ಕ್ರಿಕೆಟ್ ಕಾಶಿ – ಈಡನ್ ಗಾರ‍್ಡನ್ಸ್

– .

ಈಡನ್-ಗಾರ‍್ಡನ್ಸ್

ಕ್ರಿಕೆಟ್ ಪ್ರೇಮಿಗಳಿಗೆ ಈಗಿನ ದಿನಗಳು ಸುಗ್ಗಿಯ ದಿನಗಳು. ಏಕೆಂದರೆ ಪ್ರತಿದಿನ ಸಂಜೆ ಐಪಿಎಲ್ ಪಂದ್ಯಗಳು ನೇರ ಪ್ರಸಾರವಾಗುತ್ತಿದೆ. ಕರೋನಾ ಬೀತಿಯಿಂದ ಕ್ರಿಕೆಟ್ ಸ್ಟೇಡಿಯಮ್ ಗಳು ಕಾಲಿ ಕಾಲಿಯಾಗಿವೆಯಾದರೂ ಕೂಡ ನೇರ ಪ್ರಸಾರಕ್ಕೆ ಮುಗಿಬಿದ್ದು ಟಿವಿಗಳಿಗೆ ಅಂಟಿಕೊಂಡಿರುವ ನೋಡುಗರಿಗೇನು ಕಡಿಮೆಯಿಲ್ಲ. ಬಾರತದ ಎಲ್ಲಾ ಕ್ರಿಕೆಟ್ ಆಟಗಾರರ ಕನಸಿರುವುದು ಒಮ್ಮೆಯಾದರೂ ‘ಬಾರತದ ಕ್ರಿಕೆಟ್ ಕಾಶಿ’ ಎಂದೇ ಹೆಸರಾದ ಈಡನ್ ಗಾರ‍್ಡನ್ಸಲ್ಲಿ ಆಡಬೇಕೆಂಬುದು. ಅಲ್ಲಿ ನೆರೆದಿರುವ ಜನಸ್ತೋಮದ ಮುಂದೆ ಒಮ್ಮೆ ಆಡಿದರೆ, ರಾತ್ರಿ ಕಳೆದು ಬೆಳೆಗಾಗುವುದರೊಳಗೆ ‘ಹೀರೋ’ ಆಗುತ್ತಾರೆ, ಅದರಲ್ಲೂ ಅಂದಿನ ಕಾರ‍್ಯಕ್ಶಮತೆ ಉನ್ನತ ಮಟ್ಟದ್ದಾಗಿದ್ದರಂತೂ ಮುಗಿದೇ ಹೋಯಿತು. ಅಶ್ಟರ ಮಟ್ಟಿಗೆ ಈಡನ್ ಗಾರ‍್ಡನ್ಸ್ ಹೆಸರು ಪಡೆದಿದೆ ಎಂದರೆ ತಪ್ಪಾಗುವುದಿಲ್ಲ. ಪಶ್ಚಿಮ ಬಂಗಾಳದ ರಾಜದಾನಿ ಕೋಲ್ಕತ್ತದಲ್ಲಿರುವ ಈಡನ್ ಗಾರ‍್ಡನ್ಸ್ ಸ್ತಾಪನೆಯಾಗಿದ್ದು 1864ರಲ್ಲಿ. ಇದು ಬಂಗಾಳದ ಕ್ರಿಕೆಟ್ ತಂಡ ಹಾಗೂ ಐಪಿಎಲ್ ಪ್ರ‍್ಯಾಂಚೈಸಿ ಕೋಲ್ಕತ್ತಾ ನೈಟ್ ರೈಡರ‍್ಸ್ ತಂಡಗಳ ತವರು ಮೈದಾನವಾಗಿದೆ ಮತ್ತು ಈ ಮೈದಾನ, ಅನೇಕ ಅಂತರರಾಶ್ಟ್ರೀಯ ಪಂದ್ಯಗಳಿಗೆ ವೇದಿಕೆಯಾಗಿದೆ.

ಇತ್ತೀಚಿನ ದಿನಗಳವರೆಗೂ, ಈಡನ್ ಗಾರ‍್ಡನ್ಸ್ ಮೈದಾನ ಅತಿ ಹೆಚ್ಚು ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯ ವೀಕ್ಶಿಸಲು ಸ್ತಳಾವಕಾಶ ಕಲ್ಫಿಸಿರುವ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 66,349 ಜನರಿಗಾಗುವಶ್ಟು ಆಸನ ಸಾಮರ‍್ತ್ಯ ಹೊಂದಿದ್ದು, ಬಾರತದಲ್ಲಿ ಅಂದಿಗೆ ಅತಿ ದೊಡ್ಡ ಹಾಗೂ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಿತ್ತು.  ಆಸ್ಟ್ರೇಲಿಯಾದ ಮೆಲ್ಬೋರ‍್ನ್ ಕ್ರೀಡಾಂಗಣ ಇದಕ್ಕಿಂತ ಹೆಚ್ಚು ಪ್ರೇಕ್ಶಕರಿಗೆ ಆಸನ ಕಲ್ಪಿಸಿದೆ. ಅಹಮದಾಬಾದಿನಲ್ಲಿ ಇತ್ತೀಚೆಗೆ ಅನಾವರಣಗೊಂಡ ನರೇಂದ್ರ ಮೋದಿ ಕ್ರೀಡಾಂಗಣ ಪ್ರಸ್ತುತ, ಅತಿ ಹೆಚ್ಚು ಪ್ರೇಕ್ಶಕರಿಗೆ (ಅಂದಾಜು ಒಂದು ಲಕ್ಶ) ಕೂಡುವ ವ್ಯವಸ್ತೆ ಮಾಡಿ, ಅತಿ ಹೆಚ್ಚು ಪ್ರೇಕ್ಶಕರಿಗೆ ಸ್ತಳಾವಕಾಶ ಕಲ್ಪಿಸಿದ ಬಾರತದ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಗುರಿಯಾಗಿ ಮೊದಲ ಸ್ತಾನಕ್ಕೇರಿದ ಕಾರಣ, ಈಡನ್ ಗಾರ‍್ಡನ್ಸ್ ಕ್ರೀಡಾಂಗಣ ಎರಡನೇ ಸ್ತಾನಕ್ಕೆ ಸರಿದಿದೆ. ಈಡನ್ ಗಾರ‍್ಡನ್ಸ್ ಮೈದಾನವು ವಿಶ್ವ ಕಪ್, ವಿಶ್ವ ಟ್ವೆಂಟಿ-2೦ ಮತ್ತು ಏಶ್ಯಾ ಕಪ್ ಸೇರಿದಂತೆ ವಿಶ್ವದ ಅನೇಕ ಪ್ರಮುಕ ಅಂತರಾಶ್ಟ್ರೀಯ ಸ್ಪರ‍್ದೆಗಳ ಪೈನಲ್ ಗೆ ಆತಿತ್ಯ ವಹಿಸಿ, ಸೈ ಎನಿಸಿಕೊಂಡಿದೆ. 1987ರ ಏಕ ದಿನ ವಿಶ್ವಕಪ್ ಪಂದ್ಯಾವಳಿಯ ಅಂತಿಮ(ಪೈನಲ್) ಪಂದ್ಯ ಇಲ್ಲೇ ನಡೆದಿತ್ತು . ಇಂಗ್ಲೆಂಡಿನ ಲಾರ‍್ಡ್ಸ್ ಮೈದಾನದ ನಂತರ, ಏಕ ದಿನ ವಿಶ್ವ ಕಪ್ ಪೈನಲ್ ಪಂದ್ಯಕ್ಕೆ ಆತಿತ್ಯ ನೀಡಿದ ಎರಡನೇ ಮೈದಾನ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2016ರಲ್ಲಿ ವಿಶ್ವ ಟ್ವೆಂಟಿ-20 ಕಪ್ ಪೈನಲ್ ಸಹ ಇಲ್ಲೇ ನಡೆಯಿತು.

ಈಡನ್ ಗಾರ‍್ಡನ್ಸ್ ಮೈದಾನದ ಹಿನ್ನೆಲೆ

ಇದರ ವಿನ್ಯಾಸ 1841 ರಲ್ಲಾಯಿತು. ಆರಂಬದಲ್ಲಿ ಈ ಕ್ರೀಡಾಂಗಣವನ್ನು ‘ಆಕ್ಲೆಂಡ್ ಸರ‍್ಕಸ್ ಗಾರ‍್ಡನ್ಸ್’ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ‘ಈಡನ್ ಗಾರ‍್ಡನ್ಸ್’ ಎಂದು ಬದಲಾವಣೆ ಮಾಡಲಾಯಿತು. ಇದಕ್ಕೆ ಮೂಲ ಕಾರಣ ಕ್ರೀಡಾಂಗಣದ ಪಕ್ಕದಲ್ಲಿರುವ ಕೋಲ್ಕತ್ತಾದ ಅತ್ಯಂತ ಹಳೆಯ ಉದ್ಯಾನವನಗಳಲ್ಲಿ ಒಂದಾದ ಈಡನ್ ಗಾರ‍್ಡನ್ಸ್. ಈ ಕ್ರೀಡಾಂಗಣವು ಬಿ.ಬಿ.ಡಿ ಬಾಗ್ ಪ್ರದೇಶದಲ್ಲಿದೆ. ಬಿ.ಬಿ.ಡಿ ಎಂದರೆ ಬೆನಾಯ್ ಕ್ರಿಶ್ಣ ಬಸು, ಬಾದಲ್ ಗುಪ್ತಾ ಹಾಗೂ ದಿನೇಶ್ ಚಂದ್ರ ಗುಪ್ತಾ ಎಂಬುವವರ ಹೆಸರುಗಳಾಗಿವೆ. ಇವರೆಲ್ಲಾ ಅಪ್ರತಿಮ ಸಾತಂತ್ರ‍್ಯ ಹೋರಾಟಗಾರರಾಗಿದ್ದರು. ಅಂದಂತೆ, ರಾಜ್ಯದ ಹೈಕೋರ‍್ಟ್ ಹಾಗೂ ಸಚಿವಾಲಯ ಸಹ ಇದರ ಬಳಿಯಲ್ಲೇ ಇದೆ. ಇಲ್ಲಿ, 1934ರಲ್ಲಿ ಮೊದಲ ಟೆಸ್ಟ್ ಹಾಗೂ 1987ರಲ್ಲಿ ಮೊದಲ ಏಕದಿನ ಪಂದ್ಯ ನಡೆದಿದ್ದು, ಬಾರತ ತಂಡವು ಪಾಲ್ಗೊಂಡಿತ್ತು. ಮೊದಲ ಟೆಸ್ಟ್ ಪಂದ್ಯ ಡಗ್ಲಾಸ್ ಜಾರ‍್ಡಿನ್ ನಾಯಕತ್ವದ ಇಂಗ್ಲೆಂಡಿನ ತಂಡದ ವಿರುದ್ದ ನಡೆಯಿತು. ಐದು ದಿನದ ಈ ಪಂದ್ಯ ನಾಲ್ಕು ದಿನಗಳಲ್ಲೇ ಮುಗಿದು ಬಾರತ ಸೋತಿತ್ತು.

ಇಲ್ಲಿ ನೆರೆಯುವ ಕ್ರಿಕೆಟ್ ಪ್ರೇಮಿಗಳು, ಕ್ರೀಡಾಪಟುಗಳ ಉತ್ತೇಜಿಸುವ ವಿಶಯದಲ್ಲಿ ಹೆಸರುವಾಸಿಯಾಗಿದ್ದಾರೆ. ಪ್ರತಿಯೊಂದು ಉತ್ತಮ ಕ್ಶಣಗಳನ್ನು ತಮ್ಮ ಒಕ್ಕೊರಲಿನ ಶಬ್ದದಿಂದ, ಚಪ್ಪಾಳೆ ತಟ್ಟುವುದರಿಂದ ಪ್ರೋತ್ಸಾಹಿಸುತ್ತಾರೆ. ಒಬ್ಬ ಕ್ರಿಕೆಟಿಗನ ಕ್ರಿಕೆಟ್ ಶಿಕ್ಶಣವು, ತುಂಬಿ ತುಳುಕುವ ಈಡನ್ ಗಾರ‍್ಡನ್ಸ್ ಪ್ರೇಕ್ಶಕರ ಮುಂದೆ ಆಡುವವರೆಗೂ, ಪೂರ‍್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. 2000-01ರಲ್ಲಿ ನಡೆದ ಬಾರ‍್ಡರ್-ಗವಾಸ್ಕರ್ ಟ್ರೋಪಿಯ ಎರಡನೇ ಟೆಸ್ಟ್ನಲ್ಲಿ ಬಾರತ ಆಸ್ಟ್ರೇಲಿಯಾವನ್ನು ಸೋಲಿಸಿದಾಗ ಕ್ರೀಡಾಂಗಣದಿಂದ ಹೊರಹೊಮ್ಮಿದ ಪ್ರೇಕ್ಶಕರ ಮೊರೆತ, ‘ಅತ್ಯಂತ ಹೆಚ್ಚಿನ ಡೆಸಿಬೆಲ್ ಹೊಂದಿತ್ತು’ ಎಂದು ಸೌರವ್ ಗಂಗೂಲಿ ಸಂದರ‍್ಶನ ಒಂದರಲ್ಲಿ ಹೇಳಿದ್ದರು. ಪಶ್ಚಿಮ ಬಂಗಾಳದ ಮಾಜಿ ಮುಕ್ಯ ಮಂತ್ರಿ ಬಿ.ಸಿ.ರಾಯ್ ಅವರ ಹೆಸರನ್ನು ಇಲ್ಲಿನ ಕ್ಲಬ್ ಹೌಸ್ ಗೆ ಇಡಲಾಗಿದೆ. ಬಂಗಾಲದ ಕ್ರಿಕೆಟ್ ಸಂಸ್ತೆಯ ಪ್ರದಾನ ಕಚೇರಿಯೂ ಇದೇ ಕ್ರೀಡಾಂಗಣದಲ್ಲಿದೆ. ಅಪರೂಪಕ್ಕೊಮ್ಮೆ ಇದೇ ಕ್ರೀಡಾಂಗಣದಲ್ಲಿ ರಾಶ್ಟ್ರೀಯ ಹಾಗೂ ಅಂತರ ರಾಶ್ಟ್ರೀಯ ಪುಟ್ ಬಾಲ್ ಪಂದ್ಯಗಳು ಆಯೋಜನೆಗೊಂಡಿರುವ ಉದಾಹರಣೆಗಳೂ ಕೂಡ ಇವೆ.

(ಮಾಹಿತಿ ಮತ್ತು ಚಿತ್ರಸೆಲೆ: espncricinfo.comfamousplacesinIndia.in , wikimedia.org  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: