ಕುವೆಂಪು ಕವನಗಳ ಓದು – 10ನೆಯ ಕಂತು
– ಸಿ.ಪಿ.ನಾಗರಾಜ.
ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ
( ವಾಲ್ಟ್ ವಿಟ್ಮನ್ ಕವಿಯ ವಚನ ಕವನದ ಅನುವಾದ. ವಾಲ್ಟ್ ವಿಟ್ಮನ್ ಅವರು ಅಮೆರಿಕ ದೇಶದ ಕವಿ. ಇವರ ಕಾಲ: 1819 ರಿಂದ 1892. )
ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ
ಅವಕ್ಕೆನಿತು ಶಾಂತಿ ಎನಿತು ತೃಪ್ತಿ
ನೋಡುತ್ತಾ ನಿಂತೆನೆಂದರೆ
ಘಂಟೆ ಘಂಟೆ ಹರಿದರೂ ಹೊತ್ತು ಗೊತ್ತಾಗುವುದಿಲ್ಲ
ತಮ್ಮ ಇರವಿಗೆ ಮರುಗಿ ಅವು ಕುದಿಯುವುದಿಲ್ಲ
ಬಾಯಿ ಬಡಿದುಕೊಳ್ಳುವುದಿಲ್ಲ ಪರದಾಡುವುದಿಲ್ಲ
ಇರುಳೆಲ್ಲಾ ನಿದ್ದೆಗೆಟ್ಟು
ಪಾಪಗಳಿಗಾಗಿ ಪಶ್ಚಾತ್ತಾಪ ಪಡುವುದಿಲ್ಲ
ದೇವರು ಧರ್ಮಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಾ
ನನಗೆ ರೇಜಿಗೆ ಹಿಡಿಸುವುದಿಲ್ಲ
ಅವುಗಳಲ್ಲಿ ಯಾವೊಂದಕ್ಕೂ ಅತ್ಯಾಸೆಯಿಲ್ಲ
ಯಾವೊಂದೂ ವಸ್ತುಗಳಿಗೆ ಒಡೆಯನಾಗಬೇಕೆಂದು ತಲೆಕೆಡಿಸಿಕೊಂಡಿಲ್ಲ
ಒಂದಾದರೂ ಮತ್ತೊಂದಕ್ಕೆ ಮೊಣಕಾಲು ಮಣಿಯುವುದಿಲ್ಲ
ಕಾಲಿಗೆ ಬೀಳುವುದಿಲ್ಲ
ಜೊತೆ ಇರುವವಕ್ಕಾಗಲಿ ಶತಮಾನಗಳಿಗೆ ಹಿಂದೆ ಬದುಕಿದ್ದವುಗಳಿಗಾಗಲಿ
ಯಾವೊಂದೂ ಶ್ರೀ ಶ್ರೀ ಶ್ರೀಯಾಗಿಲ್ಲ
ಹುಡುಕಿದರೂ ಮತ್ಸರದ ಅಸುಖ ದೊರೆಯುವುದಿಲ್ಲ
ಯಾವೊಂದೂ ಬಿರುದುವೊತ್ತು ಗೌರವ ಪದವಿಗೇರಿಲ್ಲ.
ಜಗತ್ತಿನ ಜೀವರಾಶಿಗಳಲ್ಲಿ ಮಾನವ ಜೀವಿಯು ಮಾತ್ರ ಪರಿಪೂರ‍್ಣವಾದ ನೆಮ್ಮದಿಯಿಲ್ಲದೆ ಜೀವನದ ಉದ್ದಕ್ಕೂ ಒಂದಲ್ಲ ಒಂದು ಬಗೆಯ ಮಾನಸಿಕ ಒಳಮಿಡಿತಗಳಿಂದ ತಲ್ಲಣಗೊಳ್ಳುತ್ತಿರುವುದನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.
“ಪರಿಪೂರ‍್ಣ ನೆಮ್ಮದಿ” ಎಂದರೆ ವ್ಯಕ್ತಿಯು ಜೀವನದಲ್ಲಿ ತನಗೆ ಬೇಕಾದುದೆಲ್ಲವನ್ನೂ ಪಡೆದುಕೊಂಡು ನೆಮ್ಮದಿಯಿಂದ ಬಾಳುತ್ತಿದ್ದೇನೆ ಎಂಬ ನಿಲುವನ್ನು ಹೊಂದಿರುವುದು.
ಪಶು+ಗಳ್+ಒಡನೆ; ಪಶು=ಹಸು/ದನ; ಒಡನೆ=ಸಂಗಡ/ಜೊತೆ; ಪಶು+ಆಗಿ+ಆದರೂ; ಬದುಕು=ಬಾಳು/ಜೀವನ; ಅವಕ್ಕೆ+ಎನಿತು; ಎನಿತು=ಎಶ್ಟು/ಯಾವ ಪ್ರಮಾಣದಲ್ಲಿ; ಶಾಂತಿ=ಜೀವನದಲ್ಲಿ ಯಾವುದೇ ಬಗೆಯ ನೋವಾಗಲಿ ಇಲ್ಲವೇ ತಳಮಳವಾಗಲಿ ಇಲ್ಲದೆ ನೆಮ್ಮದಿಯಿಂದಿರುವುದು; ತೃಪ್ತಿ=ತನಗೆ ಬೇಕಾದುದೆಲ್ಲವೂ ದೊರಕಿದೆ ಎಂಬ ಆನಂದ; ನಿಂತು+ಎನ್+ಎಂದರೆ; ಹರಿ=ಚಲಿಸು/ಉರುಳು; ಹೊತ್ತು=ಸಮಯ/ಕಾಲ; ಗೊತ್ತಾಗು=ತಿಳಿಯುವುದು;
ಇರವು=ಇರುವ ರೀತಿ/ಬಗೆ; ತಮ್ಮ ಇರವಿಗೆ=ಈಗ ತಾವು ಬದುಕುತ್ತಿರುವ ರೀತಿಗೆ;
ಮರುಗು= ”ಅಯ್ಯೋ ಹೀಗೆ ಇರುವೆನಲ್ಲ ಇಲ್ಲವೇ ನನ್ನ ಬದುಕು ಹೀಗಾಯಿತಲ್ಲ” ಎಂದು ಸಂಕಟಗೊಳ್ಳುವುದು/ತಳಮಳಗೊಳ್ಳುವುದು; ಕುದಿ=ಕೋಪದಿಂದ ಕೆರಳು/ಸಿಟ್ಟಾಗು; ಬಡಿ=ಹೊಡೆ/ತಟ್ಟು ; ಬಾಯಿ ಬಡಿದುಕೊಳ್ಳುವುದು=ಇದೊಂದು ನುಡಿಗಟ್ಟು. ವ್ಯಕ್ತಿಯು ತನಗಾದ ಸಂಕಟವನ್ನು ಹೊರಹಾಕಲು “ಅಯ್ಯಯ್ಯೋ… ಅಯ್ಯಯ್ಯಪ್ಪೋ…“ ಎಂದು ಉಚ್ಚರಿಸುತ್ತ ತನ್ನ ಕಯ್ಗಳಿಂದ ತನ್ನ ಬಾಯನ್ನು ಬಡಿದುಕೊಳ್ಳುವುದು. ವ್ಯಕ್ತಿಯ ಮಯ್ ಮನದ ಸಂಕಟದ ತೀವ್ರತೆಯನ್ನು ಈ ಬಗೆಯ ವರ‍್ತನೆಯು ಹೊರಹಾಕುತ್ತದೆ; ಪರದಾಡು=ತೊಳಲಾಡು/ಒದ್ದಾಡು/ಅಲೆದಾಡು;
ಇರುಳ್+ಎಲ್ಲಾ; ಇರುಳ್=ರಾತ್ರಿ; ನಿದ್ದೆ+ಕೆಟ್ಟು; ನಿದ್ದೆಗೆಟ್ಟು=ನಿದ್ದೆಯನ್ನು ಮಾಡಲಾಗದೆ/ನಿದ್ರೆಬಾರದೆ;
ಪಾಪ=ಕೆಟ್ಟ ನಡೆನುಡಿ; ಪಶ್ಚಾತ್ತಾಪ=ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿತುಕೊಂಡು, ಅದಕ್ಕಾಗಿ ತಾನೇ ನೊಂದುಕೊಳ್ಳುವುದು; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಪರಿಹರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು/ಶಕ್ತಿಯನ್ನು ದೇವರೆಂದು ಮಾನವ ಸಮುದಾಯ ನಂಬಿದೆ; ಧರ್ಮ=ನಿಯಮ/ಆಚಾರ/ಸಂಪ್ರದಾಯ/ಕಟ್ಟುಪಾಡು; ಜಿಜ್ಞಾಸೆ=ತಿಳಿಯುವ ಬಯಕೆ/ಪರಿಶೀಲನೆ/ಯಾವುದೇ ಬಗೆಯ ಸಂಗತಿಗಳನ್ನು ಒರೆಹಚ್ಚಿ ನೋಡುವುದು; ರೇಜಿಗೆ=ಗದ್ದಲ/ರಗಳೆ/ರಂಪ; ರೇಜಿಗೆ ಹಿಡಿಸು=ವ್ಯಕ್ತಿಯು ವಿಚಿತ್ರವಾದ ಇಲ್ಲವೇ ಅಸಹ್ಯಕರವಾದ ನಡೆನುಡಿಗಳಿಂದ ಇತರರ ಮನಸ್ಸಿಗೆ ಕಿರಿಕಿರಿಯನ್ನುಂಟುಮಾಡುವುದು;
ಯಾವ+ಒಂದಕ್ಕೂ; ಅತ್ಯಾಸೆ+ಇಲ್ಲ; ಅತ್ಯಾಸೆ=ಅತಿಯಾದ ಆಸೆ/ಬಯಸಿದ್ದೆಲ್ಲವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆ; ವಸ್ತು=ಸಾಮಗ್ರಿ/ಉಪಕರಣ; ಒಡೆಯನ್+ಆಗಬೇಕೆಂದು; ಒಡೆಯ=ಯಜಮಾನ/ದಣಿ; ತಲೆಕೆಡಿಸಿಕೊಳ್ಳುವುದು=ಇದೊಂದು ನುಡಿಗಟ್ಟು. ವ್ಯಕ್ತಿಯು ತಾನು ಆಸೆಪಟ್ಟದ್ದನ್ನು ಪಡೆಯುವುದಕ್ಕಾಗಿ ಇಲ್ಲವೇ ತನ್ನ ಬದುಕಿನಲ್ಲಿ ಉಂಟಾಗಿರುವ ಜಂಜಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನಾ ಬಗೆಗಳಲ್ಲಿ ಚಿಂತಿಸುತ್ತಿರುವುದು; ಮೊಣಕಾಲು=ಮಂಡಿಚಿಪ್ಪಿನಿಂದ ಕೆಳಗಡೆಯಿರುವ ಕಾಲು; ಮಣಿ=ಬಾಗು/ಬಗ್ಗು;
ಮೊಣಕಾಲು ಮಣಿಯುವುದು, ಕಾಲಿಗೆ ಬೀಳುವುದು=ಇವು ನುಡಿಗಟ್ಟುಗಳಾಗಿ ಬಳಕೆಯಾಗಿವೆ. ವ್ಯಕ್ತಿಯು ಹಣ, ಆಸ್ತಿ, ಆಡಳಿತದ ಗದ್ದುಗೆಯನ್ನು ಪಡೆಯುವುದಕ್ಕಾಗಿ ಇಲ್ಲವೇ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬನ ಮುಂದೆ ದೀನತೆಯಿಂದ ಕುಗ್ಗಿ ಬಾಳುವುದು/ಮತ್ತೊಬ್ಬನ ಅಡಿಯಾಳಾಗುವುದು; ಜೊತೆ ಇರುವುವು=ಈಗ ವ್ಯಕ್ತಿಯ ಜತೆಯಲ್ಲಿ ಬದುಕಿಬಾಳುತ್ತಿರುವ ಜೀವಿಗಳು; ಶತಮಾನ=ಒಂದು ನೂರು ವರುಶದ ಕಾಲಮಾನ; ಬದುಕಿ+ಇದ್ದವುಗಳಿಗೆ+ಆಗಲಿ;
ಶ್ರೀ+ಆಗಿಲ್ಲ; ಶ್ರೀ=ಮಂಗಳ ಸೂಚಕವಾದ ಪದ/ವ್ಯಕ್ತಿಯ ಹೆಸರಿನ ಮುಂದೆ ಒಲವಿನ ಸೂಚಕವಾಗಿ ಹಾಕುವ ಪದ; ಶ್ರೀ ಶ್ರೀ ಶ್ರೀಯಾಗುವುದು=ಇದೊಂದು ನುಡಿಗಟ್ಟು. ಯಾವುದೇ ಒಂದು ಜಾತಿ ಇಲ್ಲವೇ ಮತದ ಜನಸಮುದಾಯಕ್ಕೆ ಗುರುವಾಗುವುದು; ಜನರು ಒಬ್ಬ ವ್ಯಕ್ತಿಯನ್ನು ಬಹಳ ದೊಡ್ಡವನೆಂದು ಪರಿಗಣಿಸಿ ಅಪಾರವಾದ ಒಲವು ನಲಿವಿನಿಂದ ಪೂಜಿಸುತ್ತ, ಆತನ ಹೆಸರಿನ ಮುಂದೆ ಮಂಗಳ ಸೂಚಕವಾಗಿ ‘ಶ್ರೀ‘ ಎಂಬ ಪದವನ್ನು ಮೂರು ಸಾರಿ ಬಳಸುತ್ತಾರೆ. ಜಾತಿ ಇಲ್ಲವೇ ಮತದ ಹೆಸರಿನ ನೆಲೆಯಲ್ಲಿ ಈ ರೀತಿ ಒಬ್ಬನನ್ನು ಗುರುವನ್ನಾಗಿ ಮಾಡಿಕೊಂಡು, ಅವನ ಮೂಲಕ ತಮ್ಮ ಜಾತಿ/ಮತದವರನ್ನು ಜತೆಗೂಡಿಸಿ, ಸಮಾಜದ ಸಂಪತ್ತು ಮತ್ತು ನಾಡಿನ ಆಡಳಿತದ ಗದ್ದುಗೆಯು ತಮ್ಮ ಜಾತಿ/ಮತದವರಿಗೆ ದೊರೆಯುವಂತೆ ಮಾಡಿಕೊಳ್ಳುತ್ತಾರೆ;
ಹುಡುಕು=ಅರಸು/ತಡಕಾಡು; ಮತ್ಸರ=ಹೊಟ್ಟೆಕಿಚ್ಚು/ಹಗೆತನ; ಅಸುಖ=ಒಲವು ನಲಿವು ನೆಮ್ಮದಿಯಿಲ್ಲದಿರುವುದು; ಬಿರುದು+ಪೊತ್ತು; ಬಿರುದು=ಕೀರ‍್ತಿಸೂಚಕವಾಗಿ ಕೊಡುವ ಹೆಸರು/ಪ್ರಶಸ್ತಿ; ಪೊತ್ತು=ಪಡೆದು; ಬಿರುದುವೊತ್ತು=ಬಿರುದನ್ನು ಪಡೆದುಕೊಂಡು; ಗೌರವ+ಪದವಿಗೆ+ಏರಿಲ್ಲ; ಗೌರವ=ದೊಡ್ಡತನ/ಹಿರಿಮೆ ; ಪದವಿ=ಅಂತಸ್ತು/ಮನ್ನಣೆ; ಏರು=ಹತ್ತು;
ಬಿರುದುವೊತ್ತು ಗೌರವ ಪದವಿಗೇರುವುದು=ಜನಸಮುದಾಯದ ನಡುವೆ ಮಹಾ ವ್ಯಕ್ತಿಯೆಂದು ಬಿರುದನ್ನು ಪಡೆದು, ಇನ್ನುಳಿದವರಿಗಿಂತ ತಾನೇ ಉತ್ತಮನೆಂದು ಮೆರೆಯುವುದು;
ಕವಿಗೆ ಪಶುಗಳ ನೆಮ್ಮದಿಯ ಜೀವನವನ್ನು ನೋಡನೋಡುತ್ತಾ ತಾನು ಅವುಗಳಂತೆಯೇ ಬಾಳಬೇಕೆಂಬ ಆಸೆಯಾಗುತ್ತದೆ. ಅವನ್ನೇ ಕೆಲಸಮಯ ತದೇಕ ಚಿತ್ತದಿಂದ ದಿಟ್ಟಿಸಿ ನೋಡುತ್ತ, ಮಾನವ ಜೀವಿಗಳ ನಡೆನುಡಿಗಳೊಂದಿಗೆ ಪಶುಗಳ ವರ‍್ತನೆಗಳನ್ನು ಹೋಲಿಸಿ, ಅವು ಆ ಬಗೆಯಲ್ಲಿ ನೆಮ್ಮದಿಯಿಂದಿರಲು ಕಾರಣವಾಗಿರುವ ಸಂಗತಿಗಳನ್ನು ಒರೆಹಚ್ಚಿ ನೋಡುತ್ತಾ, ಪಶುಗಳ ಬದುಕಿನಲ್ಲಿ ಇಲ್ಲದ, ಆದರೆ ಮಾನವರ ಬದುಕಿನಲ್ಲಿ ಕಂಡುಬರುವ ಸಂಗತಿಗಳನ್ನು ನಿರೂಪಿಸುತ್ತಾನೆ.
ಪಶುಗಳ ನೆಮ್ಮದಿಯ ಬದುಕಿಗೂ ಮತ್ತು ಮಾನವರ ನೆಮ್ಮದಿಯಿಲ್ಲದ ಬದುಕಿಗೂ ಕಾರಣವೇನೆಂದರೆ ಮಾನವರೇ ಕಟ್ಟಿಕೊಂಡಿರುವ ಕುಟುಂಬ, ಜಾತಿ, ಮತ, ದೇಗುಲ, ಆಸ್ತಿಯ ಹಕ್ಕು, ಆಡಳಿತದ ಗದ್ದುಗೆ, ಶಾಲೆ, ನ್ಯಾಯಾಲಯ ಮುಂತಾದ ಸಾಮಾಜಿಕ ಒಕ್ಕೂಟಗಳು. ಈ ಬಗೆಯ ಒಕ್ಕೂಟಗಳು ಪಶುಗಳ ಪಾಲಿಗೆ ಇಲ್ಲ. ಪಶುಗಳು ನಿಸರ‍್ಗದ ನಡುವೆ ಬೆತ್ತಲೆಯಾಗಿ ಹುಟ್ಟಿ, ಬೆತ್ತಲೆಯಾಗಿಯೇ ಅಂದರೆ ಮಯ್ ಮೇಲೆ ಬಟ್ಟೆಯನ್ನು ತೊಡದೆ ಬಾಳಿ ಅಳಿಯುತ್ತವೆ. ಬದುಕಿನ ಉದ್ದಕ್ಕೂ ತಮ್ಮ ಹೊಟ್ಟೆಯ ಹಸಿವು ಮತ್ತು ಕಾಮದ ಬಯಕೆಯನ್ನು ಹಿಂಗಿಸಿಕೊಳ್ಳುತ್ತ, ಹಿಂದಿನ ದಿನಗಳಲ್ಲಿ ನಡೆದ ಯಾವೊಂದು ಪ್ರಸಂಗಗಳ ನೆನಪಿನ ತಾಕಲಾಟವಿಲ್ಲದೆ, ಮುಂದಿನ ದಿನಗಳಲ್ಲಿ ಏನಾಗುವುದೋ ಎನ್ನುವ ಆತಂಕವಿಲ್ಲದೆ ವರ‍್ತಮಾನದಲ್ಲಿ ಬಾಳುತ್ತಿರುತ್ತವೆ. ಆದರೆ ಮಾನವರ ಮನಸ್ಸು ಮಾತ್ರ ಹಿಂದಿನ, ಇಂದಿನ ಮತ್ತು ಮುಂದಿನ ಈ ಮೂರು ಕಾಲಗಳಲ್ಲಿಯೂ ಎಡೆಬಿಡದೆ ತುಯ್ದಾಡುತ್ತಿರುವುದರಿಂದ, ನೆಮ್ಮದಿಯೆಂಬುದು ಮಾನವ ಸಮುದಾಯದ ಪಾಲಿಗೆ ಇಲ್ಲವಾಗಿದೆ.
ನಿಸರ‍್ಗದ ನೆಲೆಯಲ್ಲಿರುವ ಸಾವಿರಾರು ಬಗೆಯ ಪ್ರಾಣಿ ಹುಳ ಹುಪ್ಪಟೆ ಹಕ್ಕಿಗಳಂತೆಯೇ ಮಾನವ ಜೀವಿಯು ಒಂದು ಬಗೆಯ ಪ್ರಾಣಿಯಾಗಿದ್ದರೂ, ತಾನೇ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳಿಂದಾಗಿ ಎರಡು ನೆಲೆಗಳಲ್ಲಿ ಬಾಳುತ್ತಿದ್ದಾನೆ. ಇತ್ತ ನಿಸರ‍್ಗದ ನೆಲೆಯಲ್ಲಿ ಕೇವಲ ಪ್ರಾಣಿಯಾಗಿದ್ದರೆ, ಅತ್ತ ಸಾಮಾಜಿಕ ನೆಲೆಯಲ್ಲಿ ಸಾಮಾಜಿಕ ಪ್ರಾಣಿಯಾಗಿದ್ದಾನೆ. ಆದ್ದರಿಂದಲೇ ಬದುಕಿನ ಉದ್ದಕ್ಕೂ ಮಾನವ ಜೀವಿಯ ಮಯ್ ಮನಸ್ಸು ನಿಸರ‍್ಗ ಸಹಜವಾದ ಕಾಮನೆಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿ, ಇಬ್ಬಗೆಯ ತಾಕಲಾಟಗಳಿಂದ ಪರಿತಪಿಸುತ್ತಾ, ಪರಿಪೂರ‍್ಣ ನೆಮ್ಮದಿಯನ್ನು ಪಡೆಯಲಾಗದೆ ತೊಳಲಾಡುತ್ತಿದೆ.
ಎಲ್ಲ ಜೀವಿಗಳಂತೆಯೇ ಮೊದಲು ಅಲೆಮಾರಿಯಾಗಿ ಆಹಾರದ ಸಂಗ್ರಹಣೆ ಮತ್ತು ಬೇಟೆಯಿಂದ ಬದುಕನ್ನು ನಡೆಸುತ್ತಿದ್ದ ಮಾನವ ಸಮುದಾಯ ತುಸು ಹೆಚ್ಚು ಕಡಿಮೆ ಪ್ರಾಣಿಗಳಂತೆಯೇ ಜೀವನವನ್ನು ನಡೆಸುತ್ತಿತ್ತು. ಆಗ ಯಾವುದೇ ಬಗೆಯ ಮೇಲು ಕೀಳು ಎಂಬ ಅಸಮಾನತೆಯು ಮಾನವ ಸಮುದಾಯದ ಬುಡಕಟ್ಟುಗಳಲ್ಲಿ ಇರಲಿಲ್ಲ. ಎಂದಿನಿಂದ ಬೇಸಾಯವನ್ನು ಮಾಡತೊಡಗಿ ಮಾನವ ಸಮಾಜ ಎಂಬುದು ರೂಪುಗೊಂಡಿತೋ ಅಂದಿನಿಂದ ಮಾನವ ಸಮುದಾಯದ ಬದುಕಿನ ರೀತಿನೀತಿಗಳು ಬದಲಾಗತೊಡಗಿದವು. ಕಾಲಕ್ರಮೇಣ ಕುಟುಂಬ ರಚನೆ ಮತ್ತು ಆಸ್ತಿಯ ಹಕ್ಕಿನ ವ್ಯವಸ್ತೆಯು ಜಾರಿಗೆ ಬರುತ್ತಿದ್ದಂತೆಯೇ, ಅವನ್ನು ಕಾಪಾಡಿಕೊಳ್ಳುವುದಕ್ಕಾಗಿ ಜಾತಿ, ಮತ, ದೇವರುಗಳ ಪರಿಕಲ್ಪನೆಯು ದೊಡ್ಡದಾಗಿ ಬೆಳೆದು ವರ‍್ಣ ತಾರತಮ್ಯ, ಜಾತಿ/ಮತಗಳ ತಾರತಮ್ಯ, ಲಿಂಗ ತಾರತಮ್ಯ ಮತ್ತು ವರ‍್ಗ ತಾರತಮ್ಯಗಳು ನೆಲೆಗೊಂಡು ಎಲ್ಲ ಬಗೆಯ ವಂಚನೆ, ಅತ್ಯಾಚಾರ, ಕೊಲೆ ಸುಲಿಗೆಯ ನಡೆನುಡಿಗಳು ಮಾನವ ಸಮುದಾಯದ ಜೀವನದಲ್ಲಿ ತಲೆದೋರಿದವು.
ಜಗತ್ತಿನಲ್ಲಿರುವ ಜೀವಿಗಳಲ್ಲಿ ಮಾನವ ಜೀವಿಯನ್ನು ಹೊರತುಪಡಿಸಿದರೆ, ಇನ್ನುಳಿದ ಜೀವಿಗಳೆಲ್ಲವೂ ಸ್ವಾವಲಂಬಿಗಳಾಗಿಯೇ ಬಾಳುತ್ತಿವೆ. ಆದರೆ ಮಾನವ ಜೀವಿ ಮಾತ್ರ ಹುಟ್ಟಿನಿಂದ ಸಾವಿನ ತನಕ ತನ್ನ ಬದುಕಿನುದ್ದಕ್ಕೂ ಒಂದಲ್ಲ ಒಂದು ಬಗೆಯಲ್ಲಿ ಪರಾವಲಂಬಿಯಾಗಿರುತ್ತಾನೆ. ಇದರಿಂದಾಗಿ ಯಾವುದೇ ಒಬ್ಬ ವ್ಯಕ್ತಿಯ ಬದುಕಿನ ಆಗುಹೋಗುಗಳ ಮೇಲೆ ಅವನು ಅವಲಂಬಿಸಿರುವ ಇಲ್ಲವೇ ಅವನನ್ನು ಅವಲಂಬಿಸಿರುವ ವ್ಯಕ್ತಿಗಳ ಬದುಕಿನ ಒಳಿತು ಕೆಡುಕುಗಳು ಪರಿಣಾಮ ಬೀರುವುದರಿಂದ ಪರಿಪೂರ‍್ಣವಾದ ನೆಮ್ಮದಿಯಿಂದ ಮಾನವ ಜೀವಿಯು ಬಾಳಲು ಆಗುತ್ತಿಲ್ಲ.
( ಚಿತ್ರಸೆಲೆ : karnataka.com )
ಇತ್ತೀಚಿನ ಅನಿಸಿಕೆಗಳು