರಾಗಿಯಿಂದ ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ಹಾಲ್ಬಾಯಿ (ಸಿಹಿ ತಿಂಡಿ) ಮುಂತಾದ ಆಹಾರಗಳನ್ನು ತಯಾರಿಸುವರು. ಅದರಲ್ಲೂ ರಾಗಿ ಮುದ್ದೆಗೆ ನಮ್ಮ ಗ್ರಾಮೀಣ ಜನತೆಯು ಅಗ್ರಸ್ತಾನವನ್ನು ನೀಡಿರುವರು. ರಾಗಿ ಮುದ್ದೆಯು ಸೇವಿಸಲು ಮ್ರುದುವಾಗಿದ್ದು ಸಾರಿನ ಜೊತೆ ತಿಂದರೆ ರುಚಿಯು ಅದ್ಬುತವಾಗಿದ್ದು ಹಾಗೂ ಒಂದು ಒಳ್ಳೆಯ ಪೌಶ್ಟಿಕ ಆಹಾರವಾಗಿದೆ. ರಾಗಿಮುದ್ದೆ- ನಾಟಿ ಕೋಳಿಸಾರು ತನ್ನದೇ ಆದ ಅಬಿಮಾನಿ ಬಳಗವನ್ನು ಹೊಂದಿದ್ದು, ಹೋಟೇಲುಗಳಲ್ಲಿ ಇದೊಂದು ಬ್ರಾಂಡ್ ಆಗಿಬಿಟ್ಟಿದೆ. ರಾಗಿ ಮುದ್ದೆಯನ್ನು ತಿನ್ನುವುದಕ್ಕೆ ಅದರದ್ದೇ ಆದ ಒಂದು ಬಗೆ ಇದೆ. ಹಾಗಾಗಿ ಇದನ್ನು ಅಗಿಯಬಾರದು, ಬದಲಿಗೆ ಸಾರಿನಲ್ಲಿ ಹೊರಳಿಸಿ ತಿನ್ನಬೇಕು. ರಾಗಿಯಲ್ಲಿ ನಾರಿನಾಂಶ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುವುದರಿಂದ ಒಮ್ಮೆ ತಿಂದರೆ ದಿನ ಪೂರ‍್ತಿ ಹಸಿವಾಗುವುದು ಕಡಿಮೆ. ರಾಗಿಯು ಹೆಚ್ಚಿನ ಕೊಬ್ಬಿನಾಂಶ ಇಳಿಸುವಲ್ಲಿ ಪ್ರಮುಕ ಪಾತ್ರವಹಿಸುತ್ತದೆ. ರಾಗಿಯ ಗಂಜಿ ಸೇವಿಸುವುದು ದೇಹಕ್ಕೆ ತಂಪು. ಅತೀ ಉಶ್ಣತೆಯಿಂದ ಬಳಲುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಅನಿಮಿಕ್ ರೋಗಿಗಳಿಗೆ, ಜೀರ‍್ಣಕ್ರಿಯೆಗೆ, ಮೆದುಳಿನ ವಿಕಾಸಕ್ಕೆ, ದೇಹದ ಪ್ರಾಬಲ್ಯತೆಗೆ, ದೇಹದ ಬೊಜ್ಜು ಇಳಿಸುವಿಕೆಗೆ, ರೋಗನಿರೋದಕ್ಕೆ ರಾಗಿಯು ಬಹಳ ಉಪಕಾರಿಯಾಗಿದೆ. ಆದ್ದರಿಂದಲೇ ‘ರಾಗಿ ತಿಂದವನಿಗೆ ರೋಗವಿಲ್ಲ‘ ಎನ್ನುವ ನುಡಿಗಟ್ಟು ಅರ‍್ತಪೂರ‍್ಣವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ :  wikipedia.org, wikimedia)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.