ಕುವೆಂಪು ಕವನಗಳ ಓದು – 9ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಹೊಸಬಾಳಿನ ಗೀತೆ

ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು
ಎಂಬ ನವಯುಗವಾಣಿ ಘೋಷಿಸಿದೆ ಕೇಳಿ
ಯುಗಯುಗದ ದಾರಿದ್ರ್ಯಭಾರದಿಂ ಬೆನ್ ಬಾಗಿ
ಗೋಳಿಡುವ ಬಡಜನರೆ ಏಳಿರೈ ಏಳಿ
ಶ್ರೀಮಂತರಡಿಗಳಡಿ ಹುಡಿಯಲ್ಲಿ ಹೊರಳಾಡಿ
ಕುಸಿದು ಕುಗ್ಗಿದರೆಲ್ಲ ಸಂತಸವ ತಾಳಿ
ಕಂಗೆಟ್ಟ ಸೋದರರೆ ಬರುತಿಹಳು ಕಾಣಿರೈ
ದಾನವರ ಸೀಳಿ ಅದೊ ವಿಪ್ಲವದ ಕಾಳಿ
ಇಂದ್ರ ಸಿಂಹಾಸನಕೆ ಬಂದಿಹುದು ಕೊನೆಗಾಲ
ಕಳಚಿ ಬೀಳುವುದಿಂದು ನಂದನದ ಬೇಲಿ
ದೇವತೆಗಳಶ್ಲೀಲಮೋದಕ್ಕೆ ಬದಲಾಗಿ
ಗೋಚರಿಪುದಲ್ಲಿ ಮರ್ತ್ಯರ ಕೃಷಿಯ ಕೇಲಿ
ದ್ರವ್ಯಾನುಕೂಲತೆಯ ಜಾತಿಯಾ ನೀತಿಯಾ
ಪಕ್ಷಪಾತವನೆಲ್ಲ ಕೊಚ್ಚುವುದು ಬುದ್ಧಿ
ಮತ್ತೊಂದು ನಾಕವನೆ ನೆಯ್ಯುವರು ಲೋಕದಲಿ
ದೇವರನ್ಯಾಯವನು ಮಾನವರೆ ತಿದ್ದಿ
ಕೈಲಾಗದವರೆಂಬ ನಾವು ಕೀಳೆಂದೆಂಬ
ಹಣೆಬರಹವೆಂದೆಂಬ ಮೂಢತೆಯ ನೀಗಿ
ಯುಗಚಕ್ರ ಪರಿವರ್ತನೆಗೆ ಸರ್ವರೂ ಸೇರಿ
ಹೆಗಲು ಕೊಟ್ಟೊಮ್ಮನಸು ಮಾಡಿ ನೆರವಾಗಿ
ಮೋಹಿನಿಗೆ ಮರುಳಾಗಿ ಮೂರ್ಖ ದಾನವರೆಲ್ಲ
ತಮ್ಮ ಗೆಯ್ಮೆಯ ಪಾಲನನ್ಯರಿಗೆ ತೆತ್ತು
ಸತ್ತಂತೆ ಸಾಯದಿರಿ ಸಂಸ್ಕೃತಿಯ ಹೆಸರಿಂದೆ
ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು
ಇಂದು ನೆತ್ತರು ಚೆಲ್ಲಿ ಮುಂದೆ ಬಹ ಮಕ್ಕಳಿಗೆ
ಹೊಟ್ಟೆಗನ್ನವ ಮೈಗೆ ಬಟ್ಟೆಯನು ನೀಡಿ
ಇಂದು ನೋವಾದರೂ ಇಂದು ಸಾವಾದರೂ
ಮುಂದೆ ಬಾಳಿಗೆ ಸೊಗಸು ನೆಮ್ಮದಿಯ ಮಾಡಿ
ಇಂದು ನೀವೇಳದಿರೆ ಕೆಚ್ಚೆದೆಯ ತಾಳದಿರೆ
ನಿಮ್ಮವರ ಬಾಳು ಎಂದೆಂದಿಗೂ ಹೇಡಿ
ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು
ಎಂದು ಸಾಹಸಕೇಳಿ ಹಿಂಜರಿಯಬೇಡಿ.

ಸಾವಿರಾರು ವರುಶಗಳಿಂದ ವರ‍್ಣ ಮತ್ತು ಜಾತಿಯ ತಾರತಮ್ಯದಿಂದಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಶ್ರಮಜೀವಿಗಳೆಲ್ಲರೂ ಜತೆಗೂಡಿ ಅರಿವು ಮತ್ತು ಎಚ್ಚರದ ಹೋರಾಟದ ಮೂಲಕ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆದು ಸಮಾಜದಲ್ಲಿ ಎಲ್ಲರೊಡನೆ ಸರಿಸಮಾನವಾಗಿ ತಲೆಯೆತ್ತಿ ಬಾಳುವಂತಾಗಬೇಕೆಂಬ ಕರೆಯನ್ನು ಈ ಕವನದಲ್ಲಿ ನೀಡಲಾಗಿದೆ.

‘ ಅರಿವು ಮತ್ತು ಎಚ್ಚರದ ಹೋರಾಟ ’ ಎಂದರೆ ತಮ್ಮ ಬಡತನಕ್ಕೆ ಸಾಮಾಜಿಕ ರಚನೆ ಮತ್ತು ಸಂಪತ್ತಿನ ಹಂಚಿಕೆಯಲ್ಲಿರುವ ತಾರತಮ್ಯ , ವಂಚನೆ ಮತ್ತು ಸುಲಿಗೆಯನ್ನು ಗುರುತಿಸುವುದು. ಜಾತಿ ಮತ ದೇವರುಗಳ ಹೆಸರಿನಲ್ಲಿ ನಡೆಯುತ್ತಿರುವ ಸಂಪ್ರದಾಯದ ಆಚರಣೆಗಳಿಗೆ ಮಾನಸಿಕವಾಗಿ ದಾಸರಾಗದೆ, “ ನಮ್ಮ ಬಡತನಕ್ಕೆ ನಾವು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಪುಣ್ಯಗಳು ಮತ್ತು ನಮ್ಮ ಹಣೆಬರೆಹವೇ ಕಾರಣ “ ಎಂಬ ತಿಳಿಗೇಡಿತನದಿಂದ ಬಡತನದಲ್ಲಿಯೇ ನರಳದೆ, ದುಡಿಯುವ ಶ್ರಮಜೀವಿಗಳೆಲ್ಲರೂ ಒಗ್ಗಟ್ಟಿನಿಂದ ಜತೆಗೂಡಿ ಸಾಮಾಜಿಕ ಅನ್ಯಾಯಗಳ ಎದುರು ಹೋರಾಡುವುದು.

ಕ್ರಿ.ಶ. 1935 ನೆಯ ಇಸವಿಯಲ್ಲಿ ಈ ಕವನ ರಚನೆಗೊಂಡಿದೆ. ಆಗ ಜಗತ್ತಿನ ಒಟ್ಟು ಜನಸಮುದಾಯದಲ್ಲಿ ಶೇ.40ಕ್ಕಿಂತ ಹೆಚ್ಚು ಮಂದಿ ಕಪ್ಪು – ಬಿಳುಪು ಎಂಬ ಜನಾಂಗೀಯ ವರ‍್ಣ ತಾರತಮ್ಯ ಮತ್ತು ಮೇಲು ಜಾತಿ – ಕೆಳ ಜಾತಿ ಎಂಬ ಜಾತಿ ತಾರತಮ್ಯದಿಂದಾಗಿ ಹುಟ್ಟಿನಿಂದಲೇ ವಿದ್ಯೆ, ಸಂಪತ್ತು, ಆಡಳಿತದ ಗದ್ದುಗೆಯಿಂದ ವಂಚಿತರಾಗಿ ಕಡು ಬಡತನದಲ್ಲಿ ನರಳುತ್ತ ಅಪಮಾನದ ಬದುಕನ್ನು ನಡೆಸುತ್ತಿದ್ದರು. ಈ ಬಡವರೆಲ್ಲರೂ ದುಡಿಯುವ ಶ್ರಮಜೀವಿಗಳಾಗಿದ್ದರು.ವರ‍್ಣ ಮತ್ತು ಜಾತಿಯ ಕಟ್ಟುಪಾಡುಗಳಿಂದ ಕೂಡಿದ್ದ ಸಮಾಜದಲ್ಲಿ ಶ್ರಮಜೀವಿಗಳ ದುಡಿಮೆಯ ಉತ್ಪನ್ನದ ದೊಡ್ಡ ಪಾಲನ್ನು ಮೇಲು ವರ‍್ಗಕ್ಕೆ ಸೇರಿದ ರಾಜಮಹಾರಾಜರು, ಜಮೀನ್ದಾರರು ಮತ್ತು ಮೇಲು ಜಾತಿಯವರು ತಮ್ಮದನ್ನಾಗಿಸಿಕೊಳ್ಳಲು ಅವಕಾಶವಿತ್ತು.

ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿದ್ದ ಸಾಮಾಜಿಕ ಚಿಂತಕರು ಜಗತ್ತಿನ ಎಲ್ಲೆಡೆಯಲ್ಲಿಯೂ ದುಡಿಯುವ ಶ್ರಮಜೀವಿಗಳಾದ ಬಡವರಿಗೆ ಅವರ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸಿ, ಬಡತನಕ್ಕೆ ಕಾರಣವಾಗಿರುವ ವ್ಯವಸ್ತೆಯನ್ನು ಬದಲಿಸಿ, ತಮ್ಮ ದುಡಿಮೆಯ ಉತ್ಪನ್ನವನ್ನು ದೋಚುತ್ತಿರುವ ವ್ಯಕ್ತಿಗಳನ್ನು ಸದೆಬಡಿದು ತಮ್ಮ ಜೀವನಮಟ್ಟವನ್ನು ಚೆನ್ನಾಗಿ ರೂಪಿಸಿಕೊಳ್ಳುವ ಕ್ರಾಂತಿಕಾರಕ ವಿಚಾರಗಳನ್ನು ಬಡಜನತೆಯ ಮನದಲ್ಲಿ ಬಿತ್ತಿದರು.

( ಹೊಸಬಾಳು=ಹೊಸ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು; ಗೀತೆ=ಹಾಡು; ಸರ್ವರಿಗೆ=ಎಲ್ಲರಿಗೆ; ಸಮ=ಒಂದೇ ಬಗೆಯ/ಹೆಚ್ಚುಕಡಿಮೆಯಿಲ್ಲದ; ಬಾಳು=ಜೀವನ; ಪಾಲು=ಹಿಸ್ಸೆ/ಹಂಚಿಕೆ; ಸರ್ವರಿಗೆ ಸಮಬಾಳು ಸರ್ವರಿಗೆ ಸರ್ವಪಾಲು=ಎಲ್ಲ ಮಾನವರಿಗೂ ಜೀವನಕ್ಕೆ ಅತ್ಯಗತ್ಯವಾದ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯ ಸರಿಸಮಾನವಾಗಿ ದೊರೆತು, ಎಲ್ಲರೂ ಪರಸ್ಪರ ಒಲವು ನಲಿವಿನಿಂದ ಜತೆಗೂಡಿ ನೆಮ್ಮದಿಯ ಜೀವನವನ್ನು ನಡೆಸುವಂತಾಗುವುದು;

ಎಂಬ=ಎನ್ನುವ; ನವ=ಹೊಸ; ಯುಗ=ಕಾಲಮಾನ; ವಾಣಿ=ಮಾತು/ದನಿ; ನವಯುಗವಾಣಿ=ಮಾನವ ಸಮುದಾಯದ ಜೀವನ ಚೆನ್ನಾಗಿ ನಡೆಯುವುದಕ್ಕೆ ಬೇಕಾದುದೆಲ್ಲವನ್ನೂ ಉತ್ಪಾದಿಸುತ್ತಿರುವ ಶ್ರಮಜೀವಿಗಳಾದ ಬಡವರು ತಮ್ಮ ಪಾಲನ್ನು ಪಡೆಯುವುದಕ್ಕಾಗಿ ಹೋರಾಟವನ್ನು ಮಾಡಬೇಕೆಂಬ ಅರಿವು ಮತ್ತು ಎಚ್ಚರದ ನುಡಿ; ಘೋಷಿಸು=ಎತ್ತರದ ದನಿಯಲ್ಲಿ ಕೂಗಿ ಹೇಳು/ಡಂಗುರ ಹೊಡೆದು ಹೇಳು; ಕೇಳಿ=ಆಲಿಸಿರಿ;

