ಎಲ್-ಮಾರ‍್ಕೊ: ವಿಶ್ವದ ಅತಿ ಪುಟ್ಟದಾದ ಅಂತಾರಾಶ್ಟ್ರೀಯ ಸೇತುವೆ

– .

ಎಲ್ ಮಾರ‍್ಕೋ

ವಿಶ್ವದ ಅತಿ ಪುಟ್ಟ ಅಂತಾರಾಶ್ಟ್ರೀಯ ಸೇತುವೆ ಯಾವುದು? ಹೀಗೆಂದಾಗ ತಟ್ ಅಂತ ಹೆಚ್ಚಿನ ಮಂದಿಗೆ ಹೊಳೆಯುವುದು ಯುಎಸ್ಎ ಹಾಗೂ ಕೆನೆಡಾದ ಜವಿಕಾನ್ ದ್ವೀಪಗಳ ನಡುವಿನ ಸೇತುವೆಯಾಗಿದೆ. ಸೈಂಟ್ ಲಾರೆನ್ಸ್ ನದಿಗೆ ಅಡ್ಡಲಾಗಿ ನಿರ‍್ಮಿಸಿರುವ ಈ ಸೇತುವೆಯ ಉದ್ದ ಕೇವಲ 32 ಅಡಿಯಾಗಿದೆ. ಜವಿಕಾನಿನ ದೊಡ್ಡ ದ್ವೀಪ ಕೆನಡಾಗೆ ಸೇರಿದ್ದರೆ, ಅದೇ ಹೆಸರಿನ ಸಣ್ಣ ದ್ವೀಪ ಅಮೇರಿಕೆಯ ವಸಾಹತಾಗಿದೆ. 2008ರಲ್ಲಿ ಈ ದಾಕಲೆಯನ್ನು ಕಸಿದುಕೊಂಡಿದ್ದು ಪೋರ‍್ಚುಗಲ್ ಮತ್ತು ಸ್ಪೇನ್ ನಡುವಿನ ಅರ‍್ಬಿಲೊಂಗೊ ತೊರೆಗೆ ಅಡ್ಡಲಾಗಿ ನಿರ‍್ಮಿಸಿರುವ ಪುಟ್ಟ ಸೇತುವೆ ‘ಎಲ್-ಮಾರ‍್ಕೊ’. ಈ ಸೇತುವೆಯ ಉದ್ದ ಕೇವಲ 10.4 ಅಡಿ (3 ಮೀಟರ್) ಹಾಗೂ ಅಗಲ 5 ಅಡಿ (1.5 ಮೀಟರ್). ಹಾಗಾಗಿ ಇದರ ಉದ್ದ ಜವಿಕಾನ್ ದ್ವೀಪದ ನಡುವಿನ ಸೇತುವೆಯ ಮೂರನೇ ಒಂದು ಬಾಗದಶ್ಟಿದೆ. ಅರ‍್ಬಿಲೊಂಗೊ ಎಂಬ ತೊರೆಯು ಪೋರ‍್ಚುಗಲ್ ಹಾಗೂ  ಸ್ಪೇನ್  ದೇಶಗಳನ್ನು ಬೇರ‍್ಪಡಿಸುತ್ತದೆ . ಇದು ಅಲೆನ್ಟೆಜೊದ ಮದ್ಯ ಬಾಗದಲ್ಲಿ ಹರಿಯುತ್ತದೆ. ಅರ‍್ಬಿಲೊಂಗೊ ತೊರೆಯ ಒಂದು ಬದಿಯಲ್ಲಿ ಪೋರ‍್ಚುಗೀಸ್ಗೆ ಒಳಪಟ್ಟ ಮಾರ‍್ಕೊ ಇದ್ದರೆ, ಮತ್ತೊಂದು ಬದಿಯಲ್ಲಿರುವ ಎಲ್-ಮಾರ‍್ಕೊ  ಸ್ಪೇನ್ಗೆ  ಸೇರಿದ್ದಾಗಿದೆ. ಮಾರ‍್ಕೊ ಹಾಗೂ ಎಲ್-ಮಾರ‍್ಕೊದ ಜನರ ಸಂಸ್ಕ್ರುತಿ, ಸಂಪ್ರದಾಯ, ಪದ್ದತಿ, ರೀತಿ ರಿವಾಜು ಎಲ್ಲವೂ ಒಂದೇಯಾಗಿದ್ದು, ಅವರಿಬ್ಬರನ್ನು ಒಂದು ಮಾಡಿರುವುದು ಇದೇ ಎಲ್-ಮಾರ‍್ಕೊ ಎಂಬ ಪುಟ್ಟ ಸೇತುವೆಯಾಗಿದೆ. ಎರಡೂ ಹಳ್ಳಿಗಳಲ್ಲಿ ಮದುವೆಯ ಬಂದನದಿಂದ ಒಂದಾಗಿರುವ ಹಲವಾರು ಕುಟುಂಬಗಳಿವೆ.

ಇನ್ನೂ ಕುತೂಹಲಕಾರಿ ವಿಶಯವೆಂದರೆ ಈ ಎರಡು ಹಳ್ಳಿಗಳಿಗೂ ಬೇರೆ ಬೇರೆ ರಸ್ತೆ ಸಂಪರ‍್ಕವನ್ನು ಆಯಾ ದೇಶದ ಕಡೆಯಿಂದ ಕಲ್ಪಿಸಲಾಗಿದೆ. ಜನ ಒಬ್ಬರನ್ನೊಬ್ಬರು ಸಂಪರ‍್ಕಿಸಲು ಈ ಅಂತಾರಾಶ್ಟ್ರೀಯ ಸೇತುವೆಯ ಮೊರೆ ಹೋಗಬೇಕಾದ್ದು ಅನಿವಾರ‍್ಯವಾಗಿದೆ. ಇದೊಂದು ಪಾದಚಾರಿ ಸೇತುವೆಯಾಗಿದ್ದು, ಇದರ ನಿರ‍್ಮಾಣದಲ್ಲಿ ಮರದ ಹಲಗೆಗಳನ್ನು ಬಳಸಲಾಗಿದೆ. ಕಬ್ಬಿಣದ ಪಟ್ಟಿ ಹಾಗೂ ರೈಲಿಂಗ್‌ಗಳ ಮೇಲೆ ಈ ಸೇತುವೆಯನ್ನು ನಿರ‍್ಮಿಸಲಾಗಿದೆ. ಎರಡು ಚಕ್ರದ ವಾಹನಗಳಾದ ಸೈಕಲ್ ಮತ್ತು ಮೋಟಾರ್ ಬೈಕುಗಳನ್ನು ಇದರ ಮೇಲೆ ಓಡಿಸಬಹುದು. ಯುರೋಪಿಯನ್ ಒಕ್ಕೂಟವು ಈ ಪುಟ್ಟ ಮರದ ಸೇತುವೆಯನ್ನು 21ನೇ ಶತಮಾನದ ಮೊದಲ ದಶಕದಲ್ಲಿ ನಿರ‍್ಮಿಸಿತು. ಇದಕ್ಕೆ ಶ್ರಮ ವಹಿಸಿದ ಕಾರ‍್ಮಿಕರು ಅರ‍್ಬಿಲೊಂಗೊ ತೊರೆಯ ಆಚೀಚೆ ನೆಲೆಸಿರುವ ಸ್ಪೇನ್ ಮತ್ತು ಪೋರ‍್ಚುಗಲ್ ದೇಶದ ಪ್ರಜೆಗಳಾಗಿದ್ದಾರೆ. ಸ್ಪೇನಿನ ಲ-ಕೊಡೊಸೆರ ಮುನಿಸಿಪಾಲಿಟಿ ಹಾಗೂ ಪೋರ‍್ಚುಗೀಸಿನ ಆರೋಂಚಸ್ನ ಪರಿಶತ್ತು ಎಲ್-ಮಾರ‍್ಕೊದ ಸೇತುವೆಯಿಂದ ಬೆಸೆದುಕೊಂಡಿದೆ. ಈ ಪುಟ್ಟ ಮರದ ಸೇತುವೆಯು ಅಸ್ತಿತ್ವಕ್ಕೆ ಬರುವ ಮುನ್ನ, ಜನರು ಇದೇ ಸ್ತಳದಲ್ಲಿ ಮರದ ಹಲಗೆಗಳನ್ನು ಅಡ್ಡ ಹಾಕಿ ಅದನ್ನೇ ಸೇತುವೆಯಂತೆ ಉಪಯೋಗಿಸುತ್ತಿದ್ದರು. 1990ರಲ್ಲಿ ಒಂದು ಬದಿಯಲ್ಲಿ ಕಬ್ಬಿಣದ ಪಟ್ಟಿಯ ರೈಲಿಂಗ್‌ಗಳನ್ನು ಹಾಕಿ ನಡೆದಾಡಲು ಉಪಯೋಗಿಸುತ್ತಿದ್ದ ಈ ಸೇತುವೆಯನ್ನು ಗಟ್ಟಿ ಮಾಡಲಾಯಿತು. ಕಾಲಕಾಲಕ್ಕಾದ ಈ ಎಲ್ಲಾ ಬದಲಾವಣೆಗಳಿಂದಾಗಿ ಇಂದು ಈ ಸೇತುವೆ ಸದ್ರುಡವಾಗಿದೆ. ಸ್ಪೇನ್ ಮತ್ತು ಪೋರ‍್ಚುಗಲ್ ದೇಶಗಳು ಯುರೋಪಿಯನ್ ಒಕ್ಕೂಟವನ್ನು ಸೇರುವ ಮುನ್ನ ಎಲ್-ಮಾರ‍್ಕೊ ಚಿಲ್ಲರೆ ಕಳ್ಳಸಾಗಾಣಿಕೆಯ ಕೇಂದ್ರವಾಗಿತ್ತು. ನಾಗರೀಕ ಕಾವಲು ಪಡೆ ಹಾಗೂ ಆರ‍್ತಿಕ ಕಾವಲು ಪಡೆಯವರು ಈ ಸಮಯದಲ್ಲಿ ಅಂದತ್ವವನ್ನು ಪ್ರದರ‍್ಶಿಸಿದ್ದು ಕಳ್ಳ ಸಾಗಾಣಿಕೆಗೆ ಇಂಬು ಕೊಟ್ಟಂತಾಗಿತ್ತು. ಈ ಎರಡೂ ದೇಶಗಳು ಯುರೋಪಿಯನ್ ಒಕ್ಕೂಟ ಸೇರಿದ ನಂತರ ಆಮದು ರಪ್ತುವಿನ ವ್ಯವಹಾರಕ್ಕಿದ್ದ ಕಡಿವಾಣ ಸಡಿಲವಾಯಿತು ಹಾಗಾಗಿ ಕಳ್ಳಸಾಗಾಣಿಕೆಗೆ ಬೆಲೆಯಿಲ್ಲವಾಗಿ ಅದು ನಿಂತುಹೋಯಿತು.

ವಿಶ್ವದಲ್ಲಿರುವ ಸಾವಿರಾರು ಹೇಳ ಹೆಸರಿಲ್ಲದ ಸೇತುವೆಗಳಂತೆ ಇತಿಹಾಸದಲ್ಲಿ ಲೀನವಾಗಬೇಕಿದ್ದ ಎಲ್-ಮಾರ‍್ಕೊ ಸೇತುವೆ ಇಂದು ವಿಶ್ವ ವಿಕ್ಯಾತವಾಗಲು ಮೂಲ ಕಾರಣ ಅದರ ಎರಡು ಬದಿಗಳು ಬೇರೆ ಬೇರೆ ದೇಶದಲ್ಲಿನ ಅಡಿಪಾಯದ ಮೇಲೆ ನಿಂತಿರುವುದಾಗಿದೆ.

( ಚಿತ್ರ ಮತ್ತು ಮಾಹಿತಿ ಸೆಲೆ:    wikimedia.org , azores-adventures.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಉಪಯುಕ್ತ ಮಾಹಿತಿ.

ಅನಿಸಿಕೆ ಬರೆಯಿರಿ:

%d bloggers like this: