ಸಿದ್ದರ ಬೆಟ್ಟ

ಶ್ಯಾಮಲಶ್ರೀ.ಕೆ.ಎಸ್.

ಹಿಂದೆ ಯತಿಗಳು, ರುಶಿ ಮುನಿಗಳು ಲೌಕಿಕ ಬದುಕಿನಿಂದ ದೂರ ಉಳಿದು, ದೈವ ಸ್ಮರಣೆಗಾಗಿ ಹೆಚ್ಚಾಗಿ ನಿರ‍್ಜನ ಪ್ರದೇಶಗಳಾದ ಬೆಟ್ಟ ಗುಡ್ಡಗಳಲ್ಲಿರುವ ಗವಿಗಳಲ್ಲಿ ತಪೋನಿರತರಾಗುತ್ತಿದ್ದರು. ಹೀಗಿರುವ ಬೆಟ್ಟಗಳ ಪೈಕಿ; ಅಂತಹುದೇ ಒಂದು ಬೆಟ್ಟ ತುಮಕೂರಿನ ’ಸಿದ್ದರ ಬೆಟ್ಟ’. ಈ ಬೆಟ್ಟದಲ್ಲಿ ನೂರಾರು ತಪಸ್ವಿಗಳು ಸಿದ್ದಿಯನ್ನು ಪಡೆದಿರುತ್ತಾರೆ. ಹಾಗಾಗಿ ಈ ಬೆಟ್ಟಕ್ಕೆ ಸಿದ್ದರ ಬೆಟ್ಟ ಎಂಬ ಹೆಸರಿದೆ ಎಂಬುದು ಪ್ರತೀತಿ. ಮಹಾಶಿವಯೋಗಿಗಳಾದ ಸಿದ್ದೇಶ್ವರರು ಈ ಬೆಟ್ಟದ ಮೇಲೆ ನೆಲೆಗೊಂಡು ಪುನೀತರಾದಂತಹ ಪುಣ್ಯಕ್ಶೇತ್ರ ಈ ಸಿದ್ದರ ಬೆಟ್ಟ. ಈ ಕ್ಶೇತ್ರವು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚಂದ್ರಾಯನದುರ‍್ಗ ಹೋಬಳಿಯಲ್ಲಿದೆ. ಇದು ಜಿಲ್ಲಾಕೇಂದ್ರದಿಂದ ಸುಮಾರು 35 ಕಿ.ಮೀ ಅಂತರದಲ್ಲಿದ್ದು, ಬೆಂಗಳೂರಿಗೆ 110 ಕಿ.ಮೀ ದೂರದಲ್ಲಿದೆ. ಈ ಪ್ರದೇಶಕ್ಕೆ ಬೂದುಗವಿ, ಸುವರ‍್ಣ ಗಿರಿ, ಸಂಜೀವಿನಿ ಬೆಟ್ಟ ಎಂಬ ಹಲವು ಹೆಸರುಗಳಿಂದ ಕರೆಯುವುದುಂಟು. ಇದು ಒಂದು ಎತ್ತರವಾದ ಬೆಟ್ಟವಾಗಿದ್ದು, ಬೆಟ್ಟವನ್ನು ಏರುವಾಗ ಕೆಲವೆಡೆ ಸಲೀಸಾಗಿಯೂ, ಹಲವೆಡೆ ಕಡಿದಾಗಿಯೂ ಮೆಟ್ಟಿಲುಗಳಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದಂತಹ ತಾಣವಾಗಿದೆ. ತುಮಕೂರಿನಲ್ಲಿರುವ ಹಲವು ಬೆಟ್ಟಗಳಲ್ಲಿ ಸಿದ್ದರಬೆಟ್ಟವು ಪ್ರಮುಕವಾದುದು. ಈ ಬೆಟ್ಟದ ಬುಡದಲ್ಲಿಯೂ ಸಹ ಒಂದು ಸಿದ್ದೇಶ್ವರ ದೇವಸ್ತಾನವಿದೆ. ಬೆಟ್ಟದ ಬುಡದಲ್ಲಿ ಅಮ್ಮಾಜಮ್ಮ ಎಂಬ ಪುಟ್ಟದಾದ ಮಟವಿದೆ. ಅಲ್ಲದೇ ಬಾಳೆಹೊನ್ನೂರಿನ ಶಾಕಾ ಮಟವು ಇದ್ದು, ಸಂಸ್ಕ್ರುತ ಶಾಲೆಯನ್ನು ಹೊಂದಿದೆ. ಶ್ರೀ ವೀರಬದ್ರೇಶ್ವರ ಶಿವಾಚಾರ‍್ಯರು ಇಲ್ಲಿಯ ಮಟಾದೀಶರು. ಇತ್ತೀಚೆಗೆ ಈ ಮಟವು ಹೆಚ್ಚು ಅಬಿವ್ರುದ್ದಿಯನ್ನು ಹೊಂದುತ್ತಿದೆ. ಬೆಂಗಳೂರಿನಿಂದ ತುಮಕೂರಿಗೆ ಸಾಗುವ ಹಾದಿಯಲ್ಲಿ ದಾಬಸ್ ಪೇಟೆ ಬಳಿ ಇದೇ ಹೆಸರಿನ ಸಿದ್ದರಬೆಟ್ಟ ಎಂಬ ಇನ್ನೊಂದು ಬೆಟ್ಟವಿದೆ. ಇದನ್ನು ನಿಜಗಲ್ ಬೆಟ್ಟವೆಂದೂ ಕರೆಯುವರು.ಆದರೆ ಇವೆರಡೂ ಬೇರೆ ಬೇರೆ ಬೆಟ್ಟಗಳಾಗಿವೆ.

ಸಿದ್ದರ ಬೆಟ್ಟದ ಮೇಲಿರುವ ಸಿದ್ದೇಶ್ವರ ಗುಡಿಗೆ ಎಲ್ಲಾ ದೇವಸ್ತಾನಗಳ ರೀತಿ ಕಟ್ಟಡವಿಲ್ಲ. ಇದು ಬಂಡೆಗಳಿಂದ ಸುತ್ತುವರಿದ ಗವಿಯಾಗಿದೆ. ಇಲ್ಲಿ ಸಿದ್ದೇಶ್ವರನು ಪರಶಿವನ ಉದ್ಬವ ಮೂರ‍್ತಿಯಾದ ಲಿಂಗದ ರೂಪದಲ್ಲಿ ಪೂಜಿಸಲ್ಪಡುವನು. ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ತರು ತಾವು ಸಾಕಿರುವ ಹಸು ಎಮ್ಮೆಗಳು ಕರು ಹಾಕಿದಾಗ, ಆ ಜಾನುವಾರಗಳ ಹಾಲಿನಿಂದ ದೊರೆತ ಬೆಣ್ಣೆಯಿಂದ ಮಾಡಿದ ತುಪ್ಪವನ್ನು ಸಿದ್ದೇಶ್ವರನಿಗೆ ಅರ‍್ಪಿಸಿ, ದೀಪ ಹಚ್ಚುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ. ಈ ಸಿದ್ದೇಶ್ವರನು ಒಬ್ಬಟ್ಟು (ಹೋಳಿಗೆ) ಪ್ರಿಯನೆಂಬ ನಂಬಿಕೆಯಿದ್ದು, ಇಲ್ಲಿಗೆ ಬರುವ ಬಕ್ತರು ದೇವರಿಗೆ ಹೋಳಿಗೆಯ ನೈವೇದ್ಯವನ್ನು ತಪ್ಪದೇ ಮಾಡಿ ತಮ್ಮ ಇಶ್ಟಾರ‍್ತಗಳನ್ನು ಕೋರಿ ಈಡೇರಿಸಿಕೊಳ್ಳುವರು. ಸಿದ್ದೇಶ್ವರನ ಎದುರಿಗೆ ಸದಾ ನೀರಿನಿಂದ ತುಂಬಿರುವ ಒಂದು ಪುಶ್ಕರಣಿಯಿದೆ. ಇದುವೇ ಸುವರ‍್ಣಮುಕಿ ನದಿಯ ಉಗಮಸ್ತಾನವಾಗಿದೆ. ಈ ಪುಶ್ಕರಣಿಯಲ್ಲಿ ನೀರು ಸದಾ ತುಂಬಿರುತ್ತದೆ ಮತ್ತು ಇದನ್ನು ಇಲ್ಲಿಗೆ ಬರುವ ಬಕ್ತರಿಗೆ ಪವಿತ್ರ ಜಲವೆಂದು ನೀಡಲಾಗುತ್ತದೆ.

ಪೌರಾಣಿಕ ಹಿನ್ನೆಲೆ ಇತರ ವಿಶೇಶತೆಗಳು

ಸಿದ್ದರಬೆಟ್ಟದಲ್ಲಿ ಹೆಚ್ಚಾಗಿ ಗವಿಗಳಿದ್ದುದ್ದರಿಂದ ನೂರಾರು ಸಾದು ಸಂತರು ಇಲ್ಲಿ ನೆಲೆಯೂರಿದ್ದರೆಂಬ ನಂಬಿಕೆಯಿದೆ. ಈ ಬೆಟ್ಟದ ಮತ್ತೊಂದು ಪ್ರಮುಕ ವಿಶೇಶತೆಯಂದರೆ, ಇಲ್ಲಿರುವ ಹಲವು ಬಗೆಯ ಔಶದೀಯ ಗುಣಗಳುಳ್ಳ ಸಸಿಗಳ ತಳಿಗಳು. ಒಮ್ಮೆ ತ್ರೇತ್ರಾಯುಗದಲ್ಲಿ ರಾವಣನೊಡನೆ ಹೋರಾಡುವಾಗ ಲಕ್ಶ್ಮಣನು ಮೂರ‍್ಚೆ ತಪ್ಪಿ ಸಾವು ಬದುಕಿನ ನಡುವೆ ಸಿಲುಕಿರುತ್ತಾನೆ. ಆ ಸಮಯದಲ್ಲಿ ರಾಮನ ಆಣತಿಯಂತೆ ಹನುಮಂತನು ಸಂಜೀವಿನಿ ಸಸ್ಯವನ್ನು ತರಲು ಕೈಲಾಸ ಪರ‍್ವತಕ್ಕೆ ಹೋಗಿರುತ್ತಾನೆ. ಆ ಸಮಯದಲ್ಲಿ ಆಂಜನೇಯನಿಗೆ ಆ ಗಿಡ ಯಾವುದೆಂದು ಅರಿಯದೆ ಇಡೀ ಬೆಟ್ಟವನ್ನೇ ಹೊತ್ತು ತರುತ್ತಾನೆ. ಹೀಗೆ ತರುವ ಮಾರ‍್ಗ ಮದ್ಯದಲ್ಲಿ ಅದರ ತುಣುಕುಗಳು ಬೂಮಿಯ ಮೇಲೆ ಬಿದ್ದಿರುತ್ತದೆ ಎಂದು ನಂಬಲಾಗಿದೆ. ಹೀಗೆ ಬಿದ್ದ ತುಣುಕುಗಳಲ್ಲಿ ಕೆಲವು ಸಿದ್ದರ ಬೆಟ್ಟದಲ್ಲೂ ಬಿದ್ದವು ಎಂಬ ಪೌರಾಣಿಕ ಹಿನ್ನೆಲೆಯಿದೆ. ಆದ್ದರಿಂದ ಇಲ್ಲಿ ಔಶದೀಯ ಗುಣಗಳುಳ್ಳ  ಸಸ್ಯಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಬೆಟ್ಟವನ್ನು ಸಂಜೀವಿನಿ ಬೆಟ್ಟವೆಂತಲೂ ಕರೆಯುವರು. ಸಿದ್ದರಬೆಟ್ಟದಲ್ಲಿನ ಮತ್ತೊಂದು ವಿಶೇಶತೆಯೆಂದರೆ ಇಲ್ಲಿ ಕಾಗೆಗಳು ಕಾಣಸಿಗುವುದಿಲ್ಲ. ಹಿಂದೆ ಕಾಕಾಸುರನೆಂಬ ಕಾಗೆಯು ಶಾಪಗ್ರಸ್ತನಾಗಿ ಇಲ್ಲಿಗೆ ಕಾಗೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಸಿದ್ದರಬೆಟ್ಟದ ಮೇಲೆ ಒಂದು ಕೋಟೆ ಇದೆ. ಇದನ್ನು ಕುರಂಕೋಟೆಯನ್ನು ಆಳುತ್ತಿದ್ದ ಕುರಂಗರಾಯನೆಂಬ ಪಾಳೆಗಾರನು ನಿರ‍್ಮಿಸಿದ್ದನೆಂಬ ಇತಿಹಾಸವಿದೆ. ಶಿವರಾತ್ರಿಯಂದು ಸಿದ್ದರಬೆಟ್ಟದ ಸಿದ್ದೇಶ್ವರನಿಗೆ ವಿಶೇಶ ಪೂಜೆಗಳು ಜರುಗುತ್ತವೆ ಮತ್ತು ಆಗ ಬಕ್ತರು ಅಪಾರ ಸಂಕ್ಯೆಯಲ್ಲಿ ಪಾಲ್ಗೊಳ್ಳುವರು.ಸಿದ್ದರಬೆಟ್ಟದ ಪ್ರಶಾಂತತೆ, ಹಸಿರಿನ ಹೊದಿಕೆ ಎಂತಹವರನ್ನು ಆಕರ‍್ಶಿಸಿಬಿಡುತ್ತದೆ. ಇಲ್ಲಿಗೆ ಬಸ್ಸು ಮತ್ತಿತರ ಸಾರಿಗೆ ಸೌಲಬ್ಯ ಕೂಡ ಇದೆ.

(ಚಿತ್ರ ಸೆಲೆ: wikimedia.org )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.