ಯುಗ=ಕಾಲಮಾನ; ದಾರಿದ್ರ್ಯ=ಬಡತನ; ಭಾರದಿಂ=ಹೊರೆಯಿಂದ; ದಾರಿದ್ರಭಾರ=ಬಡತನದಿಂದ ಉಂಟಾಗುವ ಸಂಕಟ; ಬೆನ್ ಬಾಗಿ=ಇದೊಂದು ನುಡಿಗಟ್ಟು. ಅತಿ ಹೆಚ್ಚಾದ ಸಂಕಟಕ್ಕೆ ಒಳಗಾಗಿ ನರಳುವುದು ; ಗೋಳ್+ಇಡುವ; ಗೋಳು=ವೇದನೆ/ತೊಂದರೆ/ಸಂಕಟ/ಕಳವಳ; ಬಡಜನರು=ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯವಿಲ್ಲದೆ ಹಸಿವು ಬಡತನ ಅಪಮಾನದಿಂದ ನರಳುತ್ತಿರುವವರು; ಏಳು=ಎದ್ದು ನಿಲ್ಲು; ಏಳಿರೈ=ಎದ್ದೇಳಿರಿ;

ಯುಗಯುಗದ ದಾರಿದ್ರ್ಯಭಾರದಿಂ ಬೆನ್ ಬಾಗಿ ಗೋಳಿಡುವ ಬಡಜನರೆ ಏಳಿರೈ ಏಳಿ=ಸಾವಿರಾರು ವರುಶಗಳಿಂದಲೂ ಬಡತನದ ಸಂಕಟಕ್ಕೆ ಸಿಲುಕಿ ಕಂಗಾಲಾಗಿ ನರಳುತ್ತಿರುವ ಜನರೇ, ನೀವೆಲ್ಲರೂ ನಿಮ್ಮ ಬಡತನಕ್ಕೆ ಕಾರಣವೇನೆಂಬುದನ್ನು ಅರಿತು ಎಚ್ಚರಗೊಂಡು ಹೋರಾಟಕ್ಕೆ ಅಣಿಯಾಗಿರಿ;

ಶ್ರೀಮಂತರ+ಅಡಿಗಳ+ಅಡಿ; ಅಡಿಗಳ=ಪಾದಗಳ; ಅಡಿ=ಕೆಳಗೆ; ಹುಡಿ+ಅಲ್ಲಿ; ಹುಡಿ=ಸಣ್ಣಸಣ್ಣಕಣಗಳಾಗಿರುವ ಮಣ್ಣು/ದೂಳು; ಹೊರಳ್+ಆಡಿ; ಹೊರಳು=ಉರುಳು; ಕುಸಿ=ಕೆಳಕ್ಕೆ ಬಿದ್ದು; ಕುಗ್ಗಿದರ್+ಎಲ್ಲ; ಕುಗ್ಗು=ಬಾಗು/ಬಗ್ಗು; ; ಸಂತಸ=ಹಿಗ್ಗು/ಆನಂದ; ತಾಳು=ಹೊಂದು/ಪಡೆ;

ಶ್ರೀಮಂತರಡಿಗಳಡಿ ಹುಡಿಯಲ್ಲಿ ಹೊರಳಾಡಿ ಕುಸಿದು ಕುಗ್ಗಿದರೆಲ್ಲ ಸಂತಸವ ತಾಳಿ=ಸಿರಿವಂತರ ಬಳಿಯಲ್ಲಿ ಗುಲಾಮರಾಗಿ ಇಲ್ಲವೇ ಜೀತದಾಳುಗಳಾಗಿ ದುಡಿದು ಮಾನಸಿಕವಾಗಿ ಕುಗ್ಗಿಹೋಗಿರುವ ನೀವೆಲ್ಲರೂ ಈಗ ಆನಂದ ಮತ್ತು ಉತ್ಸಾಹವನ್ನು ತಳೆಯಿರಿ;

ಕಂಗೆಡು=ವಾಸ್ತವವನ್ನು ಅರಿಯಲಾಗದೆ ಸಂಕಟಪಡುತ್ತಿರುವುದು; ಸೋದರ=ಒಬ್ಬಳೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವ ಅಣ್ಣತಮ್ಮಂದಿರು; ಬರುತ+ಇಹಳು; ಇಹಳು=ಇರುವಳು; ಕಾಣಿರೈ=ನೋಡಿರಿ; ದಾನವ=ರಕ್ಕಸ ; ಸೀಳು=ತುಂಡು ಮಾಡು; ವಿಪ್ಲವ=ಕ್ರಾಂತಿ/ದಂಗೆ; ಕಾಳಿ=ಒಬ್ಬ ದೇವತೆಯ ಹೆಸರು;

ಕಂಗೆಟ್ಟ ಸೋದರರೆ ಬರುತಿಹಳು ಕಾಣಿರೈ ದಾನವರ ಸೀಳಿ ಅದೊ ವಿಪ್ಲವದ ಕಾಳಿ=ಇದೊಂದು ರೂಪಕ. ರಕ್ಕಸರನ್ನು ತುಂಡರಿಸಲೆಂದು ಕಾಳಿಯೆಂಬ ದೇವತೆಯು ಬರುವಂತೆ ಇದುವರೆಗೂ ದುಡಿಯುವ ಶ್ರಮಜೀವಿಗಳಾದ ಬಡವರನ್ನು ಸುಲಿಗೆ ಮಾಡುತ್ತಿದ್ದ ರಾಜರನ್ನು ಮತ್ತು ಊಳಿಗಮಾನ್ಯ ಪದ್ದತಿಯ ಜಮೀನ್ದಾರರನ್ನು ಇಲ್ಲವಾಗಿಸುವ ಕ್ರಾಂತಿಯು ನಡೆಯಲಿದೆ. ಕ್ರಾಂತಿ ಎಂದರೆ ಸಾಮಾಜಿಕ ಅನ್ಯಾಯವನ್ನು ತೊಡೆದುಹಾಕಿ, ನ್ಯಾಯವನ್ನು ನೆಲೆಗೊಳಿಸುವುದು; ‘ ಊಳಿಗಮಾನ್ಯ ಪದ್ದತಿ ‘ ಎಂದರೆ ಕೆಳಜಾತಿಯ ಜನಸಮುದಾಯದವರು ತಲೆತಲಾಂತರಗಳಿಂದಲೂ ರಾಜನ, ಮೇಲುಜಾತಿಯವರ ಮತ್ತು ಮೇಲು ವರ‍್ಗದ ಜನರ ಸೇವೆಯನ್ನು ಮಾಡುತ್ತ ಅವರ ಅಡಿಯಾಳುಗಳಾಗಿಯೇ ಬಾಳುವುದು;

ಇಂದ್ರ=ದೇವತೆಗಳ ಒಡೆಯ. ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ದೇವಲೋಕದ ರಾಜ; ಸಿಂಹಾಸನ=ರಾಜನು ಕುಳಿತುಕೊಳ್ಳುವ ಗದ್ದುಗೆ; ಬಂದು+ಇಹುದು; ಕೊನೆ+ಕಾಲ; ಕಳಚು=ಬೇರೆ ಮಾಡು; ಬೀಳುವುದು+ಇಂದು; ನಂದನ=ಅಮರಾವತಿ ನಗರದಲ್ಲಿರುವ ಇಂದ್ರನ ತೋಟದ ಹೆಸರು; ದೇವತೆಗಳ+ಅಶ್ಲೀಲ+ಮೋದಕ್ಕೆ; ಅಶ್ಲೀಲ=ಕೆಟ್ಟ ರೀತಿಯ ನಡೆನುಡಿ; ಮೋದ=ಆನಂದ; ಬದಲ್+ಆಗಿ; ಬದಲು=ಪ್ರತಿಯಾಗಿ; ಗೋಚರಿಪುದು+ಇಲ್ಲಿ; ಗೋಚರ=ಕಂಡುಬರುವುದು; ಮರ್ತ್ಯ=ಮಾನವರು ನೆಲೆಸಿರುವ ಲೋಕ; ಕೃಷಿ=ಬೇಸಾಯ/ಆರಂಬ; ಕೇಲಿ=ಆಟ/ಕ್ರೀಡೆ;

ಇಂದ್ರ ಸಿಂಹಾಸನಕೆ ಬಂದಿಹುದು ಕೊನೆಗಾಲ ಕಳಚಿ ಬೀಳುವುದಿಂದು ನಂದನದ ಬೇಲಿ ದೇವತೆಗಳಶ್ಲೀಲಮೋದಕ್ಕೆ ಬದಲಾಗಿ ಗೋಚರಿಪುದಲ್ಲಿ ಮರ್ತ್ಯರ ಕೃಷಿಯ ಕೇಲಿ= ಇದೊಂದು ರೂಪಕ. ಸಿರಿಸಂಪದಗಳಿಂದ ಕೂಡಿ ಮೆರೆಯುತ್ತಿದ್ದ ಇಂದ್ರನ ಆಡಳಿತ ಕೊನೆಗೊಂಡು, ಆತನ ಉದ್ಯಾನದ ಬೇಲಿಯೇ ಮುರಿದುಬೀಳುವುದು. ದೇವತೆಗಳ ಕೆಟ್ಟ ನಡೆನುಡಿಗಳಿಂದ ಕೂಡಿದ ಆಟಗಳು ನಿಲ್ಲುತ್ತವೆ. ಅಂದರೆ ಸಿರಿಸಂಪದಗಳಿಂದ ದೇವಲೋಕದ ಇಂದ್ರನಂತೆ ಮೆರೆಯುತ್ತಿದ್ದ ರಾಜಮಹಾರಾಜರು, ಜಮೀನ್ದಾರರು ಮತ್ತು ಸಿರಿವಂತರು ಜತೆಗೂಡಿ ಕೆಳವರ‍್ಗ ಮತ್ತು ಕೆಳಜಾತಿಯ ಜನರ ಮೇಲೆ ನಡೆಸುತ್ತಿದ್ದ ಅತ್ಯಾಚಾರ ಮತ್ತು ಅನಾಚಾರದ ವರ‍್ತನೆಗಳು ಕೊನೆಗೊಳ್ಳುತ್ತವೆ. ಇದಕ್ಕೆ ಬದಲಾಗಿ ಶ್ರಮಜೀವಿಗಳಾದ ಜನರಿಂದ ಲೋಕಕ್ಕೆ ಅನ್ನವನ್ನು ನೀಡುವ ಬೇಸಾಯದ ಕಸುಬು ನಡೆಯತೊಡಗುತ್ತದೆ;

ದ್ರವ್ಯ+ಅನುಕೂಲತೆಯ; ದ್ರವ್ಯ=ಹಣ/ಸಂಪತ್ತು; ಅನುಕೂಲ=ಸಿರಿವಂತಿಕೆ; ದ್ರವ್ಯಾನುಕೂಲತೆ=ಸಂಪತ್ತನ್ನು ಹೊಂದಿರುವುದು; ಜಾತಿ=ಮೇಲು ಕೀಳೆಂಬ ಮೆಟ್ಟಲುಗಳಿಂದ ಕೂಡಿರುವ ಸಮಾಜದಲ್ಲಿ ಜಾತಿ ಎನ್ನುವುದು ಮಾನವರೇ ಕಟ್ಟಿಕೊಂಡಿರುವ ಒಂದು ಸಾಮಾಜಿಕ ಒಕ್ಕೂಟ. ಆದುದರಿಂದ ಜಾತಿ ಎಂಬುದು ಮಾನವರ ದೇಹದಲ್ಲಿ ಕಂಡುಬರುವುದಿಲ್ಲ, ಆದರೆ ಅವರ ಮನದಲ್ಲಿ ಹಾಸುಹೊಕ್ಕಾಗಿದೆ.

ಪ್ರಾಚೀನ ಕಾಲದಲ್ಲಿ ಹಿಂದೂ ಸಮಾಜದಲ್ಲಿದ್ದ ಬ್ರಾಹ್ಮಣ, ಕ್ಶತ್ರಿಯ,ವೈಶ್ಯ ಮತ್ತು ಶೂದ್ರ ಎಂಬ ವರ‍್ಣಗಳು ಕಾಲಕ್ರಮೇಣ ನೂರಾರು ಬಗೆಯ ಜಾತಿಗಳಾಗಿ ಮತ್ತು ಸಾವಿರಾರು ಬಗೆಯ ಉಪಜಾತಿಗಳಾಗಿ ಕವಲುಗೊಂಡು ಇಂದಿನ ಜನಸಮುದಾಯದಲ್ಲಿ ಆಚರಣೆಯಲ್ಲಿವೆ. ಇದೇ ರೀತಿ ಜಗತ್ತಿನ ಜನಸಮುದಾಯದ ಬೇರೆ ಬೇರೆ ಮತಗಳಲ್ಲಿಯೂ ಅನೇಕ ಬಗೆಯ ಒಳಪಂಗಡಗಳಿವೆ; ನೀತಿ=ಸಂಪ್ರದಾಯದ ನಡೆನುಡಿ; ಜಾತಿಯಾ ನೀತಿ=ಜಾತಿಯ ಕಟ್ಟುಪಾಡುಗಳು;ಪಕ್ಷಪಾತ+ಅನ್+ಎಲ್ಲ; ಪಕ್ಷಪಾತ=ತಾರತಮ್ಯ; ಅನ್=ಅನ್ನು; ಕೊಚ್ಚು=ತುಂಡುಮಾಡು/ಕತ್ತರಿಸು; ಬುದ್ಧಿ=ಅರಿವು/ತಿಳಿವು;

ದ್ರವ್ಯಾನುಕೂಲತೆಯ ಜಾತಿಯಾ ನೀತಿಯಾ ಪಕ್ಷಪಾತವನೆಲ್ಲ ಕೊಚ್ಚುವುದು ಬುದ್ಧಿ=ಹಣದ ಸಿರಿವಂತಿಕೆಯಿಂದ ಮತ್ತು ಜಾತಿಯ ಮೇಲರಿಮೆಯಿಂದ ಇದುವರೆವಿಗೂ ಬಡವರಿಗೆ ಅನ್ನ ಬಟ್ಟೆ ವಸತಿ ವಿದ್ಯೆ ಅದಿಕಾರ ಸಂಪತ್ತು ದೊರೆಯದಂತೆ ಮಾಡಿದ್ದ ಜಾತಿ ಸಂಪ್ರದಾಯದ ಕಟ್ಟುಪಾಡುಗಳೆಲ್ಲವೂ ಕೊಚ್ಚಿಹೋಗುತ್ತವೆ. ಏಕೆಂದರೆ ಯಾವುದು ಸರಿ-ಯಾವುದು ತಪ್ಪು ಎಂಬ ಅರಿವು ಮತ್ತು ಯಾವುದನ್ನು ಒಪ್ಪಬೇಕು-ಯಾವುದನ್ನು ಒಪ್ಪಬಾರದು ಎಂಬ ಎಚ್ಚರ ದುಡಿಯುವ ವರ‍್ಗದ ಜನಸಮುದಾಯದ ಮನದಲ್ಲಿ ಮೂಡುತ್ತಿದೆ ;

ನಾಕ=ಸ್ವರ‍್ಗ; ಸ್ವರ‍್ಗ ಮತ್ತು ನರಕ=ಮಾನವನ ಕಲ್ಪನೆಯಲ್ಲಿ ರೂಪುಗೊಂಡಿರುವ ಎರಡು ನೆಲೆಗಳು. ಸ್ವರ‍್ಗವು ಚೆಲುವು ಒಲವು ನಲಿವನ್ನುಂಟುಮಾಡುವ ತಾಣ ಮತ್ತು ನರಕವು ಸಂಕಟ ವೇದನೆ ನೋವನ್ನುಂಟುಮಾಡುವ ತಾಣ ಎಂಬ ಕಲ್ಪನೆಯು ಜನಮನದಲ್ಲಿದೆ; ನೆಯ್=ಹೆಣೆ/ಜೋಡಿಸು; ಲೋಕ=ಜಗತ್ತು/ಪ್ರಪಂಚ; ದೇವರ+ಅನ್ಯಾಯವನು; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ ತಮಗೆ ಒಳಿತನ್ನು ಮಾಡುವ ಶಕ್ತಿಯನ್ನು ಇಲ್ಲವೇ ವ್ಯಕ್ತಿಯನ್ನು ದೇವರೆಂದು ಮಾನವ ಸಮುದಾಯ ನಂಬಿದೆ; ತಿದ್ದು=ಸರಿಪಡಿಸು/ಬದಲಾಯಿಸು; ದೇವರ ಅನ್ಯಾಯವನು=ದೇವರ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯವನ್ನು ಅಂದರೆ ಈ ಜಗತ್ತಿನ ಒಳಿತು ಕೆಡುಕುಗಳಿಗೆ ದೇವರೇ ಕಾರಣ. ಮಾನವರಿಗೆ ಸಿರಿತನವನ್ನಾಗಲಿ ಇಲ್ಲವೇ ಬಡತನವನ್ನಾಗಲಿ ಕೊಡುವವನು ದೇವರು ಎಂಬ ನಂಬಿಕೆಯನ್ನು ಜನಮನದಲ್ಲಿ ಬಿತ್ತಲಾಗಿದೆ;

ಮತ್ತೊಂದು ನಾಕವನೆ ನೆಯ್ಯುವರು ಲೋಕದಲಿ ದೇವರನ್ಯಾಯವನು ಮಾನವರೆ ತಿದ್ದಿ=ಅರಿವನ್ನು ಪಡೆದ ವ್ಯಕ್ತಿಗಳು ದೇವರ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ಅನ್ಯಾಯಗಳನ್ನು ತಡೆಗಟ್ಟಿ, ಮಾನವ ಜೀವನದ ಒಳಿತು ಕೆಡುಕುಗಳಿಗೆ ನಿಸರ‍್ಗ ಮತ್ತು ಮಾನವರ ನಡೆನುಡಿಗಳೇ ಕಾರಣವೆಂಬ ವಿವೇಕವನ್ನು ಜನಮನದಲ್ಲಿ ಮೂಡಿಸಿ, ಜನರ ಬದುಕು ಒಲವು ನಲಿವು ನೆಮ್ಮದಿಯಿಂದ ಕೂಡಿದ ನೆಲೆಯನ್ನಾಗಿ ಮಾಡುತ್ತಾರೆ. ಆಗ ಈ ಲೋಕವೇ ಸ್ವರ‍್ಗದಂತಾಗುತ್ತದೆ;

ಕೈಲಿ+ಆಗದವರು+ಎಂಬ; ಕೈಲಾಗದವರು=ಏನನ್ನೂ ಮಾಡಲಾಗದವರು; ಎಂಬ=ಎನ್ನುವ; ಕೀಳ್+ಎಂದು+ಎಂಬ; ಕೀಳು=ಕೆಳಮಟ್ಟ; ಹಣೆಬರಹ+ಎಂದು+ಎಂಬ; ಹಣೆಬರಹ=ಲೋಕದಲ್ಲಿ ಹುಟ್ಟುವ ಮಾನವ ಜೀವಿಗಳ ಹಣೆಯ ಮೇಲೆ ದೇವರು ಬರೆದಿರುವ ಬರಹ; ಮೂಢತೆ=ತಿಳಿಗೇಡಿತನ; ನೀಗು=ಬಿಡು/ತೊರೆ/ತ್ಯಜಿಸು; ಚಕ್ರ=ಗಾಲಿ; ಯುಗಚಕ್ರ=ಕಾಲದ ಉರುಳುವಿಕೆ; ಪರಿವರ್ತನೆ=ಬದಲಾವಣೆ/ಮಾರ‍್ಪಾಡು;

ಯುಗ ಪರಿವರ್ತನೆ=ಮಾನವ ಸಮುದಾಯದಲ್ಲಿ ಒಂದು ಗುಂಪು ಮತ್ತೊಂದು ಗುಂಪನ್ನು ವರ‍್ಣ , ಜಾತಿ, ಮತ, ದೇವರ ಹೆಸರಿನಲ್ಲಿ ವಂಚಿಸುತ್ತ, ಕ್ರೂರತನದ ನಡೆನುಡಿಗಳಿಂದ ಹಲ್ಲೆ ನಡೆಸುತ್ತಿರುವ ಕಾಲ ಕೊನೆಗೊಂಡು, ಎಲ್ಲ ಮಾನವರು ಜತೆಗೂಡಿ ಒಲವು ನಲಿವು ನೆಮ್ಮದಿಯಿಂದ ಬಾಳುವ ಕಾಲ ಬರುವುದು;

ಹೆಗಲು=ಬುಜ; ಕೊಟ್ಟು+ಒಮ್ಮನಸು; ಹೆಗಲು ಕೊಡು=ಇದೊಂದು ನುಡಿಗಟ್ಟು. ಜವಾಬ್ದಾರಿಯನ್ನು ಹೊತ್ತುಕೊಂಡು/ಕೆಲಸವನ್ನು ಮಾಡುವವರಿಗೆ ನೆರವನ್ನು ನೀಡುವುದು; ಒಂದು+ಮನಸ್ಸು=ಒಮ್ಮನಸು; ಒಮ್ಮನಸು=ಒಂದೇ ಮನಸ್ಸು. ಹಿಡಿದ ಕೆಲಸವನ್ನು ಮಾಡಿಮುಗಿಸಬೇಕೆಂಬ ಗುರಿ; ನೆರವು+ಆಗಿ; ನೆರವು=ಸಹಾಯ/ಬೆಂಬಲ/ಆಸರೆ;

ಮೋಹಿನಿ=ಚೆಲುವೆ/ಸುಂದರಿ; ಮರುಳ್+ಆಗಿ; ಮರುಳು=ಮೋಹ; ಮೂರ್ಖ=ತಿಳಿಗೇಡಿ/ದಡ್ಡ; ದಾನವ+ಅರ್+ಎಲ್ಲ; ದಾನವ=ರಕ್ಕಸ; ಗೆಯ್ಮೆ=ಕೆಲಸ/ದುಡಿಮೆ; ಪಾಲ್+ಅನ್+ಅನ್ಯರಿಗೆ; ಪಾಲು=ತನಗೆ ಸೇರಿದ ವಸ್ತು; ಅನ್=ಅನ್ನು; ಅನ್ಯರಿಗೆ=ಬೇರೆಯವರಿಗೆ; ತೆತ್ತು=ನೀಡಿ/ಕೊಟ್ಟು; ಸತ್ತ+ಅಂತೆ;

ಮೋಹಿನಿಗೆ ಮರುಳಾಗಿ ಮೂರ್ಖ ದಾನವರೆಲ್ಲ ತಮ್ಮ ಗೆಯ್ಮೆಯ ಪಾಲನನ್ಯರಿಗೆ ತೆತ್ತು ಸತ್ತಂತೆ ಸಾಯದಿರಿ=ಒಮ್ಮೆ ದೇವತೆಗಳು ಮತ್ತು ದಾನವರು ಹಾಲಿನ ಕಡಲನ್ನು ಕಡೆದಾಗ ಅಮ್ರುತ ದೊರಕುತ್ತದೆ. ಇದನ್ನು ಹಂಚಿಕೊಳ್ಳುವಾಗ ದೇವತೆಗಳ ಮತ್ತು ದಾನವರ ನಡುವೆ ಜಗಳವುಂಟಾಗುತ್ತದೆ, ಆಗ ಮೋಹಿನಿಯ ರೂಪದಲ್ಲಿ ವಿಶ್ಣು ಬಂದು ದಾನವರನ್ನು ತನ್ನ ಅಂದಚೆಂದದ ಒಯ್ಯಾರದ ನರ‍್ತನದ ಮೂಲಕ ಮರುಳು ಮಾಡಿ, ದಾನವರಿಗೆ ಅಮ್ರುತವು ಕಿಂಚಿತ್ತು ದಕ್ಕದಂತೆ ವಂಚಿಸುತ್ತಾನೆ ಎಂಬುದು ಪುರಾಣದ ಪ್ರಸಂಗ. ಈ ಪ್ರಸಂಗವನ್ನು ಒಂದು ರೂಪಕವನ್ನಾಗಿ ಮಾಡಿಕೊಂಡು ಮೋಹಿನಿಯ ರೂಪಕ್ಕೆ ಮರುಳಾಗಿ ತಮ್ಮ ಪರಿಶ್ರಮದ ಪಾಲಿನ ಅಮ್ರುತವನ್ನು ಪಡೆಯಲಾಗದೆ ಮೋಸಹೋದ ದಾನವರಂತೆ ದುಡಿಯುವ ಶ್ರಮಜೀವಿಗಳಾದ ಬಡವರು ಮೇಲು ವರ‍್ಗದ ಸಿರಿವಂತರು ಮತ್ತು ಮೇಲುಜಾತಿಯ ಜನರ ವಂಚನೆಗೆ ಬಲಿಯಾಗಬಾರದು;

ಸಂಸ್ಕೃತಿ=ಮಾನವ ಸಮುದಾಯದ ನಡೆನುಡಿಗಳು; ಹೆಸರ್+ಇಂದೆ; ಶ್ರೀಮಂತರ್+ಒಡ್ಡು+ಆ; ಒಡ್ಡು=ಮುಂದೆ ಹಾಕುವ; ಬಲೆ=ಪ್ರಾಣಿ ಹಕ್ಕಿಗಳನ್ನು ಹಿಡಿಯುವುದಕ್ಕಾಗಿ ಹಾಕುವ ಉಪಕರಣ; ಮೃತ್ಯು=ಸಾವು/ಮರಣ;

ಸಂಸ್ಕೃತಿಯ ಹೆಸರಿಂದೆ ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು=ಜಾತಿ ಮತ ದೇವರ ಹೆಸರಿನಲ್ಲಿ ನೂರಾರು ಬಗೆಯ ಸಂಪ್ರದಾಯಗಳಲ್ಲಿ ಮತ್ತು ಆಚರಣೆಗಳಲ್ಲಿ ಬಡವರು ತೊಡಗುವಂತೆ ಮಾಡಿ, ಅವರ ಗಮನವನ್ನು ತಮ್ಮ ಬಡತನಕ್ಕೆ ಕಾರಣವಾದ ಸಂಗತಿಗಳತ್ತ ಹರಿಯದಂತೆ ಸಿರಿವಂತರು ಮಾಡಿದ್ದಾರೆ. ಸಾವಿರಾರು ವರುಶಗಳಿಂದಲೂ ಪುರಾಣ, ಸಂಗೀತ ಸಾಹಿತ್ಯ ನಾಟಕ ಮತ್ತು ಶಿಲ್ಪ ಕಲೆಗಳ ಮೂಲಕ ದುಡಿಯುವ ಶ್ರಮಜೀವಿಗಳಾದ ಬಡವರ ಮನದಲ್ಲಿ ಅನೇಕ ಬಗೆಯ ಮೂಡ ನಂಬಿಕೆಗಳನ್ನು ಬಿತ್ತಿದ್ದಾರೆ.

ದೇವರಿಗೆ ತಲೆಗೂದಲನ್ನು ಮುಡಿಯನ್ನಾಗಿ ನೀಡುವ, ಹರಕೆಯನ್ನು ಒಪ್ಪಿಸುವ, ಯಾಗದ ಅಗ್ನಿಕುಂಡದಲ್ಲಿ ವಸ್ತುಗಳನ್ನು ಹಾಕುವ, ಪ್ರಾಣಿಗಳನ್ನು ಬಲಿಕೊಡುವ ಆಚರಣೆಗಳ ಮೂಲಕ ಜನರ ಮನದಲ್ಲಿ ದೇವರೇ ಸರ‍್ವಶಕ್ತನೆಂಬ ನಂಬಿಕೆಯನ್ನು ಬಿತ್ತಲಾಗಿದೆ.“ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು; ಪಾಲಿಗೆ ಬಂದದ್ದು ಪಂಚಾಮ್ರುತ; ಮಾನವ ಕೊಟ್ಟಿದ್ದು ಮನೆ ತನಕ ದೇವರು ಕೊಟ್ಟಿದ್ದು ಕೊನೆ ತನಕ” ಎಂಬ ನೂರಾರು ಬಗೆಯ ನಾಣ್ಣುಡಿಗಳು ಬಡವರನ್ನು ಮಾನಸಿಕವಾಗಿ ಗುಲಾಮರನ್ನಾಗಿಸಿವೆ. ಇದರಿಂದಾಗಿ ಸಾಮಾಜಿಕ ವ್ಯವಸ್ತೆ ಮತ್ತು ಸಂಪತ್ತಿನ ಹಂಚಿಕೆಯಲ್ಲಿರುವ ವಂಚನೆಯನ್ನು ಬಡವರು ಗುರುತಿಸಲಾಗದೆ, ತಮ್ಮ ಬಡತನಕ್ಕೆ ದೇವರನ್ನೇ ಹೊಣೆಗಾರನನ್ನಾಗಿ ಮಾಡಿ ಸುಮ್ಮನಾಗುತ್ತಾರೆ. ಶ್ರೀಮಂತರ ಮತ್ತು ಮೇಲು ಜಾತಿಯವರ ಸಂಸ್ಕ್ರುತಿಯ ಆಚರಣೆಗಳಿಗೆ ಮರುಳಾದಾಗ ಅದೇ ಬಡವರ ಪಾಲಿಗೆ ಸಾವಾಗುತ್ತದೆ;

ನೆತ್ತರು=ರಕ್ತ; ಚೆಲ್ಲು=ಬೀಳಿಸು/ಕೆಡಹು; ಬಹ=ಬರುವ; ಹೊಟ್ಟೆಗೆ+ಅನ್ನವ; ನೋವು+ಆದರೂ; ನೋವು=ಸಂಕಟ; ಸಾವು+ಆದರೂ; ಬಾಳು=ಜೀವನ ; ಸೊಗಸು=ಹಿಗ್ಗು/ಚೆಲುವು/ಹಿತ; ನೆಮ್ಮದಿ=ಯಾವುದೇ ಬಗೆಯ ಸಂಕಟಗಳು ಇಲ್ಲದಿರುವುದು;

ತಲೆತಲಾಂತರಗಳಿಂದಲೂ ನೀವು ಪಡುತ್ತಿರುವ ಬಡತನದಿಂದ ಉಂಟಾಗುವ ಅಪಮಾನ ಮತ್ತು ಸಂಕಟಗಳಿಂದ ನಿಮ್ಮ ಮಕ್ಕಳನ್ನು ಪಾರುಮಾಡುವುದಕ್ಕಾಗಿ ದಿಟ್ಟತನದಿಂದ ಹೋರಾಡಿ, ಸಾಮಾಜಿಕ ಅನ್ಯಾಯವನ್ನು ತೊಲಗಿಸಲು ನಿಮ್ಮ ನೆತ್ತರನ್ನು ಹರಿಸಿ , ಮುಂದೆ ಬರಲಿರುವ ನಿಮ್ಮ ಮಕ್ಕಳ ಪಾಲಿಗೆ ಬಡತನ ಇಲ್ಲದಂತೆ ಮಾಡಿರಿ;

ನೀವ್+ಏಳದಿರೆ; ಏಳದಿರೆ=ಎಚ್ಚರಗೊಳ್ಳದಿದ್ದರೆ; ಕೆಚ್ಚೆದೆ=ದಿಟ್ಟತನ/ಎದೆಗಾರಿಕೆ; ತಾಳ್=ಹೊಂದು/ಪಡೆ; ಎಂದು+ಎಂದಿಗೂ; ಎಂದೆಂದಿಗೂ=ಯಾವ ಕಾಲಕ್ಕೂ; ಹೇಡಿ=ಹೆದರುವವನು ;

ಇಂದು ನೀವು ಅರಿವನ್ನು ಪಡೆದು ಕೆಚ್ಚೆದೆಯಿಂದ ವರ‍್ಣ ಮತ್ತು ಜಾತಿ ತಾರತಮ್ಯದ ವ್ಯವಸ್ತೆಯ ಎದುರಾಗಿ ಹೋರಾಡದೆ, ಸಾವು ನೋವುಗಳಿಗೆ ಅಂಜಿ ಸುಮ್ಮನಾದರೆ ನಿಮ್ಮ ಮುಂದಿನ ತಲೆಮಾರುಗಳೆಲ್ಲವೂ ಇದೇ ಬಗೆಯ ಹಸಿವು ಬಡತನ ಅಪಮಾನದಲ್ಲಿಯೇ ನರಳುವರು;

ಇಂದು=ಈಗ; ಬಿಂದು=ಹನಿ/ತೊಟ್ಟು; ಮುಂದೆ=ನಂತರದಲ್ಲಿ; ಸೌಖ್ಯ=ನೆಮ್ಮದಿ/ಆನಂದ; ಸಿಂಧು=ಸಮುದ್ರ/ಕಡಲು; ಸಾಹಸಕೆ+ಏಳಿ; ಸಾಹಸ=ದಿಟ್ಟತನದಿಂದ ಮುನ್ನುಗ್ಗಿ ಕೆಲಸವನ್ನು ಮಾಡುವುದು/ಗುರಿಯನ್ನು ಮುಟ್ಟುವುದು; ಹಿಂಜರಿ=ಹಿಂದಕ್ಕೆ ಸರಿಯುವುದು/ಹಿಮ್ಮೆಟ್ಟುವುದು ;

ಇಂದು ನೀವು ಮಾಡುವ ಹೋರಾಟದಲ್ಲಿ ನಿಮ್ಮ ಮಯ್ಯಿಂದ ಬೀಳುವ ಒಂದೊಂದು ತೊಟ್ಟು ರಕ್ತವೂ ಮುಂದೆ ನಿಮ್ಮ ಮಕ್ಕಳ ಪಾಲಿಗೆ ಆನಂದದ ಕಡಲಾಗುತ್ತದೆ. ಅಂದರೆ ಸರ‍್ವಸಮಾನತೆಯ ಹೊಸ ಸಮಾಜವನ್ನು ರೂಪಿಸುತ್ತದೆ. ಆದ್ದರಿಂದ ಈಗ ನಿಮಗೆ ಆಗುತ್ತಿರುವ ಅನ್ಯಾಯದ ಎದುರು ಹೋರಾಡಿ, ಎಲ್ಲ ಬಗೆಯ ಸಾಮಾಜಿಕ ಕೆಡುಕುಗಳನ್ನು ದಿಟ್ಟತನದಿಂದ ತೊಡೆದುಹಾಕಿ, ನಿಮ್ಮ ಮಕ್ಕಳು ಹೊಸಬಾಳನ್ನು ಕಟ್ಟಿಕೊಳ್ಳಲು ಅವಕಾಶವನ್ನು ಮಾಡಿಕೊಡಿ. ಯಾವುದೇ ಕಾರಣದಿಂದಲೂ ಸಾವು ನೋವಿಗೆ ಅಂಜಿಕೊಂಡು ನೀವು ಹಿಂದಕ್ಕೆ ಸರಿಯಬೇಡಿ. ಸಾಹಸದಿಂದ ಮುನ್ನುಗ್ಗಿ ಬಡತನವನ್ನು ಬುಡಮಟ್ಟ ಕಿತ್ತು ಒಗೆಯಿರಿ ಎಂದು ದುಡಿಯುವ ವರ‍್ಗದ ಶ್ರಮಜೀವಿಗಳಾದ ಬಡಜನತೆಗೆ ಕರೆಯನ್ನು ನೀಡಲಾಗಿದೆ.)​

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: