ಕವಿತೆ: ಒಲವಿನ ಪತ್ರಗಳು

– ವೆಂಕಟೇಶ ಚಾಗಿ.

ಎದೆಯೊಳಗೆ ಕ್ರುಶಿ ಮಾಡಿದ್ದ
ನೂರಾರು ಪತ್ರಗಳು
ವಿಲೇವಾರಿಯಾಗದೆ ನರಳುತ್ತಿದ್ದವು
ಇರುವಶ್ಟು ಜಾಗದಲ್ಲಿ

ಮತ್ತಶ್ಟು ಪತ್ರಗಳನ್ನು ತುರುಕಲು
ಮೂಟೆ ಕಟ್ಟಿ
ಇಡಲಾಗುತ್ತಿತ್ತು ಬಲವಂತವಾಗಿ

ಕೆಲವಶ್ಟು ಬಿಡುಗಡೆಯ ಬಾಗ್ಯ
ಪಡೆದಿದ್ದವು ಸಹ
ಅದೂ ಬೆರಳೆಣಿಕೆಯಶ್ಟು

ಅವಳ ಎದೆಯ ಪೋಸ್ಟ್ ಬಾಕ್ಸ್
ತಲುಪುವುದರೊಳಗೆ
ಜೀವ ಕಳೆದುಕೊಂಡಿದ್ದವು

ಆದರೂ ಪೋಸ್ಟ್ ಬಾಕ್ಸ್ ನಲ್ಲಿ
ಬಿದ್ದ ಬಾಗ್ಯಶಾಲಿಗಳು
ಅವಳೆದೆಯ ಉರಿಗೆ ಬಸ್ಮವಾಗಿದ್ದವು

ಅಲ್ಲೂ ಕೂಡ ಕಾಲಗಳ ಆಟ
ಮಿತಿ ಮೀರಿರಬಹುದು
ಎದೆಯ ಬಾನಿನಲ್ಲಿ
ಮೇಗಗಳು ಒಟ್ಟಾಗಿದ್ದವು

ಗುಡುಗು-ಸಿಡಿಲಿನಲ್ಲಿ ಮೂಡಿದ್ದ
ಪುಟ್ಟದಾದ ಪ್ರೀತಿಯ ಹನಿಯು
ಆ ಒಂದು ಪತ್ರದ ಮೇಲೆ ಬಿದ್ದಿತ್ತು

ಕೊನೆಗೂ ಆ ಪತ್ರ ಚಿಗುರಿ
ಎಲೆಗಳು ಮೂಡಿದ್ದವು

ಚೇ, ಅವಳೆಂತಹ ಅನಕ್ಶರಸ್ತೆ!?
ಎಲೆಗಳ ಮೇಲಿನ ಬಾವನೆಗಳನ್ನು
ಓದಲಾರದಶ್ಟು

ಅವಳ ಕಣ್ಣಲ್ಲಿ
ಅದೊಂದು ಕಳೆಯಾಯಿತಶ್ಟೇ
ಈಗ ಒಂದು ಕಸದಬುಟ್ಟಿಯ
ಅವಶ್ಯಕತೆ ಇದೆ
ಎಲ್ಲ ಪತ್ರಗಳಿಗೆ ಮುಕ್ತಿ ನೀಡಲು
ಎದೆಯನ್ನು ಮರುಬೂಮಿ ಮಾಡಲು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *