ಕುವೆಂಪು ಕವನಗಳ ಓದು – 13ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ನಾನು ಕವಿಯಲ್ಲ

ನನ್ನ ಕೃತಿ ಕಲೆಯಲ್ಲ
ನಾನು ಕವಿಯಲ್ಲ
ಕಲೆಗಾಗಿ ಕಲೆಯೆಂಬ
ಹೊಳ್ಳು ನೆಲೆಯಿಲ್ಲ
ಮೆಚ್ಚುಗೆಯೆ ನನಗೆ ಕೊಲೆ
ಬದುಕುವುದೆ ನನಗೆ ಬೆಲೆ
ಸಾಧನೆಯ ಛಾಯೆ ಕಲೆ
ವಿಶ್ವಾತ್ಮವದಕೆ ನೆಲೆ
ನಿನಗದು ಚಮತ್ಕಾರ
ನನಗೊ ಸಾಕ್ಷಾತ್ಕಾರ
ಮೌನದಿಂದನುಭವಿಸು
ಕೋ ನಮಸ್ಕಾರ
ಕಲೆಯೆಂದು ಹೊಗಳುವಡೆ
ಕೋಟಿ ಧಿಕ್ಕಾರ.

ಕಾವ್ಯವೆಂಬ ಕಲೆಯು ಜನಮನದಲ್ಲಿ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಮೂಡಿಸುವಂತಹ ಸಂಗತಿಗಳನ್ನು ಒಳಗೊಂಡಿರಬೇಕು. ಇಲ್ಲದಿದ್ದರೆ ಅದು ಕಾವ್ಯವೂ ಅಲ್ಲ; ಅದನ್ನು ರಚಿಸಿದವನು ಕವಿಯೂ ಅಲ್ಲ ಎಂಬ ನಿಲುವನ್ನು ಈ ಕವನದಲ್ಲಿ ವ್ಯಕ್ತಪಡಿಸಲಾಗಿದೆ.

ಕ್ರಿ.ಶ.ಹತ್ತೊಂಬತ್ತನೆಯ ಶತಮಾನದಲ್ಲಿದ್ದ ಪ್ರೆಂಚ್ ಬರಹಗಾರ Theophile Gautier ಎಂಬುವರು ತಾವು ರಚಿಸಿದ ಪುಸ್ತಕವೊಂದರ ಮುನ್ನುಡಿಯಲ್ಲಿ ಕಲೆಯ ತತ್ತ್ವವನ್ನು ಕುರಿತು ಹೇಳಿದ “ I’art pour I’art “ ಎನ್ನುವ ಮಾತುಗಳು ಇಂಗ್ಲಿಶಿನಲ್ಲಿ “ Art for art’s sake “ ಮತ್ತು ಕನ್ನಡದಲ್ಲಿ “ ಕಲೆಗಾಗಿ ಕಲೆ “ ಎಂದು ಚಲಾವಣೆಗೆ ಬಂದಿವೆ. ಜಗತ್ತಿನ ಕಲಾರಂಗದಲ್ಲಿ ಅಂದಿನಿಂದ ಇಂದಿನ ತನಕ ಈ ಮಾತುಗಳನ್ನು ಒಪ್ಪುವ ಇಲ್ಲವೇ ನಿರಾಕರಿಸುವ ವಾದ ವಿವಾದಗಳು ನಡೆಯುತ್ತಲೇ ಇವೆ.

1. “ ಕಲೆಗಾಗಿ ಕಲೆ ” ಎಂಬ ತತ್ತ್ವ.”

ಕಲೆಯ ಪ್ರಕಾರಗಳಾದ ಕಾವ್ಯ, ನಾಟಕ, ಚಿತ್ರ, ಶಿಲ್ಪ, ನಾಟ್ಯ ಮುಂತಾದವುಗಳಲ್ಲಿ ಲೋಕದ ಜನಸಮುದಾಯಕ್ಕೆ ನೀತಿಯನ್ನು ಹೇಳುವ, ಜನಮನದಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಿವನ್ನು ಮೂಡಿಸುವ ಇಲ್ಲವೇ ಜನರಿಗೆ ತಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು ಬೇಕಾದ ಸಂದೇಶವನ್ನು ನೀಡುವ ಸಂಗತಿಗಳು ಇರಬೇಕಾದ್ದಿಲ್ಲ. ಏಕೆಂದರೆ ಕಲೆ ಎನ್ನುವುದು ವ್ಯಕ್ತಿಗತವಾದ ಜೀವನದ ಅನುಬವ, ಪಾಂಡಿತ್ಯ ಮತ್ತು ಪ್ರತಿಬೆಯ ಒಗ್ಗೂಡುವಿಕೆಯಿಂದ ಹೆಣೆದುಕೊಂಡು ರಚನೆಗೊಂಡಿರುತ್ತದೆ. ಕಲಾಕಾರನು ತನ್ನ ಮಯ್ ಮನದಲ್ಲಿ ಮಿಡಿಯುವಂತಹ ಅಂತರಂಗದ ಒಳಮಿಡಿತಗಳಿಗೆ ಕಲೆಯ ರೂಪವನ್ನು ನೀಡುತ್ತಾನೆ. ಆದ್ದರಿಂದ ವ್ಯಕ್ತಿಗತವಾಗಿ ಹೊರಹೊಮ್ಮುವ ಕಲೆಯನ್ನು ಕೇವಲ ಕಲೆಯಾಗಿ ನೋಡಿ ಆನಂದಿಸಬೇಕೆ ಹೊರತು ಅದರಲ್ಲಿ ಲೋಕಕ್ಕೆ ಪ್ರಯೋಜನಕಾರಿಯಾಗುವ ಇಲ್ಲವೇ ಉಪದೇಶವನ್ನು ನೀಡುವಂತಹ ಸಂಗತಿಗಳನ್ನು ಅರಸಬಾರದು.

2. ” ಕಲೆಗಾಗಿ ಕಲೆ “ ಎಂಬ ತತ್ತ್ವದ ನಿರಾಕರಣೆ:

ಕಲೆ ಎಂಬುದು ಜನಸಮುದಾಯದ ಮಯ್ ಮನಕ್ಕೆ ಮುದವನ್ನು ನೀಡುವಂತೆಯೇ ಅರಿವನ್ನು ನೀಡಿ, ಜನಸಮುದಾಯದ ಬದುಕಿನಲ್ಲಿ ಸಾಮಾಜಿಕ ಮತ್ತು ರಾಜಕೀಯ ಎಚ್ಚರವನ್ನು ಮೂಡಿಸಬೇಕು. ಅರಿವು ಮತ್ತು ಎಚ್ಚರದ ಜತೆಜತೆಗೆ ಸಮಾಜದಲ್ಲಿರುವ ಎಲ್ಲ ಬಗೆಯ ಕೆಡುಕನ್ನು ತೊಡೆದುಹಾಕುವ ಅರಿವಿನ ಹತಾರವಾಗಿ ಕಲೆಯು ಬಳಕೆಯಾಗಬೇಕು.

“ ಅರಿವು “ ಎಂದರೆ ಜನಸಮುದಾಯದ ಜೀವನದಲ್ಲಿ ಯಾವುದು ವಾಸ್ತವ-ಯಾವುದು ಮಾನವ ನಿರ‍್ಮಿತ; ಯಾವುದು ಸರಿ-ಯಾವುದು ತಪ್ಪು; ಯಾವ ಬಗೆಯ ನಡೆನುಡಿಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಉಂಟುಮಾಡುವುದರ ಜತೆಗೆ ಸಹಮಾನವರಿಗೂ ಒಳಿತನ್ನುಂಟುಮಾಡುತ್ತವೆ ಇಲ್ಲವೇ ತನಗೆ ಮತ್ತು ತನ್ನ ಕುಟುಂಬಕ್ಕೆ ಮಾತ್ರ ಒಳಿತನ್ನುಂಟುಮಾಡಿ ಸಮಾಜಕ್ಕೆ ಕೇಡನ್ನು ಬಗೆಯುತ್ತವೆ ಎಂಬುದನ್ನು ತಿಳಿಯುವುದು.

“ ಸಾಮಾಜಿಕ ಮತ್ತು ರಾಜಕೀಯ ಎಚ್ಚರ ” ಎಂದರೆ ಜನಸಮುದಾಯದ ಬದುಕನ್ನು ನಿಯಂತ್ರಿಸಿ ನಡೆಸುತ್ತಿರುವ ಸಾಮಾಜಿಕ ರಚನೆಯಲ್ಲಿರುವ ಮತ್ತು ರಾಜಕೀಯ ಆಡಳಿತದ ವ್ಯವಸ್ತೆಯಲ್ಲಿರುವ ಒಳಿತು ಕೆಡುಕಿನ ಸಂಗತಿಗಳನ್ನು ಗುರುತಿಸಿ, ಕೆಡುಕನ್ನು ತೊಡೆದುಹಾಕಿ, ಒಳಿತನ್ನು ನೆಲೆಗೊಳಿಸಲು ಕ್ರಿಯಾಶೀಲರಾಗುವುದು.

( ಕವಿ=ಕಾವ್ಯವನ್ನು ರಚಿಸುವವನು; ಕೃತಿ=ಕಾವ್ಯ; ಕಲೆ+ಅಲ್ಲ; ಕಲೆ=ವ್ಯಕ್ತಿಯ ಮನದಲ್ಲಿ ಮೂಡುವ ಕಲ್ಪನೆ ಮತ್ತು ಚಿಂತನೆಯಿಂದ ಜತೆಗೂಡಿ, ನೋಡುವವರ ಮತ್ತು ಕೇಳುವವರ ಕಣ್ಮನಗಳನ್ನು ಸೆಳೆಯುವ ರೀತಿಯಲ್ಲಿ ಕುಶಲತೆಯಿಂದ ರಚನೆಗೊಂಡಿರುವ ಇಲ್ಲವೇ ಹೊರಹೊಮ್ಮಿರುವ ಕಾವ್ಯ, ನಾಟಕ, ಚಿತ್ರ, ಶಿಲ್ಪ , ನಾಟ್ಯವನ್ನು ಕಲೆಗಳೆಂದು ಕರೆಯುತ್ತಾರೆ;

ಕಲೆಗೆ+ಆಗಿ; ಕಲೆ+ಎಂಬ; ಎಂಬ=ಎನ್ನುವ; ಹೊಳ್ಳು=ಒಳಗೆ ಗಟ್ಟಿಯಾದ ಕಾಳಿಲ್ಲದ ಜಳ್ಳು ದಾನ್ಯ/ಹೊಟ್ಟು/ತಿರುಳಿಲ್ಲದ್ದು; ನೆಲೆ+ಇಲ್ಲ; ನೆಲೆ=ನಿಲುವು;

ಕಲೆಗಾಗಿ ಕಲೆಯೆಂಬ ಹೊಳ್ಳು ನೆಲೆಯಿಲ್ಲ=ಕಲೆಗಾಗಿ ಕಲೆಯೆಂಬ ಮಾತನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಈ ನಿಲುವು ಪೊಳ್ಳುತನದಿಂದ ಕೂಡಿದೆ. ನೋಡುವ ಕಣ್ಮನಗಳಿಗೆ ಆನಂದದ ಜತೆಜತೆಗೆ ವ್ಯಕ್ತಿಯ ಮನದಲ್ಲಿ ಅರಿವು ಮತ್ತು ಎಚ್ಚರವನ್ನು ಮೂಡಿಸದ ಕಲೆಯು ಕಲೆಯೇ ಅಲ್ಲ;

ಮೆಚ್ಚುಗೆ=ಹೊಗಳಿಕೆ/ಕೊಂಡಾಡುವುದು; ಕೊಲೆ=ಹಿಂಸೆ/ಪೀಡೆ/ಸಾಯಿಸುವುದು; ಬದುಕು=ಜೀವನ/ಬಾಳ್ವೆ; ಬೆಲೆ=ಹಿರಿಮೆ/ದೊಡ್ಡದು;

ಮೆಚ್ಚುಗೆಯೆ ನನಗೆ ಕೊಲೆ ಬದುಕುವುದೆ ನನಗೆ ಬೆಲೆ=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ಕಾವ್ಯರಚನೆಯಲ್ಲಿನ ಚಂದೋ ವಿನ್ಯಾಸ, ಪದಗಳ ಮೋಡಿ ಮತ್ತು ತಿರುಳಿನ ಸೊಗಸು, ಪಾತ್ರಗಳ ಚಿತ್ರಣ ಮತ್ತು ಬಹುಬಗೆಯ ಸನ್ನಿವೇಶಗಳ ಮನೋಹರತೆಯನ್ನು ಕಂಡು, ಓದಿ ನೋಡಿ ಇಲ್ಲವೇ ಕೇಳಿ ತಿಳಿದು ಮೆಚ್ಚಿ ಕೊಂಡಾಡುವುದಕ್ಕಿಂತ ಮಿಗಿಲಾಗಿ, ಕವಿಯ ಬರಹದಿಂದ ಒಳ್ಳೆಯ ಅರಿವನ್ನು ವ್ಯಕ್ತಿಯು ಪಡೆದು ತನ್ನ ಬದುಕಿನ ಜತೆಜತೆಗೆ ಸಹಮಾನವರ ಬದುಕನ್ನು ಉತ್ತಮ ಪಡಿಸುವಂತೆ ಬಾಳಬೇಕೆಂಬ ಪ್ರೇರಣೆಯನ್ನು ಹೊಂದಿ ಕ್ರಿಯಾಶೀಲನಾದರೆ, ಅದು ಕವಿಗೆ ಮತ್ತು ಕಾವ್ಯಕ್ಕೆ ದೊಡ್ಡ ಬೆಲೆಯನ್ನು ನೀಡಿದಂತಾಗುತ್ತದೆ. ಕವಿಗಿಂತ ಕಾವ್ಯ ದೊಡ್ಡದು. ಕಾವ್ಯಕ್ಕಿಂತ ಬದುಕು ದೊಡ್ಡದು. ಕವಿಯ ಹೆಸರನ್ನು ಹೊತ್ತು ಮೆರೆಸುವ ಬದಲು ಕಾವ್ಯದಲ್ಲಿ ಕವಿಯು ಕಣ್ಣಿಗೆ ಕಟ್ಟುವಂತೆ ಮನಮುಟ್ಟುವಂತೆ ಹೇಳಿರುವ ಒಳಿತಿನ ಸಂಗತಿಗಳನ್ನು ವ್ಯಕ್ತಿಯು ಅರಿತು ಬಾಳುವುದು ಎಲ್ಲಕ್ಕಿಂತ ದೊಡ್ಡದು ಎಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ.

ಸಾಧನೆ=ಪರಿಶ್ರಮದಿಂದ ಏನನ್ನಾದರೂ ಹೊಂದುವುದು/ಪಡೆಯುವುದು; ಛಾಯೆ=ನೆರಳು/ಪ್ರತಿಬಿಂಬ; ಸಾಧನೆಯ ಛಾಯೆ ಕಲೆ=ನಿಸರ‍್ಗದಲ್ಲಿ ಕಂಡುಬರುವ ನೋಟ ಮತ್ತು ಉಂಟಾಗುವ ಕ್ರಿಯೆಗಳು ಹಾಗೂ ಜನಸಮುದಾಯದ ಬದುಕಿನ ಪ್ರಸಂಗಗಳು ಕಲೆಯ ರೂಪದಲ್ಲಿ ಚಿತ್ರಣಗೊಳ್ಳುತ್ತವೆ;

ವಿಶ್ವ+ಆತ್ಮ+ಅದಕೆ; ವಿಶ್ವ=ಜಗತ್ತು/ಪ್ರಪಂಚ; ಆತ್ಮ=ಮನಸ್ಸು/ಒಳಗೊಂಡಿರುವುದು; ನೆಲೆ=ಆಶ್ರಯ/ಜಾಗ; ವಿಶ್ವಾತ್ಮವದಕೆ ನೆಲೆ=ಕಲೆಯ ಎಲ್ಲ ಪ್ರಕಾರಗಳ ರಚನೆಗೆ ನಿಸರ‍್ಗ ಮತ್ತು ಜನಸಮುದಾಯದ ಬದುಕು ಮೂಲ ಪ್ರೇರಣೆಯಾಗಿದೆ;

ಸಾಧನೆಯ ಛಾಯೆ ಕಲೆ ವಿಶ್ವಾತ್ಮವದಕೆ ನೆಲೆ=ಕಲಾಕಾರನು ನಿಸರ‍್ಗದಲ್ಲಿ ಮತ್ತು ಸಕಲ ಜೀವರಾಶಿಗಳ ಬದುಕಿನಲ್ಲಿ ತಾನು ಕಂಡುಂಡ ರುದ್ರ ಮನೋಹರವಾದ ನೋಟಗಳನ್ನು ಮತ್ತು ಒಳಿತು ಕೆಡುಕಿನ ಸಂಗತಿಗಳೆಲ್ಲವನ್ನೂ ಮತ್ತೊಮ್ಮೆ ತನ್ನ ಮನದಲ್ಲಿ ಒರೆಹಚ್ಚಿನೋಡಿ ಕಲೆಯನ್ನು ರಚಿಸುತ್ತಾನೆ. ಆದ್ದರಿಂದಲೇ ಪ್ರತಿಯೊಂದು ಕಲೆಯು ಲೋಕಜೀವನದ ಪ್ರತಿಬಿಂಬವಾಗಿರುತ್ತದೆ;

ನಿನಗೆ+ಅದು; ಅದು=ಕಲೆಯ ಪ್ರಕಾರಗಳು; ಚಮತ್ಕಾರ=ನೋಡುವವರ ಮನದಲ್ಲಿ ಅಚ್ಚರಿಯನ್ನುಂಟುಮಾಡುವಂತೆ ವ್ಯಕ್ತಿಯ ಕಯ್ ಚಳಕದಿಂದ ರೂಪುಗೊಳ್ಳುವ ವಸ್ತು ಇಲ್ಲವೇ ಉಂಟಾಗುವ ಕ್ರಿಯೆ;

ನಿನಗದು ಚಮತ್ಕಾರ=ಕಲೆಗಾಗಿಯೇ ಕಲೆಯೆಂಬ ನಿಲುವುಳ್ಳ ವ್ಯಕ್ತಿಯ ಪಾಲಿಗೆ ಕಲೆಯೆಂಬುದು ವ್ಯಕ್ತಿಯ ಕಣ್ಮನವನ್ನು ತನ್ನತ್ತ ಸೆಳೆದು ಬೆರಗನ್ನುಂಟುಮಾಡುವ ವಸ್ತು ಇಲ್ಲವೇ ಕ್ರಿಯೆಯಾಗಿರುತ್ತದೆ;

ನನಗೆ=ಕವಿಗೆ; ಸಾಕ್ಷಾತ್ಕಾರ=ಕಣ್ಣಿಗೆ ಗೋಚರಿಸುವುದು/ವಾಸ್ತವವನ್ನು ಅರಿಯುವುದು;

ನನಗೊ ಸಾಕ್ಷಾತ್ಕಾರ=ಕವಿಯ ಪಾಲಿಗೆ ಕಲೆಯೆಂಬುದು ಬದುಕಿನ ವಾಸ್ತವವನ್ನು ಅರಿಯಲು ನೆರವಾಗುತ್ತದೆ. ಮಾನವ ಸಮುದಾಯದ ಎಲ್ಲ ಬಗೆಯ ಆಗುಹೋಗುಗಳಿಗೆ ನಿಸರ‍್ಗದಲ್ಲಿನ ಆಗುಹೋಗುಗಳು ಮತ್ತು ಮಾನವರ ಒಳಿತು ಕೆಡುಕಿನ ನಡೆನುಡಿಗಳೇ ಕಾರಣವೆಂಬ ವಾಸ್ತವವನ್ನು ಕಲೆಯು ತೆರೆದು ತೋರಿಸುತ್ತದೆ;

ಮೌನ+ಇಂದ+ಅನುಭವಿಸು; ಮೌನ=ಮಾತಿಲ್ಲದಿರುವಿಕೆ; ಅನುಭವಿಸು=ಹೊಂದು/ಪಡೆ; ಕೋ=ತೆಗೆದುಕೊ/ಕೊಳ್; ನಮಸ್ಕಾರ=ನಮನ/ವಂದನೆ;

ಮೌನದಿಂದನುಭವಿಸು ಕೋ ನಮಸ್ಕಾರ=ಶಾಂತಚಿತ್ತನಾಗಿ ಕಲೆಯ ಸೊಗಸನ್ನು ಸವಿಯುವ ವ್ಯಕ್ತಿಗೆ ಕವಿಯು ತನ್ನ ನಮನವನ್ನು ಸಲ್ಲಿಸುತ್ತಿದ್ದಾನೆ;

ಕಲೆ+ಎಂದು; ಹೊಗಳುವಡೆ=ಹೊಗಳುವುದಾದರೆ; ಕೋಟಿ=ಒಂದು ನೂರು ಲಕ್ಶ/ಎಣಿಸುವುದಕ್ಕೆ ಆಗದ ಮೊತ್ತ/ಬಹಳ; ಧಿಕ್ಕಾರ=ತಿರಸ್ಕಾರ/ನಿರಾಕರಣೆ;

ಕಲೆಯೆಂದು ಹೊಗಳುವಡೆ ಕೋಟಿ ಧಿಕ್ಕಾರ=ಕಲೆಯ ಮೂಲಕ ಲೋಕದ ವಾಸ್ತವವನ್ನು ಅರಿತು ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳದೆ, ಕೇವಲ ಕಲೆಯಲ್ಲಿನ ಹೊರನೋಟದ ಚೆಲುವನ್ನು ಮಾತ್ರ ಸವಿದು, ಅದನ್ನೇ ದೊಡ್ಡದೆಂದು ಹಾಡಿ ಹೊಗಳುವ ವ್ಯಕ್ತಿಯನ್ನು ಕವಿಯು ನಿರಾಕರಿಸುತ್ತಾನೆ.)

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: