ಲಾಮೂ ಸಾಂಸ್ಕ್ರುತಿಕ ಉತ್ಸವ
– ಕೆ.ವಿ.ಶಶಿದರ.
ಯಾವುದೇ ಉತ್ಸವದಲ್ಲಿ ನಿಜವಾದ ವಿಶಿಶ್ಟತೆ ಇರುವುದು ಸ್ತಳೀಯ ವಿಶೇಶ ಕಲೆಗಳಿಗೆ ಮತ್ತು ಕ್ರೀಡೆಗಳಿಗೆ. ಇಂತಹ ಉತ್ಸವಗಳು ನಶಿಸಿಹೋಗುತ್ತಿರುವ ಸ್ತಳೀಯ ಕಲೆಗಳ ಮತ್ತು ಕ್ರೀಡೆಗಳ ಪುನರುತ್ತಾನಕ್ಕೆ ವೇದಿಕೆ ನೀಡುತ್ತವೆ. ಕೀನ್ಯಾದ ದ್ವೀಪ ಸಮೂಹಗಳಲ್ಲಿ ಒಂದಾದ ಲಾಮೂ ದ್ವೀಪದಲ್ಲಿ ನಡೆಯುವ ಲಾಮೂ ಸಾಂಸ್ಕ್ರುತಿಕ ಉತ್ಸವ ಇದಕ್ಕೆ ಹೊರತಾಗಿಲ್ಲ. ಸ್ತಳೀಯ ಕಲೆ, ಕ್ರೀಡೆಗಳೊಂದಿಗೆ ಕಲಾಕಾರರನ್ನೂ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಹಾಗೂ ವಿಶ್ವದಾದ್ಯಂತ ಪ್ರದರ‍್ಶಿಸುವ ಪ್ರಮುಕ ಉದ್ದೇಶ ಇಂತಹ ಸಾಂಸ್ಕ್ರುತಿಕ ಉತ್ಸವಗಳ ಆಯೋಜನೆಯ ಹಿಂದೆ ಇರುವುದನ್ನು ಕಾಣಬಹುದು.
ಸಾಂಸ್ಕ್ರುತಿಕ ಉತ್ಸವದ ಪ್ರಮುಕ ಆಕರ‍್ಶಣೆಗಳು
ಸ್ತಳೀಯರಿಗಾಗಿ ಆಯೋಜಿಸಲ್ಪಡುವ ಕತ್ತೆ ಓಟವು ಲಾಮೂ ಸಾಂಸ್ಕ್ರುತಿಕ ಉತ್ಸವದ ಪ್ರಮುಕ ಆಕರ‍್ಶಣೆಯಾಗಿದೆ. ಈ ಓಟ ಸಾಮಾನ್ಯದ್ದಲ್ಲ! ಸ್ತಳೀಯ ಕತ್ತೆ ಜಾಕಿಗಳಿಗೆ ಪರಣಿತಿ ಅತ್ಯಗತ್ಯವಾಗಿದೆ. ಸವಾರಿ ಕೌಶಲ್ಯವನ್ನು ಸಾಣೆಗೆ ಹಚ್ಚಿ ತಿದ್ದಿ ತೀಡಿಕೊಳ್ಳಲು ಇಡೀ ವರ‍್ಶವನ್ನೇ ಜಾಕಿಗಳು ಮುಡಿಪಾಗಿಡುವುದು ಸಾಮಾನ್ಯ ಸಂಗತಿಯಾಗಿದೆ. ಕತ್ತೆಗೂ ಅಶ್ಟೇ ತಾಲೀಮು ಮಾಡಿಸಿ, ಕೊಡುವ ನಿರ‍್ದೇಶನವನ್ನು ಪಾಲಿಸುವಂತೆ ತರಬೇತಿ ನೀಡುತ್ತಾರೆ. ಇಡೀ ವರ‍್ಶದ ಶ್ರಮಕ್ಕೆ ಬೆಲೆ ಸಿಗುವುದು ಕತ್ತೆಯ ಓಟದಲ್ಲಿ ಗೆದ್ದಾಗ. ವಿಜೇತರಿಗೆ ಅದು ಅತ್ಯಂತ ಹೆಮ್ಮೆಯ ಕ್ಶಣ ಆಗಿರುತ್ತದೆ. ಗೆಲ್ಲುವ ಕತ್ತೆಯ ಜಾಕಿಗೆ ಹಲವು ನಿರ‍್ದಿಶ್ಟ ಕೌಶಲ್ಯಗಳ ಅಗತ್ಯವಿರುತ್ತದೆ. ಕತ್ತೆ ಎತ್ತರದ ಪ್ರಾಣಿಯಲ್ಲ ಆದ್ದರಿಂದ ಆಜಾನುಬಾಹು ಜಾಕಿ ಇದಕ್ಕೆ ಸರಿ ಹೊಂದುವುದಿಲ್ಲ, ಬದಲಿಗೆ ಸಣ್ಣ ದೇಹ ನಿಲುವು ಇದಕ್ಕೆ ಸೂಕ್ತವಾಗಿದೆ. ಕಡಿಮೆ ಬುದ್ದಿಯ ಮೊಂಡುತನದ ಕತ್ತೆಯ ಮನಸ್ತಿತಿಯನ್ನು ಅರಿತು ಅದು ನಿರ‍್ದಿಶ್ಟ ಪತದಲ್ಲಿ ಚಲಿಸುವಂತೆ ಹಾಗೂ ಸೂಚನೆಯನ್ನು ಪಾಲಿಸುವಂತೆ ಸೂಕ್ತ ತರಬೇತಿ ನೀಡುವುದು ಬಹಳ ಮುಕ್ಯ. ಇಂತಹ ಜಾಣ್ಮೆಯ ವಿಶೇಶ ಪ್ರತಿಬೆ ಕತ್ತೆ ಜಾಕಿಗೆ ಅತ್ಯಗತ್ಯವಾಗಿದೆ.
ಈ ದ್ವೀಪದಲ್ಲಿನ ಶಾಂತಿಯುತ ಜೀವನ ಶೈಲಿ ಮತ್ತು ಪ್ರಶಾಂತ ವಾತಾವರಣಕ್ಕೆ ಬಹಳಶ್ಟು ಪ್ರವಾಸಿಗರು ಮಾರುಹೋಗಿರುವರು. ಲಾಮೂ ಸಾಂಸ್ಕ್ರುತಿಕ ಉತ್ಸವದ ಆಚರಣೆ ಸಮಯದಲ್ಲಿ ಬರುವ ಪ್ರವಾಸಿಗರು ಲಾಮೂ ಜೀವನದ ಶೈಲಿಯನ್ನು ಕಣ್ಣಾರೆ ಕಂಡು ಅಚ್ಚರಿ ಪಡುತ್ತಾರೆ. ಜೊತೆಗೆ ಸಮುದಾಯದವರ ಅತ್ಯಂತ ಉತ್ಸಾಹಬರಿತ ಮತ್ತು ಸಂತೋಶದಾಯಕ ಅನುಬವವನ್ನು ಸ್ವತ ತಾವೂ ಅನುಬವಿಸುತ್ತಾರೆ. ಈ ಸಾಂಸ್ಕ್ರುತಿಕ ಉತ್ಸವದ ಸಮಯದಲ್ಲಿ, ಪ್ರತಿವರ‍್ಶ ಈ ಪುಟ್ಟ ದ್ವೀಪ ಜೀವಂತವಾಗುತ್ತದೆ. ವಾರದಶ್ಟು ದೀರ‍್ಗಕಾಲ ನಡೆಯುವ ಈ ಉತ್ಸವದಲ್ಲಿ ಹಲವಾರು ಸ್ಪರ‍್ದೆಗಳನ್ನು ಹಾಗೂ ಓಟಗಳನ್ನು ಆಯೋಜಿಸಲಾಗುತ್ತದೆ.
ಉತ್ಸವ ಆಯೋಜನೆಯ ಸುತ್ತಲಿನ ಕಾರ‍್ಯಕ್ರಮಗಳು
ಉತ್ಸವದಲ್ಲಿ ಆಯೋಜಿಸುವ ಪ್ರತಿಯೊಂದು ಕಾರ‍್ಯಕ್ರಮಗಳೂ ಲಾಮೂ ಜೀವನ ಶೈಲಿಯ ಕೇಂದ್ರಿತವಾದ ಕೌಶಲ್ಯಗಳನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗುತ್ತದೆ. ಇದರಲ್ಲಿ ಸಾಂಪ್ರದಾಯಿಕ ಸ್ವಾಹಿಲಿ ಕವಿತೆ ರಚನೆ, ಹೆನ್ನಾ ಚಿತ್ರಕಲೆ ಮತ್ತು ಬಾವೋ ಸ್ಪರ‍್ದೆ ಸೇರಿದೆ. ಮಾನವನ ಇತಿಹಾಸದಲ್ಲಿ ಬಾವೋ ಅತ್ಯಂತ ಹಳೆಯ ಆಟವಾಗಿದೆ. ಈ ಆಟ ಸಾವಿರಾರು ವರ‍್ಶಗಳ ಹಿಂದೆ ಆಪ್ರಿಕಾ ಮತ್ತು ಮದ್ಯಪ್ರಾಚ್ಯದಲ್ಲಿ ಆಡಲಾಗುತ್ತಿತ್ತು ಎಂಬ ವಿಚಾರ ಪುರಾತತ್ವ ಶಾಸ್ತ್ರಗಳಲ್ಲಿ ಕಂಡುಬಂದಿದೆ. ದೋಣಿಯ ಸ್ಪರ‍್ದೆಯೂ ಈ ಉತ್ಸವದ ಒಂದು ಬಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಯಾಂತ್ರೀಕ್ರುತ ದೋಣಿಗಳು ಹೆಚ್ಚಾಗಿರುವುದರಿಂದ ಸ್ಪರ‍್ದಿಗಳ ಸಂಕ್ಯೆ ಗಣನೀಯವಾಗಿ ಇಳಿಮುಕವಾಗಿದೆ. ದೋಣಿಯ ಉಪಯೋಗವನ್ನು ಉತ್ತೇಜಿಸುವ ದ್ರುಶ್ಟಿಯಿಂದ ಈ ಸ್ಪರ‍್ದೆ ಆಯೋಜಿಸಲಾಗುತ್ತದೆ. ಸ್ಪರ‍್ದೆಗೆ ಆಯ್ಕೆಯಾಗುವುದು ಪಟ್ಟಣದ ಅತ್ಯುತ್ತಮ ದೋಣಿಗಳು ಮಾತ್ರ. ಯುಕ್ತಿ ಮತ್ತು ಶಕ್ತಿಯನ್ನು ಬಳಸಿ ಸುತ್ತು ಬಳಸಿನ ಹಾದಿಯಲ್ಲಿ ದೋಣಿ ಚಲಾಯಿಸುವುದು ಈ ಸ್ಪರ‍್ದೆಯ ನಿಯಮವಾಗಿದೆ. ಚಲಾಯಿಸುವವರ ಚಾಕಚಕ್ಯತೆ, ಕೌಶಲ್ಯ, ತಂತ್ರಗಾರಿಕೆ, ವೇಗ ಮತ್ತು ದೋಣಿಯ ಗಾತ್ರ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಗೆದ್ದವರನ್ನು ಗೋಶಿಸಲಾಗುವುದು. ಇವುಗಳನ್ನು ಹೊರತು ಪಡಿಸಿದಲ್ಲಿ, ಈಜಿನ ಸ್ಪರ‍್ದೆ ಮತ್ತು ಕ್ರಾಸ್ ಕಂಟ್ರಿ ಓಟವನ್ನು ಸಹ ಈ ಸಮಯದಲ್ಲಿ ಆಯೋಜಿಸಲಾಗುತ್ತದೆ. ಕ್ರಾಸ್ ಕಂಟ್ರಿ ಓಟ ಬಿಸಿಲಿನ ಬೇಗೆಯಲ್ಲಿ ನಡೆಯುವ ಸ್ಪರ‍್ದೆಯಾಗಿದೆ. ಲಾಮೂವಿನಿಂದ ಶೇಲವರೆಗಿನ ಕಲ್ಲ, ಮುಳ್ಳು ನೀರಿನ ಹಳ್ಳಗಳ ಹಾದಿಯಲ್ಲಿ ಹೋಗಿ ಮತ್ತದೇ ಹಾದಿಯಲ್ಲಿ ಹಿಂದಿರುಗಿ ಬರಬೇಕು. ಅತಿ ತ್ರಾಸದಾಯಕವಾದ ಈ ಸ್ಪರ‍್ದೆ ಮುಗಿಸುವ ಸಮಯಕ್ಕೆ ಸ್ಪರ‍್ದಿಗಳು ನಿತ್ರಾಣರಾಗಿ ಕುಸಿಯುವ ಹಂತ ತಲುಪಿರುತ್ತಾರೆ.
ಈ ಉತ್ಸವ ಉತ್ತಮ ಶಾಪಿಂಗ್ ಈವೆಂಟ್ ಸಹ ಹೌದು. ಮನೆಯಲ್ಲಿ ಕೈಯಲ್ಲೇ ತಯಾರಿಸಿದ ಉತ್ಪನ್ನಗಳು, ಮಕ್ಕಳ ವಿವಿದ ಬಗೆಯ ಆಟಿಕೆಗಳು ಕೂಡಿದಂತೆ ಇದು ಕರಾವಳಿ ಪ್ರದೇಶವಾದ ಕಾರಣ ಇಲ್ಲಿ ಗಾಳಿಕೊಳವೆಗಳು (ಸ್ನಾರ್‍ಕೆಲ್) ಮತ್ತು ಮೀನುಗಾರಿಕೆಗೆ ಉಪಕರಣಗಳು ಕರೀದಿಸಲು ಯತೇಚ್ಚವಾಗಿ ಲಬ್ಯವಿರುತ್ತದೆ. ಒಟ್ಟಿನ್ನಲ್ಲಿ ಲಾಮೂ ಸಮುದಾಯದವರ ಆತ್ಮ ಮತ್ತು ಹ್ರುದಯದಲ್ಲಿ ತುಂಬಿರುವ ಈ ಸಾಂಸ್ಕ್ರುತಿಕ ಉತ್ಸವದ ಆಚರಣೆ ಬೂತ-ಬವಿಶ್ಯದ, ನಂಬಿಕೆ ಮತ್ತು ಸಂಪ್ರದಾಯಗಳ ಸಮ್ಮಿಲನವಾಗಿದೆ. ಒಟ್ಟಿನ್ನಲ್ಲಿ ಲಾಮೂ ಸಮುದಾಯದವರ ಆತ್ಮ ಮತ್ತು ಹ್ರುದಯದಲ್ಲಿ ತುಂಬಿರುವ ಈ ಸಾಂಸ್ಕ್ರುತಿಕ ಉತ್ಸವದ ಆಚರಣೆ ಬೂತ-ಬವಿಶ್ಯದ, ನಂಬಿಕೆ ಮತ್ತು ಸಂಪ್ರದಾಯಗಳ ಸಮ್ಮಿಲನವಾಗಿದೆ.
( ಮಾಹಿತಿ ಸೆಲೆ ಮತ್ತು ಚಿತ್ರ ಸೆಲೆ: lamu.go.ke , magicalkenya.com , flickr.com )
ಧನ್ಯವಾದಗಳು ಸರ್ ???