ಕುವೆಂಪು ಕವನಗಳ ಓದು – 17ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಸರ್ವಾಧಿಕಾರಿ

ಹತ್ತಿಯಾಯ್ತು ಹುಲಿಯ ಬೆನ್ನು
ಮತ್ತೆ ಇಳಿವುದೆಂತು ಇನ್ನು
ಇಲ್ಲಗೈವುದೆನ್ನ ತಿಂದು
ಬಂದುದೆಲ್ಲ ಬರಲಿ ಎಂದು
ಕೊಂದು ಕೊಂದು ನಡೆವೆ ಮುಂದು.

ಒಂದು ನಾಡಿನ ಆಡಳಿತ ವ್ಯವಸ್ತೆಯನ್ನು ತನ್ನ ಇಚ್ಚೆಗೆ ತಕ್ಕಂತೆ ಮಣಿಸಿ ವಂಚನೆ, ಹಿಂಸೆ ಮತ್ತು ದಬ್ಬಾಳಿಕೆಯಿಂದ ಆಡಳಿತವನ್ನು ನಡೆಸುವ ಸರ‍್ವಾದಿಕಾರಿಯ ಮನದ ಒಳಮಿಡಿತಗಳನ್ನು ಈ ಕವನದಲ್ಲಿ “ ಹುಲಿ ಸವಾರಿ ” ರೂಪಕದ ಮೂಲಕ ಚಿತ್ರಿಸಲಾಗಿದೆ.

ಹುಲಿ ಸವಾರಿಯು “ ವ್ಯಕ್ತಿಯು ಕಯ್ಗೊಂಡ ಕೆಲಸ ಅತ್ಯಂತ ಅಪಾಯಕಾರಿಯಾಗಿದೆ ” ಎಂಬುದನ್ನು ಸೂಚಿಸುತ್ತದೆ.

“ ಆಕಸ್ಮಿಕವಾಗಿ ಹುಲಿಯ ಬೆನ್ನಿನ ಮೇಲೆ ಕುಳಿತ ವ್ಯಕ್ತಿಯು ಇತ್ತ ಹುಲಿಯನ್ನು ಹತೋಟಿಯಲ್ಲಿಟ್ಟುಕೊಂಡು ಸವಾರಿಯನ್ನು ಮಾಡಲಾಗದೆ, ಅತ್ತ ಇಳಿದು ಜೀವಂತವಾಗಿ ಪಾರಾಗಲಾಗದೆ ಯಾವ ಗಳಿಗೆಯಲ್ಲಾದರೂ ಹುಲಿಯ ಬಾಯಿಗೆ ಬಲಿಯಾಗುವುದು ನಿಶ್ಚಿತವಾಗಿರುವುದರಿಂದ, ಸವಾರಿಯನ್ನು ಬಿಡಲಾಗದೆ ಮುಂದುವರಿಸುತ್ತಾನೆ” ಎಂಬ ರೂಪಕದ ಮೂಲಕ ಸರ‍್ವಾದಿಕಾರಿಯು ತನ್ನ ಜೀವಿತದ ಕೊನೆಗಳಿಗೆಯ ತನಕ ಕ್ರೂರತನದಿಂದಲೇ ಆಡಳಿತವನ್ನು ನಡೆಸುತ್ತಾನೆ ಎಂಬುದನ್ನು ಹೇಳಲಾಗಿದೆ.

( ಸರ್ವ+ಅಧಿಕಾರಿ; ಸರ್ವ=ಎಲ್ಲ/ಸಕಲ; ಅಧಿಕಾರಿ=ಆಡಳಿತವನ್ನು ನಡೆಸುವವನು; ಸರ್ವಾಧಿಕಾರಿ=ನಾಡಿನ ಆಡಳಿತ ಸೂತ್ರವನ್ನು ತನ್ನೊಬ್ಬನ ಹತೋಟಿಯಲ್ಲಿಯೇ ಇಟ್ಟುಕೊಂಡಿರುವವನು; ಹತ್ತಿ+ಆಯ್ತು; ಹತ್ತು=ಏರು; ಹುಲಿ=ಇತರ ಜೀವಿಗಳನ್ನು ಕೊಂದು ತಿಂದು ಬದುಕುವ ಒಂದು ಬಗೆಯ ಪ್ರಾಣಿ ; ಮತ್ತೆ=ತಿರುಗಿ/ಬಳಿಕ; ಇಳಿವುದು+ಎಂತು; ಇಳಿ=ಕೆಳಕ್ಕೆ ಬರುವುದು/ಕೆಳಕ್ಕೆ ದುಮುಕುವುದು; ಎಂತು=ಯಾವ ರೀತಿಯಲ್ಲಿ;

ಇಲ್ಲ+ಗೈವುದು+ಎನ್ನ; ಗೆಯ್=ಮಾಡು/ನೆರವೇರಿಸು ; ಗೈವುದು=ಮಾಡುವುದು; ಇಲ್ಲಗೈವುದು=ಇಲ್ಲದಂತೆ ಮಾಡುವುದು; ಎನ್ನ=ನನ್ನನ್ನು ; ತಿನ್=ಕೊಲ್ಲು; ಇಲ್ಲಗೈವುದೆನ್ನ ತಿಂದು=ನನ್ನನ್ನು ಕೊಂದು ತಿನ್ನುತ್ತದೆ; ಬಂದುದೆಲ್ಲ ಬರಲಿ=ಆಗುವುದೆಲ್ಲಾ ಆಗಿಯೇ ಹೋಗಲಿ; ನಡೆವೆ=ಮುಂದೆ ಸಾಗುತ್ತೇನೆ; ಕೊಂದು ಕೊಂದು ನಡೆವೆ ಮುಂದು=ಇದುವರೆಗೂ ಮಾಡಿದ ವಂಚನೆ, ಕ್ರೂರತನ ಮತ್ತು ದಬ್ಬಾಳಿಕೆಯ ಆಡಳಿತವನ್ನೇ ಎಲ್ಲ ಕಾಲಕ್ಕೂ ಮುಂದುವರಿಸುತ್ತೇನೆ.)

(ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: