ಗುಹೆಗಳ ಆಗರ ಮೇಗಾಲಯ

– .

ಮೇಗಾಲಯದ ಗುಹೆಗಳು

ಗುಹೆಗಳ ನೆಲೆಬೀಡು ಎಂದೇ ಪ್ರಕ್ಯಾತವಾಗಿರುವ, ಸದಾ ಮೋಡದ ಮುಸಕಿನಲ್ಲಿರುವ ರಾಜ್ಯವೆಂದರೆ ಅದು ಮೇಗಾಲಯ. ಈ ರಾಜ್ಯದಲ್ಲಿ ಸರಿ ಸುಮಾರು 1650 ಗುಹೆಗಳಿವೆ ಎಂದು ಅಂದಾಜಿಸಲಾಗಿದೆ. ಇಶ್ಟು ದೊಡ್ಡ ಪ್ರಮಾಣದಲ್ಲಿರುವ ಗುಹೆಗಳಲ್ಲಿ, ಒಂದು ಸಾವಿರ ಗುಹೆಗಳ ಬಾಗಶಹ ಅತವಾ ಸಂಪೂರ‍್ಣ ಮಾಹಿತಿ ಲಬ್ಯವಿದ್ದು, ಅವುಗಳಲ್ಲಿ ಸಮೀಕ್ಶೆಗೊಳಪಡಿಸಿ ಪರಿಶೋದಿಸಲಾದ ಗುಹೆಗಳ ಒಟ್ಟು ಉದ್ದ 491 ಕಿ.ಮೀ. ಗಳಶ್ಟಾಗಿದೆ. ಇಲ್ಲಿರುವ ಗುಹೆಗಳಲ್ಲಿ ಹಲವು ಗುಹೆಗಳು ಇನ್ನೂ ಹುಡುಕಾಟಕ್ಕೊಳಪಡಲು ಕಾಯುತ್ತಿವೆ ಎಂಬುದು ಒಂದು ಕುತೂಹಲಕಾರಿಯಾದ ಸಂಗತಿಯಾಗಿದೆ. ಮೇಗಾಲಯದ ಚಿರಾಪುಂಜಿ, ಶೆಲ್ಲಾ, ಪೈನುರ‍್ಸ್ಲಾ, ನೋಂಗ್ಜ್ರಿ , ಮಾವ್ಸಿನ್ರಾಮ್ ಮತ್ತು ಲ್ಯಾಂಗ್ರಿನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಗುಹೆಗಳಲ್ಲಿ ಕೇವಲ ಶೇಕಡಾ ಐದರಶ್ಟನ್ನು ಮಾತ್ರ ಪೂರ‍್ಣವಾಗಿ ಪರಿಶೋದಿಸಲಾಗಿದೆ.

ದೇಶದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಪ್ರಕ್ಯಾತಿ ಹೊಂದಿರುವ, ಚಿರಾಪುಂಜಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಗುಹೆಯೊಂದು ವಿಶ್ವದಲ್ಲೇ ಅತ್ಯಂತ ಉದ್ದದ ಮರಳುಗಲ್ಲಿನ ಗುಹೆಯಾಗಿದೆ ಎಂಬ ವಿಶಯ ಬೆಳಕಿಗೆ ಬಂದಿದೆ. ಈ ಗುಹೆಯ ಹೆಸರೇ ‘ಕ್ರೆಮ್ ಪುರಿ‘ ಮತ್ತು ಇದರ ಉದ್ದ ಸರಿ ಸುಮಾರು 24.583 ಕಿ.ಮೀ. ಆಗಿದೆ. ಇದು ‘ಮೌಂಟ್ ಎವರೆಸ್ಟ್’ ಪರ‍್ವತದ ಎತ್ತರಕ್ಕಿಂತ ಮೂರು ಪಟ್ಟು ಉದ್ದವಾಗಿದೆ. ಕ್ರೆಮ್ ಪುರಿಯಲ್ಲಿ ಕೆಲವು ಡೈನೋಸಾರ್ ಪಳೆಯುಳಿಕೆಗಳು ದೊರೆತಿದ್ದು, ಇವುಗಳ ಆದಾರದ ಮೇಲೆ ಈ ಗುಹೆಯು ಸರಿ ಸುಮಾರು 66-76 ದಶಲಕ್ಶ ವರ‍್ಶಗಳ ಹಿಂದಿನದಾಗಿರಬಹುದು ಎಂದು ಊಹಿಸಲಾಗಿದೆ.

ಕ್ರೆಮ್ ಪುರಿ ಗುಹೆಯ ಹಿನ್ನೆಲೆ

ಮೇಗಾಲಯದ ಕಾಸಿ ನುಡಿಯಲ್ಲಿ ಕ್ರೆಮ್ ಎಂದರೆ ಗುಹೆ ಎಂಬ ಹುರುಳಿದೆ. ಈ ಗುಹೆಯು ಮೇಗಾಲಯದ ‘ಪೂರ‍್ವ ಕಾಸಿ ಹಿಲ್ಸ್’ ಜಿಲ್ಲೆಯಲ್ಲಿರುವ ಮಾವ್ಸಿನ್ರಾಮ್ ಪ್ರದೇಶದ ಲೈಟ್ಸೋಹಮ್ ಗ್ರಾಮದ ಬಳಿಯಿದೆ. ಮೇಗಾಲಯ ಸಾಹಸಿಗಳ ತಂಡ (Meghalaya Adventurers’ Association – MAA) ಕೈಗೊಂಡ 25 ದಿನಗಳ ಕೂಲಂಕುಶ ಅದ್ಯಯನದ ಪರಿಶ್ರಮದಿಂದ 2016 ರಲ್ಲಿ ಈ ಗುಹೆಯ ಸರಿಯಾದ ಉದ್ದವನ್ನು ಕಂಡುಕೊಳ್ಳಲಾಯಿತು. ಈ ಗುಹೆಯಲ್ಲಿ ನಡೆದ ಸಂಶೋದನೆಯ ಸಮಯದಲ್ಲಿ ದೈತ್ಯಾಕಾರದ ಡೈನೋಸಾರ್ ಪಳೆಯುಳಿಕೆಗಳು ದೊರೆತಿದ್ದು, ಇದು ಮೊಸಾಸಾರಸ್ ಇರಬಹುದೆಂಬುದು ತಜ್ನರ ಅನಿಸಿಕೆಯಾಗಿದೆ. ‘ಮೊಸಾಸಾರಸ್’ ಎಂಬುದು ಸರಿ ಸುಮಾರು 66 ದಶಲಕ್ಶ ವರ‍್ಶಗಳ ಹಿಂದೆ ಬೂಮಿಯ ಮೇಲೆ ವಾಸಿಸುತಿದ್ದ ಮಾಂಸಾಹಾರಿ ಜಲಚರ ಹಲ್ಲಿಯೆಂದು ಗುರುತಿಸಲಾಗಿದೆ. ಕ್ರೆಮ್ ಪುರಿ ಗುಹೆಯ ಅನ್ವೇಶಣೆಗೂ ಮುನ್ನ, ವೆನೆಜುವೆಲಾದ ಎಡೋ ಜುಲಿಯಾದಲ್ಲಿನ ‘ಕ್ಯೂವಾ ಡೆಲ್ ಸಮನ್’ ಗುಹೆಯು ಮರಳುಗಲ್ಲಿನಿಂದ ರಚಿತವಾದ ಅತಿ ಉದ್ದನೆಯ ಗುಹೆಯೆಂಬುದಾಗಿ ವಿಶ್ವ ದಾಕಲೆ ಹೊಂದಿತ್ತು. ಕ್ರೆಮ್ ಪುರಿಯು ಇದಕ್ಕಿಂತ ಸರಿ ಸುಮಾರು 6 ಕಿ.ಮೀ. ನಶ್ಟು ಹೆಚ್ಚು ಉದ್ದವಿದೆ.

ಮೇಗಾಲಯವು ಜಗತ್ತಿನಲ್ಲಿಯೇ ಅತಿ ಉದ್ದನೆಯ ಗುಹೆಗಳ ಆಲಯವಾಗಿದೆ. ಜೈನ್ತಿಯಾ ಹಿಲ್ಸ್ ಪ್ರದೇಶದಲ್ಲಿರುವ ಕ್ರೆಮ್ ಲಿಯಾಟ್ ಪ್ರಹ್-ಉಮಿಮ್-ಲ್ಯಾಬಿಟ್ ಗುಹೆಯು 31 ಕಿ.ಮೀ. ಉದ್ದವಿರುವ ಸುಣ್ಣದ ಕಲ್ಲಿನ ಗುಹೆಯಾಗಿದೆ. ಉದ್ದನೆಯ ಗುಹೆಗಳ ಪಟ್ಟಿಯಲ್ಲಿ ಕ್ರೆಮ್ ಪುರಿಯು ಎರಡನೇ ಸ್ತಾನದಲ್ಲಿದೆ. 1990 ರಲ್ಲಿ ರೂಪುಗೊಂಡ, ಶಿಲ್ಲಾಂಗ್ ಮೂಲದ ಮೇಗಾಲಯ ಸಾಹಸಿ ಗುಂಪು, ಇಲ್ಲಿನ ಗುಹೆಗಳ ಹುಡುಕಾಟದಲ್ಲಿ ತೊಡಗಿಕೊಂಡಿದೆ. ಇಲ್ಲಿ ಇನ್ನೂ ಹಲವಾರು ಗುಹೆಗಳಿದ್ದು, ಅವುಗಳನ್ನು ಪೂರ‍್ಣ ಪ್ರಮಾಣದಲ್ಲಿ ಹುಡುಕಲಾಗಿಲ್ಲ ಮತ್ತು ಮುಂದಿನ ದಿನಗಳಲ್ಲಿ ಈಗ ಇರುವ ಗುಹೆಗಳಿಗಿಂತ ಉದ್ದನೆಯ ಗುಹೆಗಳು ಗೋಚರಿಸಿದರೂ ಗೋಚರಿಸಬಹುದು. ಯಾರಿಗೆ ಗೊತ್ತು? ಇಳೆಯ ಒಡಲಲ್ಲಿ ಇನ್ನೂ ಏನೇನು ಅಡಗಿದೆಯೋ?

(ಮಾಹಿತಿ ಮತ್ತು ಚಿತ್ರ ಸೆಲೆ: indiatoday.in, indiatimes.com, outlookindia.com, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: